‘ಪುಣ್ಯವಂತರ ಬದುಕು ಮೂಕರೋದನ’

7

‘ಪುಣ್ಯವಂತರ ಬದುಕು ಮೂಕರೋದನ’

Published:
Updated:
‘ಪುಣ್ಯವಂತರ ಬದುಕು ಮೂಕರೋದನ’

ಬೆಂಗಳೂರು: ಮಲೆನಾಡಿಗರನ್ನು ಸಾಮಾಜಿಕ, ಸಾಂಸ್ಕೃತಿಕವಾಗಿ ಬೆಸೆಯಲು ಮತ್ತು ಅವರ ಸಮಸ್ಯೆಗಳಿಗೆ ಧ್ವನಿಯಾಗಲು ನಗರದಲ್ಲಿ ಮಲೆನಾಡು ಹಿತರಕ್ಷಣಾ ವೇದಿಕೆ ಅಸ್ತಿತ್ವಕ್ಕೆ ಬಂದಿದೆ.

ನಗರದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ವೇದಿಕೆಗೆ ಚಾಲನೆ ನೀಡಿದರು.

ತೀರ್ಥಹಳ್ಳಿಯ ಬಿಜೆಪಿ ಮುಖಂಡ ಆರಗ ಜ್ಞಾನೇಂದ್ರ ಮಾತನಾಡಿ, ‘ಮಲೆನಾಡಿನಲ್ಲಿ ಬಹಳಷ್ಟು ಗಂಭೀರ ಸಮಸ್ಯೆಗಳಿವೆ. ಅವು ಹೊರ ಜಗತ್ತಿಗೆ ಕಾಣಿಸುತ್ತಿಲ್ಲ. ಇಲ್ಲಿನ ಪ್ರಕೃತಿ ಸೊಬಗು ಸವಿಯಲು ಬರುವ ಪ್ರವಾಸಿಗರು ಇಲ್ಲಿ ಹುಟ್ಟಿದವರೇ ಪುಣ್ಯವಂತರು ಎಂದುಕೊಳ್ಳುತ್ತಾರೆ. ಆದರೆ, ಇಲ್ಲಿನ ಜನರ ಬದುಕು ಮೂಕರೋದನವಾಗಿದೆ’ ಎಂದರು.

‘ಕುವೆಂಪು ಸಾಹಿತ್ಯದಲ್ಲಿ ಕಂಡುಬರುವ ದಟ್ಟ ಕಾನನ ಈಗ ಉಳಿದಿಲ್ಲ. ಹಲವು ಯೋಜನೆಗಳು ಪಶ್ಚಿಮಘಟ್ಟಕ್ಕೆ ಕಾಲಿಟ್ಟು, ಅರಣ್ಯವನ್ನು ತೆಳುವಾಗಿಸುತ್ತಿವೆ. ಕಸ್ತೂರಿ ರಂಗನ್ ವರದಿಯೂ ಜನರನ್ನು ಬಾಧಿಸುತ್ತಿದೆ. ಅರಣ್ಯ ಇಲಾಖೆಯೂ ನಮ್ಮನ್ನು ದರೋಡೆಕೋರರಂತೆ ನಡೆಸಿಕೊಳ್ಳುತ್ತಿದೆ. ಕಾಫಿ, ಅಡಿಕೆ, ಕಾಳುಮೆಣಸು ಬೆಲೆ ಕುಸಿತದಿಂದಲೂ ಜನರ ಬದುಕು ಅಕ್ಷರಶಃ ದಟ್ಟದಾರಿದ್ರ್ಯಕ್ಕೆ ಇಳಿದಿದೆ’ ಎಂದರು.

ಶಾಸಕ ಕಿಮ್ಮನೆ ರತ್ನಾಕರ, ‘ಮಲೆನಾಡಿಗರು ತಲೆತಗ್ಗಿಸುವಂತೆ ನಾವು ರಾಜಕಾರಣದಲ್ಲಿ ಯಾವತ್ತೂ ನಡೆದುಕೊಂಡಿಲ್ಲ. ನೆಲದ ಸಂಸ್ಕೃತಿ ಮತ್ತು ಪರಂಪರೆ ಎತ್ತಿಹಿಡಿಯುವ ಪ್ರಯತ್ನ ಮಾಡಿದ್ದೇವೆ’ ಎಂದರು.

ಶಾಸಕ ಡಿ.ಎನ್.ಜೀವರಾಜ್, ‘ದಶಕದ ಹಿಂದಿನವರೆಗೂ ವಿಧಾನಸಭೆಯಲ್ಲಿ ಅರ್ಥಗರ್ಭಿತ ಚರ್ಚೆ ನಡೆಯುತ್ತಿದ್ದವು. ಆದರೆ, ಇತ್ತೀಚೆಗೆ ಚರ್ಚೆಯ ಗುಣಮಟ್ಟ ಕುಸಿಯುತ್ತಿದೆ. ಒಬ್ಬರನ್ನೊಬ್ಬರು ಕಾಲೆಳೆದು ಮೇಲೆ ಬರುವ ಕೆಟ್ಟ ನಡವಳಿಕೆ ಬೇರೂರುತ್ತಿದೆ. ಆದರೆ, ಮಲೆನಾಡಿನ ಜನಪ್ರತಿನಿಧಿಗಳು ಇದಕ್ಕೆ ಸ್ವಲ್ಪಮಟ್ಟಿಗೆ ಹೊರತಾಗಿದ್ದೇವೆ’ ಎಂದರು.

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷ ಟಿ.ಎ.ನಾರಾಯಣಗೌಡ, ‘ಮಲೆನಾಡಿನ ಸಾಹಿತಿಗಳು ಮತ್ತು ಹೋರಾಟಗಾರರ ಕೊಡುಗೆಯನ್ನು ಕನ್ನಡಿಗರು ನೆನೆಯಬೇಕಿದೆ. ಈ ಮಣ್ಣಿನಿಂದ ಬಂದ ಕುವೆಂಪು ಸಾಹಿತ್ಯದಲ್ಲಿ ಮತ್ತು ಶಾಂತವೇರಿ ಗೋಪಾಲಗೌಡರು ರಾಜಕಾರಣದಲ್ಲಿ ದೇಶಕ್ಕೆ ಹೊಸ ದಿಕ್ಕು ತೋರಿದ್ದಾರೆ’ ಎಂದು ಜ್ಞಾಪಿಸಿದರು.

ವೇದಿಕೆ ಕಾರ್ಯಾಧ್ಯಕ್ಷ ಅಜಿತ್‌ ಕಲ್ಕುಳಿ, ‘ಮಲೆನಾಡಿನ ಸಾಂಸ್ಕೃತಿಕ ಕಲೆಗಳ ಪ್ರದರ್ಶನಕ್ಕೆ ರಾಜಧಾನಿಯಲ್ಲಿ ವೇದಿಕೆ ಒದಗಿಸಲಾಗುವುದು. ವಧುವರರ ಅನ್ವೇಷಣಾ ಕೇಂದ್ರ ತೆರೆಯುವ, ಬಡ ಕುಟುಂಬಗಳ ವಿವಾಹಗಳಿಗೆ ನೆರವು ನೀಡುವ ಉದ್ದೇಶವೂ ಇದೆ. ನಿರುದ್ಯೋಗಿ ಯುವಜನರಿಗೆ ಉದ್ಯೋಗ ಅವಕಾಶ ಹುಡುಕಿಕೊಡಲಾಗುವುದು’ ಎಂದರು.

ಕಾಮಿಡಿ ಕಲಾವಿದೆ ನಯನಾ ಅವರ ಮಾತಿನ ಕಲೆಗೆ, ಇಂಪನ ಅವರ ಇಂಪಾದ ಕಂಠಸಿರಿಗೆ ಸಭಿಕರು ತಲೆದೂಗಿದರು. ಶೃಂಗೇರಿಯ ಯು.ದಿಯಾ ಪ್ರದರ್ಶಿಸಿದ ನೃತ್ಯ ಕಾರ್ಯಕ್ರಮವೂ ಕಣ್ಮನ ಸೆಳೆಯಿತು.

ಒಳಗಣ್ಣು ತೆರೆಸುವ ಶಿಕ್ಷಣ ಬೇಕು

‘ಇಂದು ಮನುಷ್ಯನ ಒಳಗಣ್ಣನ್ನು ತೆರೆಸುವಂತಹ ಶಿಕ್ಷಣ ಬೇಕಿದೆ. ಅಂತಹ ಶಕ್ತಿ ಇರುವ ಆಧ್ಯಾತ್ಮಿಕ ಶಿಕ್ಷಣ ನಮ್ಮಲ್ಲಿ ಇದ್ದರೂ ಅದನ್ನು ತಾತ್ಸರ ಮಾಡಿ, ಕಾರ್ಪೊರೇಟ್‌ ಶೈಲಿಯ ಶಿಕ್ಷಣದ ಮೊರೆ ಹೋಗಿದ್ದೇವೆ’ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

‘ಇಂದು ಜ್ಞಾನದ ಮಟ್ಟ ಹೆಚ್ಚುತ್ತಿರಬಹುದು, ಆದರೆ, ಸಂಸ್ಕಾರದ ಮಟ್ಟ ಕಡಿಮೆಯಾಗುತ್ತಿದೆ. ಪೋಷಕರು ಮಕ್ಕಳಿಗೆ ಒಳ್ಳೆಯ ಸಂಸ್ಕೃತಿ, ಸಂಸ್ಕಾರ ಕಲಿಸಬೇಕು. ಎಲ್ಲಿಯೇ ಹೋದರೂ ನಾವು ಹುಟ್ಟಿ ಬೆಳೆದ ನೆಲ, ಪರಿಸರದ ಮೇಲಿನ ಪ್ರೀತಿ, ಅಭಿಮಾನ ಬಿಡಬಾರದು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry