ಸಂವಿಧಾನದ ಮೌಲ್ಯಕ್ಕೆ ಧಕ್ಕೆಯಾದರೆ ಪ್ರಶ್ನಿಸಿ

7

ಸಂವಿಧಾನದ ಮೌಲ್ಯಕ್ಕೆ ಧಕ್ಕೆಯಾದರೆ ಪ್ರಶ್ನಿಸಿ

Published:
Updated:

ಬೆಂಗಳೂರು: ‘ಕೆಲವರು ಸಂವಿಧಾನ ಬದಲಾಯಿಸುವ ಮಾತು ಆಡುತ್ತಿದ್ದಾರೆ. ಸಂವಿಧಾನದ ಮೌಲ್ಯಗಳಿಗೆ ಧಕ್ಕೆ ತರುವಂತೆ ಮಾತನಾಡುವುದು ಪ್ರಜ್ಞಾವಂತರ ಲಕ್ಷಣವಲ್ಲ. ಇಂತಹ ಕೆಟ್ಟ ಬೆಳವಣಿಗೆಗಳನ್ನು ನಾವು ಪ್ರಶ್ನಿಸಬೇಕು’ ಎಂದು ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಹೇಳಿದರು.

ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ ಘಟಕ ಹಮ್ಮಿಕೊಂಡಿದ್ದ 5ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ರಾಜಕಾರಣದಲ್ಲಿ ಕೆಲವರು ನಿರಂಕುಶಮತಿಗಳಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.

‘ಸಾಹಿತ್ಯ ಕ್ಷೇತ್ರದವರು ಮಾತ್ರವೇ ಸಮ್ಮೇಳನದ ಅಧ್ಯಕ್ಷರಾಗಬೇಕೆಂಬ ನಿಯಮ ಇಲ್ಲ. ಕನ್ನಡ ಹೋರಾಟಗಾರರಿಗೂ ಆ ಅರ್ಹತೆ ಇದೆ. ಕನ್ನಡಕ್ಕೆ ಧಕ್ಕೆ ಉಂಟಾದಾಗ ಮೊದಲು ಹೋರಾಟ ನಡೆಸುವವರು ಅವರೇ. ಡಾ.ರಾಜ್‍ಕುಮಾರ್ ಅವರ 36 ಚಿತ್ರಗಳನ್ನು ನಿರ್ದೇಶಿಸಿರುವ ಎಸ್.ಕೆ.ಭಗವಾನ್ ಸಮ್ಮೇಳನದ ಅಧ್ಯಕ್ಷರಾಗಿರುವುದು ಒಳ್ಳೆಯ ಆಯ್ಕೆ’ ಎಂದು ಹೇಳಿದರು.

ಚಿತ್ರರಂಗಕ್ಕೂ ಕನ್ನಡಪರ ಹೋರಾಟಕ್ಕೂ ಅವಿನಭಾವ ಸಂಬಂಧ ಇದೆ. ರಾಜ್‍ಕುಮಾರ್ ಅವರು ಗೋಕಾಕ್ ಚಳವಳಿಯಲ್ಲಿ ಭಾಗವಹಿಸಿ ಸಮಸ್ಯೆ ತಾರ್ಕಿಕ ಅಂತ್ಯ ಕಾಣುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರು ಈಗ ಇದ್ದಿದ್ದರೆ ಮಹದಾಯಿ, ಎತ್ತಿನಹೊಳೆ, ಕಾವೇರಿ ಸೇರಿ ರಾಜ್ಯದ ಹಲವು ಜಂಟಿಲ ಸಮಸ್ಯೆಗಳೂ ಅಂತ್ಯ ಕಾಣುತ್ತಿದ್ದವು ಎಂದು ಎಸ್.ಕೆ.ಭಗವಾನ್ ಹೇಳಿದರು.

ಹಬ್ಬದ ಸಂಭ್ರಮ: ಶಿವನಗರ ವೃತ್ತ ಹಾಗೂ ವರಕವಿ ದ.ರಾ.ಬೇಂದ್ರೆ ರಸ್ತೆಗೆ ಹಬ್ಬದ ಕಳೆ ಬಂದಿತ್ತು. ಬಸವೇಶ್ವರ ನಗರದ ಶಾರದಾ ಕಾಲೊನಿ ಮೂಲಕ ಹೊರಟ ಸಮೇಳನಾಧ್ಯಕ್ಷರ ಮೆರವಣಿಗೆಗೆ ಹುಲಿ ವೇಷ, ಗೊಂಬೆ ಕುಣಿತ ಸೇರಿ ಹಲವು ಜಾನಪದ ಕಲಾತಂಡಗಳು ಮೆರುಗು ನೀಡಿದವು.

ಸ್ವಾಗತ ಸಮಿತಿ ಅಧ್ಯಕ್ಷರಾದ ಶಾಸಕ ಎಸ್‌.ಸುರೇಶ್ ಕುಮಾರ್, ಪಾಲಿಕೆ ಸದಸ್ಯರಾದ ಜಿ.ಪದ್ಮಾವತಿ, ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್.ಲೋಕೇಶ್, ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಮೆರವಣಿಗೆಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry