ಅತ್ಯಾಚಾರ ಪ್ರಕರಣ ಮಡಿಕೇರಿ ಠಾಣೆಗೆ ವರ್ಗ

7

ಅತ್ಯಾಚಾರ ಪ್ರಕರಣ ಮಡಿಕೇರಿ ಠಾಣೆಗೆ ವರ್ಗ

Published:
Updated:

ಬೆಂಗಳೂರು: ಸಹೋದ್ಯೋಗಿ ಯುವತಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪದಡಿ ಸಾಫ್ಟ್‌ವೇರ್ ಉದ್ಯೋಗಿ ದಿನೇಶ್ (29) ಎಂಬಾತನ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಎಚ್‌ಎಎಲ್‌ ಪೊಲೀಸರು ಮಡಿಕೇರಿ ಠಾಣೆಗೆ ವರ್ಗಾಯಿಸಿದ್ದಾರೆ.

ಶಿವಮೊಗ್ಗದ ದಿನೇಶ್, ಒಂದೂವರೆ ವರ್ಷದಿಂದ ನಗರದ ಸಾಫ್ಟ್‌ವೇರ್ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ. ಸಂತ್ರಸ್ತೆ ಕೂಡ ಅದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಾರೆ. ‘ಮಡಿಕೇರಿಯ ಹೋಮ್‌ ಸ್ಟೇಯಲ್ಲಿ ದಿನೇಶ್ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ’ ಎಂದು ಆರೋಪಿಸಿ ಸಂತ್ರಸ್ತೆ 2017ರ ಡಿ.23ರಂದು ಎಚ್‌ಎಎಲ್‌ ಠಾಣೆಗೆ ದೂರು ಕೊಟ್ಟಿದ್ದರು.

ಪ್ರಜ್ಞೆ ತಪ್ಪಿಸಿ ಕೃತ್ಯ: ‘ಇಬ್ಬರೂ ಒಂದು ವರ್ಷದಿಂದ ಪ್ರೀತಿ ಮಾಡುತ್ತಿದ್ದೆವು. ಡಿಸೆಂಬರ್‌ ಮೊದಲ ವಾರದಲ್ಲಿ ಮುರುಡೇಶ್ವರ, ಗೋಕರ್ಣ ಹಾಗೂ ಮಡಿಕೇರಿಗೆ ಪ್ರವಾಸ ಹೋಗಿದ್ದೆವು. ಆ ದಿನ ಸಂಜೆ ಬೆಂಗಳೂರಿಗೆ ಮರಳಲು ಬಸ್ ಸಿಗಲಿಲ್ಲ. ಹೀಗಾಗಿ, ಹೋಮ್‌ ಸ್ಟೇಯಲ್ಲೇ ಉಳಿದುಕೊಳ್ಳಬೇಕಾಯಿತು’ ಎಂದು ಸಂತ್ರಸ್ತೆ ದೂರಿನಲ್ಲಿ ಹೇಳಿದ್ದರು.

‘ಮತ್ತು ಬರುವ ಔಷಧ ಬೆರೆಸಿದ್ದ ತಂಪು ಪಾನೀಯವನ್ನು ನನಗೆ ಕುಡಿಸಿದ ದಿನೇಶ್, ಪ್ರಜ್ಞೆ ತಪ್ಪುತ್ತಿದ್ದಂತೆಯೇ ಅತ್ಯಾಚಾರ ಎಸಗಿದ್ದ. ಎಚ್ಚರವಾದ ಬಳಿಕ ವಿಷಯ ಗೊತ್ತಾಗಿ ಅಳುತ್ತಿದ್ದ ನನ್ನನ್ನು ಸಮಾಧಾನಪಡಿಸಿದ್ದ ಆತ, ‘ಇಬ್ಬರೂ ಮದುವೆ ಆಗೋಣ’ ಎಂದಿದ್ದ. ಆದರೆ, ಬೆಂಗಳೂರಿಗೆ ಬಂದ ನಂತರ ನನ್ನಿಂದ ದೂರವಿರಲು ಪ್ರಯತ್ನಿಸುತ್ತಿರುವ ಆತ, ಕರೆ–ಸಂದೇಶಗಳಿಗೂ ಪ್ರತಿಕ್ರಿಯಿಸುತ್ತಿಲ್ಲ.’

‘ಇತ್ತೇಚೆಗೆ ಮದುವೆ ವಿಚಾರ ಪ್ರಸ್ತಾಪಿಸಿದಾಗ, ‘ನೀನು ಕಪ್ಪಗಿದ್ದೀಯಾ. ಯಾವುದೇ ಕಾರಣಕ್ಕೂ ಮದುವೆ ಆಗುವುದಿಲ್ಲ. ನಾವಿಬ್ಬರೂ ಮಡಿಕೇರಿಯಲ್ಲಿ ಲೈಂಗಿಕ ಕ್ರಿಯೆ ನಡೆಸಿರುವುದನ್ನು ಮೊಬೈಲ್‌ನಲ್ಲಿ ವಿಡಿಯೊ ಮಾಡಿಕೊಂಡಿದ್ದಾನೆ. ನೀನು ಇದೇ ರೀತಿ ಪೀಡಿಸುತ್ತಿದ್ದರೆ ಆ ವಿಡಿಯೊವನ್ನು ನಿನ್ನ ಪೋಷಕರಿಗೆ ತೋರಿಸುತ್ತೇನೆ. ಸಾಮಾಜಿಕ ಜಾಲತಾಣಗಳಲ್ಲೂ ಅಪ್‌ಲೋಡ್ ಮಾಡಿ ಮರ್ಯಾದೆ ತೆಗೆಯುತ್ತೇನೆ’ ಎಂದು ಬೆದರಿಸಿದ್ದಾನೆ. ಈ ರೀತಿ ನಂಬಿಕೆ ದ್ರೋಹ ಮಾಡಿದ ಆರೋಪಿ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು’ ಎಂದು ಸಂತ್ರಸ್ತೆ ದೂರಿನಲ್ಲಿ ಕೋರಿದ್ದರು.

ಅತ್ಯಾಚಾರ (ಐಪಿಸಿ 376), ಮದುವೆ ಆಗುವುದಾಗಿ ನಂಬಿಸಿ ವಂಚನೆ (417, 420) ಹಾಗೂ ಜೀವ ಬೆದರಿಕೆ (506) ಆರೋಪಗಳಡಿ ಎಫ್‌ಐಆರ್ ದಾಖಲಿಸಿಕೊಂಡಿದ್ದೆವು. ಕೃತ್ಯ ನಡೆದ ಸ್ಥಳದ ಆಧಾರದ ಮೇಲೆ ಪ್ರಕರಣವನ್ನು ಮಡಿಕೇರಿ ಠಾಣೆಗೆ ವರ್ಗಾಯಿಸಿದ್ದೇವೆ. ಆರೋಪಿ ಮೊಬೈಲ್ ಸ್ವಿಚ್ಡ್ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾನೆ ಎಂದು ಎಚ್‌ಎಎಲ್ ಪೊಲೀಸರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry