ಹೊಗೆಯಾಡುತ್ತಲೇ ಇದೆ ಬೆಳ್ಳಂದೂರು ಕೆರೆ: ಇನ್ನೂ ದೂರವಾಗಿಲ್ಲ ಆತಂಕ

7

ಹೊಗೆಯಾಡುತ್ತಲೇ ಇದೆ ಬೆಳ್ಳಂದೂರು ಕೆರೆ: ಇನ್ನೂ ದೂರವಾಗಿಲ್ಲ ಆತಂಕ

Published:
Updated:
ಹೊಗೆಯಾಡುತ್ತಲೇ ಇದೆ ಬೆಳ್ಳಂದೂರು ಕೆರೆ: ಇನ್ನೂ ದೂರವಾಗಿಲ್ಲ ಆತಂಕ

ಬೆಂಗಳೂರು: ಬೆಳ್ಳಂದೂರು ಕೆರೆಯಲ್ಲಿ ಕಾಣಿಸಿಕೊಂಡಿದ್ದ ಬೆಂಕಿಯನ್ನು ನಂದಿಸಿದ ಬಳಿಕವೂ ಕೆರೆಯ ಕೆಲವೆಡೆ ಭಾನುವಾರ ಹೊಗೆ ಕಾಣಿಸಿಕೊಂಡಿತ್ತು.  ಬೆಂಕಿ ಆರಿದರೂ ಕೆರೆಯ ಆಸುಪಾಸಿನಲ್ಲಿ ನೆಲೆಸಿರುವವರ ಆತಂಕ ದೂರವಾಗಿಲ್ಲ.

ಇನ್ನೊಂದೆಡೆ, ಬೇಲೂರು ಅಂಬೇಡ್ಕರ್ ನಗರದ ಹಿಂಭಾಗದ ಕೆರೆ ಅಂಗಳಕ್ಕೆ ಶನಿವಾರ ರಾತ್ರಿ ಕಟ್ಟಡ ತ್ಯಾಜ್ಯವನ್ನು ಒಳಗೊಂಡ ಕಸವನ್ನು ಸುರಿದಿರುವ ಕಿಡಿಗೇಡಿಗಳು ಅದಕ್ಕೆ ಬೆಂಕಿ ಹಚ್ಚಿದ್ದಾರೆ. ಇಂತಹ ಕೃತ್ಯಗಳಿಂದ ಕೆರೆಗೆ ಮತ್ತೆ ಬೆಂಕಿ ಹೊತ್ತಿಕೊಳ್ಳುವ ಅಪಾಯವಿದೆ ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದರು.

‘ಟ್ರ್ಯಾಕ್ಟರ್ ಹಾಗೂ ಟಿಪ್ಪರ್‌ಗಳಲ್ಲಿ ಕಸ ಹಾಗೂ ಕಟ್ಟಡ ತ್ಯಾಜ್ಯವನ್ನು ತುಂಬಿಕೊಂಡು ಬರುವ ದುಷ್ಕರ್ಮಿಗಳು ಇಲ್ಲಿ ಸುರಿದು ಹೋಗುತ್ತಾರೆ. ಪ್ರಶ್ನಿಸಿದರೆ ನಮಗೆ ಧಮ್ಕಿ ಹಾಕುತ್ತಾರೆ’ ಎಂದು ಸ್ಯಾಮ್ಯುಯಲ್ ತಿಳಿಸಿದರು.

‘ಕೆ.ಸಿ.ಕಣಿವೆ ಯೋಜನೆಯ ಕಾಮಗಾರಿಯು ಕೆರೆ ಅಂಗಳದಲ್ಲಿ ನಡೆಯುತ್ತಿದೆ. ಕಾಮಗಾರಿಗಾಗಿ ಹೊಸ ದಾರಿ ನಿರ್ಮಿಸಲಾಗಿದೆ. ಆ ದಾರಿ ಬಳಸಿಕೊಂಡು ಕೆರೆಯ ಒಡಲಿಗೆ ಕಸ ಹಾಕಲಾಗುತ್ತಿದೆ. ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸರು ಅವರೊಂದಿಗೆ ಶಾಮೀಲಾಗಿದ್ದಾರೆ’ ಎಂದು ರಾಜೇಶ್ ಆರೋಪಿಸಿದರು.

ಕಸ ಹಾಗೂ ಕಟ್ಟಡ ತ್ಯಾಜ್ಯವನ್ನು ಕೆರೆಗೆ ಸುರಿದರೆ ₹5 ಲಕ್ಷ ದಂಡ ವಿಧಿಸಲಾಗುತ್ತದೆ ಎಂದು ಕೆರೆ ಸುತ್ತಲೂ ನಾಮಫಲಕಗಳನ್ನು ಹಾಕಲಾಗಿದೆ. ವಾಸ್ತವದಲ್ಲಿ ಆ ನಿಯಮ ಪಾಲನೆಯಾಗುತ್ತಿಲ್ಲ. ಕೆ.ಸಿ.ಕಣಿವೆ ಯೋಜನೆಯ ಕಾಮಗಾರಿ ಶುರುವಾದ ದಿನದಿಂದಲೂ ಈ ಭಾಗದಲ್ಲಿ ತ್ಯಾಜ್ಯ ಸುರಿಯಲಾಗುತ್ತಿದೆ ಎಂದು ನಾಗೇಶ್ ತಿಳಿಸಿದರು.

‘ಸುತ್ತಮುತ್ತಲ ಪ್ರದೇಶದಲ್ಲಿ ಆವರಿಸಿದ ಹೊಗೆಯಿಂದಾಗಿಯೂ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗಿದೆ’ ಎಂದು ಸ್ಯಾಮ್ಯುಯಲ್ ತಿಳಿಸಿದರು.

ತನಿಖೆಯಾಗಲಿ

ಕೆರೆಯಲ್ಲಿ ಪದೇ ಪದೇ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಕಿಡಿಗೇಡಿಗಳು ಬೆಂಕಿ ಹಚ್ಚುತ್ತಿದ್ದಾರೆಯೇ ಅಥವಾ ತಾನಾಗಿಯೇ ಬೆಂಕಿ ಹೊತ್ತಿಕೊಳ್ಳುತ್ತಿದೆಯೇ ಎಂಬುದನ್ನು ತನಿಖೆ ಮಾಡಬೇಕು. ಯಾರಾದರೂ ಬೇಕೆಂದೇ ಬೆಂಕಿ ಹಚ್ಚಿದ್ದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಸ್ಥಳೀಯ ನಿವಾಸಿ ಸಾಗರ್‌ ಒತ್ತಾಯಿಸಿದರು. 

ಕಳೆದ ವರ್ಷ ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡ ಬಳಿಕ ಕೆಲ ದಿನಗಳ ವರೆಗೆ ಕಳೆ ತೆಗೆಯಲಾಗಿತ್ತು. ಬಳಿಕ ಕೆರೆ ಸುತ್ತಲೂ ತಂತಿ ಬೇಲಿ ಹಾಕಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆ ಮರುಕಳಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಗ್ನಿಶಾಮಕ ಸಿಬ್ಬಂದಿ ನಿರ್ಗಮನ

‘ಮುನ್ನೆಚ್ಚರಿಕಾ ಕ್ರಮವಾಗಿ ಅಗ್ನಿಶಾಮಕ ವಾಹನ ಹಾಗೂ ಕೆಲ ಸಿಬ್ಬಂದಿಗಳನ್ನು ಸ್ಥಳದಲ್ಲಿಯೇ ನಿಯೋಜಿಸುತ್ತೇವೆ’ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಶನಿವಾರ ಹೇಳಿದ್ದರು. ಆದರೆ, ಭಾನುವಾರ  ಯಾವೊಬ್ಬ ಸಿಬ್ಬಂದಿಯೂ ಸ್ಥಳದಲ್ಲಿ ಇರಲಿಲ್ಲ.

ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ‘ಶನಿವಾರ ರಾತ್ರಿವರೆಗೆ ಅಲ್ಲೇ ಇದ್ದೆವು. ಬೆಂಕಿ ಸಂಪೂರ್ಣವಾಗಿ ಆರಿದೆ ಎಂಬುದು ಮನವರಿಕೆ ಆದ ಬಳಿಕವೇ ಅಲ್ಲಿಂದ ಹಿಂತಿರುಗಿದ್ದೇವೆ. ಹೀಗಾಗಿ, ಸಿಬ್ಬಂದಿಯನ್ನು ವಾಪಸ್ ಕರೆಸಿಕೊಂಡಿದ್ದೇವೆ.  ಆಬಳಿಕ ಇದುವರೆಗೆ ಯಾವುದೇ ದೂರುಗಳು ಬಂದಿಲ್ಲ’ ಎಂದರು.

ಕಲುಷಿತ ನೀರಿನಿಂದಾಗಿ ಬೆಂಕಿ ಹೊತ್ತಿಕೊಂಡಿಲ್ಲ: ಸಿ.ಎಂ

ಕಲುಷಿತ ನೀರಿನಿಂದಾಗಿ ಬೆಳ್ಳಂದೂರು ಕೆರೆಗೆ ಬೆಂಕಿ ಹೊತ್ತಿಕೊಂಡಿಲ್ಲ. ಆ ಬಗ್ಗೆ ಅಪಪ್ರಚಾರ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿ.ವಿ.ರಾಮನ್ ನಗರದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

‘ಕೆರೆಯ ಆವರಣದ ಹುಲ್ಲಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಬೆಂಗಳೂರಿನ ಹೆಸರನ್ನು ಕೆಡಿಸಲು ಕೆಲವು ಪಟ್ಟಭದ್ರರು ಹವಣಿಸುತ್ತಿದ್ದಾರೆ. ಚಿಕ್ಕ ವಿಷಯವನ್ನೂ ದೊಡ್ಡದಾಗಿ ಬಿಂಬಿಸಲಾಗುತ್ತಿದೆ’ ಎಂದು ಆರೋಪಿಸಿದರು.

ತಪ್ಪಿದ್ದರೆ ತಿಳಿಸಿ ತಿದ್ದಿಕೊಳ್ಳುತ್ತೇವೆ. ಅದನ್ನು ಬಿಟ್ಟು ಅಪಪ್ರಚಾರ ಮಾಡಬಾರದು ಎಂದರು.

‘ನಮ್ಮ ಕೆಲಸಗಳಿಗೆ ಕೆಲವರು ಅಡ್ಡಿ ಪಡಿಸುತ್ತಿದ್ದಾರೆ. ನ್ಯಾಯಾಲಯದ ಮೂಲಕ‌ ನಮ್ಮ ಅಭಿವೃದ್ಧಿ ಕೆಲಸಗಳಿಗೆ ತೊಂದರೆಯುಂಟು ಮಾಡುತ್ತಿದ್ದಾರೆ’ ಎಂದರು.

‘ಕೆರೆ ಸಂರಕ್ಷಣೆಗೆ ರಚಿಸಲಾದ ತಜ್ಞರ ಸಮಿತಿ ಹಾಗೂ ಮೇಲ್ವಿಚಾರಣಾ ಸಮಿತಿಯಲ್ಲಿ ಇದ್ದವರೇ ಮಾಧ್ಯಮಗಳ ಮುಂದೆ ಹೋಗಿ ಟೀಕೆ ಮಾಡುತ್ತಿದ್ದಾರೆ’ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ದೂರಿದರು.

‘ಕೆರೆ ಕಲುಷಿತಗೊಂಡಿರುವುದು ಹಾಗೂ ನೀರಿನಲ್ಲಿ ಸ್ವಲ್ಪ ಪ್ರಮಾಣದ ಮೀಥೇನ್‌ ಇರುವುದು ನಿಜ. ಆದರೆ, ಇದರಿಂದಾಗಿ ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡಿಲ್ಲ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry