ದೀಪಕ್ ರಾವ್ ಮನೆಗೆ ದೇವೇಗೌಡ ಭೇಟಿ

7

ದೀಪಕ್ ರಾವ್ ಮನೆಗೆ ದೇವೇಗೌಡ ಭೇಟಿ

Published:
Updated:
ದೀಪಕ್ ರಾವ್ ಮನೆಗೆ ದೇವೇಗೌಡ ಭೇಟಿ

ಸುರತ್ಕಲ್‌ (ದಕ್ಷಿಣ ಕನ್ನಡ): ಕಾಟಿಪಳ್ಳದಲ್ಲಿ ಇತ್ತೀಚೆಗೆ ಕೊಲೆಯಾದ ದೀಪಕ್‌ ರಾವ್‌ ಅವರ ಮನೆಗೆ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಅವರು ಭಾನುವಾರ ಸಂಜೆ ಭೇಟಿ ನೀಡಿ ಕುಟುಂಬದ ಸದಸ್ಯರೊಡನೆ ಮಾತುಕತೆ ನಡೆಸಿದರು.

ದೇವೇಗೌಡರಿಗೆ ಕುಟುಂಬದ ಸದಸ್ಯರ ಪರಿಸ್ಥಿತಿಯ ಬಗ್ಗೆ ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಬಿ.ಎಂ. ಫಾರೂಕ್ ಮಾಹಿತಿ ನೀಡಿದರು.

`ನಾನು ಎಷ್ಟೇ ಸಮಾಧಾನ ಹೇಳಿದರೂ ಕಳೆದುಹೋದ ನಿಮ್ಮ ಮಗನನ್ನು ವಾಪಸ್ ತರಲು ಸಾಧ್ಯವಿಲ್ಲ. ಆದರೂ ಸಮಾಧಾನ ತಂದುಕೊಳ್ಳಿ' ಎಂದು ದೇವೇಗೌಡ ಅವರು ದೀಪಕ್‌ ತಾಯಿ ಪ್ರೇಮಾ ಅವರಿಗೆ ಹೇಳಿದಾಗ, ಪ್ರೇಮಾ ಅವರು ಕಣ್ಣೀರಿಟ್ಟರು. `ಮನೆಗೆ ಆಧಾರವಾಗಿದ್ದ ಮಗ ತೀರಿಕೊಂಡ. ಇರುವ ಇನ್ನೊಬ್ಬ ಒಬ್ಬ ಮಗನಿಗೆ ಮಾತು ಬಾರದು. ಇವನನ್ನು ಕಟ್ಟಿಕೊಂಡು ಏನು ಮಾಡಲಿ' ಎಂದು ದುಃಖಿಸಿದರು.

ದೇವೇಗೌಡರು ಕ್ಷಣಕಾಲ ಮೌನವಾಗಿದ್ದರು. ಬಳಿಕ ಅಲ್ಲಿದ್ದ ಮಾಧ್ಯಮದವರೊಡನೆ ಹೆಚ್ಚು ಮಾತನಾಡಲು ಇಚ್ಛಿಸಲಿಲ್ಲ.

‘ದೀಪಕ್ ಹತ್ಯೆ ಬಳಿಕ ಮೊದಲ ಬಾರಿಗೆ ಅವರ ಮನೆಗೆ ಬಂದಿದ್ದೇನೆ. ಹತ್ಯೆಯಾದ ಸಂದರ್ಭ ವೈಯಕ್ತಿಕ ಕಾರಣಗಳಿಂದ ಭೇಟಿ ನೀಡಲು ಸಾಧ್ಯವಾಗಲಿಲ್ಲ. ನಮ್ಮ ಕಡೆಯಿಂದ ಏನು ಮಾಡಬಹುದು ಎಂಬುದನ್ನು ನೋಡೋಣ. ಪಕ್ಷದ ನಾಯಕರ ವತಿಯಿಂದ ದೀಪಕ್‌ ಕುಟುಂಬಕ್ಕೆ ನೆರವು ನೀಡಲು ಸಾಧ್ಯವೇ ಎಂದು ಪರಿಶೀಲಿಸಲಾಗುವುದು. ಅವರ ಕುಟುಂಬದವರಿಗೆ ಸಮಾಧಾನ ಹೇಳಿದ್ದೇನೆ. ಅವರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕೊಡಲಿ’ ಎಂದು ಹೇಳಿದರು. ಇತರ ವಿಷಯಗಳ ‌ಕುರಿತು ಪರಾಮರ್ಶಿಸಿ ಸೋಮವಾರ ಸವಿಸ್ತಾರವಾಗಿ ಮಾಧ್ಯಮಗಳೆದುರು ಮಾತನಾಡುವುದಾಗಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry