ನೈರುತ್ಯ ರೈಲ್ವೆಗೆ ₹ 37 ಸಾವಿರ ದಂಡ

7

ನೈರುತ್ಯ ರೈಲ್ವೆಗೆ ₹ 37 ಸಾವಿರ ದಂಡ

Published:
Updated:

ಮೈಸೂರು: ಟಿಕೆಟ್ ಇದ್ದರೂ ಉಜ್ಜಯಿನಿಯಿಂದ ಮೈಸೂರಿಗೆ ರೈಲಿನಲ್ಲಿ ನಗರದ ಕುಟುಂಬವೊಂದು ನಿಂತು ಪ್ರಯಾಣ ಮಾಡಬೇಕಾಗಿ ಬಂದ ಕಾರಣ ನೈರುತ್ಯ ರೈಲ್ವೆಗೆ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯು ₹ 37 ಸಾವಿರ ದಂಡ ವಿಧಿಸಿದೆ.

ಸಿದ್ದಾರ್ಥನಗರದ ನಿವಾಸಿ ವಿಜೇಶ್‌ ಹಾಗೂ ಅವರ ಕುಟುಂಬದವರು 2017ರ ಮೇ 25ರಂದು ‍ಉಜ್ಜಯಿನಿಯಿಂದ ಮೈಸೂರಿಗೆ ಪ್ರಯಾಣಿಸಲು ಜೈಪುರ–ಮೈಸೂರು ಸೂಪರ್ ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಮೂರು ಟಿಕೆಟ್‌ಗಳನ್ನು ಮೈಸೂರು ರೈಲು ನಿಲ್ದಾಣದಲ್ಲಿ ಖರೀದಿಸಿದ್ದರು. ಆದರೆ, ಉಜ್ಜಯಿನಿಯಲ್ಲಿ ರೈಲು ಹತ್ತಿದಾಗ ಕಾಯ್ದಿರಿಸಿದ್ದ ರೈಲಿನ ಕೋಚ್‌ ಸಂಖ್ಯೆ ಎಸ್‌5ರ 57, 58, 59 ಸೀಟುಗಳಲ್ಲಿ ಟಿಕೇಟು ಹೊಂದಿಲ್ಲದವರು ಕುಳಿತಿರುವುದು ಕಂಡುಬಂದಿತ್ತು.

ಈ ಕುರಿತು ವಿಜೇಶ್‌ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರೂ ಪ್ರಯೋಜನವಾಗಿರಲಿಲ್ಲ. ಹೀಗಾಗಿ, ಮೈಸೂರಿನವರೆಗೆ ಒಟ್ಟು 1,950 ಕಿಲೋಮೀಟರ್ ದೂರವನ್ನು 33 ಗಂಟೆ ನಿಂತು ಪ್ರಯಾಣಿಸಿದ್ದರು. ಈ ಕುರಿತು ಮೈಸೂರು ರೈಲು ನಿಲ್ದಾಣದಲ್ಲಿ ತಮ್ಮ ವ್ಯಾಪ್ತಿಯ ಪ್ರಕರಣವಲ್ಲ ಎಂದು ದೂರು ದಾಖಲಿಸಿಕೊಳ್ಳದೇ ವಾಪಸು ಕಳುಹಿಸಲಾಗಿತ್ತು.

ಹೀಗಾಗಿ, ವಿಜೇಶ್ ಅವರು ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ದೂರು ಸಲ್ಲಿಸಿ ₹ 3.32 ಲಕ್ಷ ಪರಿಹಾರ ನೀಡುವಂತೆ ಕೋರಿದ್ದರು. ಅಲ್ಲದೇ, ತಾವೇ ವಾದವನ್ನೂ ಮಂಡಿಸಿದ್ದರು. ವಾದ ಆಲಿಸಿದ ವೇದಿಕೆಯ ಅಧ್ಯಕ್ಷ ಎಚ್‌.ಎಂ.ಶಿವಕುಮಾರ ಸ್ವಾಮಿ, ಸದಸ್ಯರಾದ ಎಂ.ವಿ.ಭಾರತಿ, ಎಂ.ಸಿ.ದೇವಕುಮಾರ್ ಅವರು ವಿಜೇಶ್‌ ಪರವಾಗಿ ಆದೇಶ ನೀಡಿದ್ದಾರೆ. 60 ದಿನದೊಳಗೆ ₹ 37 ಸಾವಿರ ದಂಡ ‍ಪಾವತಿಸುವಂತೆ ಸೂಚನೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry