ಸಂಘಟಿತರಾದರೆ ಸೌಲಭ್ಯ ಪಡೆಯಲು ಸಾಧ್ಯ

7

ಸಂಘಟಿತರಾದರೆ ಸೌಲಭ್ಯ ಪಡೆಯಲು ಸಾಧ್ಯ

Published:
Updated:
ಸಂಘಟಿತರಾದರೆ ಸೌಲಭ್ಯ ಪಡೆಯಲು ಸಾಧ್ಯ

ತುಮಕೂರು: ಸಂಘಟಿತರಾಗದೇ ಇದ್ದರೇ ಯಾವ ಸೌಕರ್ಯಗಳೂ ಲಭಿಸುವುದಿಲ್ಲ. ಸಮುದಾಯದ ಸಂಘಟನೆಗೆ ಹೆಚ್ಚಿನ ಒತ್ತು ಕೊಡಬೇಕು ಎಂದು  ಜಿಲ್ಲಾ ಗಂಗಾಮತಸ್ಥರ ಸಂಘದ ಉಪಾಧ್ಯಕ್ಷ ಕೆ.ಎಸ್. ದಿವಾಕರ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ತುಮಕೂರು ಜಿಲ್ಲಾ ಗಂಗಾಮತಸ್ಥ ಸಂಘ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಉದ್ಘಾಟಿಸಿ ಮಾತನಾಡಿದರು.

‘ರಾಣೆಬೆನ್ನೂರು ತಾಲ್ಲೂಕಿನ ಚೌಡಯ್ಯ ದಾನಪುರದಲ್ಲಿ ಇರುವ ಅಂಬಿರ ಚೌಡಯ್ಯನವರ ಗದ್ದುಗೆ ಒತ್ತುವರಿಯಾಗಿದೆ. ಅದರ ಸಂರಕ್ಷಣೆಗೆ ಸರ್ಕಾರ ಭರವಸೆ ನೀಡಿದೆ. ಅದನ್ನು ಉಳಿಸಿಕೊಳ್ಳುವ ಹೊಣೆಗಾರಿಕೆಯೂ ಸಮಾಜದವರಾಗಿದೆ’ ಎಂದರು.

ವಿಶೇಷ ಉಪನ್ಯಾಸ ನೀಡಿದ ಕಡಬ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್.ಕೆ.ನರಸಿಂಹಮೂರ್ತಿ, ‘ಗಂಗಾಮತಸ್ಥರು ಈ ದೇಶದ ಜನರೆಲ್ಲ ಪೂಜಿಸುವ ಪವಿತ್ರ ನದಿ ಗಂಗಾದೇವಿಯ ಪುತ್ರರು. ಮಹಾಭಾರತ ಬರೆದ ವ್ಯಾಸರು, ಭೀಷ್ಮರು ನಮ್ಮ ಕುಲದವರೇ ಆಗಿದ್ದಾರೆ. ಇಂತಹ ಸಮುದಾಯದಲ್ಲಿ ಜನಿಸಿರುವುದಕ್ಕೆ ಹೆಮ್ಮೆ ಪಡಬೇಕು’ ಎಂದರು.

ಬೆಸ್ತರು, ಮೋಗವೀರರು, ಮೀನುಗಾರರು, ಕೋಲಿ ಸಮಾಜ ಹೀಗೆ ವಿವಿಧ ಹೆಸರುಗಳಿಂದ ದೇಶದಲ್ಲಿ ನಮ್ಮ ಸಮುದಾಯವನ್ನು ಕರೆಯಲಾಗುತ್ತದೆ ಎಂದು ತಿಳಿಸಿದರು. ‘ಶರಣರಲ್ಲಿಯೇ ನಿಜಶರಣರು ಅಂಬಿಗರ ಚೌಡಯ್ಯ. ಶರಣ ಪರಂಪರೆಯಲ್ಲಿ ಅವರು ಧೃವತಾರೆ ಇದ್ದಂತೆ. ಅವರ ಹೆಸರು ಎಂದಿಗೂ ಮಾಸುವುದಿಲ್ಲ. ಜ್ಞಾನವೆಂಬ ದಿವ್ಯವಾದ ಹರಿಗೋಲು ಅವರ ಬಳಿ ಇತ್ತು. ಬೇರೆ ಶರಣರು ತಮ್ಮ ನೆಚ್ಚಿನ ದೇವರ ಹೆಸರುಗಳನ್ನು ಅಂಕಿತವಾಗಿಟ್ಟುಗೊಂಡರೆ ಅಂಬಿರ ಚೌಡಯ್ಯ ಅವರು ‘ನಿಜಶರಣ’ ಎಂಬ ಅಂಕಿತನಾಮ ಇಟ್ಟುಕೊಂಡರು. ನೇರವಂತಿಕೆಯೇ ಇವರ ಸತ್ವವಾಗಿತ್ತು. ನಿರ್ಭೀಡೆಯಿಂದ ಸತ್ಯವನ್ನು ಹೇಳುತ್ತಿದ್ದರು’ ಎಂದು ತಿಳಿಸಿದರು.

’ಅಂಬಿಗರ ಚೌಡಯ್ಯನವರ ಮಾತುಗಳು ಕೆಲವರಿಗೆ ಬೆಸುಗೆಯ ಸೀಸದಂತಿದ್ದರೆ ಇನ್ನೂ ಕೆಲವರಿಗೆ ಕಾದ ಸೀಸದಂತಿರುತ್ತಿದ್ದವು. ಭಗವಾನ್ ಬುದ್ಧರು ಆಸೆಯೇ ದುಃಖಕ್ಕೆ ಮೂಲ ಎಂದು ಹೇಳಿದರೆ ಅಂಬಿರ ಚೌಡಯ್ಯ ಚಿಂತೆಯೇ ದುಃಖಕ್ಕೆ ಮೂಲ ಎಂದು ಜಗತ್ತಿಗೆ ಸಾರಿದರು’ ಎಂದು ವಿವರಿಸಿದರು.

ತಹಶೀಲ್ದಾರ್‌ ರಂಗೇಗೌಡ ಮಾತನಾಡಿ,‘ಈ ಸಮುದಾಯದ ಇನ್ನಷ್ಟು ಅಭಿವೃದ್ಧಿ ಹೊಂದಬೇಕು. ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಬೇಕು. ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಸಮಾಜದ ಸಂಘಟನೆ ಸಲ್ಲಿಸಿರುವ ಮನವಿಯನ್ನು ಸರ್ಕಾರಕ್ಕೆ ಕಳುಹಿಸಲಾಗುವುದು’ ಎಂದು ಭರವಸೆ ನೀಡಿದರು.

ಕಡಬ ಗ್ರಾಮದ ಶಾಂತಾ ವಿಜಯದೇವ್ ಅವರನ್ನು ಸನ್ಮಾನಿಸಲಾಯಿತು. ಉಪ ಮೇಯರ್ ಫರ್ಜಾನಾ ಖಾನಂ, ಜಿಲ್ಲಾ ಗಂಗಾಮತಸ್ಥ ಸಂಘದ ಅಧ್ಯಕ್ಷ ಎಂ.ನಾಗರಾಜು, ಉಪಾಧ್ಯಕ್ಷ ಎಚ್.ಜಿ.ವಿರೂಪಾಕ್ಷಪ್ಪ, ಕಾರ್ಯದರ್ಶಿ ಗರುಡಯ್ಯ, ಡಿ.ಎಸ್.ಮಲ್ಲಿಕಾರ್ಜುನ್, ಕರಿಯಪ್ಪ ವೇದಿಕೆಯಲ್ಲಿದ್ದರು. ಟೌನ್‌ ಹಾಲ್‌ನಲ್ಲಿ ಅಂಬಿಗರ ಚೌಡಯ್ಯ ಭಾವಚಿತ್ರ ಮೆರವಣಿಗೆಗೆ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಶಾಸಕ ಡಾ.ರಫೀಕ್ ಅಹಮದ್ ಚಾಲನೆ ನೀಡಿದರು.

ನಮ್ಮ ಮತ ಬೇಕು, ಮತಿ ಬೇಡ

’ಅಂಬಿರ ಚೌಡಯ್ಯನವರು ಧರ್ಮ, ಸಂಸ್ಕೃತಿ, ರಾಜಕಾರಣವನ್ನು ಸ್ವಚ್ಛಗೊಳಿಸಲು ಪ್ರಯತ್ನ ಪಟ್ಟ ಮಹಾಶರಣರು. ಆದರೆ, ಈಗಿನ ನಮ್ಮ ನಾಯಕರು ನುಡಿದಂತೆ ನಡೆಯುವವರಲ್ಲ’ಎಂದು ಉಪನ್ಯಾಸಕರಾದ ಎಚ್.ಕೆ.ನರಸಿಂಹಮೂರ್ತಿ ಹೇಳಿದರು.

’ಬಹುಸಂಖ್ಯಾತರಿದ್ದರೆ ಈ ಕಾರ್ಯಕ್ರಮದ ವೇದಿಕೆ ಜನಪ್ರತಿನಿಧಿಗಳು, ಅಧಿಕಾರಿಗಳಿಂದ ತುಂಬಿ ತುಳುಕಿರುತ್ತಿತ್ತು. ನಮ್ಮ ಮತ ಬೇಕು. ಆದರೆ, ಮತಿ ಬೇಡ ಎಂಬ ಧೋರಣೆ ತಾಳಿರುವುದು ಕಂಡು ಬರುತ್ತದೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry