₹ 2 ಕೋಟಿಗೂ ಹೆಚ್ಚಿನ ವಹಿವಾಟು.. ?

7

₹ 2 ಕೋಟಿಗೂ ಹೆಚ್ಚಿನ ವಹಿವಾಟು.. ?

Published:
Updated:
₹ 2 ಕೋಟಿಗೂ ಹೆಚ್ಚಿನ ವಹಿವಾಟು.. ?

ವಿಜಯಪುರ: ಖಾದಿ ಉತ್ಪನ್ನಗಳು ಸೇರಿದಂತೆ ಗುಡಿ ಕೈಗಾರಿಕೆ, ಗ್ರಾಮೋದ್ಯೋಗದಲ್ಲಿ ಸಿದ್ಧಗೊಂಡ ನಾಡಿನ ವಿವಿಧೆಡೆಯ ಪ್ರಸಿದ್ಧ ವಸ್ತುಗಳ ವಹಿವಾಟು ಹದಿನೈದು ದಿನ ನಗರದಲ್ಲಿ ಭರ್ಜರಿಯಾಗಿ ನಡೆದಿದೆ. ನಗರದ ಕಂದಗಲ್‌ ಹನುಮಂತರಾಯ ರಂಗಮಂದಿರದ ಆವರಣದಲ್ಲಿ ಅನಾವರಣಗೊಂಡಿರುವ ಮೇಳಕ್ಕೆ ನಿತ್ಯವೂ ಸಹಸ್ರ, ಸಹಸ್ರ ಸಂಖ್ಯೆಯ ಜನರು ಭೇಟಿ ನೀಡಿ, ಪ್ರದರ್ಶನ ವೀಕ್ಷಿಸಿ ತಮಗಿಷ್ಟವಾದ ವಸ್ತು ಖರೀದಿಸಿದರು.

ಚನ್ನಪಟ್ಟಣದ ಆಟಿಕೆ ವಸ್ತುಗಳು, ಬೀದರ್‌ನ ಚರ್ಮದ ಬೂಟು, ಚಪ್ಪಲಿ, ಬೆಂಗಳೂರಿನ ಡಾಕ್ಟರ್‌ ಪ್ಲಸ್‌ ಪಾದರಕ್ಷೆಗಳು, ಗದಗ ಜಿಲ್ಲೆಯ ರೋಣ ಬಳಿಯ ಮಾಲಾಪುರದ ಕುರಿ ತುಪ್ಪಳದ ಕಂಬಳಿಗಳು, ಬೆಳಗಾವಿಯ ಹುದಲಿಯ ಉಪ್ಪಿನಕಾಯಿ, ಮಾವಿನ ಜ್ಯೂಸ್‌, ಊದುಬತ್ತಿ, ವಿಜಯಪುರದ ಪೀಠೋಪಕರಣ ಸೇರಿದಂತೆ ಬಾಗಲಕೋಟೆ ಜಿಲ್ಲೆಯ ಅಮೀನಗಡದ ಕರದಂಟು, ಇಳಕಲ್‌ನ ಸಾಂಪ್ರದಾಯಿಕ ಸೀರೆಗಳು ಪ್ರದರ್ಶನದಲ್ಲಿ ಗ್ರಾಹಕರ ಗಮನ ಸೆಳೆದವು.

ಕೊಡಗಿನ ಜೇನುತುಪ್ಪ, ಥಂಡಿಯಿಂದ ರಕ್ಷಿಸಿಕೊಳ್ಳಲು ಕುರಿಯ ತುಪ್ಪಳದಿಂದ ತಯಾರಿಸಿದ ಟೋಪಿ, ಮಧ್ಯಪ್ರದೇಶದ ಭೋಪಾಲ್‌ನಲ್ಲಿ ತಯಾರಿಸಲಾದ ಕೇಶ ತೈಲವೂ ಸೇರಿದಂತೆ ರಾಷ್ಟ್ರಧ್ವಜ, ಖಾದಿ ಉತ್ಪನ್ನಗಳ ಭಂಡಾರವೇ ಇಲ್ಲಿದೆ.

‘ಬೆಂಗಳೂರಿನಲ್ಲಿ ರಾಷ್ಟ್ರೀಯ ಉತ್ಸವ ನಡೆದಿದೆ. 400 ಸ್ಟಾಲ್‌ಗೆ ಅವಕಾಶವಿದೆ. ಆದರೂ ಚಿಕ್ಕಬಳ್ಳಾಪುರ, ದಾವಣಗೆರೆ, ಚಿತ್ರದುರ್ಗ, ಮೈಸೂರು, ರಾಮನಗರ ಭಾಗದ ಖಾದಿ ಗ್ರಾಮೋದ್ಯೋಗ ಮಂಡಳಿಗಳು ನಮ್ಮ ಮೇಳಕ್ಕೆ ಆಗಮಿಸಿವೆ.

ಇದರ ಜತೆಗೆ ಉತ್ತರ–ಹೈದರಾಬಾದ್‌ ಕರ್ನಾಟಕದ ಕಲಬುರ್ಗಿ, ಬೀದರ್‌, ರಾಯಚೂರು, ಕೊಪ್ಪಳ, ಬಳ್ಳಾರಿ, ಗದಗ, ಧಾರವಾಡ, ಬೆಳಗಾವಿ, ಬಾಗಲಕೋಟೆ ಜಿಲ್ಲೆಯ ವಿವಿಧ ಭಾಗದ ಗ್ರಾಮೋದ್ಯೋಗ ಮಂಡಳಿಗಳು ಮೇಳದಲ್ಲಿ ತಮ್ಮ ಮಳಿಗೆ ತೆರೆದಿವೆ’ ಎಂದು ವಿಜಯಪುರ ಜಿಲ್ಲಾ ಖಾದಿ ಗ್ರಾಮೋದ್ಯೋಗ ಸಂಘದ ಸಿಬ್ಬಂದಿ, ಲೆಕ್ಕಾಧಿಕಾರಿ ಕಾಶೀನಾಥ ಗೊಬ್ಬಣ್ಣವರ ಮಾಹಿತಿ ನೀಡಿದರು.

‘ನಿತ್ಯ ಸಹಸ್ರ, ಸಹಸ್ರ ಸಂಖ್ಯೆಯ ಜನಸ್ತೋಮ ಖಾದಿ ಮೇಳಕ್ಕೆ ಭೇಟಿ ನೀಡಿ, ಖರೀದಿ ನಡೆಸಿದೆ. ಕನಿಷ್ಠ ಸರಾಸರಿ ₹ 15 ಲಕ್ಷದ ವಹಿವಾಟು ನಡೆದಿದೆ. ₹ 20 ಲಕ್ಷ ವಹಿವಾಟು ನಡೆದಿರುವುದು ಇದುವರೆಗಿನ ಒಂದು ದಿನದ ದಾಖಲೆ. ಜ 18ರವರೆಗೆ ₹ 1.55 ಕೋಟಿ ವಹಿವಾಟು ಅಧಿಕೃತವಾಗಿ ನಡೆದಿದೆ.

ಇದೀಗ ಮೇಳದ ಕೊನೆಯ ದಿನ. ಶನಿವಾರ, ಭಾನುವಾರ ಅಪಾರ ಸಂಖ್ಯೆಯ ಜನದಟ್ಟಣೆ ನೆರೆಯಲಿದೆ. ಹಿಂದಿನ ವರ್ಷದ ಮೇಳದಲ್ಲಿ ₹ 2 ಕೋಟಿ ವಹಿವಾಟು ನಡೆದಿತ್ತು. ಈ ಬಾರಿ ಮಂಡಳಿ ನಮಗೆ ₹ 75 ಲಕ್ಷದ ವಹಿವಾಟಿನ ಗುರಿ ನಿಗದಿಪಡಿಸಿತ್ತು.

ಆದರೆ ನಾವೀಗಾಗಲೇ ಈ ಗುರಿಯನ್ನು ತಲುಪಿ ದುಪ್ಪಟ್ಟು ವಹಿವಾಟು ನಡೆಸಿದ್ದೇವೆ. ಮೇಳ ಪೂರ್ಣಗೊಳ್ಳುವುದರೊಳಗಾಗಿ ಗುರಿಯ ಮೂರು ಪಟ್ಟು ವಹಿವಾಟು ನಡೆಯಲಿದೆ ಎಂಬ ನಿರೀಕ್ಷೆ’ ನಮ್ಮದಾಗಿದೆ ಎಂದು ಕಾಶೀನಾಥ ‘ಪ್ರಜಾವಾಣಿ’ಗೆ ತಿಳಿಸಿದರು.

‘ಖಾದಿ ಪ್ರದರ್ಶನ–ಮಾರಾಟ ಮೇಳ ಎಲ್ಲೆಡೆ ನಡೆಯಬೇಕು. ಒಂದೇ ಸೂರಿನಡಿ ವಿವಿಧ ಉತ್ಪನ್ನಗಳು ದೊರೆತಿವೆ. ದರವೂ ಕಡಿಮೆ. ಇಂಥಹ ಮೇಳ ವರ್ಷಕ್ಕೆ ಎರಡ್ಮೂರು ಬಾರಿ ನಡೆದರೆ ಖಾದಿಗೂ ಉತ್ತೇಜನ ಸಿಕ್ಕಂತಾಗುತ್ತದೆ’ ಎಂದು ಗ್ರಾಹಕಿ ಪದ್ಮಜಾ ಪಾಟೀಲ ಅಭಿಪ್ರಾಯಪಟ್ಟರು.

‘ಹಿಂದಿನ ಮೇಳಕ್ಕಿಂತ ವಿಭಿನ್ನ ಉತ್ಪನ್ನ, ನಾನಾ ನಮೂನೆಯ ಬಟ್ಟೆ ಬಂದಿವೆ. ಮೇಳ 1ನೇ ತಾರೀಖಿನಿಂದ ಆರಂಭಗೊಂಡರೇ ಖರೀದಿದಾರರಿಗೆ ಅನುಕೂಲವಾಗಲಿದೆ’ ಎಂದು ಬಿ.ಎಸ್‌.ಹಿರೇಮಠ ಹೇಳಿದರು.

* * 

ಮೇಳಕ್ಕೆ ಇದೇ ಮೊದಲ ಬಾರಿಗೆ ಬಂದಿದ್ದೇವೆ. ನಿತ್ಯ ₹ 4000–5000 ವಹಿವಾಟು ನಡೆದಿದೆ. ನಮ್ಮ ಉತ್ಪನ್ನಗಳಿಗೆ ಬೇಡಿಕೆ ಬಂದಿದೆ. ಮುಂದಿನ ಬಾರಿಯೂ ಬರುತ್ತೇವೆ ಆನಂದ ಕುಲಕರ್ಣಿ, ಆಳಂದದ ವ್ಯಾಪಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry