‘ಗೌರವಾದರ ವರ್ತಮಾನಕ್ಕೆ ಅನ್ವಯಿಸಲಿ’

7

‘ಗೌರವಾದರ ವರ್ತಮಾನಕ್ಕೆ ಅನ್ವಯಿಸಲಿ’

Published:
Updated:

ಚಿಂಚೋಳಿ (ಪ್ರೊ.ಸೂಗಯ್ಯ ಹಿರೇಮಠ ವೇದಿಕೆ): ‘ಪ್ರಾಚೀನ ಕಾಲದಿಂದಲೂ ಭಾರತ ದೇಶದಲ್ಲಿ ಆಚರಿಸಿಕೊಂಡು ಬರುತ್ತಿರುವ ಗೌರವಾದರಗಳು, ಮಹಾನ್ ತತ್ವಗಳು ವರ್ತಮಾನದ ಜಗತ್ತಿಗೆ ಅನ್ವಯವಾಗುವುದಕ್ಕೆ ಸಾಧ್ಯವಾಗುತ್ತಿಲ್ಲ’ ಎಂದು ಸಾಹಿತಿ ಈಶ್ವರಯ್ಯ ಮಠ ಬೇಸರ ವ್ಯಕ್ತಪಡಿಸಿದರು. ಚಿಂಚೋಳಿಯ ಚಂದಾಪುರದಲ್ಲಿ ಭಾನುವಾರ ನಡೆದ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ‘ವರ್ತಮಾನದ ಸವಾಲುಗಳು’ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಭೂಮಿಯ ಮೇಲಿರುವ ಸಕಲ ಜೀವ ರಾಶಿಗಳಲ್ಲಿ ಗಂಡು-ಹೆಣ್ಣು ಎಂಬ ಭೇದ ಇರುವುದು ಮಾನವ ಜನ್ಮದಲ್ಲಿ ಮಾತ್ರ. ಗಂಡನ್ನು ಶ್ರೇಷ್ಠ ಎಂದೂ, ಹೆಣ್ಣನ್ನು ಅಬಲೆ ಹಾಗೂ ಭೋಗದ ವಸ್ತುವನ್ನಾಗಿ ಕಾಣುವ ಪ್ರವೃತ್ತಿ ದೇಶದಲ್ಲಿದೆ. ಮಾತೃಭೂಮಿ, ಮಹಿಳೆಯರನ್ನು ಗೌರವಿಸುವ ನಾಡು, ಸರಸ್ವತಿ, ವಿಶೇಷವಾಗಿ ಮಹಿಳೆಯರನ್ನು ಲಕ್ಷ್ಮಿ, ಸರಸ್ವತಿ ಎಂಬ ವೈವಿಧ್ಯದಿಂದ ಕಾಣುವ ಜತೆಗೆ ಮಹಿಳೆಯರ ದಿನವೆಂದೇ ಆಚರಿಸಲಾಗುತ್ತದೆ. ಅವರ ಬಗ್ಗೆ ಕೊಂಡಾಡಲಾಗುತ್ತದೆ.

ಆದರೆ ವಾಸ್ತವಿಕ ಪ್ರಪಂಚದಲ್ಲಿ ಹೆಣ್ಣನ್ನು ಕೀಳಾಗಿಯೇ ಕಾಣುವ ಪ್ರವೃತ್ತಿ ಇಂದಿಗೂ ಬದಲಾಗಿಲ್ಲ. ಆದ್ದರಿಂದ ಹೆಣ್ಣು ಮಗು ಎಂದಾಕ್ಷಣವೇ ಹೊಟ್ಟೆಯಲ್ಲಿಯೇ ಅದನ್ನು ಹಿಸುಕಿ ಕೊಲ್ಲುವ ಸ್ವಭಾವನ್ನು ಮಾನವ ಹೊಂದುತ್ತಿದ್ದಾನೆ. ಇಂತಹ ಅಸಮಾನ್ಯ ನಡವಳಿಕ, ಸ್ವಭಾವ ಹಾಗೂ ಮೂಢನಂಬಿಕೆ ಬದಲಾಗಬೇಕಿದೆ’ ಎಂದರು.

‘ಶಿಕ್ಷಣ ಪಡೆದ ಪ್ರಜ್ಞಾವಂತರ ಬಳಿ ಸಂಬಂಧಗಳು ಸಡಿಲಗೊಳ್ಳುತ್ತಿವೆ. ಪಟ್ಟಣದಲ್ಲಿ ವಾಸಿಸುವ ಶ್ರೀಮಂತ ಕುಟುಂಬದವರ ಮನೆಯಲ್ಲಿ ಪಾಲಕರು ನೆಲೆಸುವುದು ವಿರಳವಾಗಿದೆ. ಆದರೆ ಅನಕ್ಷರಸ್ಥ ಎನಿಸಿಕೊಂಡು ಗ್ರಾಮೀಣ ಭಾಗದ ರೈತರ ಕುಟುಂಬದಲ್ಲಿ ತಂದೆ-ತಾಯಿ ಸೇರಿದಂತೆ ಅನೇಕ ಬಳಗವೇ ನೆಲೆಸುತ್ತಿದೆ. ಇಲ್ಲಿಯೇ ಇದುವರೆಗೂ ಸಂಬಂಧಗಳು ಗಟ್ಟಿಯಾಗಿ ನೆಲೆಗೊಂಡಿವೆ’ ಎಂದು ಹೇಳಿದರು.

‘ಪ್ರಸ್ತುತ ದಿನಗಳಲ್ಲಿ ಕುಟುಂಬದಲ್ಲಿನ ಕಲಹಗಳು ಬೀದಿಗೆ ಬಂದು ಕುಟುಂಬದಲ್ಲಿ ಸಂಬಂಧಗಳು ಬಿರುಕು ಬಿಡುತ್ತಿವೆ. ಆದರೆ ಪೂರ್ವಜರು ಮನೆಯಲ್ಲಿ ಎಷ್ಟೇ ಕಲಹಗಳು ಇದ್ದರೂ ಸಹ ಅವುಗಳನ್ನು ಕುಟುಂಬದಲ್ಲಿಯೇ ಬಗೆಹರಿಸಿಕೊಳ್ಳುತ್ತಿದ್ದರು. ನಮ್ಮ ಕುಟುಂಬದ ಸಮಸ್ಯೆಗಳನ್ನು ಬೀದಿಗೆ ತರದೇ ಅವುಗಳನ್ನು ಬಗೆಹರಿಸಿಕೊಳ್ಳಬೇಕು’ ಎಂದು ತಿಳಿಸಿದರು.

‘ಬುದ್ಧಿ ಜೀವಿಗಳು ಮತ್ತು ಸಮಾಜ‘ ಕುರಿತು ಮಾತನಾಡಿದ ಸಾಹಿತಿ ಮಹಾದೇವ ಬಡಿಗೇರ, ‘ಬುದ್ಧಿ ಜೀವಿಗಳು ಎಂದರೆ ಬರಹಗಾರರು, ಸಾಹಿತಿಗಳು ಹಾಗೂ ಇತಿಹಾಸಕಾರರು ಎಂಬ ಭಾವನೆ ಇದೆ. ಆದರೆ ನಿಜವಾಗಿ ಬುದ್ಧಿ ಜೀವಿಗಳೆಂದರೆ ಸಮಾಜದ ಒಳಿತನ್ನು ಬಯಸಿ, ಸಮಾಜವನ್ನು ಸರಿದಾರಿಗೆ ತರುವ ಮನಷ್ಯರು. ಪ್ರಸ್ತುತದಲ್ಲಿ ಅವೈಜ್ಞಾನಿಕ ಹೇಳಿಕೆಗಳನ್ನು ಕೊಡುತ್ತ, ತಾವು ನುಡಿದದ್ದೇ ಸರಿ ಎನ್ನುತ್ತ, ಅಹಂ ಭಾವನೆಯಿಂದ ಮೆರೆಯುವ ಜನರೇ ಹೆಚ್ಚಾಗಿದ್ದಾರೆ. ಇಂತಹ ವ್ಯಕ್ತಿಗಳಿಂದಲೇ ಸಮಾಜ ಹಾಳಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಸ್ವಾಗತ ಸಮಿತಿ ಅಧ್ಯಕ್ಷ ಚನ್ನವೀರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಜೆಸ್ಕಾಂ ನಿರ್ದೇಶಕಿ ಉಮಾ ಪಾಟೀಲ ಇದ್ದರು. ಗೀತಾರಾಣಿ ಐನೋಳ್ಳಿ, ಶಿವಾನಂದ ಕಶೆಟ್ಟಿ, ಘಾಳಮ್ಮ ಮತ್ತು ಸಂಗನಬಸಮ್ಮ ಕಾರ್ಯಕ್ರಮ ನಿರ್ವಹಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry