7

ಕಲಬುರ್ಗಿ ಚಿತ್ರಸಂತೆಯಲ್ಲಿ ಕಲೆಯ ಬಲೆ

Published:
Updated:
ಕಲಬುರ್ಗಿ ಚಿತ್ರಸಂತೆಯಲ್ಲಿ ಕಲೆಯ ಬಲೆ

ಕಲಬುರ್ಗಿ: ರಸ್ತೆ ಬದಿಯಲ್ಲಿ ಕಲಾಕೃತಿಗಳ ತೋರಣ. ಕ್ಯಾನ್ವಾಸ್‌ ಮೇಲೆ ಬಣ್ಣ ಬಣ್ಣಗಳ ಚಿತ್ತಾರ. ವೈವಿಧ್ಯಮಯ ಮೂರ್ತಿಶಿಲ್ಪಗಳು. ಸ್ಥಳದಲ್ಲಿಯೇ ಚಿತ್ರ ರಚಿಸುವ ಚಿಣ್ಣರ ಉತ್ಸಾಹ. ದಿನವಿಡೀ ಗಮನ ಸೆಳೆದ ಕಲಾಲೋಕ.

ನಗರದ ಸಾರ್ವಜನಿಕ ಉದ್ಯಾನದ ಹೊರ ಹಾಗೂ ಒಳ ಆವರಣದಲ್ಲಿ ಭಾನುವಾರ ಕಂಡ ಚಿತ್ರಣವಿದು. 5ನೇ ಚಿತ್ರಸಂತೆಯು ಕಲಾಸಕ್ತರು ಹಾಗೂ ಸಾರ್ವಜನಿಕರನ್ನು ಸೂಜಿಗಲ್ಲಿನಿಂತೆ ಸೆಳೆಯಿತು.

ಜಿಲ್ಲೆ ಹಾಗೂ ಹೊರ ಜಿಲ್ಲೆಗಳ ಹಲವಾರು ಕಲಾವಿದರು ತಮ್ಮ ಕಲಾಕೃತಿಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ತಂದಿದ್ದರು. ಚಿತ್ರಕಲೆಯ ಜತೆಗೆ ಸ್ಥಳದಲ್ಲಿ ವ್ಯಕ್ತಿಚಿತ್ರ ರಚಿಸುವ ಕಲಾವಿದರೂ ಈ ಬಾರಿ ಹೆಚ್ಚಾಗಿದ್ದರು. ಕರಕುಶಲ ಕಲೆ, ಜನಪದ ಕಲೆ, ಕಲಾತ್ಮಕ ವಸ್ತುಗಳು ಈ ಪ್ರದರ್ಶನದಲ್ಲಿದ್ದವು.

ಹೈದರಾಬಾದ್, ತುಮಕೂರು, ಬೆಳಗಾವಿ, ಹುಬ್ಬಳ್ಳಿಯ ಕಲಾವಿದರು ಚಿತ್ರಸಂತೆಯಲ್ಲಿ ಭಾಗವಹಿಸಿದ್ದರು. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕಲಾವಿದರು ಬಂದಿದ್ದರು. ರಾಯಚೂರು, ಬೀದರ್‌, ಯಾದಗಿರಿ ಜಿಲ್ಲೆಗಳ ಕಲಾವಿದರಿಗೆ ಪ್ರಾತಿನಿಧ್ಯ ನೀಡಲಾಗಿತ್ತು. ಪ್ರತಿ ವರ್ಷದಂತೆ ಕಲಬುರ್ಗಿ ಹಾಗೂ ಬೀದರ್‌ನ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಬೀದರ್‌ ಜಿಲ್ಲೆಯ ಕಲಾವಿದರು 16 ಮಳಿಗೆಗಳಲ್ಲಿ ತಮ್ಮ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ಮಾಡಿದರು.

ಹೈದರಾಬಾದ್ ಕರ್ನಾಟಕ ಭಾಗದ ಹಿರಿಯ ಕಲಾವಿದರ ಕಲಾಕೃತಿಗಳ ಪ್ರದರ್ಶನ ಈ ಬಾರಿಯ ವಿಶೇಷ. 25ಕ್ಕೂ ಹೆಚ್ಚು ಹಿರಿಯ ಕಲಾವಿದರು ತಮ್ಮ ಕಲಾಕೃತಿಗಳನ್ನು ಮಾರಾಟ ಮತ್ತು ಪ್ರದರ್ಶನಕ್ಕೆ ತಂದಿದ್ದರು. ಮಹಿಳಾ ಕಲಾವಿದರ ಕಲಾಕೃತಿಗಳಿಗೂ ಆದ್ಯತೆ ನೀಡಲಾಗಿತ್ತು. ಮಕ್ಕಳಿಗಾಗಿ ಸ್ಥಳದಲ್ಲೀಯ ಚಿತ್ರ ಬಿಡಿಸುವ ಸ್ಪರ್ಧೆಯೂ ನಡೆಯಿತು.

‘ಈ ಬಾರಿ 100ಕ್ಕೂ ಹೆಚ್ಚು ಮಂದಿ ಮಳಿಗೆಗಳನ್ನು ಮುಂಗಡವಾಗಿ ಕಾದಿರಿಸಿದ್ದರು. ಭಾನುವಾರ ಬೆಳಿಗ್ಗೆ ಸ್ಥಳದಲ್ಲಿಯೇ ಮತ್ತೆ 25 ಕಲಾವಿದರು ಮಳಿಗೆ ಸ್ಥಾಪನೆಗೆ ಬೇಡಿಕೆ ಮುಂದಿಟ್ಟರು. ಎಲ್ಲರಿಗೂ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕ ಉದ್ಯಾನದ ಒಳಗೆ ಹೆಚ್ಚಿನ ಸ್ಥಳಾವಕಾಶ ಕಲ್ಪಿಸಲಾಗಿದೆ’ ಎಂದು ಚಿತ್ರಸಂತೆಯ ಸಂಘಟಕ ಹಿರಿಯ ಕಲಾವಿದ ಎ.ಎಸ್‌.ಪಾಟೀಲ ತಿಳಿಸಿದರು.

ಉದ್ಘಾಟನೆ: ಚಿತ್ರಸಂತೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಶಾಸಕ ದತ್ತಾತ್ರೇಯ ಸಿ.ಪಾಟೀಲ ರೇವೂರ, ‘ನಗರದಲ್ಲಿ ಹಮ್ಮಿಕೊಂಡಿದ್ದ ನಾಲ್ಕು ಚಿತ್ರ ಸಂತೆಗಳು ಯಶಸ್ವಿಯಾಗಿವೆ. ಐದನೇ ಚಿತ್ರಸಂತೆಗೂ ಉತ್ತಮ ಪ್ರತಿಕ್ರಿಯೆ ದೊರೆಯಲಿದೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಚಿತ್ರಕಲಾವಿದರ ಸಂಖ್ಯೆ ಹೆಚ್ಚಾಗಿದೆ. ಅವರಿಗೆ ಪ್ರೋತ್ಸಾಹ ದೊರೆಯಬೇಕು. ಇದಕ್ಕಾಗಿ ಮುಂಬೈ, ಬೆಂಗಳೂರಿನಲ್ಲಿ ನಡೆಯುವ ಚಿತ್ರಸಂತೆಯ ಮಾದರಿಯಲ್ಲಿ ಇಲ್ಲಿಯೂ ಪ್ರದರ್ಶನ ಹಮ್ಮಿಕೊಳ್ಳಬೇಕು’ ಎಂದರು.

ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಚ್‌.ಎಂ.ಮಹೇಶ್ವರಯ್ಯ ಮಾತನಾಡಿ, ‘ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆಯ ಶ್ರಮದಿಂದ ಚಿತ್ರಸಂತೆ ಆಯೋಜಿಸುವುದು ಕಷ್ಟ. ಸ್ಥಳೀಯ ಆಡಳಿತ ಸಹಕಾರ ಬೇಕು. ಬೆಂಗಳೂರಿನಲ್ಲಿ ನಡೆಯುವ ಚಿತ್ರಸಂತೆಗೆ ಅಲ್ಲಿನ ಬಿಬಿಎಂಪಿ ₹50 ಲಕ್ಷ ಅನುದಾನ ನೀಡುತ್ತಿದೆ. ಕಲಬುರ್ಗಿಯ ಮಹಾನಗರ ಪಾಲಿಕೆಯೂ ₹20 ಲಕ್ಷವಾದರೂ ನೆರವು ನೀಡಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೂ ಇಂಥ ಪ್ರದರ್ಶನಕ್ಕೆ ನೆರವು ನೀಡಬೇಕು’ ಎಂದು ಒತ್ತಾಯಿಸಿದರು.

‘ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಮುಂದಿನ ವರ್ಷದಿಂದ ಲಲಿತ ಕಲೆಗಳ ವಿಭಾಗ ಆರಂಭಿಸಲಾಗುವುದು. ಅಲ್ಲಿ ಕಲಾವಿದರಿಗೆ ತರಬೇತಿ ಹಾಗೂ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುವುದು. ಕಲಬುರ್ಗಿ ಶ್ರೇಷ್ಠ ಕಲಾವಿದರ ನೆಲೆಯಾಗಿದೆ. ಎಸ್‌.ಎಂ.ಪಂಡಿತ, ಜಿ.ಎಸ್‌.ಖಂಡೇರಾವ್‌, ಶಾಂತಲಿಂಗಪ್ಪ ಪಾಟೀಲ ಮುಂತಾದ ಖ್ಯಾತ ಕಲಾವಿದರು ಇಲ್ಲಿನವರು. ಚಿತ್ರಕಲೆಯಲ್ಲಿ ಈ ಭಾಗ ಎಂದಿಗೂ ಹಿಂದುಳಿದಿಲ್ಲ’ ಎಂದು ಬಣ್ಣಿಸಿದರು.

ಮೇಯರ್‌ ಶರಣಕುಮಾರ ಮೋದಿ ಪ್ರದರ್ಶನ ಹಾಗೂ ಮಾರಾಟಕ್ಕೆ ಚಾಲನೆ ನೀಡಿದರು. ಗುಲಬರ್ಗಾ ವಿಶ್ವವಿದ್ಯಾಲಯದ ಲಲಿತಕಲಾ ವಿಭಾಗದ ಪ್ರೊ.ಪರಿಮಳಾ ಅಂಬೇಕರ್, ಪ್ರೊ.ಚಂದ್ರಕಾಂತ ಯಾತನೂರ, ಉಮಾಕಾಂತ ನಿಗ್ಗುಡಗಿ, ಕಲಾವಿದರಾದ ಜಿ.ಎಸ್‌.ಖಂಡೇರಾವ್, ವಿ.ಜಿ.ಅಂದಾನಿ ಇದ್ದರು.

ಕಲಾಸಕ್ತರ ಬರ!

5ನೇ ಚಿತ್ರಸಂತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕಲಾಕೃತಿಗಳ ಮಾರಾಟ ಮಳಿಗೆಗಳು ಬಂದಿದ್ದರೂ ಕಲಾಸಕ್ತರ ಬರ ಎದುರಾಗಿತ್ತು. ಬೆಳಿಗ್ಗೆ 10ಗಂಟೆಗೆ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು. ಮಧ್ಯಾಹ್ನ 2ಗಂಟೆಯ ವರೆಗೆ ಯಾವುದೇ ಮಳಿಗೆಯಲ್ಲೂ ಜನದಟ್ಟಣೆ ಇರಲಿಲ್ಲ. ಸಂಜೆ ವೇಳೆಗೆ ಕಲಾಪ್ರೇಮಿಗಳು ಬರುತ್ತಾರೆ ಎಂಬ ನಿರೀಕ್ಷೆಯೂ ಹುಸಿಯಾಯಿತು.

‘ಹಿಂದಿನ ಚಿತ್ರಸಂತೆಗಳಿಗೆ ಹೋಲಿಸದರೆ ಈ ವರ್ಷ ಹೆಚ್ಚಿನ ಜನ ಬಂದಿಲ್ಲ. ಬಂದವರೂ ಬರೀ ವೀಕ್ಷಣೆಗೆ ಸಿಮೀತವಾಗಿದ್ದಾರೆ. ಕಲಾಕೃತಿಯ ಖರೀದಿಗೂ ಯಾರೂ ಮನಸ್ಸು ಮಾಡುತ್ತಿಲ್ಲ’ ಎಂದು ಕಲಾಕೃತಿಯ ಮಳಿಗೆ ತೆರೆದಿದ್ದ ಕಲಾವಿದರೊಬ್ಬರು ಬೇಸರದಿಂದ ಹೇಳಿದರು.

‘ಕುಸರಿ ಕೆತ್ತನೆಯ ಕಲಾಕೃತಿಗಳ ಮಾರಾಟ ಮಳಿಗೆಯನ್ನು ಮೊದಲ ಬಾರಿಗೆ ಇಲ್ಲಿ ಸ್ಥಾಪಿಸಲಾಗಿದೆ. ಬೆಂಗಳೂರು, ಮುಂಬೈನಲ್ಲೂ ದೊರೆಯದ ಆಕರ್ಷಕ ವಸ್ತುಗಳು ಇಲ್ಲಿವೆ. ಆದರೆ ವ್ಯಾಪಾರ ಮಾತ್ರ ನಿರೀಕ್ಷೆಯಂತೆ ಇಲ್ಲ’ ಎಂದು ವ್ಯಾಪಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry