ಮಾತೃ ಪೂರ್ಣ ಯೋಜನೆ ಸ್ಥಗಿತಕ್ಕೆ ನಿರ್ಣಯ

7

ಮಾತೃ ಪೂರ್ಣ ಯೋಜನೆ ಸ್ಥಗಿತಕ್ಕೆ ನಿರ್ಣಯ

Published:
Updated:
ಮಾತೃ ಪೂರ್ಣ ಯೋಜನೆ ಸ್ಥಗಿತಕ್ಕೆ ನಿರ್ಣಯ

ಮಡಿಕೇರಿ: ಸರ್ಕಾರದ ಮಾತೃ ಪೂರ್ಣ ಯೋಜನೆ ಜಿಲ್ಲೆಯಲ್ಲಿ ಪ್ರಗತಿ ಕಾಣದ ಹಿನ್ನೆಲೆ ಯೋಜನೆಯನ್ನು ಸ್ಥಗಿತಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಶನಿವಾರ ನಿರ್ಣಯ ಕೈಗೊಳ್ಳಲಾಯಿತು. ಇಲ್ಲಿನ ಸಭಾಂಗಣದಲ್ಲಿ ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಂಡರು.

ಶಿಶು ಅಭಿವೃದ್ಧಿ ಅಧಿಕಾರಿ ದಮಯಂತಿ ಮಾತನಾಡಿ, ಜಿಲ್ಲೆಯಲ್ಲಿ ಮಾತೃ ಪೂರ್ಣ ಯೋಜನೆ ಶೇ 15ರಷ್ಟು ಪ್ರಗತಿ ಕಂಡು ರಾಜ್ಯದ ಜಿಲ್ಲೆಗಳ ಪಟ್ಟಿಯಲ್ಲಿ ಕೊನೆಯಿಂದ ಮೂರನೇ ಸ್ಥಾನದಲ್ಲಿದೆ. ಅಲ್ಲದೆ ಅಂಗನವಾಡಿಗಳಿಗೆ ಗರ್ಭಿಣಿಯರು, ಬಾಣಂತಿಯರು ಕಡಿಮೆ ಸಂಖ್ಯೆಯಲ್ಲಿ ಹಾಜರಾಗುತ್ತಿದ್ದಾರೆ. ಕೆಲವರು ಆಹಾರ ಸಮಾಗ್ರಿಗಳನ್ನು ತೆಗೆದುಕೊಂಡು ಹೋಗಿ ದುರೂಪಯೋಗ ಮಾಡುತ್ತಿರುವುದು ಗಮನಕ್ಕೆ ಬಂದಿದೆ ಎಂದು ಸಭೆಯ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ತೆಕ್ಕಡೆ ಶೋಭಾ, ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ ಹಾಗೂ ಕೆಲವು ಸದಸ್ಯರು, ಮಾತೃಪೂರ್ಣ ಯೋಜನೆಯನ್ನು ಸ್ಥಗಿತಗೊಳಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಆಗ್ರಹಿಸಿದರು.

ಸದಸ್ಯೆ ಉಮಾ ಪ್ರಭು ಮಾತನಾಡಿ, ನಾಪೋಕ್ಲು ವ್ಯಾಪ್ತಿಯ ಅಂಗನವಾಡಿಗಳಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಎಸೆಗುತ್ತಿರುವುದು ಗಮನಕ್ಕೆ ಬಂದಿದೆ. ಅಂತಹ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷರಿಗೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ‘ಅಂಗನವಾಡಿಗಳಿಗೆ ಸರಿಯಾದ ಸಮಯಕ್ಕೆ ಹಾಜರಾಗದ, ದೌರ್ಜನ್ಯ ಎಸಗುವ ಕಾರ್ಯಕರ್ತೆ ಹಾಗೂ ಸಹಾಯಕಿಯರನ್ನು ಯಾವುದೇ ಮುಲಾಜಿಲ್ಲದೆ ಕೆಲಸದಿಂದ ವಜಾಗೊಳಿಸಿ’ ಎಂದು ಶಿಶು ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖಾಧಿಕಾರಿ ಗಾಯತ್ರಿ ಮಾತನಾಡಿ, ‘ತಾಲ್ಲೂಕಿನಲ್ಲಿ ಸಾಕಷ್ಟು ಸರ್ಕಾರಿ ಶಾಲೆಗಳಿಗೆ ದಾನಿಗಳು ಜಾಗವನ್ನು ನೀಡಿದ್ದಾರೆ. ಆದರೆ, ಆರ್‌ಟಿಸಿ ಮಾಡಿಸಲು ಮುಂದಾದಲ್ಲಿ ಕೆಲವು ಶಾಲೆಗಳಲ್ಲಿ ದಾನಿಗಳ ಮಕ್ಕಳು ಹಾಗೂ ಕುಟುಂಬದವರು ಇಂದು ತಕರಾರು ಮಾಡುತ್ತಿದ್ದಾರೆ. ಸರ್ವೆ ಮಾಡಲು ಬಿಡುತ್ತಿಲ್ಲ’ ಎಂದು ದೂರಿದರು.

ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಮಾತನಾಡಿ, ಶಾಲೆಯ ಮುಖ್ಯೋಪಾಧ್ಯಯರು ಶಾಲೆ ಜಾಗದ ಕುರಿತು ಹೆಚ್ಚಿನ ಮುತುವರ್ಜಿ ವಹಿಸಬೇಕು. ಆರ್‌ಟಿಸಿ ಆಗದಿರುವ ಜಾಗದ ಸಮಸ್ಯೆಯನ್ನು ಸರಿಪಡಿಸುವಂತೆ ತಹಾಶೀಲ್ದಾರ್‌ಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೃಷಿ ಇಲಾಖೆ, ಆರೋಗ್ಯ ಇಲಾಖೆ, ಆಯುಷ್ ಇಲಾಖೆ, ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳು ತಮ್ಮ ಪ್ರಗತಿ ಹಾಗೂ ಸಮಸ್ಯೆಗಳ ಬಗ್ಗೆ ಸಭೆಯ ಗಮನಕ್ಕೆ ತಂದರು. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮುದ್ದಂಡ ರಾಯ್ ತಮ್ಮಯ್ಯ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಜೀವನ್ ಕುಮಾರ್ ಹಾಜರಿದ್ದರು.

* * 

ಅಂಗನವಾಡಿಗಳಿಗೆ ಗರ್ಭಿಣಿಯರು, ಬಾಣಂತಿಯರು ಕಡಿಮೆ ಸಂಖ್ಯೆಯಲ್ಲಿ ಹಾಜರಾಗುತ್ತಿದ್ದಾರೆ. ಕೆಲವರು ಆಹಾರ ಸಮಾಗ್ರಿಗಳನ್ನು ದುರೂಪಯೋಗ ಮಾಡುತ್ತಿದ್ದಾರೆ.

ದಮಯಂತಿ, ಶಿಶು ಅಭಿವೃದ್ಧಿ ಅಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry