ಗೋವಂಶ ನಾಶದಿಂದ ದೇಶ ನಾಶ

7

ಗೋವಂಶ ನಾಶದಿಂದ ದೇಶ ನಾಶ

Published:
Updated:
ಗೋವಂಶ ನಾಶದಿಂದ ದೇಶ ನಾಶ

ಮಾಲೂರು: ಗೋವಂಶ ನಾಶ ದೇಶದ ನಾಶಕ್ಕೆ ನಾಂದಿ. ಗೋವಿನ ಅಭಯ ದೇಶದ ಭವಿಷ್ಯಕ್ಕೆ ಅಭಯ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಗಂಗಾಪುರದಲ್ಲಿರುವ ರಾಘವೇಂದ್ರ ಗೋ ಆಶ್ರಮದಲ್ಲಿ ರಾಘವೇಶ್ವರ ಭಾರತೀ ಸ್ವಾಮೀಜಿ ನೇತೃತ್ವದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಭಯ ಗೋ ಯಾತ್ರೆಯ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ‘ಇಷ್ಟು ದೊಡ್ಡ ಸಂಖ್ಯೆಯ ಸ್ವರಕ್ತ ಲಿಖಿತ ಹಸ್ತಾಕ್ಷರ ನೋಡಿದ ಬಳಿಕವೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ ಎಂದಾದರೆ ಅದು ಜೀವಂತವಾಗಿಲ್ಲ ಎಂಬ ಅರ್ಥ’ ಎಂದು ವ್ಯಾಖ್ಯಾನಿಸಿದರು.

ಅಭಯಾಕ್ಷರ ಅಭಿಯಾನ ಎಲ್ಲೆಲ್ಲಿ ಬಾಕಿ ಇದೆಯೋ ಆ ಪ್ರದೇಶಗಳನ್ನು ಕೇಂದ್ರೀಕರಿಸಿ ಈ ಅಭಿಯಾನ ಮುಂದುವರಿಯಲಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ತಲುಪಿ, ತಮ್ಮ ಭಾವನೆಗಳನ್ನು ಅಭಿವ್ಯಕ್ತಗೊಳಿಸಲು ಅವಕಾಶ ಮಾಡಿಕೊಡುವುದು ಇದರ ಉದ್ದೇಶ ಎಂದು ತಿಳಿಸಿದರು.

ಗೋಸಂರಕ್ಷಣೆ ಸಂವರ್ಧನೆಯ ನಿಟ್ಟಿನಲ್ಲಿ ಶ್ರೀಮಠ ಶಾಶ್ವತ ಕಾರ್ಯ ಯೋಜನೆ ಹಮ್ಮಿಕೊಂಡಿದೆ. 50 ಸಾವಿರ ಮನೆಗಳಿಗೆ ಗೋಮೂತ್ರ, ಗೋಕ್ಷೀರ ಒದಗಿಸಲಾಗುತ್ತದೆ. ಗೋವಿನ ಪ್ರಸಾದ ಮನೆ ಮನೆಗಳಿಗೆ ತಲುಪಬೇಕು ಎಂಬ ಉದ್ದೇಶದಿಂದ ಕಾರ್ಯ ನಿರ್ವಹಿಸಲಾಗುವುದು. ಶ್ರೀಮಠದ ಎಲ್ಲ ಗೋಶಾಲೆಗಳನ್ನು ಹೈಟೆಕ್ ಗೋಶಾಲೆಯಾಗಿ ಪರಿವರ್ತಿಸಿ, ಗುಣಮಟ್ಟದ ಗವ್ಯೋತ್ಪನ್ನ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜ್ಯಸಭಾ ಸದಸ್ಯ ಸುಬ್ರಹ್ಮಣಿಯನ್‌ ಸ್ವಾಮಿ ಮಾತನಾಡಿ, ’ಚೆನ್ನೈನ ಐಟಿ ಟೆಕ್ಕಿಗಳು ಕೌ ಕನೆಕ್ಟ್ ಎಂಬ ಮೊಬೈಲ್ ಅಪ್ಲಿಕೇಶನ್ ಸಿದ್ಧಪಡಿಸಿದ್ದಾರೆ. ಇದು ಗೋತಳಿಗಳ ಬಗ್ಗೆ ಸಮಗ್ರ ಮಾಹಿತಿ ನೀಡುತ್ತದೆ’ ಎಂದು ತಿಳಿಸಿದರು.

ಧರ್ಮದ ಕಾರಣದಿಂದ ಗೋವು ಇಷ್ಟರಮಟ್ಟಿಗಾದರೂ ನಮ್ಮ ದೇಶದಲ್ಲಿ ಉಳಿದುಕೊಂಡಿದೆ. ಗೋಮೂತ್ರ, ಗೋಮಯಕ್ಕೆ ವಿಶೇಷ ಮಹತ್ವವಿದೆ. ಅಮೆರಿಕದಲ್ಲಿ ಗೋಮೂತ್ರದ ಬದಲಾಗಿ ಮನುಷ್ಯರ ಮೂತ್ರದಿಂದ ಜೀವರಕ್ಷಕ ಔಷಧ ಉತ್ಪಾದಿಸುವ ಪರಿಸ್ಥಿತಿ ಬಂದಿದೆ. ಗೋಮೂತ್ರಕ್ಕೆ ಪೇಟೆಂಟ್ ಪಡೆಯಲು ಅವರು ಮುಂದಾಗಿದ್ದಾರೆ ಎಂದು ವಿವರಿಸಿದರು.

ಗೋವುಗಳ ಹತ್ಯೆ ನಿಂತರೆ ಸಾಲದು ಇದು ಸಂವರ್ಧನೆಗಾಗಿ ಹಾಗೂ ಗೋವುಗಳ ಸಂರಕ್ಷಣೆಗಾಗಿಯೂ ಶೇ ಒಂದರಷ್ಟು ಸೆಸ್ ವಿಧಿಸಬೇಕು. ಇದರಿಂದ ವಾರ್ಷಿಕ ₹ 10 ಸಾವಿರ ಕೋಟಿ ರೂಪಾಯಿ ಗೋಸಂರಕ್ಷಣೆ, ಗೋಶಾಲೆಗಳ ನಿರ್ವಹಣೆಗಳಿಗೆ ಲಭ್ಯವಾಗಲಿದೆ ಎಂದು ವಿವರಿಸಿದರು.

ಹನುಮಂತಪುರದ ನಾಗೇಂದ್ರ ಸ್ವಾಮೀಜಿ, ಸಣ್ಣಕ್ಕಿ ರಾಯೇಶ್ವರ ಸ್ವಾಮೀಜಿ, ಮುಮ್ಮಡಿ ಷಡಕ್ಷರ ಶಿವಾಚಾರ್ಯ ಸ್ವಾಮೀಜಿ, ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಶಿವಶರಣ ಸ್ವಾಮೀಜಿ, ನವಲಗುಂದ ಹೊಸಮಠದ ಚಂದ್ರಶೇಖರ ದೇವರು, ರಾಜ್ಯ ಗೋ ಪರಿವಾರದ ಅಧ್ಯಕ್ಷ ಶ್ರೀ ಪಾಂಡುರಂಗ ಮಹಾರಾಜ್, ಚಕ್ರವರ್ತಿ ಸೂಲಿಬೆಲೆ ಭಾಗವಹಿಸಿದ್ದರು.

ಮಲೆನಾಡು ಗಿಡ್ಡ ತಳಿಯನ್ನು ಸಂರಕ್ಷಣೆ ಹಾಗೂ ಸಂವರ್ಧನೆಗಾಗಿ ಶ್ರೀಮಠ ದತ್ತು ಪಡೆಯಿತು. ವಿದ್ವಾನ್ ಜಗದೀಶ್ ಶರ್ಮಾ ಪ್ರಾಸ್ತಾವಿಕ ಭಾಷಣ ಮಾಡಿದರು. ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ, ತಬಲಾ ನಾರಾಯಣಪ್ಪ,ಆರ್.ಪ್ರಭಾಕರ್, ಜಿ.ಇ.ರಾಮೇಗೌಡ ಯುವ ಮುಖಂಡ ರಾಜು  ಇದ್ದರು.

ಹೃದಯದ ಭಾಷೆಯ ಅಭಿವ್ಯಕ್ತಿಯೇ ಅಭಯಾಕ್ಷರ

ದೇಶದಲ್ಲಿ ನೂರು ಕೋಟಿಗೂ ಅಧಿಕ ಮಂದಿ ಗೋಮಾತೆಯ ಪರವಾಗಿದ್ದಾರೆ. ಅವರ ಹೃದಯದ ಭಾಷೆಯ ಅಭಿವ್ಯಕ್ತಿಯೇ ಅಭಯಾಕ್ಷರ. ಈಗಾಗಲೇ 60 ಲಕ್ಷಕ್ಕೂ ಅಧಿಕ ಮಂದಿ ತಮ್ಮ ಭಾವನೆಗಳನ್ನು ಅಕ್ಷರರೂಪಕ್ಕೆ ಇಳಿಸಿ ಹಕ್ಕೊತ್ತಾಯ ಪತ್ರಕ್ಕೆ ಸಹಿ ಮಾಡಿದ್ದಾರೆ. ರಾಜ್ಯದ ಗೃಹ ಸಚಿವರ ಅಭಯಾಕ್ಷರವೂ ನಮ್ಮ ಬಳಿ ಇದೆ. ಇದು ಜಾತಿ, ಧರ್ಮ, ಪಕ್ಷ ಹಾಗೂ ರಾಜಕೀಯವನ್ನು ಮೀರಿದ್ದು’ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry