ಮುಖ್ಯಮಂತ್ರಿ ಆಗಲು ಅವಕಾಶ ಕೊಡಿ

7

ಮುಖ್ಯಮಂತ್ರಿ ಆಗಲು ಅವಕಾಶ ಕೊಡಿ

Published:
Updated:
ಮುಖ್ಯಮಂತ್ರಿ ಆಗಲು ಅವಕಾಶ ಕೊಡಿ

ಕೊಪ್ಪಳ: ಈ ಬಾರಿ ಒಂದು ಅವಕಾಶ ಕೊಡಿ. ನಿಮ್ಮ ಕುಟುಂಬ ರಕ್ಷಿಸುವುದು ನನ್ನ ಹೊಣೆ ಎಂದು ಜೆಡಿಎಸ್‍ ರಾಜ್ಯ ಘಟಕದ ಅಧ್ಯಕ್ಷ ಎಚ್‍.ಡಿ.ಕುಮಾರಸ್ವಾಮಿ ಹೇಳಿದರು. ನಗರದ ಸಾರ್ವಜನಿಕ ಮೈದಾನದಲ್ಲಿ ಭಾನುವಾರ ನಡೆದ ಜೆಡಿಎಸ್‍ ಸೇರ್ಪಡೆ ಹಾಗೂ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ನೀವು ಬಿಜೆಪಿ, ಕಾಂಗ್ರೆಸ್ ಆಡಳಿತ ನೋಡಿದ್ದೀರಿ. ನೀವು ಆಶೀರ್ವಾದ ಮಾಡಿದ ಸಿಎಂ ನಾನಾಗಲಿಲ್ಲ. ಆದರೂ ಅಂದು ನನ್ನ ಆಡಳಿತ ಹೇಗಿತ್ತು. ಯಡಿಯೂರಪ್ಪ, ಸಿದ್ದರಾಮಯ್ಯ, ಜಗದೀಶ ಶೆಟ್ಟರ ಆಡಳಿತ ಹೇಗಿತ್ತು ಎಂಬುದನ್ನು ನೀವು ನೋಡಿದ್ದೀರಿ. ಹಾಗಾಗಿ ದಯಮಾಡಿ ನನಗೆ ಈ ಬಾರಿ ಒಂದು ಅವಕಾಶ ಕೊಡಿ. ಚುನಾವಣೆ ಪರ್ವ ಆರಂಭವಾಗಿದೆ. ಈಗಾಗಲೇ ನಿಮ್ಮ ದುಡ್ಡಿನಲ್ಲಿ ಸಿಎಂ ಸಾಧನಾ ಸಮಾವೇಶ ಮಾಡಿದ್ದಾರೆ. ಬಿಎಸ್‍ವೈ ನಾನು ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯರನ್ನ ಜೈಲಿಗೆ ಕಳುಹಿಸುತ್ತೇನೆ  ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಬಿಎಸ್‍ವೈ ಜೈಲಿಗೆ ಹೋಗಿ ಬಂದಿದ್ದಾರೆ ಅಂತಾರೆ. ನಾನು ಸಿಎಂ ಆದರೆ, ರೈತರ ಸಾಲ ಮನ್ನಾ ಮಾಡುತ್ತೇನೆ ಎಂದು ಸವಾಲು ಸ್ವೀಕರಿಸಿ ಪ್ರವಾಸ ಮಾಡುತ್ತಿದ್ದೇನೆ’ ಎಂದರು.

‘ಸಾಲ ಮನ್ನಾ ಮಾಡಲು ಯಡಿಯೂರಪ್ಪ ಹಣ ಇಲ್ಲ ಎಂದರು. ಆಗಿನ ಕಾಲದಲ್ಲಿ ಸರ್ಕಾರಕ್ಕೆ ₹ 39 ಸಾವಿರ ಕೋಟಿ ಆದಾಯವಿತ್ತು. ಇಂದು ₹ 2 ಲಕ್ಷ ಸಾವಿರ ಕೋಟಿ ಇದೆ. ಆದರೂ ನಾನು ₹ 2,500ಕೋಟಿ ಸಾಲಮನ್ನಾ ಮಾಡಿದ್ದೆ. ಸಿದ್ದರಾಮಯ್ಯ ಸಾಲಮನ್ನಾ ಮಾಡಿ ಇಷ್ಟು ದಿನ ಕಳೆದರೂ ರೈತರ ಬ್ಯಾಂಕ್ ಖಾತೆಗಳಿಗೆ ಹಣ ಸಂದಾಯವಾಗಿಲ್ಲ. ಮುಂದೆ ಬರುವ ಸರ್ಕಾರಗಳು ಸಾಲ ತುಂಬಬೇಕು. ಸಾಲಗಾರರೆಂದು ರೈತರು ಎದೆಗುಂದಬಾರದು’ ಎಂದರು.

‘ನಾವು ಅಧಿಕಾರಕ್ಕೆ ಬಂದ ತಕ್ಷಣ ಸಾಲಮನ್ನಾ ಮಾಡುತ್ತೇವೆ. ಆ ಹೊಣೆ ನಮ್ಮ ಪಕ್ಷ ಹೊರುತ್ತದೆ. ಈ ಭಾಗದಲ್ಲಿ ತಾಯಿ ಮಗು ಮರಣ ಪ್ರಮಾಣ ಹೆಚ್ಚಿದೆ. ನಾವು ಗರ್ಭಿಣಿಯರಿಗೆ ಪ್ರತಿ ತಿಂಗಳು ₹ 6 ಸಾವಿರ ನೀಡುತ್ತೇವೆ. ಸಿಎಂ ಅನ್ನಭಾಗ್ಯ, ಕ್ಷೀರಭಾಗ್ಯ ಕೊಟ್ಟೆ ಅಂತಾರೆ. ಮದ್ಯ ಭಾಗ್ಯ ಕೊಟ್ಟಿದ್ದು ಯಾರು? ಹಿಂದಿನ ಸರ್ಕಾರಗಳು ₹ 3ಕ್ಕೆ ಕೆ.ಜಿ ಅಕ್ಕಿ ನೀಡುತ್ತಿದ್ದವು. 75 ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿದೆ. ಅದನ್ನು ಮಾರಾಟ ಮಾಡಲಾಗದೆ ಮಕ್ಕಳಿಗೆ ನೀಡುತ್ತಿದ್ದಾರೆ. ಆದರೆ ನಾನು ಸಾರಾಯಿ ಬಂದ್ ಮಾಡಿದೆ. ಇವರು ಬಂದು ಕಿರಾಣಿ ಅಂಗಡಿಗಳಿಗೂ ಮದ್ಯ ನೀಡುತ್ತಿದ್ದಾರೆ. ₹ 15 ಇರುವ ಬಾಟಲಿಗೆ  ₹ 80 ತೆಗೆದುಕೊಳ್ಳುತ್ತಾರೆ. ನಿಮ್ಮ ಜೇಬಿಗೆ ₹ 60 ತೆರಿಗೆ ಕಸಿದುಕೊಂಡು ₹ 84 ಕೊಟ್ಟು ಉಚಿತ ಅಕ್ಕಿ ಕೊಟ್ಟೆ ಎನ್ನುತ್ತಿದ್ದಾರೆ ಎಂದರು.

ವಿಧಾನ ಪರಿಷತ್‍ ಸದಸ್ಯ ಬಸವರಾಜ್‍ ಹೊರಟ್ಟಿ ಮಾತನಾಡಿ, ಕೊಪ್ಪಳ ಒಂದು ಕಾಲಕ್ಕೆ ಜೆಡಿಎಸ್ ಭದ್ರಕೋಟೆ ಆಗಿತ್ತು. ಆದರೆ ಕೆಲ ನಾಯಕರು ಬೇರೆ ಪಕ್ಷಗಳಿಗೆ ಹೋದರು. ಆ ನಾಯಕರಿಗೆ ತತ್ವ ಸಿದ್ಧಾಂತಗಳ ಬಗ್ಗೆ ಬದ್ಧತೆಯಿಲ್ಲ. ಅಂಥವರಿಗೆ ನೀವು ಪಾಠ ಕಲಿಸಿ. ಸರ್ಕಾರದ ಹಣದಲ್ಲಿ ಸಿಎಂ ರಾಜಕೀಯ ಮಾಡುತ್ತಿದ್ದಾರೆ. 20 ವರ್ಷದಲ್ಲಿ ನಾವು ಮಾಡಿದ ಕೆಲಸಗಳನ್ನು ಬೇರೆ ಸರ್ಕಾರಗಳು ಮಾಡಿಲ್ಲ. ಹೀಗಾಗಿ ನಮಗೆ ಒಂದು ಅವಕಾಶ ನೀಡಿ. ಬಿಸಿಯೂಟ, ಸೈಕಲ್ ವಿತರಣೆ ಮಾಡಿದ್ದೇವೆ. ಯಾರಿಗೋ ಓಟು ನೀಡುತ್ತೀರಿ. ಈ ಬಾರಿ ನಮಗೆ ನೀಡಿ ಎಂದರು.

ಮುಖಂಡರಾದ ಕರಿಯಪ್ಪ ಮೇಟಿ, ವೀರನಗೌಡ ಪೋಲಿಸ್‍ ಪಾಟೀಲ, ವಕೀಲ ಎ.ವಿ.ಕಣವಿ ಪಕ್ಷ ಸೇರ್ಪಡೆಯಾದರು. ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೆಗೌಡ್ರು, ಮಾಜಿ ಶಾಸಕ ವೆಂಕಟರಾವ್ ನಾಡಗೌಡ್ರು, ಪಕ್ಷದ ಅಲ್ಪಸಂಖ್ಯಾತ ಘಟಕದ ರಾಜ್ಯಧ್ಯಕ್ಷ ಮೋಹಿದ್ ಅಲ್ತಾಫ್‍ ಪಾಷಾ, ಜಿಲ್ಲಾ ವೀಕ್ಷಕ ಸಿ.ಎಂ. ನಾಗರಾಜ, ಜಿಲ್ಲಾ ಅಧ್ಯಕ್ಷ ಪ್ರದೀಪಗೌಡ ಮಾಲಿಪಾಟೀಲ್‍, ಜಿಲ್ಲಾ ಕಾರ್ಯಾಧ್ಯಕ್ಷ ವೀರೇಶ ಮಹಾಂತಯ್ಯನಮಠ, ರಾಜ್ಯಪ್ರಧಾನ ಕಾರ್ಯದರ್ಶಿ ಕೆ.ಎಂ.ಸೈಯ್ಯದ್‍, ಯುವಘಟಕದ ಜಿಲ್ಲಾ ಅಧ್ಯಕ್ಷ ಕೆ.ಎಸ್.ಕೊಡತಗೇರಿ, ಜಿಲ್ಲಾ ವಕ್ತಾರ ಮೌನೇಶ್‍ ವಡ್ಡಟ್ಟಿ ಇದ್ದರು.

ನೀರಿನ ಬಾಟಲಿಗೆ ಪಕ್ಷ, ಆಕಾಂಕ್ಷಿ ಹೆಸರು

ಸಮಾವೇಶದಲ್ಲಿ ಕಾರ್ಯಕರ್ತರಿಗೆ ನೀಡಲಾಗಿದ್ದ ಕುಡಿಯುವ ನೀರಿನ ಬಾಟಲಿಗಳ ಮೇಲೆ ಪಕ್ಷ ಹಾಗೂ ಟಿಕೇಟ್‍ ಆಕಾಂಕ್ಷಿ ಹೆಸರು ಇರುವ ಸ್ಟಿಕರ್‌ಗಳನ್ನು ಅಂಟಿಸಲಾಗಿತ್ತು.

ಬಾಟಲಿಗಳ ಮೇಲೆ ಜೆಡಿಎಸ್‍ ಪಕ್ಷದ ಹೆಸರು, ಚಿಹ್ನೆ ಹಾಗೂ ಕುಮಾರಸ್ವಾಮಿ ಅವರ ಭಾವಚಿತ್ರ ಸೇರಿದಂತೆ ಕರಿಯಪ್ಪ ಮೇಟಿ, ಕೊಪ್ಪಳ ವಿಧಾನಸಭಾ ಕ್ಷೇತ್ರ ಎಂದು ಮುದ್ರಿಸಲಾಗಿರುವ ಸ್ಟಿಕರ್‌ಗಳನ್ನು ಲಗತ್ತಿಸಲಾಗಿತ್ತು.

ಈ ಹಿಂದೆ ಪಕ್ಷದ ರಾಜ್ಯ ಕಾರ್ಯದರ್ಶಿ ಕೆ.ಎಂ.ಸೈಯ್ಯದ್‍ರಿಂದ ಲಿಂಗಾಯತ ಸಮಾವೇಶದಲ್ಲಿ ವಿತರಿಸಲಾಗಿದ್ದ ನೀರಿನ ಬಾಟಲಿಗಳ ಮೇಲೂ ಈ ರೀತಿಯ ಪ್ರಯೋಗ ನಡೆಸಲಾಗಿತ್ತು.

ಖಾತ್ರಿಯಾಗದ ಅಭ್ಯರ್ಥಿಗಳು...

ಸಮಾವೇಶದಲ್ಲಿ ಕುಮಾರ ಸ್ವಾಮಿ ಅವರು ಜಿಲ್ಲೆಯ ಐದೂ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಿಸಲಿಲ್ಲ. ಜ.20 ರಂದು ಚಿತ್ರದುರ್ಗದಿಂದ ಸ್ಪರ್ಧಿಸಲು ಉದ್ಯಮಿ ಕೆ.ಸಿ.ವೀರೇಂದ್ರ ಅವರಿಗೆ ಟಿಕೆಟ್‍ ನೀಡುವುದು ಖಚಿತ ಎಂದು ಕುಮಾರಸ್ವಾಮಿ ಸುದ್ದಿಗಾರರಿಗೆ ತಿಳಿಸಿದ್ದರು. ಆ ಮೂಲಕ ಮರುದಿನ ಜಿಲ್ಲೆಯ ಅರ್ಭ್ಯರ್ಥಿಗಳನ್ನು ಘೋಷಿಸಬಹುದು ಎಂದುಕೊಳ್ಳಲಾಗಿತ್ತು.

ಆದರೆ ಕೊಪ್ಪಳದಲ್ಲಿ ನಡೆದ ಸಮಾವೇಶದಲ್ಲಿ ಕುಮಾರಸ್ವಾಮಿ ಅವರು ಈ ಬಗ್ಗೆ ಮಾತನಾಡಲಿಲ್ಲ. ಇದರಿಂದ ಜಿಲ್ಲೆಯ ಅಭ್ಯರ್ಥಿಗಳನ್ನು ಘೋಷಿಸಬಹುದು ಎಂಬ ಕಾರ್ಯಕರ್ತರ ನಿರೀಕ್ಷೆ ಹುಸಿಯಾಯಿತು. ಸಮಾವೇಶದಲ್ಲಿ ಸರ್ಕಾರಿ ಶಿಕ್ಷಕರೊಬ್ಬರು ಗಣ್ಯರ ಸಾಲಿನಲ್ಲಿ ಬಂದು ಕುಳಿತದ್ದು ಗಮನ ಸೆಳೆಯಿತು.

* * 

2004ರಲ್ಲಿ ಸಂಗಣ್ಣನವರು ಸೋತಾಗ ನಾನು ಗ್ರಾಮ ವಾಸ್ತವ್ಯ ಮಾಡಿ ಎಂಎಲ್ಎ ಮಾಡಿದೆ. ಆದರೆ ಅವರು ನನಗೆ ಕೈ ಕೊಟ್ಟಿದ್ದಾರೆ. ಇದರಿಂದ ನನಗೆ ಅಸೂಯೆ ಏನು ಇಲ್ಲ.

ಎಚ್‍.ಡಿ.ಕುಮಾರಸ್ವಾಮಿ ಅಧ್ಯಕ್ಷ, ಜೆಡಿಎಸ್‍ ರಾಜ್ಯ ಘಟಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry