ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜ್ಯದಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ’

Last Updated 22 ಜನವರಿ 2018, 8:57 IST
ಅಕ್ಷರ ಗಾತ್ರ

ದೇವನಹಳ್ಳಿ: ಮುಂಬರಲಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ಕೆಪಿಸಿಸಿ ರಾಜ್ಯ ಘಟಕ ಕಾರ್ಯದರ್ಶಿ ಛಲವಾದಿ ನಾರಾಯಣಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿನ ಬೈಚಾಪುರ ಗ್ರಾಮದಲ್ಲಿ ಗ್ರಾಮ ವಾಸ್ತವ್ಯಕ್ಕೆ ಮೊದಲು ವೇಣುಗೋಪಾಲ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿದ ನಂತರ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸಿದ ಎರಡು ತಾಸಿನಲ್ಲಿ ಪ್ರಣಾಳಿಕೆಯಲ್ಲಿನ ಐದಾರು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ ಎಂದರು.

ಚುನಾವಣೆ ಸಂದರ್ಭದಲ್ಲಿ ನೀಡಿದ ಶೇ 100ರಷ್ಟು ಭರವಸೆಯಲ್ಲಿ ಶೇಕಡ 95 ರಷ್ಟು ಈಗಾಗಲೇ ಈಡೇರಿಸಿದ್ದಾರೆ. ಪ್ರಣಾಳಿಕೆಯಲ್ಲಿನ ಭರವಸೆ ಹೊರತು ಪಡಿಸಿ ನೂತನವಾಗಿ 16 ಯೋಜನೆಗಳನ್ನು ಮತದಾರರಿಗೆ ನೀಡಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಯಾಗಿಲ್ಲ ಎನ್ನುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ಪಕ್ಷ ಅಭಿವೃದ್ಧಿಯ ಅಂಕಿ ಅಂಶಗಳನ್ನು ಗಮನಿಸಿ ಆರೋಪಿಸಬೇಕು ಎಂದು ಸವಾಲು ಹಾಕಿದರು.

ರಾಜ್ಯದ ಮತದಾರರು ದಡ್ಡರಲ್ಲ, ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬಂದಾಕ್ಷಣಕ್ಕೆ ಹಂಪೆಯ ಗತ ವೈಭವ ಸೃಷ್ಟಿಯಾಗದು. ರಾಜ್ಯದಲ್ಲಿ ಮೋದಿ ಮುಖ ನೋಡಿ ಮತ ಹಾಕಿಲ್ಲ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಬೇರೆ ಎಂಬುದು ಪ್ರತಿಯೊಬ್ಬರಿಗೂ ಗೊತ್ತಿದೆ. ಮೋದಿ ಆಟ ತಾತ್ಕಾಲಿಕವಾಗಿ ಉತ್ತರ ಭಾರತಕ್ಕೆ ಸೀಮಿತವಾಗಿದೆ ಎಂಬುದು ಗೊತ್ತಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಘಟಕ ಕಾರ್ಯಕಾರಿ ಸಮಿತಿ ಸದಸ್ಯ ಭೂವನಹಳ್ಳಿ ಮುನಿ ರಾಜು ಮಾತನಾಡಿ, ಪ್ರಧಾನಿ ಅವರು ನೋಟು ರದ್ದುಗೊಳಿಸಿ ಮಾಡಿದ ಸಾಧನೆ ಏನು, ಕಪ್ಪು ಹಣ ಯಾಕೆ ಬರಲಿಲ್ಲ. ಜಿಎಸ್‌ಟಿ ಯಿಂದ ಆಗಿರುವ ಆರ್ಥಿಕ ಲಾಭವೇನು ಎಂದರು.

ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪುರುಷೋತ್ತಮ್ ಕುಮಾರ್, ವಿಜಯಪುರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಡೇವಿಡ್ ನಾರಾಯಣಸ್ವಾಮಿ, ಎಂ.ಪಿಸಿ.ಎಸ್ ಕಾರ್ಯದರ್ಶಿ ಬಿ.ಎಂ. ನಾರಾಯಣಸ್ವಾಮಿ, ಅಧ್ಯಕ್ಷ ರಾಮಯ್ಯ, ಕಾಂಗ್ರೆಸ್ ಎಸ್ಸಿ ಘಟಕ ತಾಲ್ಲೂಕು ಅಧ್ಯಕ್ಷ ಬೈಚಾಪುರ ರಾಜಣ್ಣ, ಕಾಂಗ್ರೆಸ್ ಮುಖಂಡ ಸಿ.ಕೆ.ರಾಮಚಂದ್ರಪ್ಪ, ಗೋಪಾಲ ಕೃಷ್ಣ ,ವೆಂಕಟರಮಣ್ಣಪ್ಪ, ಮುನಿಯಪ್ಪ ,ನಾಗರಾಜ್, ಶ್ರೀರಾಮ್, ಕಾಂಗ್ರೆಸ್ ಇಂಟೇಕ್ ಘಟಕ ಅಧ್ಯಕ್ಷ ಮಿಥುನ್, ಕಾಂಗ್ರೆಸ್ ವಿದ್ಯಾರ್ಥಿ ಘಟಕಅಧ್ಯಕ್ಷ ಭಾರ್ಗವ್ ಇದ್ದರು.

ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಪ್ಪರಲಾಗ ಹಾಕಿದರೂ ರಾಜ್ಯದಲ್ಲಿ ಆ ಪಕ್ಷ ಆಡಳಿತಕ್ಕೆ ಬರಲು ಸಾಧ್ಯವಿಲ್ಲ, ಅದೊಂದು ಹಗಲು ಕನಸು ಅಷ್ಟೆ’ ಎಂದರು.

ರಾಜ್ಯದಲ್ಲಿ ಒಂದು ತಿಂಗಳಿಂದ ಬಿಜೆಪಿ ಮುಖಂಡರು ತಮ್ಮ ನಾಲಿಗೆಯಿಂದ ವ್ಯಕ್ತಿತ್ವ ಎಂತಹದ್ದು ಎಂಬುದನ್ನು ರಾಜ್ಯದ ಜನತೆಗೆ ತೋರಿಸಿದ್ದಾರೆ. ಇಂತಹವರನ್ನು ಆಯ್ಕೆ ಮಾಡಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಯಾವ ರೀತಿ ಆಡಳಿತ ನಿರೀಕ್ಷಿಸಲು ಸಾಧ್ಯ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT