ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮಿಗೆ ಟಿಕೆಟ್ ತಪ್ಪಿಸಲು ಯಾರಿಂದಲೂ ಆಗದು

Last Updated 22 ಜನವರಿ 2018, 9:04 IST
ಅಕ್ಷರ ಗಾತ್ರ

ಬೆಳಗಾವಿ: ‘ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳಕರಗೆ ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್‌ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷರೂ ಆದ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ತಾಲ್ಲೂಕಿನ ಹಿರೇಬಾಗೇವಾಡಿಯ ಎಪಿಎಂಸಿ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ‘ಕಾಂಗ್ರೆಸ್‌ ನಡಿಗೆ ವಿಜಯದ ಕಡೆಗೆ’ ಸಮಾವೇಶದಲ್ಲಿ ಮಾತನಾಡಿದರು.

‘ಇಡೀ ಪಕ್ಷ ಮತ್ತು ಸರ್ಕಾರ ಲಕ್ಷ್ಮಿ ಜತೆಗಿದೆ. ಅವರಿಗೇ ಟಿಕೆಟ್‌ ಎಂದು ಮುಖ್ಯಮಂತ್ರಿ ಹೇಳಾಯ್ತು, ಕೆಪಿಸಿಸಿ ಅಧ್ಯಕ್ಷರೂ ತಿಳಿಸಾಯ್ತು. ಅಕ್ಕಪಕ್ಕ ಇರುವ ಯಾವ ನಾಯಕರ ಅಭಿಪ್ರಾಯವನ್ನೂ ಕೇಳುವುದಿಲ್ಲ. ನಮ್ಮಲ್ಲಿಯೇ ಇರುವ ಕೆಲವರು ಅವರಿಗೆ ತೊಂದರೆ ಕೊಡಬಹುದು. ಅದರ ಬಗ್ಗೆ ಮತದಾರರು ತಲೆಕೆಡಿಸಿಕೊಳ್ಳಬೇಡಿ. ಲಕ್ಷ್ಮಿ ಗೆಲ್ಲಿಸುತ್ತೇವೆ ಎನ್ನುವ ಸಂಕಲ್ಪ ಮಾಡಿ’ ಎಂದು ಮಾರ್ಮಿಕವಾಗಿ ಹೇಳಿದರು.

‘ಈ ಕ್ಷೇತ್ರದ ಶಾಸಕ ಸಂಜಯ ಪಾಟೀಲ ಒಳ್ಳೆಯವರು. ಅಧಿವೇಶನಕ್ಕೆ ಬರುತ್ತಾರೆ, ಸಹಿ ಹಾಕುತ್ತಾರೆ. ಗೌರವಧನ ಪಡೆದು ‌ಹೋಗುತ್ತಾರೆ. ಅವರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಕೊಟ್ಟ ಕುದುರೆಯನ್ನು ಏರದವರು ವೀರನೂ ಅಲ್ಲ, ಶೂರನೂ ಅಲ್ಲ. ಅಭಿವೃದ್ಧಿ ಬಗ್ಗೆ ಕಾಳಜಿ ವಹಿಸಿಲ್ಲ’ ಎಂದು ನಯವಾಗಿ ಟೀಕಿಸಿದರು.

ಕೊಡುತ್ತಾರೆಂಬ ವಿಶ್ವಾಸ: ‘ಬೈಸಿಕಲ್ ಹಾಗೂ ಸೀರೆ ಕೊಟ್ಟಿದ್ದನ್ನು ಬಿಟ್ಟರೆ ಬೇರಾವ ಅಭಿವೃದ್ಧಿ ಕಾರ್ಯವನ್ನೂ ಬಿಜೆಪಿಯವರು ಮಾಡಲಿಲ್ಲ. ಅವರು ಹಿಂದೂ, ನಾವೆಲ್ಲ ಮುಂದು ಎನ್ನುತ್ತಾರೆ. ಆದರೆ ನಾವು ಧರ್ಮ ಹಾಗೂ ಸಮಾಜದವರೂ ನಮ್ಮವರು ಎಂದು ಹೇಳುತ್ತೇವೆ. ಕಾಂಗ್ರೆಸ್‌ನಿಂದ ಮಾತ್ರ ಎಲ್ಲ ವರ್ಗದವರ ಅಭಿವೃದ್ಧಿ ಸಾಧ್ಯ’ ಎಂದರು.

ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಮಾತನಾಡಿ, ‘ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಲಕ್ಷ್ಮಿ ಹೆಬ್ಬಾಳಕರಗೆ ರಾಹುಲ್ ಗಾಂಧಿ ಟಿಕೆಟ್ ಕೊಡುತ್ತಾರೆ ಎನ್ನುವ ವಿಶ್ವಾಸವಿದೆ. ನೀವು (ಮತದಾರರು) ಅವರನ್ನು ಗೆಲ್ಲಿಸಬೇಕು’ ಎಂದು ಕೋರಿದರು.

‘ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಸ್ವಚ್ಛ ಆಡಳಿತ ಕೊಟ್ಟಿದೆ. ಸಮರ್ಥ ನಾಯಕತ್ವ ನೀಡಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತಮ ಆಡಳಿತ ನೀಡಿದ್ದಾರೆ. ಹೀಗಾಗಿ ಮುಂದಿನ ಚುನಾವಣೆಯಲ್ಲೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕ್ಷೇತ್ರದ ದೆವ್ವವಾಗಿರುವ ಶಾಸಕ: ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳಕರ ಬಿಜೆಪಿ ಶಾಸಕ ಸಂಜಯ ಪಾಟೀಲ ವಿರುದ್ಧ ವಾಗ್ದಾಳಿ ನಡೆಸಿದರು. 'ಇಲ್ಲಿನ ಶಾಸಕರು ಕೇವಲ ಶಿಷ್ಟಾಚಾರದ ಶಾಸಕರಾಗಿದ್ದಾರೆ. 10 ವರ್ಷದಿಂದ ಯಾವುದೇ ಅಭಿವೃದ್ಧಿ ಕಾಮಗಾರಿ ಮಾಡಿಸಿಲ್ಲ. ಅವರು ಈ ಭಾಗದ ದೇವರಾಗುವ ಬದಲಿಗೆ ದೆವ್ವವಾಗಿದ್ದಾರೆ' ಎಂದು ಟೀಕಿಸಿದರು.

‘ಜನರ ಸಂಕಷ್ಟಗಳಿಗೆ ಸ್ಪಂದಿಸದೆ ಭಾಷಣ ಮಾಡಿಕೊಂಡು, ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಅವರ ಮುಖ, ಇವರ ಮುಖ ತೋರಿಸಿ ಎರಡು ಬಾರಿ ಗೆದ್ದಿದ್ದಾರೆ. ನನಗೆ ಐದು ವರ್ಷ ಅವಕಾಶ ಕೊಡಿ, 25 ವರ್ಷದ ಅಭಿವೃದ್ಧಿ ಮಾಡಿ ತೋರಿಸುತ್ತೇನೆ’ ಎಂದು ಮತದಾರರಲ್ಲಿ ಮನವಿ ಮಾಡಿದರು.

‘ಗೋಮಟೇಶ ವಿದ್ಯಾಪೀಠ ಬೆಳೆಸುವುದು, ಕೊಲ್ಲಾಪುರದಲ್ಲಿ ಬ್ಯಾನರ್ ಕಟ್ಟುವುದು ಅಭಿವೃದ್ಧಿಯೇ’ ಎಂದು ಪ್ರಶ್ನಿಸಿದರು. ‘ಗಡಿ, ಭಾಷೆ, ಜಾತಿ ವಿಚಾರ ಬಿಟ್ಟು ಕ್ಷೇತ್ರಕ್ಕೆ ಹಿಡಿದಿರುವ ಗ್ರಹಣವನ್ನು ಬಿಡಿಸಬೇಕಾಗಿದೆ’ ಎಂದರು.

ಶಾಸಕರಿಂದ ಅಡ್ಡಗಾಲು: ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಮಾತನಾಡಿ, ‘ಸಿದ್ದನಬಾವಿ ಹಾಗೂ ಮುತ್ನಾಳ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನದ ಶ್ರೇಯಸ್ಸು ಹೆಬ್ಬಾಳಕರಗೆ ಸಲ್ಲುತ್ತದೆ. ಆದರೆ, ಇಲ್ಲಿನ ಶಾಸಕರು ಯೋಜನೆಗೆ ಅಡ್ಡಗಾಲು ಹಾಕುತ್ತಿದ್ದಾರೆ. ಗುದ್ದಲಿಪೂಜೆಗೆ ಅಡ್ಡಿಪಡಿಸಿದವರಿಗೆ ಮುಂದಿನ ಚುನಾವಣೆಯಲ್ಲಿ ಮತದಾರರು ಪೂಜೆ ಮಾಡಬೇಕು. ಬಿಜೆಪಿಯವರು ನೋಟುಗಳ ಚಲಾವಣೆ ರದ್ದುಪಡಿಸಿದರು. ಅಂತೆಯೇ ಕ್ಷೇತ್ರದ ಮತದಾರರು ಈಗಿನ ಶಾಸಕರನ್ನು ನಿಷೇಧಿಸಬೇಕು’ ಎಂದು ತಿಳಿಸಿದರು.

‘ಕೆರೆಗಳಿಗೆ ಬೇಗ ನೀರು ತುಂಬಿಸುವ ಮೂಲಕ, ಭೂಮಿಪೂಜೆ ಮಾಡಲು ಅಡ್ಡಿಪಡಿಸಿದವರಿಗೆ ಉತ್ತರ ಕೊಡುತ್ತೇವೆ. ಲಕ್ಷ್ಮಿ ಹೆಬ್ಬಾಳಕರ ಅವರನ್ನು 25ಸಾವಿರ ಮತಗಳ ಅಂತರದಿಂದ ಗೆಲ್ಲಿಸುತ್ತೇವೆ ಎಂದು ಭರವಸೆ ನೀಡಿದರೆ ಗಜಪತಿ ಹಾಗೂ ಅಂಕಲಗಿ ಕೆರೆಗಳಿಗೆ ನೀರು ತುಂಬುವ ಕಾರ್ಯಕ್ಕೆ ವಾರದೊಳಗೆ ಕಾರ್ಯಾದೇಶ ಕೊಡಿಸುತ್ತೇನೆ’ ಎಂದರು.

ಉತ್ತರ ಕರ್ನಾಟಕಕ್ಕೆ ಬಿಜೆಪಿಯಿಂದ ಅನ್ಯಾಯ: ‘ನೀರಾವರಿ ಯೋಜನೆಗಳಿಗೆ ಬಿಜೆಪಿ ಸರ್ಕಾರ ₹ 18ಸಾವಿರ ಕೋಟಿ ಕೊಟ್ಟಿತ್ತು. ನಾವು ₹ 50ಸಾವಿರ ನೀಡಿದ್ದೇವೆ. ಉತ್ತರ ಕರ್ನಾಟಕ ಅಭಿವೃದ್ಧಿಗೆ ಅವರು 5 ವರ್ಷಗಳಲ್ಲಿ ₹ 12ಸಾವಿರ ಕೋಟಿ ಕೊಟ್ಟಿದ್ದರು. ನಾವು ಈಗಾಗಲೇ ₹ 28ಸಾವಿರ ಕೋಟಿ ಕೊಟ್ಟಿದ್ದೇವೆ. ಅಂತರವನ್ನು ಗಮನಿಸಿ. ಉತ್ತರಕರ್ನಾಟಕಕ್ಕೆ ಅನ್ಯಾಯ ಮಾಡಿದವರು ನಾವೋ, ಬಿಜೆಪಿಯವರೋ’ ಎಂದು ಕೇಳಿದರು.

ಶಾಸಕ ಫಿರೋಜ್ ಸೇಠ್‌, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶಂಕರಗೌಡ ಪಾಟೀಲ, ಪಕ್ಷದ ಗ್ರಾಮಾಂತರ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ನಗರ ಘಟಕದ ಅಧ್ಯಕ್ಷ ರಾಜು ಸೇಠ್‌, ಮುಖಂಡರಾದ ಮಹಾಂತೇಶ ಕೌಜಲಗಿ, ಎಸ್‌. ಮಾನೆ ಇದ್ದರು.

ಶಾಸಕರಿಂದ ಯೋಜನೆಗೆ ಅಡ್ಡಗಾಲು

ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಮಾತನಾಡಿ, ‘ಸಿದ್ದನಬಾವಿ ಹಾಗೂ ಮುತ್ನಾಳ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನದ ಶ್ರೇಯಸ್ಸು ಹೆಬ್ಬಾಳಕರಗೆ ಸಲ್ಲುತ್ತದೆ. ಆದರೆ, ಇಲ್ಲಿನ ಶಾಸಕರು ಯೋಜನೆಗೆ ಅಡ್ಡಗಾಲು ಹಾಕುತ್ತಿದ್ದಾರೆ. ಗುದ್ದಲಿಪೂಜೆಗೆ ಅಡ್ಡಿಪಡಿಸಿದವರಿಗೆ ಮುಂದಿನ ಚುನಾವಣೆಯಲ್ಲಿ ಮತದಾರರು ಪೂಜೆ ಮಾಡಬೇಕು. ಬಿಜೆಪಿಯವರು ನೋಟುಗಳ ಚಲಾವಣೆ ರದ್ದುಪಡಿಸಿದರು. ಅಂತೆಯೇ ಕ್ಷೇತ್ರದ ಮತದಾರರು ಈಗಿನ ಶಾಸಕರನ್ನು ನಿಷೇಧಿಸಬೇಕು’ ಎಂದು ತಿಳಿಸಿದರು.

‘ಕೆರೆಗಳಿಗೆ ಬೇಗ ನೀರು ತುಂಬಿಸುವ ಮೂಲಕ, ಭೂಮಿಪೂಜೆ ಮಾಡಲು ಅಡ್ಡಿಪಡಿಸಿದವರಿಗೆ ಉತ್ತರ ಕೊಡುತ್ತೇವೆ. ಲಕ್ಷ್ಮಿ ಹೆಬ್ಬಾಳಕರ ಅವರನ್ನು 25ಸಾವಿರ ಮತಗಳ ಅಂತರದಿಂದ ಗೆಲ್ಲಿಸುತ್ತೇವೆ ಎಂದು ಭರವಸೆ ನೀಡಿದರೆ ಗಜಪತಿ ಹಾಗೂ ಅಂಕಲಗಿ ಕೆರೆಗಳಿಗೆ ನೀರು ತುಂಬುವ ಕಾರ್ಯಕ್ಕೆ ವಾರದೊಳಗೆ ಕಾರ್ಯಾದೇಶ ಕೊಡಿಸುತ್ತೇನೆ’ ಎಂದರು.

ಬೆಳಗಾವಿ: ಬಿಜೆಪಿಯವರದು ಕೋಮುವಾದ ಹಾಗೂ ಅಧಿಕಾರ ಹಿಡಿಯಬೇಕು ಎನ್ನುವ ಕಾರ್ಯಸೂಚಿ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಟೀಕಿಸಿದರು.

ತಾಲ್ಲೂಕಿನ ಹಿರೇಬಾಗೇವಾಡಿ ಎಪಿಎಂಸಿ ಆವರಣದಲ್ಲಿ ಭಾನುವಾರ ನಡೆದ ‘ಕಾಂಗ್ರೆಸ್ ನಡಿಗೆ ವಿಜಯದ ಕಡೆಗೆ’ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಗಲಾಟೆ ನಡೆಸಿ, ಬೆಂಕಿ ಹಚ್ಚಿ, ಕೊಲೆ ಮಾಡಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿಷ್‌ ಶಾ ಸೂಚನೆ ನೀಡಿದ್ದಾರೆ. ಇದನ್ನು ಆ ಪಕ್ಷದವರೇ ಆದ ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ. ನಾನು ಹೇಳಿದಂತೆ ಕೇಳಿದರೆ, ಮಾಡಿದರೆ ಅಧಿಕಾರ ತಂದುಕೊಡುತ್ತೇನೆ ಎಂದು ಶಾ ನಿರ್ದೇಶನ ಕೊಟ್ಟಿದ್ದಾರೆ. ಬಿಜೆಪಿಯವರಿಗೆ ಅಭಿವೃದ್ಧಿ ಕಾರ್ಯಸೂಚಿ ಬೇಕಾಗಿಲ್ಲ’ ಎಂದು ಆರೋಪಿಸಿದರು.

‘ಸಂವಿಧಾನ ಬದಲಾಯಿಸುತ್ತೇವೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದ್ದಾರೆ. ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಕಷ್ಟಪಟ್ಟು ರಚಿಸಿದ, ಎಲ್ಲರಿಗೂ ಸಮಾನತೆ ಬಯಸುವ ಪವಿತ್ರ ಸಂವಿಧಾನ ನಮ್ಮದು. ಅದನ್ನು ಬದಲಾವಣೆ ಮಾಡುವವರೆಗೆ ಕಾಂಗ್ರೆಸ್‌ನವರಾದ ನಾವು ಕಡ್ಲೆಪುರಿ ತಿನ್ನುತ್ತಾ ಕುಳಿತಿರುತ್ತೇವೆಯೇ? ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ’ ಎಂದು ಹೇಳಿದರು.

‘ತಮ್ಮ ವಿರುದ್ಧ ಬಳ್ಳಾರಿಯಲ್ಲಿ ಪ್ರತಿಭಟನೆ ನಡೆಸಿದ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರನ್ನು ಬೀದಿನಾಯಿಗಳು ಎಂದಿರುವ ಅನಂತಕುಮಾರ ಹೆಗಡೆ ಹೇಳಿಕೆ ಖಂಡನೀಯ. ನಮಗೆ ಮುಸ್ಲಿಂ, ಕ್ರಿಶ್ಚಿಯನ್ನರ ಮತಗಳು ಬೇಡ. ಹಿಂದೂಗಳು ಹಾಕಿದರೆ ಸಾಕು ಎಂದು ಅವರು ಹೇಳುತ್ತಾರೆ. ಸಂವಿಧಾನವನ್ನು ಅವಮಾನಿಸುತ್ತಾರೆ. ನಾಚಿಕೆಯಾಗಬೇಕು ಅವರಿಗೆ’ ಎಂದು ವಾಗ್ದಾಳಿ ನಡೆಸಿದರು.

‘ಬಿಜೆಪಿಯವರಿಗೆ ಸುಳ್ಳು ಹೇಳುವುದು ರಕ್ತಗತವಾಗಿಯೇ ಬಂದಿದೆ. ತಪ್ಪು ಮಾಡಿದ್ದೇವೆ, ಜೈಲಿಗೆ ಹೋಗಿ ಬಂದಿದ್ದೇವೆ. ಈಗ ಪರಿವರ್ತನೆಯಾಗುತ್ತಿದ್ದೇವೆ ಎಂದು ಜನರಿಗೆ ಹೇಳಿಕೊಳ್ಳಲು ಪರಿವರ್ತನಾ ಯಾತ್ರೆ ನಡೆಸುತ್ತಿದ್ದಾರೆ. ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT