ಸಮಾನತೆಯಿಂದ ಬಲಿಷ್ಠ ಸಮಾಜ ನಿರ್ಮಾಣ

7

ಸಮಾನತೆಯಿಂದ ಬಲಿಷ್ಠ ಸಮಾಜ ನಿರ್ಮಾಣ

Published:
Updated:
ಸಮಾನತೆಯಿಂದ ಬಲಿಷ್ಠ ಸಮಾಜ ನಿರ್ಮಾಣ

ಬೀದರ್: ‘ಸಮಾನತೆಯಿಂದ ಮಾತ್ರ ಬಲಿಷ್ಠ ಸಮಾಜ ನಿರ್ಮಾಣ ಸಾಧ್ಯ. ಜಾತಿ ವೈಷಮ್ಯಗಳನ್ನು ತೊರೆದು ಸದೃಢ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮನವಿ ಮಾಡಿದರು.

ನಗರದ ಜಿಲ್ಲಾ ರಂಗ ಮಂದಿರದಲ್ಲಿ ಭಾನುವಾರ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಅಂಬಿಗರ ಚೌಡಯ್ಯ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಗತ್ತಿನ ಬಹುತೇಕ ಕ್ರಾಂತಿಗಳು ಅಧಿಕಾರಕ್ಕಾಗಿ ನಡೆದಿವೆ. ಆದರೆ 12 ಶತಮಾನದಲ್ಲಿ ಸಮಾನತೆಗಾಗಿ ಕ್ರಾಂತಿ ನಡೆದಿದೆ. ಅಂದಿನ ಶರಣರು ಕಾಯಕ, ದಾಸೋಹದ ಮೂಲಕ ಸಮಾಜವನ್ನು ಬಲಪಡಿಸಲು ಪ್ರಯತ್ನಿಸಿದರು. ಅವರ ಸಂದೇಶಗಳ ಪರಿಪಾಲನೆ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ’ ಎಂದು ತಿಳಿಸಿದರು.

‘ಶೋಷಿತರಿಗೆ ಪ್ರಾತಿನಿಧ್ಯ ಕೊಡಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ದೊರಕಿಸಿಕೊಡುವ ದಿಸೆಯಲ್ಲಿ ಕಾಂಗ್ರೆಸ್‌ ಸರ್ಕಾರ ಪ್ರಯತ್ನ ನಡೆಸಿದೆ. ಸಾಮಾಜಿಕ ಸಾಮರಸ್ಯವನ್ನು ಕೆಡಿಸುವ ಕೆಲಸ ಮಾಡುತ್ತಿರುವ ಜಾತಿವಾದಿಗಳು ಹಾಗೂ ಕೋಮುವಾದಿಗಳಿಂದ ದೂರ ಇರಬೇಕು’ ಎಂದು ಹೇಳಿದರು.

‘ಪ್ರಗತಿಪರ ವಿಚಾರವಾದಿಗಳ ಮೇಲೆ ಹಲ್ಲೆ ನಡೆಯುತ್ತಿದೆ. ಮಹಿಳೆಯರು, ಮಕ್ಕಳ ಮೇಲೆ ದೌರ್ಜನ್ಯ ಮುಂದುವರಿದಿದೆ. ಸಂಪ್ರದಾಯವಾದಿಗಳು ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಎಚ್ಚರಿಕೆ ವಹಿಸಬೇಕಿದೆ’ ಎಂದರು.

‘ನಗರದಲ್ಲಿರುವ ಶಾಲಾ ಕಾಲೇಜುಗಳಿಗೂ ನಿವೇಶನಗಳ ಅಗತ್ಯ ಇದೆ. ಜಾಗದ ಲಭ್ಯತೆಯನ್ನು ನೋಡಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಕೆಲವರು ಸಂಘಟನೆಯ ಹೆಸರಿನಲ್ಲಿ ಯುವಕರನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಯುವಕರು ಎಚ್ಚರಿಕೆ ವಹಿಸಬೇಕು’ ಎಂದು ಹೇಳಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ ಕಾರ್ಯಕ್ರಮ ಉದ್ಘಾಟಿಸಿದರು. ಉಗ್ರಾಣ ನಿಗಮದ ಅಧ್ಯಕ್ಷ ರಹೀಂಖಾನ್ ಅಧ್ಯಕ್ಷತೆ ವಹಿಸಿದ್ದರು.

ಹಳ್ಳಿಖೇಡ(ಬಿ)ದ ದತ್ತಾತ್ರೇಯ ಗುರೂಜಿ, ಕಂಠೀರವ ಸ್ಟುಡಿಯೊದ ಅಧ್ಯಕ್ಷೆ ಮೀನಾಕ್ಷಿ ಸಂಗ್ರಾಮ, ಬೀದರ್‌ ಉಪ ವಿಭಾಗಾಧಿಕಾರಿ ಶಿವಕುಮಾರ ಶೀಲವಂತ, ಜಗನ್ನಾಥ ಜಮಾದಾರ ಇದ್ದರು. ಕಿರಿಯ ಆರೋಗ್ಯ ಸಹಾಯಕಿ ಪಾರ್ವತಿ ಸೋನಾರೆ ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ವಟಗೆ ಸ್ವಾಗತಿಸಿದರು. ಚನ್ನಬಸವ ಹೇಡೆ ಕಾರ್ಯಕ್ರಮ ನಿರೂಪಿಸಿದರು.

ಮೆರವಣಿಗೆ: ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಂಬಿಗರ ಚೌಡಯ್ಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಮೆರವಣಿಗೆಯು ಶಿವಾಜಿ ವೃತ್ತ, ಭಗತಸಿಂಗ್‌ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಜನರಲ್‌ ಕಾರ್ಯಪ್ಪ ವೃತ್ತದ ಮಾರ್ಗವಾಗಿ ಜಿಲ್ಲಾ ರಂಗ ಮಂದಿರ ತಲುಪಿತು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ ನೋಡುಗರ ಗಮನ ಸೆಳೆಯಿತು. ಯುವಕರು ಕೇಸರಿ ಧ್ವಜ ಹಿಡಿದು ಡಿಜೆ ಸಂಗೀತಕ್ಕೆ ಹೆಜ್ಜೆ ಹಾಕಿದರು.

ಬೀದರ್‌: ಜಿಲ್ಲಾ ರಂಗ ಮಂದಿರದಲ್ಲಿ ಆಯೋಜಿಸಿದ್ದ ಅಂಬಿಗರ ಚೌಡಯ್ಯ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಜಿಲ್ಲಾಧಿಕಾರಿ ಎಚ್‌.ಆರ್. ಮಹಾದೇವ ಪಾಲ್ಗೊಳ್ಳದ ಕಾರಣ ಅಂಬಿಗರ ಸಮಾಜದ ಯುವಕರು ಕೆಲಕಾಲ ಪ್ರತಿಭಟನೆ ನಡೆಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ ಕಾರ್ಯಕ್ರಮ ಉದ್ಘಾಟಿಸಿ ಭಾಷಣ ಮಾಡುವವರೆಗೂ ತಾಳ್ಮೆಯಿಂದ ಇದ್ದ ಯುವಕರು ಪಾರ್ವತಿ ಸೋನಾರೆ ಅವರು ಉಪನ್ಯಾಸ ನೀಡಲು ಆರಂಭಿಸಿದಾಗ ಕಾರ್ಯಕ್ರಮಕ್ಕೆ ಅಡ್ಡಿ ಉಂಟು ಮಾಡಿದರು.

ಸಚಿವ ಹಾಗೂ ಜಿಲ್ಲಾಧಿಕಾರಿ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ಸಮಾಜಕ್ಕೆ ಅಗೌರವ ತೋರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಂಬಿಗರ ಚೌಡಯ್ಯ ಭವನ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡುವಂತೆ ಮೂರು ವರ್ಷಗಳಿಂದ ಜಿಲ್ಲಾ ಆಡಳಿತಕ್ಕೆ ಮನವಿ ಮಾಡುತ್ತಿದ್ದೇವೆ. ಆದರೆ, ಸಚಿವರು ಸಮಾಜದ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ ಯುವಕರು ಈಶ್ವರ ಖಂಡ್ರೆ ವಿರುದ್ಧ ಧಿಕ್ಕಾರದ ಘೋಷಣೆಗಳನ್ನೂ ಕೂಗಿದರು.

ಭಾರತಬಾಯಿ ಹಾಗೂ ಪಾರ್ವತಿ ಸೋನಾರೆ ಮನವಿ ಮಾಡಿದರೂ ಯುವಕರು ಪ್ರತಿಭಟನೆಯನ್ನು ನಿಲ್ಲಿಸಲಿಲ್ಲ. ವೇದಿಕೆಯಲ್ಲಿದ್ದ ರಹೀಂ ಖಾನ್‌ ಅವರು ಉಸ್ತುವಾರಿ ಸಚಿವರಿಗೆ ಮೊಬೈಲ್‌ನಲ್ಲಿ ಕರೆ ಮಾಡಿ ಕಾರ್ಯಕ್ರಮಕ್ಕೆ ಬರುವಂತೆ ಮನವಿ ಮಾಡಿದರು. ಮಧ್ಯಾಹ್ನ 2.58ಕ್ಕೆ ಸ್ಥಳಕ್ಕೆ ಬಂದ ಸಚಿವ ಖಂಡ್ರೆ, ‘ಬೇರೆ ಕೆಲಸದಲ್ಲಿದ್ದ ಕಾರಣ ಬರಲು ವಿಳಂಬವಾಗಿದೆ’ ಎಂದು ಸಮಜಾಯಿಸಿ ನೀಡಿದರು.

‘ರಹೀಂ ಖಾನ್, ಜಗನ್ನಾಥ ಜಮಾದಾರ ನೇತೃತ್ವದ ನಿಯೋಗ ಮುಖ್ಯಮಂತ್ರಿಗೆ ಭೇಟಿಯಾಗಿ ಮನವಿ ಸಲ್ಲಿಸಿದೆ. ನಾನು ಸಹ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇನೆ. ಕಾರ್ಯಕ್ರಮ ಮುಗಿದ ನಂತರ ಸಮಾಜದ ಮುಖಂಡರೊಂದಿಗೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ’ ಎಂದು ಪ್ರತಿಭಟನಾಕಾರರಲ್ಲಿ ಮನವಿ ಮಾಡಿದರು.

ಜಾಗದ ವಿಷಯವಾಗಿ ಯುವಕರು ಹಾಗೂ ಸಚಿವರ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು. ‘ಕಾರ್ಯಕ್ರಮಕ್ಕೆ ಅಡ್ಡಿಪಡಿಸುವುದೇ ನಿಮ್ಮ ಉದ್ದೇಶವಾಗಿದ್ದಾರೆ ರಂಗ ಮಂದಿರದಿಂದ ಹೊರ ಹೋಗಬೇಕು’ ಎಂದು ಸಚಿವರು ಏರಿದ ಧ್ವನಿಯಲ್ಲಿ ಯುವಕರಿಬ್ಬರಿಗೆ ಎಚ್ಚರಿಕೆ ನೀಡಿದರು.

ನಂತರ ಸಚಿವರು ವೇದಿಕೆಗೆ ಬಂದು ಭಾಷಣ ಆರಂಭಿಸಿದರು. ಈ ನಡುವೆ ಸಚಿವರ ಭಾಷಣಕ್ಕೆ ಅಡ್ಡಿ ಮಾಡುತ್ತಲೇ ಇದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಹೊರಗೆ ಕರೆದೊಯ್ದಯರು. ಸಚಿವರು ಸಮಾಜದ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದರು.

* * 

ವೃತ್ತಿಯಲ್ಲಿ ಅಂಬಿಗನಾಗಿ ಪ್ರವೃತ್ತಿಯಲ್ಲಿ ಅನುಭಾವಿ ಆದ ಅಂಬಿಗರ ಚೌಡಯ್ಯತಳ ಸಮುದಾಯದಲ್ಲಿ ಜನಿಸಿ ತಮ್ಮ ಅನುಭವಗಳ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡಿದ್ದಾರೆ.

ಭಾರತಬಾಯಿ ಶೇರಿಕಾರಜಿಲ್ಲಾ ಪಂಚಾಯಿತಿ ಅಧ್ಯಕ್ಷೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry