ಅಂಕ ಪಡೆಯಲು ಸ್ವಚ್ಛತಾ ಕಾರ್ಯದ ಕಸರತ್ತು

7

ಅಂಕ ಪಡೆಯಲು ಸ್ವಚ್ಛತಾ ಕಾರ್ಯದ ಕಸರತ್ತು

Published:
Updated:
ಅಂಕ ಪಡೆಯಲು ಸ್ವಚ್ಛತಾ ಕಾರ್ಯದ ಕಸರತ್ತು

ಬೀದರ್‌: ಕೇಂದ್ರ ಸರ್ಕಾರವು ಸ್ವಚ್ಛ ಭಾರತ ಮಿಷನ್‌ ಯೋಜನೆ ಅಡಿ ನಗರಗಳಿಗೆ ಅಂಕ ನೀಡಲು ಸಮೀಕ್ಷೆ ನಡೆಸುತ್ತಿರುವ ಕಾರಣ ನಗರದಲ್ಲಿ ಒಂದು ತಿಂಗಳಿಂದ ಸ್ವಚ್ಛತಾ ಕಾರ್ಯ ತೀವ್ರಗೊಳಿಸಲಾಗಿದೆ.

ಸ್ವಚ್ಛ ಭಾರತ ಮಿಷನ್‌ ಯೋಜನೆಯಡಿ ಸರ್ಕಾರೇತರ ಸಂಘಟನೆಯೊಂದು ಮೊದಲ ಹಂತವಾಗಿ ಜಿಲ್ಲೆಯ ಭಾಲ್ಕಿ, ಔರಾದ್‌, ಹುಮನಾಬಾದ್, ಬಸವಕಲ್ಯಾಣ ಹಾಗೂ ಚಿಟಗುಪ್ಪದಲ್ಲಿ ಈಗಾಗಲೇ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿದೆ. ಈ ವಾರ ಬೀದರ್‌ ನಗರದಲ್ಲೂ ಸಮೀಕ್ಷೆ ನಡೆಯಲಿದ್ದು, ಪೌರಕಾರ್ಮಿಕರು ಬಿಡುವಿಲ್ಲದಂತೆ ಕೆಲಸ ಮಾಡುತ್ತಿದ್ದಾರೆ.

ನಗರಸಭೆಯ 250 ಕಾರ್ಮಿಕರು ಎರಡು ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಬೆಳಿಗ್ಗೆ 7 ರಿಂದ 11 ಗಂಟೆಯ ವರೆಗೆ ಪ್ರತಿ ಮನೆಯಿಂದ ಕಸ ಸಂಗ್ರಹ ಮಾಡಲಾಗುತ್ತಿದೆ. ಮಾರುಕಟ್ಟೆ ಪ್ರದೇಶದಲ್ಲಿ ಬೆಳಿಗ್ಗೆ ಅಷ್ಟೇ ಅಲ್ಲ ಎರಡನೇ ಹಂತದಲ್ಲಿ ರಾತ್ರಿ 8 ರಿಂದ 11 ಗಂಟೆಯ ವರೆಗೂ ಕಸ ಸಂಗ್ರಹ ನಡೆಯುತ್ತಿದೆ.

ವಾಣಿಜ್ಯ ಪ್ರದೇಶದಲ್ಲಿ ಹಸಿರು ಹಾಗೂ ಹಳದಿ ಬಣ್ಣದ ಡಬ್ಬಗಳನ್ನು ಇಡಲಾಗಿದೆ. ಹಸಿ ಹಾಗೂ ಒಣ ಕಸ ಪ್ರತ್ಯೇಕವಾಗಿ ಹಾಕುವಂತೆ ಪೌರ ಕಾರ್ಮಿಕರು ಸಾರ್ವಜನಿಕರಿಗೆ ನಿತ್ಯ ತಿಳಿವಳಿಕೆ ನೀಡುತ್ತಿದ್ದಾರೆ. ಪೌರ ಕಾರ್ಮಿಕರು ಎರಡು ಹೊತ್ತು ಓಣಿಗೆ ಬರುತ್ತಿರುವ ಕಾರಣ ಸಾರ್ವಜನಿಕರು ಮನೆಯಲ್ಲಿ ಸಂಗ್ರಹವಾಗುವ ಕಸವನ್ನು ಅವರಿಗೆ ಕೊಡುವ ಮೂಲಕ ನಗರಸಭೆಗೆ ಸಹಕಾರ ನೀಡುತ್ತಿದ್ದಾರೆ.

ಸಮೀಕ್ಷಾ ತಂಡವು ಮೂರು ವಿಭಾಗಗಳಲ್ಲಿ ಅಧ್ಯಯನ ನಡೆಸಲಿದೆ. ಮೊದಲ ಹಂತದಲ್ಲಿ ಮನೆಗಳಿಂದ ಕಸ ಸಂಗ್ರಹಿಸುವ ವಿಧಾನ, ತ್ಯಾಜ್ಯ ನಿರ್ವಹಣೆ ಹಾಗೂ ವಿಲೇವಾರಿ, ವೈಯಕ್ತಿಕ ಶೌಚಾಲಯ ಸ್ಥಿತಿಗತಿ, ಹೋಟೆಲ್‌, ಕಾಲೇಜುಗಳಲ್ಲಿ ನೈರ್ಮಲ್ಯ, ಘನತ್ಯಾಜ್ಯ ನಿರ್ವಹಣೆಯಲ್ಲಿ ಅಧಿಕಾರಿಗಳ ಕಾರ್ಯವೈಖರಿ ಹಾಗೂ ಪರಿಸರ ನೈರ್ಮಲ್ಯ ಕಾಪಾಡಲು ನಗರಸಭೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳನ್ನು ಪರಿಶೀಲಿಸಲಿದೆ.

ಕಸ ವಿಲೇವಾರಿ ಮಾಡುವ ಚಿತ್ರಗಳನ್ನು ತೆಗೆದು ದಾಖಲೀಕರಣ ಮಾಡಿಕೊಳ್ಳಲಿದೆ. ಶುಲ್ಕ ರಹಿತ ದೂರವಾಣಿ ಸಂಖ್ಯೆ 1969ಗೆ ಕರೆ ಮಾಡಿ ವಿಲೇವಾರಿಯ ಮಾಹಿತಿ ಪಡೆಯಲಿದೆ. ನಂತರ ಸಮುದಾಯ ಶೌಚಾಲಯ ಹಾಗೂ ಸಾರ್ವಜನಿಕ ಶೌಚಾಲಯಗಳ ಪರಿಶೀಲನೆ ನಡೆಸಲಿದೆ.

‘ಒಂದು ತಿಂಗಳಲ್ಲಿ ನಗರಸಭೆಗೆ ಬಂದಿರುವ ಎಲ್ಲ 695 ದೂರುಗಳಿಗೆ ಸ್ಪಂದಿಸಲಾಗಿದೆ. ಪ್ರಸ್ತುತ ನಗರದಲ್ಲಿ 5 ಸಮುದಾಯ ಶೌಚಾಲಯಗಳಿವೆ. ಹೊಸದಾಗಿ 9 ಸಮುದಾಯ ಶೌಚಾಲಯ ಹಾಗೂ 8 ಸಾರ್ವಜನಿಕ ಶೌಚಾಲಯ ಸೇರಿ ಒಟ್ಟು 17 ಶೌಚಾಲಯಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ’ ಎಂದು ಆಯುಕ್ತ ಮನೋಹರ ಹೇಳುತ್ತಾರೆ.

‘ಸಮೀಕ್ಷಾ ತಂಡವು ಸಮೀಕ್ಷೆ ನಡೆಸಿದ ನಂತರ 2017ರ ಏಪ್ರಿಲ್‌ನಿಂದ ಡಿಸೆಂಬರ್‌ 2017ರ ವರೆಗಿನ ಸ್ವಚ್ಛತಾ ಆ್ಯಪ್‌ ಬಳಕೆ ಆಧಾರದಲ್ಲಿ 1ರಿಂದ 20ರ ರ‍್ಯಾಂಕ್‌ ಕೊಡಲಿದೆ. ಸ್ವಚ್ಛತಾ ಆ್ಯಪ್‌ ವಿಭಾಗದಲ್ಲಿ ಆ್ಯಪ್‌ನಲ್ಲಿ ನೀಡಲಾಗುವ ದೂರಿಗೆ 12 ಗಂಟೆ ಒಳಗಡೆ ಸ್ಪಂದಿಸಿದರೆ ಅದಕ್ಕೂ ಅಂಕ ನೀಡಲಿದೆ’ ಎನ್ನುತ್ತಾರೆ.

ಕಾಂಪೋಸ್ಟ್ ಗೊಬ್ಬರ

ಬೀದರ್‌: ವೈಜ್ಞಾನಿಕ ಪದ್ಧತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಪ್ರಕ್ರಿಯೆ ಎಂಟು ವರ್ಷಗಳಿಂದ ತೆವಳುತ್ತ ಸಾಗಿದೆ. ಸುಲ್ತಾನಪುರದ 24 ಎಕರೆ ಪ್ರದೇಶದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲಾಗಿದೆ. ₹ 40 ಲಕ್ಷ ವೆಚ್ಚದಲ್ಲಿ ಸಗ್ರಿಗೇಷನ್‌ ಮಷಿನ್‌ ಅಳವಡಿಸಲಾಗಿದೆ. ಜಿಲ್ಲಾಧಿಕಾರಿ ಒತ್ತಡ ಹಾಕಿದ್ದರಿಂದ ಕಳೆದ ವರ್ಷದ ಏಪ್ರಿಲ್‌ನಲ್ಲಿ ಕಸವನ್ನು ಕಾಂಪೋಸ್ಟ್ ಗೊಬ್ಬರವಾಗಿ ಪರಿವರ್ತಿಸುವ ಕಾರ್ಯಕ್ಕೆ ತಾತ್ಕಾಲಿಕವಾಗಿ ಚಾಲನೆ ನೀಡಲಾಗಿತ್ತು. ಅದು ಕೆಲವೇ ದಿನಗಳಲ್ಲಿ ಕಾರಣಾಂತರಗಳಿಂದಾಗಿ ಸ್ಥಗಿತಗೊಂಡಿತ್ತು. ಎರಡು ದಿನಗಳ ಹಿಂದೆಯಷ್ಟೇ ನಗರಸಭೆ ಅಧಿಕಾರಿಗಳು ಮತ್ತೆ ಚಾಲನೆ ನೀಡಿದ್ದಾರೆ.

* * 

ಸ್ವಚ್ಛ ಭಾರತ ಮಿಷನ್‌ ಅಧಿಕಾರಿಗಳು ನಿಯೋಜಿಸಿರುವ ಏಜೆನ್ಸಿಯು ಸಾರ್ವಜನಿಕರು ಸ್ವಚ್ಛತಾ ಆ್ಯಪ್‌  ಡೌನ್‌ಲೋಡ್‌ ಮಾಡಿಕೊಂಡಿರುವ ಬಗೆಗೂ ಅಂಕಗಳನ್ನು ನೀಡಲಿದೆ.

ಮನೋಹರ

ನಗರಸಭೆ ಆಯುಕ್ತ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry