ಸರಳ ಮದುವೆ ಹೆಚ್ಚು ನಡೆಯಲಿ

7

ಸರಳ ಮದುವೆ ಹೆಚ್ಚು ನಡೆಯಲಿ

Published:
Updated:
ಸರಳ ಮದುವೆ ಹೆಚ್ಚು ನಡೆಯಲಿ

ಚಿಕ್ಕಬಳ್ಳಾಪುರ: ‘ಬಡವರ ಮನೆ ಮಕ್ಕಳಿಗೆ ಬದುಕು ಕಲ್ಪಿಸಿಕೊಡುವ ಸಾಮೂಹಿಕ ಮದುವೆಗಳು ಹೆಚ್ಚೆಚ್ಚು ನಡೆಯಬೇಕು. ಶ್ರೀಮಂತರು ಎಷ್ಟೇ ಅದ್ಧೂರಿಯಾಗಿ ಮದುವೆಯಾಗಲಿ. ನಾವು ಮಾತ್ರ ಅತ್ಯಂತ ಸರಳವಾಗಿ ಮದುವೆ ಮಾಡಿಕೊಳ್ಳುವುದು ಕಲಿಯಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬಾಗೇಪಲ್ಲಿ ಭಾನುವಾರ ಎಸ್.ಎನ್.ಸುಬ್ಬಾರೆಡ್ಡಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ 18ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಎಲ್ಲ ಶ್ರೀಮಂತರು ಇದೇ ಸಮಾಜದಿಂದಲೇ ಸಂಪತ್ತು ಗಳಿಸುತ್ತಾರೆ. ಆದರೆ ಆ ಸಮಾಜಕ್ಕೆ ಸ್ವಲ್ಪವಾದರೂ ಹಿಂತಿರುಗಿ ಕೊಡಬೇಕಲ್ಲಾ? ಆ ಕೆಲಸ ಸುಬ್ಬಾರೆಡ್ಡಿ ಮಾಡುತ್ತಿದ್ದಾರೆ. ಹಳ್ಳಿಯಿಂದ ಬೆಂಗಳೂರಿಗೆ ಹೋಗಿ ಹೋಟೆಲ್ ಉದ್ಯಮ ಸ್ಥಾಪಿಸಿ. ಗಳಿಸಿದ ಸಂಪತ್ತಿನಲ್ಲಿ ಸ್ವಲ್ಪ ಪಾಲು ಅನೇಕ ಬಗೆಯ ಸಮಾಜಸೇವೆಗೆ ಖರ್ಚು ಮಾಡುತ್ತ ಬರುತ್ತಿದ್ದಾರೆ. ಇದು ಬೇರೆಯವರಿಗೆ ಸ್ಫೂರ್ತಿಯಾಗಲಿ’ ಎಂದು ತಿಳಿಸಿದರು.

‘ಸುಬ್ಬಾರೆಡ್ಡಿ 18 ವರ್ಷಗಳಿಂದ ಸಾಮೂಹಿಕ ವಿವಾಹಗಳನ್ನು ನಡೆಸುತ್ತ ಏಳು ಸಾವಿರಕ್ಕೂ ಅಧಿಕ ಜೋಡಿಗೆ ಕಲ್ಯಾಣ ಭಾಗ್ಯ ನೀಡಿದ್ದಾರೆ. ಮದುವೆಯಾದವರಿಗೆ ಆರ್ಥಿಕ ಸಹಾಯವಾಗಲಿ ಎಂದು ಈವರೆಗೆ 2,000 ಹಸುಗಳನ್ನು ಕೊಟ್ಟಿದ್ದಾರೆ. ಇಂತಹ ಕಾರ್ಯ ನಿರಂತರವಾಗಿ ಮಾಡುವುದು ತಮಾಷೆಯಲ್ಲ. ಜಾತ್ಯತೀತವಾಗಿ ಈ ಸೇವೆ ಮಾಡುತ್ತಿರುವುದು ಶ್ಲಾಘನೀಯ. ಈ ಒಳ್ಳೆಯ ಕೆಲಸ ಮುಂದುವರಿಯಲಿ’ ಎಂದು ಹಾರೈಸಿದರು.

‘ನಾವ್ಯಾರು ಕೂಡ ಯಾವುದೇ ಜಾತಿಗೆ ಅರ್ಜಿ ಹಾಕಿಕೊಂಡು ಹುಟ್ಟಿದವರಲ್ಲ. ನಾನೇನೂ ಹಿಂದೂ ಧರ್ಮದಲ್ಲಿ ಅರ್ಜಿ ಹಾಕಿಕೊಂಡು ಹುಟ್ಟಿಲ್ಲ. ಕುರುಬ ಜಾತಿಯಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕಿದವನೂ ಅಲ್ಲಾ. ನಮ್ಮಪ್ಪ ಕುರುಬರಾಗಿದ್ದರು ಹೀಗಾಗಿ ಕುರುಬ ಜಾತಿಯಲ್ಲಿ ಹುಟ್ಟಿ

ರುವೆ. ನಾವು ಯಾವುದೇ ಜಾತಿಯಲ್ಲಿ ಹುಟ್ಟಲಿ ಆದರೆ ಮನುಷ್ಯರಾಗಿ ಬಾಳಬೇಕು ಮುಖ್ಯ ಎನ್ನುವುದು ಅರ್ಥೈಸಿಕೊಳ್ಳಬೇಕು’ ಎಂದರು.

‘ನವದಂಪತಿಗಳು ಇತತರಿಗೆ ಮಾದರಿಯಾಗಬೇಕು. ಸಮಾಜಕ್ಕೆ ನಿಮ್ಮದೇ ಆದ ಕೊಡುಗೆ ನೀಡಬೇಕು. ಆದರ್ಶ ದಂಪತಿಗಳಾಗಿ ಬದುಕಬೇಕು. ಸಾಧ್ಯವಾದ ಮಟ್ಟಿಗೆ ಒಂದು ಮಗು ಸಾಕು. ಹೆಚ್ಚೆಂದರೆ ಇನ್ನೊಂದು ಮಾಡಿಕೊಳ್ಳಿ. ಏಕೆಂದರೆ ಹೆಚ್ಚು ಮಕ್ಕಳಾದರೆ ಶಿಕ್ಷಣ, ಆರೋಗ್ಯ, ಉದ್ಯೋಗ ಕೊಡಿಸುವ ಜವಾಬ್ದಾರಿ ಹೆಚ್ಚಾಗುತ್ತದೆ’ ಎಂದು ಹೇಳಿದರು.

ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ‘ದೇವರು, ತಂದೆ–ತಾಯಿ ಮತ್ತು ಸಮಾಜದ ಋಣವನ್ನು ಧರ್ಮದಿಂದ ತೀರಿಸಬೇಕು. ಅದೇ ರೀತಿ ಸುಬ್ಬಾರೆಡ್ಡಿ ಮತ್ತವರ ಕುಟುಂಬ ದುಡಿಮೆಯಿಂದ ಸಂಪಾದಿಸಿದ ಹಣದಿಂದ ಈ ಕ್ಷೇತ್ರದ ಅಭಿವೃದ್ಧಿಗಾಗಿ ಇಂತಹ ಪವಿತ್ರ ಕಾರ್ಯದ ಮೂಲಕ ಸಮಾಜದ ಋಣ ತೀರಿಸುತ್ತಿದ್ದಾರೆ. ಧರ್ಮ ಕಾಪಾಡುತ್ತಿದ್ದಾರೆ. ಜಿಲ್ಲೆಗೊಬ್ಬ ಇಂತಹ ಕಾಳಜಿಯುಳ್ಳ ಶಾಸಕರಿದ್ದರೆ ನಾವು ಧನ್ಯರು’ ಎಂದು ಹೇಳಿದರು.

‘ಈ ಭಾಗದಲ್ಲಿ ವಿದ್ಯುತ್‌ನ ತೀವ್ರ ಸಮಸ್ಯೆ ಇದೆ ಎಂದು ಸುಬ್ಬಾರೆಡ್ಡಿ ಅವರು ನನಗೆ ಮನವಿ ಮಾಡಿದ್ದಾರೆ. ಅದಕ್ಕಾಗಿ ಈ ಕ್ಷೇತ್ರಕ್ಕೆ 20 ಮೆಗಾ ವ್ಯಾಟ್‌ ಸೌರ ವಿದ್ಯುತ್ ಘಟಕ ಪ್ರತ್ಯೇಕ ಮಂಜೂರು ಮಾಡಿದ್ದೇವೆ. ಏನೇ ಸಮಸ್ಯೆ ಇದ್ದರೂ ಬಗೆಹರಿಸುವ ಕೆಲಸ ಮಾಡುತ್ತೇವೆ’ ಎಂದರು.

ಸಂಸದ ವೀರಪ್ಪ ಮೊಯಿಲಿ ಮಾತನಾಡಿ, ‘ರಾಜ್ಯದಲ್ಲಿ ಯಾವುದೇ ಶಾಸಕರು ಮಾಡದಷ್ಟು ಸೇವಾ ಕಾರ್ಯವನ್ನು ಸುಬ್ಬಾರೆಡ್ಡಿ ಮಾಡಿಕೊಂಡು ಬರುತ್ತಿದ್ದಾರೆ. ಇವತ್ತಿನ ದಿನಗಳಲ್ಲಿ ಮದುವೆ ಮಾಡುವುದು ಸುಲಭವಲ್ಲ. ಮದುವೆಗಾಗಿ ಮಾಡಿದ ಸಾಲ ಕುಟುಂಬದವರ ತಲೆ ಮೇಲೆ ಹೊರೆಯಾಗುತ್ತದೆ. ಆದ್ದರಿಂದ ಸಾಮೂಹಿಕ ಮದುವೆಗಳು ಹೆಚ್ಚೆಚ್ಚು ನಡೆಯಬೇಕು’ ಎಂದರು.

ಶಾಸಕ ಎಸ್‌.ಎನ್.ಸುಬ್ಬಾರೆಡ್ಡಿ ಮಾತನಾಡಿ, ‘ಆಡಂಬರ, ವರ್ಚಸ್ಸಿಗಾಗಿ ನನ್ನ ಜೀವನದಲ್ಲಿಯೇ ನಾನು ಇಂತಹ ಕೆಲಸ ಮಾಡುತ್ತಿಲ್ಲ. ನಾನು ಮಾಡುವುದು ಆ ಭಗವಂತ ಮೆಚ್ಚಬೇಕು. ನನ್ನ ಸಂಪಾದನೆಯಲ್ಲಿ ನಿಮಗೂ ಸ್ವಲ್ಪ ಕೊಡಬೇಕು ಎನ್ನುವ ಉದ್ದೇಶದಿಂದ ಇಂತಹ ಸಮಾಜಸೇವೆ ಮಾಡುತ್ತಿದ್ದೇವೆ ವಿನಾ ಬೇರೆ ಉದ್ದೇಶಕ್ಕೆ ಅಲ್ಲ’ ಎಂದು ಹೇಳಿದರು.

‘ನಮ್ಮ ಟ್ರಸ್ಟ್‌ನಿಂದ ಮಾಡುತ್ತಿರುವ ಕೆಲಸಗಳು ನಮಗೆ ತೃಪ್ತಿ ತಂದಿವೆ. ನಾವು ಈ ಟ್ರಸ್ಟ್‌ಗಾಗಿ ಯಾರ ಬಳಿಯೂ ಒಂದೇ ಒಂದು ರೂಪಾಯಿ ಪಡೆಯುವುದಿಲ್ಲ. ಇದರಲ್ಲಿ ನಮ್ಮ ಕುಟುಂಬದವರು ಮಾತ್ರ ಇದ್ದೇವೆ. ನಮ್ಮ ಸಂಪಾದನೆಯ ಹಣದಲ್ಲಿ ಶೇ25 ರಷ್ಟು ಹಣವನ್ನು ಬಡವರ ಏಳಿಗೆಗಾಗಿ ಖರ್ಚು ಮಾಡಿದ್ದೇವೆ. ಇನ್ನಷ್ಟು ಸೇವೆಗಳನ್ನು ಮಾಡಲು ಉದ್ದೇಶಿಸಿದ್ದೇವೆ’ ಎಂದು ತಿಳಿಸಿದರು.

ಸಾಮೂಹಿಕ ಮದುವೆಯಲ್ಲಿ 150 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು. ಲೋಕೋಪಯೋಗಿ ಸಚಿವ ಮಹಾದೇವಪ್ಪ, ಸಂಸದ ಕೆ.ಎಚ್.ಮುನಿಯಪ್ಪ, ಶಾಸಕ ಡಾ.ಕೆ.ಸುಧಾಕರ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಉಪಸ್ಥಿತರಿದ್ದರು.

* * 

ಮನುಷ್ಯರಾಗಿ ಹುಟ್ಟಿದ ಮೇಲೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡಿದಾಗ ಜೀವನ ಸಾರ್ಥಕವಾಗುತ್ತದೆ. ಅದೇ ರೀತಿ ಸುಬ್ಬಾರೆಡ್ಡಿ ಬದುಕು ಸಾರ್ಥಕವಾಗಿದೆ.

ಸಿದ್ದರಾಮಯ್ಯ, ಮುಖ್ಯಮಂತ್ರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry