ವಿವೇಕಾನಂದ ಉದ್ಯಾನ; ಅನೇಕರ ವಿಹಾರ ತಾಣ

7

ವಿವೇಕಾನಂದ ಉದ್ಯಾನ; ಅನೇಕರ ವಿಹಾರ ತಾಣ

Published:
Updated:
ವಿವೇಕಾನಂದ ಉದ್ಯಾನ; ಅನೇಕರ ವಿಹಾರ ತಾಣ

ಚಿತ್ರದುರ್ಗ: ಕೆಲ ವರ್ಷಗಳ ಹಿಂದೆ ಎತ್ತ ನೋಡಿದರತ್ತ ಗಲೀಜು, ಕಣ್ಣಿಗೆ ಕಸವೇ ಕಾಣಿಸುತ್ತಿದ್ದ ಹಳೆಯ ಉದ್ಯಾನವೀಗ ಸುಂದರ ಉದ್ಯಾನವಾಗಿದೆ. ಇಲ್ಲಿನ ಜಿಲ್ಲಾಸ್ಪತ್ರೆ ಮುಂಭಾಗದಲ್ಲೇ ಇರುವ ಸ್ವಾಮಿ ವಿವೇಕಾನಂದ ಉದ್ಯಾನ ನವೀಕರಣದಿಂದ ಕಂಗೊಳಿಸುತ್ತಿದೆ. ವಿದ್ಯಾರ್ಥಿಗಳಿಗೆ, ವಾಯುವಿಹಾರಿಗಳು, ಪ್ರೇಮಿಗಳಿಗೆ ವಿಶ್ರಾಂತಿ ಪಡೆಯಲು ಅಚ್ಚುಮೆಚ್ಚಿನ ತಾಣ. ಹದಿನೈದಕ್ಕೂ  ಹೆಚ್ಚು ಬೃಹತ್‌ ಮರಗಳು ನೆರಳು ನೀಡುತ್ತಿವೆ. ವಿರಮಿಸಲು  ಆಸನಗಳ ವ್ಯವಸ್ಥೆಯೂ ಇದೆ.

‘ನಡಿಗೆಗೆ ಹೇಳಿ ಮಾಡಿಸಿದಂತಹ ಜಾಗ ಇದು. ಆರು ತಿಂಗಳಿನಿಂದ ನಿತ್ಯ ಬೆಳಿಗ್ಗೆ ಇಲ್ಲಿಗೆ ವಾಯುವಿಹಾರಕ್ಕಾಗಿ ಬರುತ್ತಿದ್ದೇನೆ. ಒಂದೆರಡು ತಾಸು ಅದಕ್ಕಾಗಿ ಸಮಯ ಮೀಸಲಿಟ್ಟಿದ್ದೇನೆ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಸುನಂದಮ್ಮ.

‘ಮುಂಜಾನೆ 5.30ರಿಂದ 7 ಗಂಟೆಯೊಳಗೆ ಐವತ್ತಕ್ಕೂ ಅಧಿಕ ಮಂದಿ ಇಲ್ಲಿಗೆ ಬಂದು ಸಣ್ಣ ಪುಟ್ಟ ವ್ಯಾಯಾಮ, ಧ್ಯಾನ ಇತರೆ, ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಜೋಗಿಮಟ್ಟಿ ರಸ್ತೆ, ದೊಡ್ಡಪೇಟೆ, ಕರುವಿನ ಕಟ್ಟೆ ವೃತ್ತ, ಕೆಳಗೋಟೆ, ಬಾರ್‌ ಲೈನ್ ರಸ್ತೆ ಈ ಭಾಗದ ನಾಗರಿಕರಿಗೆ ಇದು ಹತ್ತಿರವಿರುವ ಕಾರಣ ಕೆಲವರು ಇಲ್ಲಿ ವಾಯುವಿಹಾರಕ್ಕಾಗಿ ನಿತ್ಯವೂ ಬರುತ್ತಾರೆ’ ಎನ್ನುತ್ತಾರೆ ವಾಯುವಿಹಾರಿ ಪ್ರಶಾಂತ್.

‘ಜಿಲ್ಲಾಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಎರಡೂ ವರ್ಷದಿಂದಲೂ ‘ಡಿ’ ಗ್ರೂಪ್ ನೌಕರನಾಗಿ ನಾನು ಕೆಲಸ ಮಾಡುತ್ತಿದ್ದು, ಪ್ರತಿನಿತ್ಯ ಮಧ್ಯಾಹ್ನ ಉದ್ಯಾನದಲ್ಲಿ ಕುಳಿತು ಊಟ ಮಾಡುತ್ತೇವೆ.  ಯಾರೇ ಊಟ ಮಾಡಲಿ ಸ್ವಚ್ಛತೆ ಕಾಪಾಡುವಂತೆ ಅವರಲ್ಲಿ ಮನವಿ ಮಾಡುತ್ತೇನೆ’ ಎನ್ನುತ್ತಾರೆ ತಾಲ್ಲೂಕಿನ ಮಾರಘಟ್ಟದ ನಿವಾಸಿ ಜಯರಾಮ್.

ಅಕ್ಕಪಕ್ಕದ ರಸ್ತೆಗಳಲ್ಲಿ ವಾಹನಗಳು ಸಂಚರಿಸುವ ಶಬ್ದ ಕೇಳಿಸುತ್ತದೆ ಎಂಬುದನ್ನು ಹೊರತು ಪಡಿಸಿ, ಓದಲಿಕ್ಕೆ, ನೆಮ್ಮದಿಯ ವಾತಾವರಣದ ಅನುಭವ ಪಡೆಯಲು, ಮನಸ್ಸಿಗೆ ಸಂತೋಷ ಸಿಗಲೂ ಈ ಉದ್ಯಾನವೂ ಸೂಕ್ತ ಎನ್ನುತ್ತಾರೆ ಚಳ್ಳಕೆರೆಯ ಪ್ರಥಮ ಪಿಯು ವಿದ್ಯಾರ್ಥಿನಿಯರಾದ ಕಾವ್ಯಾ, ದಿವ್ಯಾ, ಸ್ನೇಹಾ.

‘ನಾನೂ ಸೇರಿದಂತೆ ಸಹಪಾಠಿಗಳು ಇಲ್ಲಿಗೆ ಪ್ರತಿನಿತ್ಯ ಬರುವುದು ಸಾಮಾನ್ಯ. ಕಸ ಸಂಗ್ರಹಕ್ಕೆ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ’ ಎನ್ನುತ್ತಾರೆ ವಿದ್ಯಾರ್ಥಿನಿಯರಾದ ಮಂದಾರ, ಸುಷ್ಮಾ.

ಅಭಿವೃದ್ಧಿಗಷ್ಟೇ ಎನ್ಒಸಿ; ಓಪನ್ ಜಿಮ್ ಗಲ್ಲ’

‘ನಗರಸಭೆ ವ್ಯಾಪ್ತಿಯ ಉದ್ಯಾನಗಳಲ್ಲಿ ತೆರೆದ ವ್ಯಾಯಾಮ ಶಾಲೆ (ಓಪನ್ ಜಿಮ್) ಹೊರತು ಪಡಿಸಿ, ಇನ್ನುಳಿದ ಅಭಿವೃದ್ಧಿ ಕೆಲಸಗಳಾದ ಗಿಡ, ಮರ ಬೆಳೆಸುವುದು, ಮಕ್ಕಳ ಆಟ ಸಾಮಗ್ರಿಗಳು, ಶುದ್ಧ ಕುಡಿಯುವ ನೀರಿನ ಘಟಕ, ಕುಳಿತುಕೊಳ್ಳಲು ಉತ್ತಮ ಆಸನ ವ್ಯವಸ್ಥೆ ಇತರೆ ಮೂಲ ಸೌಕರ್ಯ ಒದಗಿಸಲು ನಗರಾಭಿವೃದ್ಧಿ ಪ್ರಾಧಿಕಾರ ಮುಂದಾದ್ದಲ್ಲಿ ನಗರಸಭೆಯಿಂದ ತ್ವರಿತವಾಗಿ ಎನ್ಒಸಿ ಕೊಡಲು ಸಿದ್ಧರಿದ್ದೇವೆ’ ಎನ್ನುತ್ತಾರೆ ನಗರಸಭೆ ಅಧ್ಯಕ್ಷ ಮಂಜುನಾಥ್

‘ಅಭಿವೃದ್ಧಿ ಪಡಿಸಲು ಸಿದ್ಧ’

‘ನಗರಸಭೆ ವ್ಯಾಪ್ತಿಯ ಉದ್ಯಾನಗಳನ್ನು ಅಭಿವೃದ್ಧಿ ಪಡಿಸಲು ನಾವು ಬದ್ಧರಿದ್ದೇವೆ. ಅದಕ್ಕಾಗಿ ಪ್ರಾಧಿಕಾರದಿಂದ ಲಕ್ಷಾಂತರ ರೂಪಾಯಿ ಅನುದಾನ ಬೇಕಾದರೂ ಖರ್ಚು ಮಾಡುತ್ತೇವೆ. ಎನ್ಒಸಿ ನೀಡಿದಲ್ಲಿ ವಿವಿಧ ರೀತಿಯ ಮೂಲ ಸೌಕರ್ಯ ಒದಗಿಸಲು ಸಿದ್ಧರಿದ್ದೇವೆ’ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆರ್.ಕೆ.ಸರ್ದಾರ್ ಭರವಸೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry