7

ನವಲೂರು ಸೇತುವೆ; ಸಂಚಾರಕ್ಕೆ ಅಡಚಣೆ

Published:
Updated:
ನವಲೂರು ಸೇತುವೆ; ಸಂಚಾರಕ್ಕೆ ಅಡಚಣೆ

ಧಾರವಾಡ: ತ್ವರಿತಗತಿ ಸಾರಿಗೆ (ಬಿಆರ್‌ಟಿಎಸ್) ಯೋಜನೆಯ ವಿಳಂಬ ಕಾಮಗಾರಿಯಿಂದ ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಅವಳಿ ನಗರಗಳ ನಡುವೆ ಅಲ್ಲಲ್ಲಿ ಕಾಮಗಾರಿ ನಡೆಯುತ್ತಿದೆ. ನವಲೂರು ಬಳಿಯ ಸೇತುವೆ ನಿರ್ಮಾಣದಿಂದಾಗಿ ಸಂಚಾರಕ್ಕೆ ಅಡಚಣೆಯಾಗಿದೆ.

2012 ರಲ್ಲಿ ಯೋಜನೆ ಕಾಮಗಾರಿ ಆರಂಭವಾಗಿದ್ದು, ಐದು ವರ್ಷ ಕಳೆದರೂ ಇನ್ನೂ ಯೋಜನೆ ಪೂರ್ಣಗೊಂಡಿಲ್ಲ. ಕಾಮಗಾರಿ ತೀವ್ರಗತಿಯಲ್ಲಿ ನಡೆಯದ್ದರಿಂದ ಅಲ್ಲಿನ ನಿವಾಸಿಗಳಿಗೆ ನಿತ್ಯ ದೂಳಿನ ಮಜ್ಜನವಾಗುತ್ತಿದೆ. ಹಣ್ಣಿನ ವ್ಯಾಪಾರಕ್ಕೂ ತೊಂದರೆಯಾಗಿದೆ ಎನ್ನುತ್ತಾರೆ ನವಲೂರು ನಿವಾಸಿ ಕೇಶವ ಚವ್ಹಾಣ.

ಕಾಮಗಾರಿಯಿಂದಾಗಿ ದೂಳಿನಲ್ಲಿಯೇ ಜೀವನ ಸಾಗಿಸುವಂತಾಗಿದೆ. ಜತೆಗೆ ಅಪಘಾತಗಳೂ ಹೆಚ್ಚಾಗಿದ್ದು, ಒಂದು ವರ್ಷದಲ್ಲಿ ಈ ಮಾರ್ಗದಲ್ಲಿ 21 ಅಪಘಾತಗಳು ಸಂಭವಿಸಿವೆ ಎಂದು ಸಂಚಾರ ಪೊಲೀಸ್ ಠಾಣೆ ದಾಖಲೆಗಳು ಹೇಳುತ್ತವೆ.

‘ಅಪಾಯಕಾರಿಯಾಗಿರುವ ರಸ್ತೆಯ ಅಂಚಿನಿಂದ ಜನರು ತೊಂದರೆ ಎದುರಿಸುತ್ತಿದ್ದಾರೆ. ದ್ವಿಚಕ್ರ ವಾಹನಗಳ ಸವಾರರು ವಾಹನಗಳನ್ನು ರಸ್ತೆ ಅಂಚಿನಲ್ಲಿ ಇಳಿಸುವಾಗ, ಏರಿಸುವಾಗ ಸ್ಕೀಡ್‌ ಆಗಿ ಬಿದ್ದು ಅಪಘಾತಗಳು ಸಂಭವಿಸುತ್ತೇವೆ’ ಎನ್ನುತ್ತಾರೆ ಸಂಚಾರ ಠಾಣೆಯ ಇನ್‌ಸ್ಪೆಕ್ಟರ್ ಮುರುಗೇಶ ಚನ್ನಣ್ಣವರ.

ಸೇತುವೆ ಬಳಿ ಕಿರಿದಾದ ರಸ್ತೆಯಲ್ಲಿ ದ್ವಿಮುಖ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವುದರಿಂದ ವಾಹನ ಸವಾರರಿಗೆ ತೊಂದರೆಯಾಗಿದೆ. ಸಾರಿಗೆ ಬಸ್‌ಗಳು ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ನಿಲ್ಲುವುದರಿಂದ ಹಿಂದೆ ಇತರ ವಾಹನಗಳ ಸಂಖ್ಯೆ ಹೆಚ್ಚಾಗಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ.

‘ನವಲೂರು ‘ಪೇರಲ’ದ ವ್ಯಾಪಾರ ಚೆನ್ನಾಗಿತ್ತು. ದೂಳು ಹೆಚ್ಚಾಗಿರುವುದರಿಂದ ವ್ಯಾಪಾರಕ್ಕೆ ಹೊಡೆತ ಬಿದಿದ್ದೆ. ದೂಳು ಮುತ್ತಿರುವ ಹಣ್ಣನ್ನು ಖರೀದಿಸಲು ಜನರು ಇಷ್ಟ ಪಡುತ್ತಿಲ್ಲ’ ಎಂದು ಅಲ್ಲಿ ವ್ಯಾಪಾರ ಮಾಡುತ್ತಿರುವ ರುಕ್ಮಿಣಿ ತಮ್ಮ ಅಳಲು ತೋಡಿಕೊಂಡರು.

ಬಿಆರ್‌ಟಿಎಸ್‌ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಂಡು, ಸುಗಮ ಸಂಚಾರದೊಂದಿಗೆ ದೂಳು ಸಮಸ್ಯೆ ನಿವಾರಣೆಯಾದರೆ ಸಾಕು ಎನ್ನುವುದು ಅಲ್ಲಿನ ನಿವಾಸಿಗಳ ಆಗ್ರಹ.

ಶಿವಕುಮಾರ ಹಳ್ಯಾಳ

ನವಲೂರು ಬಳಿ ಎರಡು ಬ್ರಿಡ್ಜ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಒಂದು ಸೇತುವೆ ಕಾಮಗಾರಿ ಶೇ 90 ರಷ್ಟು ಪೂರ್ಣಗೊಂಡಿದ್ದು, ಇನ್ನೊಂದರದ್ದು ಶೇ 60 ರಷ್ಟು ಪೂರ್ಣಗೊಂಡಿದೆ. ಮಾರ್ಚ್‌ನಲ್ಲಿ ಪೂರ್ಣವಾಗಲಿವೆ.

ಬಸವರಾಜ ಕೇರಿ, ಬಿಆರ್‌ಟಿಎಸ್ ಸಹಾಯಕ ವ್ಯವಸ್ಥಾಪಕ ನಿರ್ದೇಶಕ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry