ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಳು ತೂಬು ಇರುವಲ್ಲಿ ಪ್ರತಿಷ್ಠಾಪನೆ ಮಾಡಲು ಹೇಳಿದ ದುರ್ಗಾದೇವಿ

Last Updated 22 ಜನವರಿ 2018, 10:03 IST
ಅಕ್ಷರ ಗಾತ್ರ

ಹಿರೇಕೆರೂರ: ಪಟ್ಟಣದ ಕೆರೆಯ ಏರಿಯ ಮೇಲೆ ನೆಲೆಸಿರುವ ಶಕ್ತಿರೂಪಿಣಿ ದುರ್ಗಾದೇವಿ ಅನೇಕ ಪವಾಡಗಳು ಮಾಡಿದ್ದಾಳೆ. ಹೀಗಾಗಿ ರಾಜ್ಯದ ವಿವಿಧ ಭಾಗದಿಂದ ಜನರು ಇಲ್ಲಿನೆ ಭೇಟಿ ನೀಡುತ್ತಾರೆ. ದುಷ್ಟ ಶಿಕ್ಷಕಿ, ಶಿಷ್ಟ ರಕ್ಷಕಿ ಎಂದು ಹೆಸರಾಗಿದ್ದಾಳೆ.

ದುರ್ಗಾದೇವಿ ಇಲ್ಲಿ ಬಂದು ನೆಲೆಸಿದ ಕುರಿತು ಕುತೂಹಲಕರ ಕಥೆ ಒಂದಿದೆ. ನೂರಾರು ವರ್ಷಗಳ ಹಿಂದೆ ಇಲ್ಲಿಂದ 20 ಕಿ.ಮೀ. ದೂರದ ಬಂದಳಿಕೆ ಗ್ರಾಮದ ಸಮೀಪ ಅಕ್ಕ ಬನಶಂಕರಿ ದೇವಿಯ ಜೊತೆಗೆ ಕೆರೆಯ ಏರಿಯ ಮೇಲೆ ಪ್ರತಿಷ್ಠಾಪನೆಗೊಂಡಿದ್ದಳು. ಆಗ ದೇವಿಗೆ ಭಕ್ತರು ಮಾಂಸಹಾರದ ನೈವೇದ್ಯ ನೀಡುತ್ತಿದ್ದರು. ಇದನ್ನು ಬನಶಂಕರಿ ಆಕ್ಷೇಪಿಸಿದಾಗ ಭಕ್ತರ ನೈವೇದ್ಯವನ್ನು ತಿರಸ್ಕರಿಸಲು ಆಗದೇ ದುರ್ಗಾದೇವಿ ಭಕ್ತರಿಗಾಗಿ ಅಲ್ಲಿಂದ ಬೇರೆ ಕಡೆಗೆ ತೆರಳುವುದಾಗಿ ನಿರ್ಧರಿಸುತ್ತಾಳೆ.

ಅದರಂತೆ ಒಂದು ದಿನ ಕನ್ಯೆಯೊಬ್ಬಳ ಮೈಯಲ್ಲಿ ಬಂದು ತನ್ನನ್ನು 7 ತೂಬುಗಳಿರುವ ಕೆರೆಯ ಏರಿಯ ಮೇಲೆ ಪ್ರತಿಷ್ಠಾಪನೆ ಮಾಡುವಂತೆ ತಿಳಿಸುತ್ತಾಳೆ. ಇದರ ಬಗ್ಗೆ ಗ್ರಾಮದ ಮುಖಂಡರು ಚರ್ಚೆ ನಡೆಸಿದಾಗ ಸಮೀಪದ ಹಿರೇಕೆರೂರ ಕೆರೆಗೆ 7 ತೂಬುಗಳಿವೆ. ಅಲ್ಲಯೇ ಪ್ರತಿಷ್ಠಾಪನೆ ಮಾಡೋಣ ಎಂಬ ತೀರ್ಮಾನಕ್ಕೆ ಬರುತ್ತಾರೆ. ಅದರಂತೆ ದುರ್ಗಾದೇವಿ ಹಾಗೂ ಆಕೆಯ ಪರಿವಾರವಾದ ಸಾವಂತ್ರಮ್ಮ, ಮರಿಯಮ್ಮ, ಕಾಳಮ್ಮ, ದೊಣ್ಣೆಪ್ಪ ಹಾಗೂ ಸವರೆಪ್ಪರ ಕಟ್ಟಿಗೆ ಮೂರ್ತಿಗಳಿಗೆ ಸಂಪ್ರದಾಯದಂತೆ ಪೂಜಾವಿಧಿ ನೆರವೇರಿಸಿ, ಮಂಗಳವಾರ ಬೆಳಗಿನ ಜಾವ ಬಾಳಂಬೀಡ ಗ್ರಾಮದ ಸಮೀಪ ಕೆರೆಯ ದಡದಲ್ಲಿ ಗಂಗಾ ಮಾತೆಗೆ ಅರ್ಪಿಸಿ ಹೋಗುತ್ತಾರೆ.

ಈ ವಿಷಯ ಗ್ರಾಮದಲ್ಲಿ ಹರಡು ತ್ತದೆ. ಇದೇ ವೇಳೆ ಗ್ರಾಮದ ವಿಶ್ವಕರ್ಮ ಅರ್ಚಕನೊಬ್ಬನ ಕನಸಿನಲ್ಲಿ ಬಂದ ದುರ್ಗಾದೇವಿ ತನ್ನನ್ನು ಕೆರೆಯ ಏರಿಯ ಮೇಲೆ ಪ್ರತಿಷ್ಠಾಪನೆ ಮಾಡಬೇಕೆಂದು ಕೇಳುತ್ತಾಳೆ. ಹೀಗೆ ದೇವಿ ಬಂದು ನೆಲೆಸಿದಳು.

ಮರಾಠರ ಸೇನೆಯಲ್ಲಿದ್ದ ದೋಂಡೋಷಾ ವಾಘ್ ಅವರು ಬೂಟು ಗಾಲಿನಿಂದ ದೇವಸ್ಥಾನ ಪ್ರವೇಶಿಸಿದಾಗ ಕೆಲಕ್ಷಣದಲ್ಲಿಯೇ ಆತನ ಕಣ್ಣುಗಳು ಕಾಣದಂತಾದವು. ಆತನ ಕುದುರೆಯ ಕಣ್ಣುಗಳು ಸಹ ಕಾಣದಂತಾಗಿ ದಿಕ್ಕೆಟ್ಟು ಓಡತೊಡಗಿತು. ಈ ಕುರಿತು ಅವನು ಅರ್ಚಕರನ್ನು ವಿಚಾರಿಸಿದಾಗ ದುರ್ಗಾದೇವಿ ಮುನಿಸಿಕೊಂಡಿದ್ದರಿಂದ ಹೀಗಾಗಿದೆ ಎಂದು ತಿಳಿಸುತ್ತಾರೆ. ನಂತರ ಆತ ದೇವಿಯ ಮೊರೆ ಹೋಗುತ್ತಾನೆ. ತಕ್ಷಣ ಆತ ಮೊದಲಿನಂತಾಗುತ್ತಾನೆ. ದೇವಿ ಮಹಿಮೆಯನ್ನು ಇದರಿಂದ ತಿಳಿದ ಆತ ತನ್ನ ಸರ ಹಾಗೂ ಬಂಗಾರದ ಒಡವೆಗಳನ್ನು ದೇವಿಗೆ ಅರ್ಪಿಸುತ್ತಾನೆ. ಹೀಗೆ ದುರ್ಗಾದೇವಿ ಕುರಿತು ಹತ್ತಾರು ಘಟನೆಗಳು ಭಕ್ತರ ಬಾಯಿಯಲ್ಲಿ ಹರಿದಾಡುತ್ತಿವೆ.

‘ಬಂದಳಿಕೆಯಿಂದ ಬಂದು ದುರ್ಗಾ ದೇವಿ ನೆಲೆಸಿದ್ದರಿಂದ ಆಕೆ ಯೊಂದಿಗೆ ಸಮಸ್ತ ಶಕ್ತಿಗಳೂ ಇಲ್ಲಿಗೆ ಬಂದಿವೆ. ಈ ಕಾರಣದಿಂದಲೇ ಹಿರೇಕೆರೂರ ಪಟ್ಟಣ ಸಮೃದ್ಧವಾಗಿ ಬೆಳೆಯಲಾರಂಭಿಸಿತು. ಸ್ವಾತಂತ್ರ್ಯ ದೊರಕಿದ ನಂತರ ತಾಲ್ಲೂಕು ಕೇಂದ್ರ ವಾಯಿತು. ಅದಕ್ಕೂ ಮೊದಲು ಕೋಡ ಗ್ರಾಮ ತಾಲ್ಲೂಕು ಕೇಂದ್ರವಾಗಿತ್ತು. ನಾಡ ಹಂಚು ಹೊದಿಸಿದ್ದ ಪುಟ್ಟ ದೇವಸ್ಥಾನ ಇಂದು ಭವ್ಯವಾಗಿ ತಲೆ ಎತ್ತಿದ್ದು, ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಕಾಣುತ್ತಿದೆ’ ಎಂದು ‘ದುರ್ಗಾದೇವಿ ಚರಿತ್ರೆ’ ಪುಸ್ತಕ ಬರೆದಿರುವ ನಿವೃತ್ತ ಶಿಕ್ಷಕ, ಸಾಹಿತಿ ವಿ.ಎಚ್.ಮಾಸೂರ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ವಿಶ್ವಕರ್ಮ ಅರ್ಚಕರಿಂದ ಮಾತ್ರ ಪೂಜಾ ಕೈಂಕರ್ಯ ನಡೆಯುತ್ತಿರುವ ದುರ್ಗಾದೇವಿಯು ರಾಜ್ಯದಲ್ಲಿ, ಪಕ್ಕದ ಗೋವಾ, ಮಹಾರಾಷ್ಟ್ರ, ಆಂಧ್ರ ಪ್ರದೇಶ ಹಾಗೂ ತಮಿಳುನಾಡುಗಳಲ್ಲಿ ಭಕ್ತಗಣ ಹೊಂದಿದ್ದಾಳೆ. ದೇವಿಯ ಜಾತ್ರೆಯನ್ನು ಪ್ರತಿ ಮೂರು ವರ್ಷಗಳಿಗೊಮ್ಮೆ ವೈಭವ ದಿಂದ ಆಚರಿಸಲಾಗುತ್ತಿದೆ. ಈ ಬಾರಿ ಜ.23ರಿಂದ 15 ದಿನ ನಡೆಯುವ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ.

ಕೆ.ಎಚ್.ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT