ಅಕ್ಕಿಆಲೂರ ನೂತನ ತಾಲ್ಲೂಕು ಕೇಂದ್ರ

7

ಅಕ್ಕಿಆಲೂರ ನೂತನ ತಾಲ್ಲೂಕು ಕೇಂದ್ರ

Published:
Updated:
ಅಕ್ಕಿಆಲೂರ ನೂತನ ತಾಲ್ಲೂಕು ಕೇಂದ್ರ

ಅಕ್ಕಿಆಲೂರ: ‘ಕಲೆ, ಸಾಹಿತ್ಯ, ಸಂಸ್ಕೃತಿ, ದಾಸೋಹ, ಶಿಕ್ಷಣ ಕೇಂದ್ರವಾಗಿರುವ ಅಕ್ಕಿಆಲೂರ ನೂತನ ತಾಲ್ಲೂಕು ಕೇಂದ್ರವಾಗಬೇಕೆಂಬ ಈ ಭಾಗದ ಜನರ ಬಹುದಿನ ಕನಸು ನನಸಾಗುವ ಆಶಾಕಿರಣ ಗೋಚರವಾಗುತ್ತಿದ್ದು, ಆ ಹಿನ್ನೆಲೆಯಲ್ಲಿ ಅಗತ್ಯ ಪ್ರಯತ್ನಗಳು ಸಾಗಿವೆ. ಮುಖ್ಯಮಂತ್ರಿಗಳು ಸಕಾರಾತ್ಮಕ ವಾಗಿ ಸ್ಪಂದಿಸುವ ಆಶಾಭಾವನೆ ಹೊಂದ ಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ನುಡಿದರು. ಇಲ್ಲಿನ ದುಂಡಿಬಸವೇಶ್ವರ ಜನಪದ ಕಲಾಸಂಘದ 27 ನೇ ಕನ್ನಡ ನುಡಿ ಸಂಭ್ರಮವನ್ನು ಶನಿವಾರ ರಾತ್ರಿ ಉದ್ಘಾಟಿಸಿ ಅವರು ಮಾತನಾಡಿದರು.

‘ಕನ್ನಡ, ಕನ್ನಡಿಗ ಎಂಬ ಅಭಿಮಾನ ಭಾಷಿಕರನ್ನು ಒಂದಾಗಿಸಿ ಬಂಧುವಾಗಿಸುತ್ತದೆ. ಈ ಹಿನ್ನೆಲೆಯಲ್ಲಿ ನಾಡು–ನುಡಿ ಉಳಿಸಿ ಬೆಳೆಸುವ ಉತ್ತರದಾಯಿತ್ವವನ್ನು ಇಂಥ ಸಂಘ–ಸಂಸ್ಥೆಗಳು ಪ್ರತಿಫಲಾಪೇಕ್ಷೆ ಇಲ್ಲದೇ ಮಾಡುತ್ತಿರುವುದು ಈ ಜಿಲ್ಲೆಯ ಪುಣ್ಯದ ಬೆಳಸು’ ಎಂದ ಅವರು, ‘ಇನ್ನೇನು ಚುನಾವಣೆಯ ಸುಗ್ಗಿ ಬರಲಿದೆ. ಮತದಾರರಿಗೆ ಹುಗ್ಗಿಯ ಹಿಗ್ಗಾದರೆ, ರಾಜಕಾರಣಿಗಳಿಗೆ ಕುಗ್ಗುವ, ಗೆಲ್ಲುವ ಕಸರತ್ತು ಮಾಡುವ ಸಂದಿಗ್ಧ ಸಮಯ. ಮತದಾರರು ಜಾಗೃತರಾಗಿರಬೇಕು. ಉತ್ತಮ ನಾಯಕರನ್ನು ಆಯ್ಕೆ ಮಾಡಬೇಕು’ ಎಂದರು.

ಸಂಸದ ಪ್ರಹ್ಲಾದ್ ಜೋಶಿ ಮಾತನಾಡಿ, ‘2 ಸಾವಿರ ವರ್ಷಗಳ ಸುದೀರ್ಘ ಇತಿಹಾಸ ಹೊಂದಿದ ಕನ್ನಡ ಭಾಷೆ ವಿಶ್ವ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ. ಇಲ್ಲಿ ಮೊಗೆದಷ್ಟು ಸಾಹಿತ್ಯದ ಸಿರಿ ಇದೆ. ಬಳಿದಷ್ಟು ಸಂಸ್ಕೃತಿಯ ಕಂಪಿದೆ. ಇಂಥ ಪುಣ್ಯ ಭೂಮಿಯಲ್ಲಿ ಹುಟ್ಟಿದ ನಾವು ಇಂಗ್ಲಿಷ್ ವ್ಯಾಮೋಹದ ತೆಕ್ಕೆಗೆ ಸಿಕ್ಕು ನರಳುತ್ತಿರುವುದು ವಿಷಾದನೀಯ’ ಎಂದರು.

ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಮಾತನಾಡಿ, ‘ಭಾಷೆ ಭಾವನೆಯ ಪ್ರತಿಬಿಂಬವೂ, ಬದುಕಿನ ಗತಿಬಿಂಬವೂ ಆಗಿರುವುದ ರಿಂದ ನಮ್ಮ ಮಾತು, ಬರಹಗಳು ಮಾತೃಭಾಷೆಯಲ್ಲಿ ಹೊರಹೊಮ್ಮಿದಷ್ಟು ಅರ್ಥಪೂರ್ಣವಾಗಿ ಬೇರೆ ಭಾಷೆಯಲ್ಲಿ ಹೊರಹೊಮ್ಮಲು ಸಾಧ್ಯವಿಲ್ಲ. ಮಾತೃಭಾಷೆಯನ್ನು ಅನ್ನದ ಭಾಷೆಯಾಗಿಸುವಲ್ಲಿ ನಾವು ಎಡವಿದ್ದು ಆ ತಪ್ಪನ್ನು ಸುಧಾರಿಸಿಕೊಳ್ಳದೇ ನಮ್ಮದಲ್ಲದ ಭಾಷೆಯೆಡೆಗೆ ಕೈ ಚಾಚುತ್ತಿರುವುದು ನಮ್ಮ ಪ್ರಯೋಗಶೀಲತೆಯ ಕೊರತೆಗೆ ಹಿಡಿದ ಕನ್ನಡಿಯಾಗಿದೆ’ ಎಂದರು.

ಬೆಂಗಳೂರು ಜಿಲ್ಲಾ ಪಂಚಾಯ್ತಿ ಸಿಇಒ ಕೆ.ಎ.ದಯಾನಂದ ಮಾತ ನಾಡಿ, ‘ಭಾಷೆಯ ಸೊಗಡು ಅರ್ಥೈಸಿ ಕೊಳ್ಳಬೇಕಾದರೆ ಅದರಲ್ಲಿರುವ ಸಾಹಿತ್ಯ ಓದಬೇಕು. ಓದುವಿಕೆಯ ಕೊರತೆಯಿಂದ ನಮ್ಮ ಭಾಷೆಯ ಸತ್ವದ ಬಗ್ಗೆ ನಮ್ಮ ಅರಿವಿನ ಪರಧಿ ವಿಸ್ತರಿಸಿಲ್ಲ. ಅರಿವನ್ನು ಹೆಚ್ಚಿಸಿಕೊಂಡಾಗ ಅಭಿವ್ಯಕ್ತಿಯ ಸಾಧ್ಯತೆಯೂ ಹೆಚ್ಚಾಗು ತ್ತದೆ. ಇಲ್ಲವಾದರೆ ಭಾಷೆ ಅಳಿಯುವ ಆತಂಕವಿದೆ’ ಎಂದರು.

ಕವಯಿತ್ರಿ ರಾಜೇಶ್ವರಿ ತಿರುಮಲೆ ಅವರ ಮೌನ ತಿರುಗುವ ಹೊತ್ತು ಕವನ ಸಂಕಲನ ಬಿಡುಗಡೆ ಮಾಡಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಸಿ.ಎಂ.ಉದಾಸಿ ಮಾತನಾಡಿ, ‘ಪ್ರತಿವರ್ಷವೂ ನುಡಿ ಸಂಭ್ರಮದಲ್ಲಿ ಅರ್ಥಪೂರ್ಣ ಕಾರ್ಯಕ್ರಮಗಳು ನಡೆಯುತ್ತಿವೆ. ಒಳ್ಳೆ ಮನಸ್ಸುಗಳು ಒಂದೆಡೆ ಸೇರಿದಾಗ ಇಂಥ ಯಶಸ್ಸು ಲಭಿಸುತ್ತದೆ’ ಎಂದರು.

ಹಾವೇರಿಯ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಇಲ್ಲಿನ ವಿರಕ್ತಮಠದ ಶಿವಬಸವ ಸ್ವಾಮೀಜಿ, ಮುತ್ತಿನಕಂತಿಮಠದ ಚಂದ್ರಶೇಖರ ಸ್ವಾಮೀಜಿ ಸಾನ್ನಿಧ್ಯ, ಕಲಾಸಂಘದ ಅಧ್ಯಕ್ಷ ಬಸವರಾಜ್ ಕೋರಿ ಅಧ್ಯಕ್ಷತೆ ವಹಿಸಿದ್ದರು. ಚಿತ್ರನಟ ಬಾಲರಾಜ್, ಲೆಕ್ಕಪರಿಶೋಧಕ ಮುರುಳಿಧರ ಬಾಬಜಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶಿವಬಸಪ್ಪ ಪೂಜಾರ, ಜಿಲ್ಲಾ ಪಂಚಾಯ್ತಿ ಸದಸ್ಯ ಟಾಕನಗೌಡ ಪಾಟೀಲ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಪ್ರದೀಪ ಶೇಷಗಿರಿ, ಉಪಾಧ್ಯಕ್ಷೆ ಸರೋಜಾ ಪಾಟೀಲ, ಶಿವಯೋಗಿ ಕೊಲ್ಲಾವರ, ಉದಯಕುಮಾರ ಬೊಂಗಾಳೆ ರಾಜೇಶ್ವರಿ ತಿರುಮಲೆ ಇದ್ದರು.

ಬೆಳಗ್ಗೆ 10.30 ಗಂಟೆಗೆ, ರೈತ ಸಮಾವೇಶ: ಸಾನ್ನಿಧ್ಯ: ಅಕ್ಕಿಆಲೂರಿನ ವಿರಕ್ತಮಠದ ಶಿವಬಸವ ಸ್ವಾಮೀಜಿ, ಮುತ್ತಿನಕಂತಿ ಮಠದ ಚಂದ್ರಶೇಖರ ಸ್ವಾಮೀಜಿ, ಅಧ್ಯಕ್ಷತೆ: ಮರಿಗೌಡ ಪಾಟೀಲ, ಉದ್ಘಾಟನೆ: ರೈತ ಸಂಘದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ, ವಿಶೇಷ ಸನ್ಮಾನ: ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಕೆ.ಟಿ.ಗಂಗಾಧರ, ಅತಿಥಿಗಳು: ವೀರಸಂಗಯ್ಯ, ನಂದಿನಿ ಜಯರಾಮ್, ಚುಕ್ಕಿ ನಂಜುಂಡಸ್ವಾಮಿ, ಮಂಜುಳಾ ಅಕ್ಕಿ, ರಾಮಣ್ಣ ಕೆಂಚಳ್ಳೇರ, ಬಸವರಾಜ್ ಕೋರಿ, ಅಡಿವೆಪ್ಪ ಆಲದಕಟ್ಟಿ, ಮಾಲತೇಶ ಪರಪ್ಪನವರ, ಮಹೇಶ ವಿರಪಣ್ಣನವರ, ಮಲ್ಲಿಕಾರ್ಜುನ ಬಳ್ಳಾರಿ, ಡಿಳ್ಳೆಪ್ಪ ಮಣ್ಣೂರ, ರುದ್ರಪ್ಪ ಹಣ್ಣಿ.

ಸಂಜೆ 6 ಗಂಟೆಗೆ, ನುಡಿ ಸಂಭ್ರಮದ ಸಮಾರೋಪ: ಸಾನ್ನಿಧ್ಯ: ಹಾವೇರಿಯ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಅಧ್ಯಕ್ಷತೆ: ಷಣ್ಮುಖಪ್ಪ ಮುಚ್ಚಂಡಿ, ನುಡಿತರಂಗ: ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಧ್ವನಿಸುರುಳಿ ಬಿಡುಗಡೆ: ಹಿನ್ನೆಲೆ ಗಾಯಕಿ ಡಾ.ಶಮಿತಾ ಮಲ್ನಾಡ, ಅತಿಥಿಗಳು: ಮನೋಹರ ತಹಶೀಲ್ದಾರ್, ಡಾ.ಮಹೇಶ ಜೋಶಿ, ನಾಗರಾಜ್, ಸಿ.ಎಂ.ಉದಾಸಿ, ಶಾಂತಾ ಹುಲ್ಮನಿ, ಪರಶುರಾಮ್ ಕೆ., ಗೌರವ ಸನ್ಮಾನ: ಜಗದೀಶ ಹೆಬ್ಬಳ್ಳಿ, ಚಂದ್ರಶೇಖರ ಗಾಳಿ, ಗುಡ್ಡಪ್ಪ ಜಿಗಳಿಕೊಪ್ಪ.

ರಾತ್ರಿ 9.30 ಗಂಟೆಗೆ, ಸಾಂಸ್ಕೃತಿಕ ಸಂಭ್ರಮ: ನೃತ್ಯೋತ್ಸವ: ಸ್ಥಳೀಯ ಪ್ರತಿಭೆಗಳು, ಮಹಿಳಾ ಜನಪದ ಕಲಾಸಂಘ, ಹಾನಗಲ್ಲಿನ ಹೆಜ್ಜೆಗೆಜ್ಜೆ ನೃತ್ಯ ಕಲಾ ವೇದಿಕೆ, ಸಂಗೀತ ಕಲರವ: ಡಾ.ಶಮಿತಾ ಮಲ್ನಾಡ, ಕೊಪ್ಪಳದ ರೇವಣ್ಣ ಕೋಳೂರ, ಹಾವೇರಿಯ ಎ.ಬಿ.ಗುಡ್ಡಳ್ಳಿ.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ, ರಂಗಭೂಮಿ ಕಲಾವಿದ ಶಿವಬಸಪ್ಪ ಪೂಜಾರ ಅವರ ಕಂಚಿನ ಕಂಠದಿಂದ ಮೂಡಿಬಂದ ಪ್ರಚಂಡ ರಾವಣ ನಾಟಕದ ಡೈಲಾಗ್ ಪ್ರೇಕ್ಷಕರನ್ನು ರೋಮಾಂಚನ ಗೊಳಿಸುವುದರೊಂದಿಗೆ ಇಲ್ಲಿ ಶನಿವಾರ ರಾತ್ರಿ 27 ನೇ ಕನ್ನಡ ನುಡಿ ಸಂಭ್ರಮದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅದ್ಭುತ ಆರಂಭ ದೊರೆಯಿತು.

ಚಿತ್ರನಟ ಬಾಲರಾಜ್‌ ಅವರ ಕಂಠ ಮಾಧುರ್ಯದಲ್ಲಿ ಹೊರಹೊಮ್ಮಿದ ಬೆಳ್ಳಿ ಮೂಡಿತು, ಕೋಳಿ ಕೂಗಿಲು ಚಿತ್ರಗೀತೆ ಕೇಳುಗರನ್ನು ಚಿತ್ರಗೀತೆಗಳ ಸುವರ್ಣಯುಗಕ್ಕೆ ಕರೆದೊಯ್ದು ರಸಪಾನ ಮಾಡಿಸಿತು. ಮಿಮಿಕ್ರಿ ಕಲಾವಿದ ಗದಗಿನ ರಾಜೂ ಕರಣಿ ಹಲವು ರಾಜಕಾರಣಿಗಳ, ಶ್ರೇಷ್ಠ ನಟರ ಧ್ವನಿ ಅನುಕರಣೆ ಮಾಡಿ ನೈಜತೆಯ ಚಿತ್ರಣವನ್ನು ಚಿತ್ತ ಬಿತ್ತಿಯಲ್ಲಿ ಮೂಡಿಸಿದರು. ಕಿರುತೆರೆ ಕಲಾವಿದ ಹುಬ್ಬಳ್ಳಿಯ ಭರಮಗೌಡ ಪಾಟೀಲ ಹಾಸ್ಯದ ಕಚಗುಳಿಯೊಂದಿಗೆ ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸಿದರು.

ವಿದ್ಯಾರ್ಥಿನಿ ವಿದ್ಯಾ ಹರಿಜನ ಪ್ರಸ್ತುತ ಪಡಿಸಿದ ಜಾನಪದ ಗೀತೆ, ಎಸ್.ಬಿ.ಜಾಬೀನ ವಾಣಿಜ್ಯ ಕಾಲೇಜಿನ ವಿದ್ಯಾರ್ಥಿನಿಯರ ಡೊಳ್ಳು ಕುಣಿತ ಜನಪದ ಲೋಕ ಅನಾವರಣಗೊಳಿಸಿದರೆ, ಚನ್ನವೀರೇಶ್ವರ ನೃತ್ಯನಿಕೇತನದ ಪ್ರತಿಭೆಗಳು ನೃತ್ಯ ವೈಭವ ತೆರೆದಿಟ್ಟರು. ಹಾನಗಲ್ಲಿನ ಚಂದನಾ ಹಳೆಕೋಟೆ ಭರತನಾಟ್ಯದ ಮೂಲಕ ಶಾಸ್ತ್ರೀಯ ನೃತ್ಯದ ಹಿತಸ್ಪರ್ಶ ನೀಡಿದರು. ಹೀಗೆ ಸಾಂಸ್ಕೃತಿಕ ಕಾರ್ಯಕ್ರಮ ಬಹುಮುಖಿ ನೆಲೆಯಲ್ಲಿ ಮನರಂಜನೆಯನ್ನು ಒದಗಿಸುವಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry