ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಣ್ಣ ಕೆರೆಗೆ ವರದೆಯ ನೀರು

Last Updated 22 ಜನವರಿ 2018, 10:07 IST
ಅಕ್ಷರ ಗಾತ್ರ

ಹಾವೇರಿ: ದಶಕದಿಂದ ಭಣಗುಟ್ಟುತ್ತಿದ್ದ ನಗರದ ನಾಗೇಂದ್ರನಮಟ್ಟಿಯ ಹೊರವಲಯದಲ್ಲಿನ ಬಸವಣ್ಣ ಕೆರೆಗೆ ವರದಾ ನದಿಯಿಂದ ನೀರು ತುಂಬಿಸಿದ್ದು, ಸ್ಥಳೀಯರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಹೆಗ್ಗೇರಿ ಕೆರೆಗೆ ನೀರು ಪೂರೈಸುವ ಪೈಪ್‌ಲೈನ್‌ ವಾಲ್‌ ಮೂಲಕ ನೀರು ಬಿಡಲಾಗಿದೆ. ಇದರಿಂದ ಇಲ್ಲಿನ ಬತ್ತಿದ ಹಾಗೂ ಇತರ 30ಕ್ಕೂ ಹೆಚ್ಚು ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದೆ.

ಕೆರೆ ಅಭಿವೃದ್ಧಿಗಾಗಿ ನಾವೆಲ್ಲ 1958ರಿಂದ ಹೋರಾಟ ಮಾಡುತ್ತಿದ್ದೇವೆ. ಇನ್ನೂ ಹೂಳು ತೆಗೆದಿಲ್ಲ. ಇದರಿಂದಾಗಿ ನೀರಿನ ಮಟ್ಟ ಕುಸಿದಿದೆ ಎಂದು ಬಸವಣ್ಣ ಕೆರೆ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಗಟ್ಟಪ್ಪ ಕುಳೇನೂರ ‘ಪ್ರಜಾವಾಣಿ’ಗೆ ತಿಳಿಸಿದರು.

‘1958ರಲ್ಲಿ 63.20 ಎಕರೆ ವಿಸ್ತೀರ್ಣವಿದ್ದ ಕೆರೆಯನ್ನು ಹತ್ತಿ ಬಟ್ಟೆ ಕಾರ್ಖಾನೆಗಾಗಿ ಮುಂಬಯಿ ಮೂಲದ ವಿ.ಭಟ್‌ ಎಂಬವರಿಗೆ ಎಕರೆಗೆ ₹ 24,400 ರಂತೆ ನೀಡಿದ್ದ ಸರ್ಕಾರವು, ಕಾರ್ಖಾನೆ ಆರಂಭಗೊಳ್ಳದ ಕಾರಣ ಮರು ವಶ ಪಡಿಸಿಕೊಂಡಿತು. ಆದರೆ, 20 ವರ್ಷಗಳ ಹಿಂದೆ ದಾಖಲೆ ನೋಡಿದಾಗ, ಒಟ್ಟು 14.30 ಎಕರೆ ವಿಸ್ತೀರ್ಣ ಎಂದಿತ್ತು. ಈಚೆಗೆ ಪರಿಶೀಲಿಸಿದಾಗ 13.20 ಎಕರೆ ಎಂದಿದೆ. ಈ ಬಗ್ಗೆ ಸರ್ವೆ ನಡೆಸಬೇಕಾಗಿದೆ’ ಎಂದು ಅವರು ಒತ್ತಾಯಿಸಿದರು.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮಂತಪ್ಪ ದೇವಗಿರಿ ಅವರಿಗೆ ಸೇರಿದ ಇಟ್ಟಂಗಿ ಬಟ್ಟಿಯು ಕರೆಯಲ್ಲಿದ್ದು, ತೆರವುಗೊಳಿಸಲು 12 ವರ್ಷಗಳ ಹಿಂದೆ ಒಪ್ಪಿದ್ದರು. ಆದರೆ, ಇನ್ನೂ ತೆರವು ಮಾಡಿಲ್ಲ ಎಂದು ಅವರು ದೂರಿದರು.

ಸುತ್ತಲಿನ ರೈತರಾದ ನಾಗಪ್ಪ ಹಲಸಂಗಿ, ಗಾಳೆಪ್ಪ ಹುಲ್ಮನಿ ಮತ್ತಿತರರು ಸೇರಿಕೊಂಡು ಸುಮಾರು ₹1ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿ, ಕೆರೆಯ ಸುತ್ತ ಸಸಿ ನೆಟ್ಟಿದ್ದೇವೆ. ತಕ್ಕಮಟ್ಟಿಗೆ ಸ್ವಚ್ಛ ಮಾಡಿಸಿದ್ದೆವು ಎಂದರು.

ಕೆರೆಯ ಅಭಿವೃದ್ಧಿ ಸರ್ಕಾರ ₹40 ಲಕ್ಷ ಹಣ ಮಂಜೂರು ಮಾಡಿದ್ದು, ಟೆಂಡರ್‌ ಪ್ರಕ್ರಿಯೆಯೂ ಮುಗಿದಿದೆ. ನೀರು ಕಡಿಮೆಯಾದ ಕೂಡಲೇ ಹೂಳೆತ್ತಲಾಗುವುದು ಎಂದು ನಗರಸಭೆ ಸದಸ್ಯ ಮಲ್ಲೇಶಪ್ಪ ಪಟ್ಟಣಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು. ಕೆರೆಗೆ ನೀರ ತುಂಬಿಸಿದ ಕಾರಣ ನಾಗೇಂದ್ರನಮಟ್ಟಿ, ಶಾಂತಿ ನಗರ ಹಾಗೂ ನೆಹರು ನಗರದ ಜನರಿಗೆ ತುಂಬ ನೆರವಾಗಿದ್ದು, ಬಳಸುತ್ತಿದ್ದಾರೆ ಎಂದರು.

ಕೆರೆಯ ಒಂದು ಬದಿಲ್ಲಿ ಇಟ್ಟಂಗಿ ಭಟ್ಟಿಯಿದ್ದು, ತೆರವುಗೊಳಿಸುತ್ತೇನೆ ಎಂದು 2005ರಲ್ಲಿ ಹೋರಾಟ ಸಮಿತಿಗೆ ಬರೆದುಕೊಟ್ಟಿದ್ದೇನೆ. ಆದರೆ, ಸಮಿತಿಯವರು ಸಮ್ಮತಿಸಿದ ಕಾರಣ ಮುಂದುವರಿಸಿಕೊಂಡು ಬಂದಿದ್ದೇನೆ. ಈಗ ಏಕಾಏಕಿ ತೆಗೆಯಲು ಸಾಧ್ಯವಿಲ್ಲ. ಸ್ವಲ್ಪ ಕಾಲಾವಕಾಶ ನೀಡಿದರೆ, ತೆರವುಗೊಳಿಸುತ್ತೇನೆ ಎಂದು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮಂತಪ್ಪ ದೇವಗಿರಿ ‘ಪ್ರಜಾವಾಣಿ’ಗೆ ತಿಳಿಸಿದರು.

* * 

ಬಸವಣ್ಣ ಕೆರೆಯು ಮೂಲತಃ 63.20 ಎಕರೆ ವಿಸ್ತೀರ್ಣವಿದ್ದು, ಈಗ 13 ರಿಂದ 14 ಎಕರೆ ಮಾತ್ರ ಇದೆ ಎಂದು ಸರ್ಕಾರದ ದಾಖಲೆಗಳಲ್ಲಿದೆ. ಈ ಬಗ್ಗೆ ಸರ್ವೆ ಮಾಡಬೇಕು
ಗಟ್ಟಪ್ಪ ಕುಳೇನೂರ ಅಧ್ಯಕ್ಷ, ಬಸವಣ್ಣ ಕೆರೆ ಅಭಿವೃದ್ಧಿ ಹೋರಾಟ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT