ಬಿಜೆಪಿಯವರದ್ದು ‘ಕೊಳಕು ರಾಜಕೀಯ’, ಶಾಸಕರನ್ನು ಅನರ್ಹಗೊಳಿಸಿದ್ದು ಅಸಾಂವಿಧಾನಿಕ: ಸಿಸೋಡಿಯಾ

7

ಬಿಜೆಪಿಯವರದ್ದು ‘ಕೊಳಕು ರಾಜಕೀಯ’, ಶಾಸಕರನ್ನು ಅನರ್ಹಗೊಳಿಸಿದ್ದು ಅಸಾಂವಿಧಾನಿಕ: ಸಿಸೋಡಿಯಾ

Published:
Updated:
ಬಿಜೆಪಿಯವರದ್ದು ‘ಕೊಳಕು ರಾಜಕೀಯ’, ಶಾಸಕರನ್ನು ಅನರ್ಹಗೊಳಿಸಿದ್ದು ಅಸಾಂವಿಧಾನಿಕ: ಸಿಸೋಡಿಯಾ

ನವದೆಹಲಿ: ಆಮ್‌ ಆದ್ಮಿ ಪಕ್ಷದ 20 ಶಾಸಕರನ್ನು ಅನರ್ಹಗೊಳಿಸಿರುವುದನ್ನು ಅಸಾಂವಿಧಾನಿಕ ಹಾಗೂ ಕಾನೂನುಬಾಹಿರ ಎಂದು ಉಲ್ಲೇಖಸಿರುವ ಹಿರಿಯ ನಾಯಕ ಮನೀಷ್‌ ಸಿಸೋಡಿಯಾ ಬಿಜೆ‍ಪಿಯವರದು ಕೊಳಕು ರಾಜಕೀಯ ಎಂದು ತೆರೆದ ಪತ್ರದಲ್ಲಿ ದೂರಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಎರಡು ಪುಟಗಳ ಬರಹವನ್ನು ಹಂಚಿಕೊಂಡಿರುವ ಸಿಸೋಡಿಯಾ, ಅದರಲ್ಲಿ ‘ಈ ದಿನ ನಾನು ಬೇಸರಗೊಂಡಿದ್ದೇನೆ. ಆದರೆ ಸ್ಥೈರ್ಯ ಕಳೆದುಕೊಂಡಿಲ್ಲ. ನನಗೆ ದೆಹಲಿ ಮತ್ತು ದೇಶದ ಜನರಲ್ಲಿ ನಂಬಿಕೆ ಇದೆ’ ಎಂದು ಉಲ್ಲೇಖಿಸಿದ್ದಾರೆ.

ಲಾಭದಾಯಕ ಹುದ್ದೆ ನಿಯಮ ಉಲ್ಲಂಘಿಸಿದ್ದ ಆರೋಪದ ಮೇಲೆ ದೆಹಲಿ ಸಾರಿಗೆ ಸಚಿವ ಕೈಲಾಶ್‌ ಗೆಹ್ಲೋಟ್‌ ಸೇರಿದಂತೆ ಎಎಪಿಯ 20 ಶಾಸಕರನ್ನು ಅನರ್ಹಗೊಳಿಸುವಂತೆ ಚುನಾವಣಾ ಆಯೋಗ ಶಿಫಾರಸು ಮಾಡಿತ್ತು. ಇದಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಭಾನುವಾರ ಅಂಕಿತ ಹಾಕಿದ್ದರು.

ಅನರ್ಹಗೊಂಡಿರುವ ಶಾಸಕರನ್ನು ಆಡಳಿತದ ಅನುಕೂಲಕ್ಕಾಗಿ ಸಂಸದೀಯ ಕಾರ್ಯದರ್ಶಿಗಳಾಗಿ ನೇಮಿಸಲಾಗಿತ್ತು. ಅದಕ್ಕಾಗಿ ಅವರಿಗೆ ವಾಹನ, ಮನೆ ಸೇರಿದಂತೆ ಯಾವುದೇ ಸೌಲಭ್ಯಗಳನ್ನು ನೀಡಿರಲಿಲ್ಲ ಎಂದು ಸಿಸೋಡಿಯಾ ಪ್ರತಿಕ್ರಿಯಿಸಿದ್ದಾರೆ.

‘ಅವರಿಗೆ ಯಾವುದೇ ಸೌಲಭ್ಯಗಳನ್ನು ನೀಡದಿದ್ದರೂ ಹೇಗೆ ಲಾಭದಾಯಕ ಹುದ್ದೆಯಾಗುತ್ತದೆ? ಎಂದು ಅವರು ಪ್ರಶ್ನಿಸಿದ್ದು, ಕಳೆದ ಜೂನ್‌ 23ರಂದು ವಿಚಾರಣೆ ನಡೆದ ಬಳಿಕ ಈ ಕುರಿತು ವಿವರಣೆ ನೀಡಲು ಶಾಸಕರಿಗೆ ಕಾಲಾವಕಾಶ ನೀಡಿಲ್ಲ ಎಂದೂ ಆರೋಪಿಸಿದ್ದಾರೆ.

ಚುನಾವಣಾ ಆಯೋಗದ ಶಿಫಾರಸನ್ನು ವಿರೋಧಿಸಿ ಎಎಪಿಯ ಆರು ಶಾಸಕರು ಸೋಮವಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಗೆ ದೆಹಲಿ ಹೈಕೋರ್ಟ್‌ ದಿನಾಂಕ ನಿಗದಿಪಡಿಸಿದ ಬಳಿಕ ಈ ಪತ್ರ ಪ್ರಕಟವಾಗಿದೆ. ರಾಷ್ಟ್ರಪತಿ ಅಂಕಿತದ ಬಳಿಕ ಸರ್ಕಾರಕ್ಕೂ ಅಧಿಸೂಚನೆ ಹೊರಡಿಸಲಾಗಿದ್ದು, ಇದರ ವಿರುದ್ಧವೂ ಪಕ್ಷ ಮೇಲ್ಮನವಿ ಸಲ್ಲಿಸಲಿದೆ.

ಒಂದು ವೇಳೆ ನ್ಯಾಯಲಯದ ತೀರ್ಪು ಚುನಾವಣಾ ಆಯೋಗದ ನಿರ್ಧಾರ ಪರವಾಗಿದ್ದರೆ ದೆಹಲಿಯ 20 ಶಾಸಕ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry