ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಿಗರ ಕಾಫಿಯ ಲಂಡನ್‌ ಯಾತ್ರೆ...

Last Updated 22 ಜನವರಿ 2018, 19:30 IST
ಅಕ್ಷರ ಗಾತ್ರ

ನಿಸರ್ಗದ ಮಧ್ಯೆ ಬೆಳಗಿನ ಚುಮು ಚುಮು ಚಳಿಗೆ ಹಬೆಯಾಡುವ ಕಾಫಿ ಗುಟುಕರಿಸುವುದೇ ವಿಶಿಷ್ಟ ಅನುಭೂತಿ. ಇಡೀ ದಿನ ಚೈತನ್ಯದಾಯಕವಾಗಿಸುತ್ತದೆ. ಕಾಫಿ ಸ್ವಾದ ಅದನ್ನು ತಯಾರಿಸುವವರ ಕೈಚಳಕವನ್ನು ಅವಲಂಬಿಸಿದ್ದರೂ, ಕಾಫಿ ಬೀಜ ಬೆಳೆದು ಪಕ್ವಗೊಂಡ ರೀತಿಯೂ ಮುಖ್ಯ. ಸಾಮಾನ್ಯವಾಗಿ ಕಾಫಿ ತೋಟಗಳಲ್ಲಿ ರಸಗೊಬ್ಬರ ಮತ್ತು ಕೀಟನಾಶಕ ಬಳಸಿಯೇ ಬೆಳೆಯುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಜನಪ್ರಿಯಗೊಳ್ಳುತ್ತಿರುವ ‘ಟ್ರೈಬಲ್‌ ಕಾಫಿ’ ಇದಕ್ಕೆ ಅಪವಾದ.

ನಿಸರ್ಗದ ವೈವಿಧ್ಯ ಸಸ್ಯ ರಾಶಿಯ ನೆರಳಿನ ಮಧ್ಯೆ ಬೆಳೆಯುವ ಈ ಕಾಫಿಗೆ, ಪ್ರಾಣಿ–ಪಕ್ಷಿಗಳ ಭಾವನಾತ್ಮಕ ಸ್ಪರ್ಶ ಇದ್ದೇ ಇರುತ್ತದೆ. ರಾಸಾಯನಿಕಗಳ ಸೋಂಕು ಇರುವುದಿಲ್ಲ. ಹಾಗಾಗಿ ಇದರ ಸ್ವಾದದಲ್ಲೂ ನಿಸರ್ಗದ ಛಾಯೆ ಇದ್ದೇ ಇರುತ್ತದೆ.

ಆಂಧ್ರಪ್ರದೇಶದ ಪೂರ್ವಘಟ್ಟಗಳ ಸಾಲಿನಲ್ಲಿ ಬೆಳೆಯುವ ‘ಅರಕು ಕಾಫಿ’ ವಿಶ್ವದ ಹಲವು ರಾಷ್ಟ್ರಗಳಲ್ಲಿ ಜನಪ್ರಿಯ. ಇದು ಅತ್ಯಂತ ದುಬಾರಿಯೂ ಹೌದು. ನಮ್ಮದೇ ರಾಜ್ಯದ ಸೆರಗಿನಲ್ಲಿರುವ ಬಿಳಿಗಿರಿರಂಗನ ಬೆಟ್ಟದ ಆಸುಪಾಸಿನ ಬೆಟ್ಟಗಳು ಮತ್ತು ಹಾಡಿಗಳಲ್ಲಿ ಸೋಲಿಗರು ಕಾಫಿ ಬೆಳೆಯುತ್ತಿದ್ದಾರೆ. ಅವರು ಬೆಳೆಯುವ ಕಾಫಿಯತ್ತ ಈಗ ಸರ್ಕಾರದ ಕಣ್ಣು ಹೊರಳಿದೆ. ಅಂದಹಾಗೆ ಸೋಲಿಗರು ಬೆಳೆಯುವ ಕಾಫಿ ಗಿಡಗಳು ಹುಲಿಗಳು ಓಡಾಡುವ ಹುಲಿ ರಕ್ಷಿತಧಾಮದ ಸರಹದ್ದಿನಲ್ಲಿವೆ. ಅಂದ ಮೇಲೆ ವಿಶಿಷ್ಟ ಸ್ವಾದ ಇದ್ದೇ ಇರುತ್ತದೆ! ಈ ಕಾಫಿ ಇನ್ನು ಮುಂದೆ ಲಂಡನ್‌, ಪ್ಯಾರಿಸ್‌ಗೂ ಹಾರುತ್ತೆ.

ಬಿಳಿಗಿರಿರಂಗನ ಬೆಟ್ಟದ ವ್ಯಾಪ್ತಿಯ ಯಳಂದೂರು, ಕೊಳ್ಳೆಗಾಲ ಮತ್ತು ಚಾಮರಾಜನಗರ ತಾಲ್ಲೂಕುಗಳಲ್ಲಿ ಸೋಲಿಗರು ಕಾಫಿ ಬೆಳೆಯುತ್ತಿದ್ದಾರೆ. ಕಾಡು ಉತ್ಪನ್ನಗಳನ್ನು ಸಂಗ್ರಹಿಸಿ ಮಾರುತ್ತಿದ್ದ ಇವರಿಗೆ ತಮ್ಮ ಹಾಡಿಗಳ ಹತ್ತಿರದಲ್ಲೇ ಇರುವ ಬಿರ್ಲಾ ಕಾಫಿ ಎಸ್ಟೇಟ್‌ ಸಹಜವಾಗಿ ಗಮನ ಸೆಳೆದಿತ್ತು. ಅಲ್ಲಿ ಕೆಲವರು ಕೂಲಿಯನ್ನೂ ಮಾಡುತ್ತಿದ್ದರು. ತಾವೂ ಕಾಫಿ ಬೆಳೆಯಬೇಕೆಂಬ ಆಸೆ ಮೊಳೆಯಿತು. ಹೀಗೆ ಮೊಳೆತ ಆಸೆ ಕನಸಾಗಿಯೇ ಉಳಿಯಲಿಲ್ಲ. 20– 25 ವರ್ಷಗಳ ಹಿಂದೆ ಅದು ಸಾಕಾರಗೊಂಡಿತು ಎಂದು ನೆನಪಿಸಿಕೊಳ್ಳುತ್ತಾರೆ ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಸಂಚಾಲಕ ಸಿ.ಮಾದಪ್ಪ.

ಕಾಫಿ ಬೆಳೆಯಬೇಕೆಂಬ ಸೋಲಿಗರ ಕನಸಿಗೆ ಬೆಂಬಲವಾಗಿ ನಿಂತಿದ್ದು ಅರಣ್ಯ ಇಲಾಖೆ ಹಾಗೂ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ. ಅವರಿಗೆ ಮೊದಲು ಕಾಫಿ ಬೆಳೆಯಲು ತರಬೇತಿ ಕೊಡಿಸಲಾಯಿತು. ಅಗತ್ಯ ಹಣಕಾಸಿನ ನೆರವನ್ನೂ ನೀಡಲಾಯಿತು. ಸೋಲಿಗರು ತಮ್ಮ ಹಾಡಿಗಳಲ್ಲೇ ಕಾಫಿ ಬೆಳೆಯಲು ಆರಂಭಿಸಿದರು. ಕೀಟನಾಶಕಗಳನ್ನಾಗಲಿ, ರಸಗೊಬ್ಬರವನ್ನಾಗಲೀ ಸೋಕಿಸದೆ ಸೊಪ್ಪು ಮತ್ತು ಎಲೆ ಗೊಬ್ಬರವನ್ನು ಮಾತ್ರ ಬಳಸುವ ಪರಿಪಾಠ ಆರಂಭಿಸಿದರು. ಈಗ ಸುಮಾರು 650 ಸೋಲಿಗ ಕುಟುಂಬಗಳು ಕಾಫಿ ಬೆಳೆಯುತ್ತಿವೆ. ‘ಸಾಂಪ್ರದಾಯಿಕವಾಗಿ ಬೆಳೆಯುವ ಕಾಫಿಗೂ, ನಾವು ಬೆಳೆಯುವ ಕಾಫಿಗೂ ವ್ಯತ್ಯಾಸವಿದೆ. ನಮ್ಮದು ಇಳುವರಿ ಕಡಿಮೆ. ಬೆಲೆಯೂ ಕಡಿಮೆ’ ಎನ್ನುತ್ತಾರೆ ಮಾದಪ್ಪ.

ಆಂಧ್ರದಲ್ಲಿ ಬುಡಕಟ್ಟು ಜನರು ಕಾಫಿ ಬೆಳೆಯುವ ವಿಚಾರಗೊತ್ತಿದೆ. ಆದರೆ, ಅದು ವಿದೇಶಗಳಿಗೆ ರಫ್ತಾಗುವ ಮತ್ತು ಅತಿ ಹೆಚ್ಚು ಬೆಲೆಗೆ ಮಾರಾಟವಾಗುವ ಸಂಗತಿ ಗೊತ್ತಿಲ್ಲ. ನಮ್ಮನ್ನೂ ಒಮ್ಮೆ ಅಲ್ಲಿಗೆ ಕರೆದುಕೊಂಡು ಹೋಗುವುದಾಗಿ ಸರ್ಕಾರ ಹೇಳಿದೆ. ಟ್ರೈಬಲ್‌ ಕಾಫಿ ಬೆಳೆಯುವುದಕ್ಕೆ ಪ್ರೋತ್ಸಾಹಕ್ಕಾಗಿ ₹9 ಕೋಟಿ ನೀಡುವುದಾಗಿ ಸಮಾಜ ಕಲ್ಯಾಣ ಸಚಿವ ಆಂಜನೇಯ ಹೇಳಿದ್ದಾರೆ. ಅದರಿಂದ ಕಾಫಿ ಮಧ್ಯೆ ಕಿತ್ತಳೆ ಮತ್ತು ಕಾಳು ಮೆಣಸು ಬೆಳೆಯಲು ಸಾಧ್ಯ ಎಂದು ಅವರು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಟ್ರೈಬಲ್‌ ಕಾಫಿಯ ವಿಶೇಷವೇನು?

ಇದನ್ನು ಸಾವಯವ ಕಾಫಿ ಎಂದೂ ಕರೆಯಲಾಗುತ್ತದೆ. ಸರಳವಾಗಿ ಹೇಳುವುದಾದರೆ ನೈಸರ್ಗಿಕವಾಗಿ ಬೆಳೆಯಲಾಗುತ್ತದೆ. ದಟ್ಟ ಕಾಡಿನಲ್ಲಿರುವ ಮರಗಳ ನೆರಳಿನಲ್ಲಿ ಬೆಳೆಯುತ್ತವೆ. ಇಲ್ಲಿ ಕಾಡು ಸಸ್ಯಗಳು, ಕಾಡು ಪ್ರಾಣಿಗಳು ಮತ್ತು ಇತರ ಬಗೆಯ ಜೀವಿಗಳ ಜೀವನದ ಕಾರಣ ಮಣ್ಣಿನ ಫಲವತ್ತತೆಯಲ್ಲಿ ಸುಸ್ಥಿರವಿರುತ್ತದೆ. ಪ್ರಾದೇಶಿಕ ಹವಾಗುಣದ ಅನನ್ಯತೆಯೂ ಇದಕ್ಕೆ ಸಿಗುತ್ತದೆ. ಕಾಡಿನಲ್ಲೇ ಬೆಳೆಯುವುದರಿಂದ ಹವಾಮಾನ ವೈಪರೀತ್ಯಕ್ಕೆ ತುತ್ತಾಗುವ ಸಾಧ್ಯತೆ ತೀರಾ ಕಡಿಮೆ. ಬುಡಕಟ್ಟು ಜನರ ಆರ್ಥಿಕ ಸಬಲೀಕರಣಕ್ಕೆ ಇದೊಂದು ಉತ್ತಮ ಮಾರ್ಗ ಎಂಬ ಚಿಂತನೆ ಇತ್ತೀಚಿನ ದಿನಗಳಲ್ಲಿ ಬಲಿಯುತ್ತಿದೆ.

ಸಾಂಪ್ರದಾಯಿಕವಾಗಿ ಬೆಳೆಯುತ್ತಿರುವ ಕಾಫಿ ಹೈಬ್ರೀಡ್‌ ತಳಿಗಳದ್ದಾಗಿವೆ. ಇವು ಅತಿ ಹೆಚ್ಚು ಬಿಸಿಲನ್ನು ಬೇಡುತ್ತವೆ. ಕಾಫಿ ಸಸ್ಯಗಳು ನೆರಳಿನಲ್ಲಿ ಬೆಳೆಯುವುದಕ್ಕೆ ಬಯಸುವುದು ಮೂಲಗುಣ. ಹೈಬ್ರೀಡ್‌ ತಳಿಗಳು ಇದಕ್ಕೆ ವ್ಯತಿರಿಕ್ತ. ಆದರೆ, ದಟ್ಟಕಾಡಿನಲ್ಲಿ ಕಾಫಿ ಬೆಳೆಯುವುದು ಮತ್ತು ಅದರ ಕೊಯ್ಲು ಅಷ್ಟು ಸುಲಭದ ಕೆಲಸವಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಅಲ್ಲಿಗೆ ಹೋಗಿ ಕಾಫಿ ಗಿಡ ನೆಟ್ಟು ಬೆಳೆಸುವುದೂ ಕಷ್ಟ.  ಸೂರ್ಯನ ಬೆಳಕು ಹೆಚ್ಚು ಪಡೆದು ಅತಿ ಬೇಗನೆ ಬೆಳೆಯುವ ಮತ್ತು ಇಳುವರಿ ಪಡೆಯುವ ತಳಿ ಕಾಫಿ ಬೆಳೆಯಲು ವ್ಯಾಪಕ ಪ್ರಮಾಣದಲ್ಲಿ ಕಾಡು, ಸಸ್ಯ ಸಂಕುಲ ಮತ್ತು ಸೂಕ್ಷ್ಮ ಜೀವಿ ಸಂಕುಲವನ್ನು ನಾಶ ಮಾಡಲಾಗುತ್ತಿದೆ. ಎಷ್ಟೋ ಅಪರೂಪದ ಜೀವಿಗಳು ತಮ್ಮ ನೆಲೆಯನ್ನು ಕಳೆದುಕೊಳ್ಳುತ್ತಿವೆ. ಅತಿಯಾದ ಕೀಟ ನಾಶಕ ಮತ್ತು ರಸಗೊಬ್ಬರ ಬಳಕೆಯಿಂದ ಪರಿಸರವೆಲ್ಲ ವಿಷಮಯವಾಗುತ್ತಿದೆ. ಅದಕ್ಕೆ ಪರ್ಯಾಯ ಮತ್ತು ಸುರಕ್ಷಿತ ಮಾದರಿಯಾಗಿ ಟ್ರೈಬಲ್‌ ಕಾಫಿ ವ್ಯವಸಾಯ ನಮ್ಮ ಮುಂದಿದೆ. ಆದರೆ, ಕಾಡಿನಲ್ಲೇ ವಾಸಿಸುವ ಬುಡಕಟ್ಟು ಜನ ಇದನ್ನು ಮಾಡಬಹುದು ಎಂಬುದು ಆಂಧ್ರದಲ್ಲಿ ಸಾಬೀತಾಗಿದೆ. ಸೋಲಿಗರು ಆ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ಲಂಡನ್‌, ಪ್ಯಾರಿಸ್‌ಗೂ ಸೋಲಿಗರ ಕಾಫಿ: ಸೋಲಿಗರು ಬೆಳೆಯುವ ಟ್ರೈಬಲ್‌ ಕಾಫಿಯತ್ತ ಕೃಪಾ ದೃಷ್ಟಿ ಬೀರಿರುವ ಕಾಫಿ ಮಂಡಳಿ ಮತ್ತು ಸಮಾಜ ಕಲ್ಯಾಣ ಇಲಾಖೆ ಇದನ್ನು ಪ್ರೀಮಿಯಂ ಕಾಫಿಯಾಗಿ ಲಂಡನ್‌ ಮತ್ತು ಪ್ಯಾರಿಸ್‌ಗಳಲ್ಲಿ ಮಾರಾಟವಾಗುವಂತೆ ಬ್ರ್ಯಾಂಡಿಂಗ್‌ ಮಾಡಲಿವೆ. ಇದಕ್ಕಾಗಿ ₹ 2.05 ಕೋಟಿ ಬ್ರ್ಯಾಂಡಿಂಗ್‌ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಬೆಂಗಳೂರಿನಲ್ಲಿ 2018 ರ ಅಂತರರಾಷ್ಟ್ರೀಯ ಕಾಫಿ ಉತ್ಸವದಲ್ಲಿ ಒಪ್ಪಂದ ಮಾಡಿಕೊಂಡಿವೆ. ವಿದೇಶಗಳಲ್ಲಿ ರಾಸಾಯನಿಕ ಸೋಂಕು ಇಲ್ಲದ ಶುದ್ಧ ಕಾಫಿಗೆ ವಿಪರೀತ ಬೇಡಿಕೆ. ಸೋಲಿಗರ ಆರಾಧ್ಯ ದೈವ ಬಿಳಿಗಿರಿ ರಂಗನ ಕೃಪೆಯಾದರೆ, ಸೋಲಿಗರ ಬಾಳಿನಲ್ಲಿ ಕಾಫಿ ಹೊಂಬೆಳಕು ಮೂಡಿಸುವುದರಲ್ಲಿ ಸಂದೇಹವೇ ಇಲ್ಲ.
***
ಇಳುವರಿ ಕಮ್ಮಿ, ದರ ಜಾಸ್ತಿ

ಸಾವಯವ ವಿಧಾನದಲ್ಲಿ ಬೆಳೆಯುವ ಕಾಫಿಯ ಇಳುವರಿ ಕಡಿಮೆ, ಆದರೆ ಬೆಲೆ ಜಾಸ್ತಿ. ಸಾಂಪ್ರದಾಯಿಕ ವಿಧಾನದಲ್ಲಿ ಒಂದು ಎಕರೆಗೆ 800 ಕೆ.ಜಿ ಕಾಫಿ ಬೆಳೆಯಬಹುದು. ಆದರೆ, ಸಾವಯವ ವಿಧಾನದಲ್ಲಿ ಒಂದು ಎಕರೆಗೆ 100 ರಿಂದ 120 ಕೆ.ಜಿ ಮಾತ್ರ ಇಳುವರಿ ಸಿಗುತ್ತದೆ.

ವಾಹ್ ಎಂದಿದ್ದ ಮೋದಿ!

ಒಮ್ಮೆ ಪ್ರಧಾನಿ ನರೇಂದ್ರ ಮೋದಿ ಬುಡಕಟ್ಟು ಜನ ಬೆಳೆದ ಅರಕು ಕಾಫಿ ಕುಡಿದು ಸಿಕ್ಕಾಪಟ್ಟೆ ಖುಷಿಪಟ್ಟಿದ್ದರು. ‘ವಾಹ್’ ಎಂಬ ಉದ್ಘಾರ ತೆಗೆದಿದ್ದರು. ಚಿಕೋರಿ ಬೆರೆಸದೇ ಮಾಡಿದ ಸ್ವಾದದ ಕಾಫಿ ಅದಾಗಿತ್ತು. ಅರಕುಕಾಫಿ ಸಂಪೂರ್ಣ ಯುರೋಪ್‌ಗೆ ರಫ್ತಾಗುತ್ತಿದೆ. ಅಮೆಜಾನ್‌, ಇಬೇ, ಸ್ನಾಪ್‌ಡೀಲ್‌ಗಳಲ್ಲಿ ಈ ಕಾಫಿ ಪುಡಿ ಮಾರಾಟ ಆಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT