ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೇನ್ನೊಣಗಳ ಸಂಗೀತ...

Last Updated 22 ಜನವರಿ 2018, 19:30 IST
ಅಕ್ಷರ ಗಾತ್ರ

ಹಾಸನ ಜಿಲ್ಲೆ ರಾಮನಾಥಪುರ ಹೋಬಳಿಯ ರುದ್ರಪಟ್ಟಣ ಕಾವೇರಿ ತೀರದ ಒಂದು ಹಳ್ಳಿ. ಭತ್ತ, ತೆಂಗಿನ ತೋಟಗಳ ನಡುವೆ ಅಡಗಿ ಕುಳಿತಿರುವ ಈ ಹಳ್ಳಿ ಕಾವೇರಿಯ ಸ್ಪರ್ಶದಿಂದ ಹಸಿರಿನಿಂದ ಕಂಗೊಳಿಸುತ್ತಿದೆ.

ಕಾವೇರಿಯ ಜುಳುಜುಳು ನಿನಾದದಿಂದಲೋ, ಗದ್ದೆತೋಟಗಳಲ್ಲಿ ಉಲಿವ ಹಕ್ಕಿಗಳ ಇಂಚರದಿಂದಲೋ ಈ ಊರು ಅನೇಕ ಶ್ರೇಷ್ಠ ಸಂಗೀತಗಾರರನ್ನು ಸೃಷ್ಟಿಸಿದೆ. ಒಂದು ಸಾವಿರ ವರ್ಷಗಳಷ್ಟು ಪುರಾತನವಾದ ಶ್ರೀ ಚನ್ನಕೇಶವ ದೇಗುಲ ಸಹ ಈ ಊರಿನಲ್ಲಿದ್ದು ವೇದ-ನಾದದ ಪೋಷಣೆಗೆ ಸಹಕಾರಿಯಾಗಿದೆ. ಊರಿನ ಹೆಸರನ್ನು ಜಾಗತಿಕವಾಗಿ ಗುರುತಿಸುವಂತಾಗಿದೆ.

ರುದ್ರಪಟ್ಟಣ ಅನೇಕ ಖ್ಯಾತ ಕರ್ನಾಟಕ ಶಾಸ್ತ್ರೀಯ ಸಂಗೀತಗಾರರನ್ನು ಸಮಾಜಕ್ಕೆ ಪರಿಚಯಿಸಿದೆ. ರುದ್ರಪಟ್ಟಣ ಸಹೋದರರೆಂದು ಖ್ಯಾತರಾದ ಆರ್.ಎನ್. ತ್ಯಾಗರಾಜನ್, ಆರ್.ಎನ್.ತಾರಾನಾಥನ್ ಒಳಗೊಂಡಂತೆ ಆರ್.ಕೆ.ಶ್ರೀಕಂಠನ್, ಆರ್.ಕೆ.ಪದ್ಮನಾಭ, ಆರ್.ಕೆ.ಸೂರ್ಯನಾರಾಯಣ, ಆರ್.ಎನ್.ಶ್ರೀಲತಾ, ರತ್ನಮಾಲಾ ಪ್ರಕಾಶ್, ವೀಣೆ ರಂಗಾಶಾಸ್ತ್ರೀ, ವೀಣೆ ತಿಮ್ಮಪ್ಪ, ವೀಣೆ ಶಾಮಣ್ಣ ಹೀಗೆ ರುದ್ರಪಟ್ಟಣದ ಕೀರ್ತಿಪತಾಕೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿದ ಶಾಸ್ತ್ರೀಯ ಸಂಗೀತಗಾರರ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಬಹುಶಃ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಅತಿ ಹೆಚ್ಚು ಕಲಾವಿದರನ್ನು ನೀಡಿದ ಗ್ರಾಮವೆಂದರೆ ಇದೇ ಇರಬೇಕು. ಸಂಗೀತಕಾರ ಮೊದಲ ಅಕ್ಷರ ‘ಆರ್’ ದಿಂದ ಆರಂಭವಾದರೆ ರುದ್ರಪಟ್ಟಣವೇ ಇವರ ಹುಟ್ಟೂರು ಎಂಬ ತೀರ್ಮಾನಕ್ಕೆ ಬರುವಷ್ಟು ಈ ಪುಟ್ಟಗ್ರಾಮ ಹೆಸರುವಾಸಿಯಾಗಿದೆ!

ರುದ್ರಪಟ್ಟಣದ ಹೆಸರು ಇತ್ತೀಚೆಗೆ ಹೆಚ್ಚು ಪ್ರಚಲಿತವಾಗಿದ್ದು ಇಲ್ಲಿನ ಸಂಗೀತ ಮಂದಿರದಿಂದ. ಇದರ ವಿಶಿಷ್ಟ ಹಾಗೂ ವಿಭಿನ್ನ ವಾಸ್ತುಶೈಲಿಯಿಂದ. ಸಂಗೀತ ವಿದ್ವಾನ್ ಆರ್.ಕೆ.ಪದ್ಮನಾಭ ಅವರ ಪ್ರಯತ್ನದ ಫಲವಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತ ದಿಗ್ಗಜರನ್ನು ಆರಾಧಿಸುವ ಸಲುವಾಗಿ ಸಂಗೀತದ ಘಮಲನ್ನು ತನ್ನ ಮಣ್ಣಿನಲ್ಲಿ ಅಡಗಿಸಿಕೊಂಡ ಈ ಊರಿನಲ್ಲಿ ಸಪ್ತಸ್ವರ ದೇವತಾ ಧ್ಯಾನಮಂದಿರ ನಿರ್ಮಿಸಲಾಗಿದ್ದು ಇದು 64 ಅಡಿ ಎತ್ತರವಿದೆ. ಹೊರ ವಿನ್ಯಾಸ ತಂಬೂರಿ ಆಕಾರದಲ್ಲಿದ್ದು ವಿಶಿಷ್ಟವಾಗಿದೆ. ವಿವಿಧ ಆಲಂಕಾರಿಕ ಸಸ್ಯ ಹಾಗೂ ಹೂಗಿಡಗಳ ಮಧ್ಯೆ ತಂಬೂರಿ ಆಕಾರದಲ್ಲಿ ಮೈತಳೆದಿರುವ ಈ ವಾಸ್ತು ವಿನ್ಯಾಸ ಸಂಗೀತ ಪ್ರೇಮಿಗಳನ್ನಷ್ಟೇ ಅಲ್ಲದೆ ಜನಸಾಮಾನ್ಯರನ್ನೂ ತನ್ನತ್ತ ಸೆಳೆದು ಕರ್ನಾಟಕ ಸಂಗೀತದ ಮಹತ್ವ ಹಾಗೂ ಈ ಊರಿನ ವಿದ್ವಾಂಸರ ಪರಿಚಯ ಮಾಡಿಕೊಡುವಲ್ಲಿ ಸಹಕಾರಿಯಾಗಿದೆ.

ಈ ಸಪ್ತಸ್ವರ ದೇವತಾ ಧ್ಯಾನ ಮಂದಿರ ಒಳಭಾಗವೂ ವಿಶಾಲವಾಗಿದ್ದು ಕರ್ನಾಟಕ ಶಾಸ್ತ್ರೀಯ ಸಂಗೀತ ಕಂಡ ಶ್ರೇಷ್ಠ ಸಂಗೀತಗಾರರಾದ ಪುರಂದರದಾಸರು,ಕನಕದಾಸರು, ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು ಮೊದಲಾದವರ ವಿಗ್ರಹಗಳಿದ್ದು ನಡುವಿನಲ್ಲಿ ಸರಸ್ವತಿ ವಿಗ್ರಹವಿದೆ. ಪ್ರತಿವರ್ಷವೂ ಮೇ ತಿಂಗಳಲ್ಲಿ ಇಲ್ಲಿ ಸಂಗೀತ ಸಮ್ಮೇಳನ ನಡೆಸುತ್ತಾ ಬಂದಿದ್ದು ದೇಶದ ಪ್ರಖ್ಯಾತ ಸಂಗೀತಗಾರರು ಕಛೇರಿ ನೀಡಿದ್ದಾರೆ. ಸಾವಿರಾರು ಸಂಗೀತಪ್ರಿಯರು ಈ ವೇಳೆಯಲ್ಲಿ ಈ ಪುಟ್ಟಗ್ರಾಮಕ್ಕೆ ಧಾವಿಸುತ್ತಾರೆ. ಸಂಗೀತ ಸಮ್ಮೇಳನದ ವೇಳೆಯಲ್ಲಿ ಇಲ್ಲಿ ಎಲ್ಲೆಲ್ಲೂ ಸಂಗೀತವೇ. ಜೊತೆಗೆ ದೇವತಾರಾಧನೆ. ಕಾವೇರಿ ತೀರದ ಸೌಂದರ್ಯಾರಾಧನೆಗೂ ಇಲ್ಲಿ ಬರುವ ಕಲಾಪ್ರೇಮಿಗಳಿಗೆ ಅವಕಾಶವಿದೆ.

ನೀವು ಈ ಸಪ್ತಸ್ವರ ಸಂಗೀತ ಮಂದಿರಕ್ಕೆ ಎಂದಾದರೂ ಭೇಟಿ ನೀಡಿ, ಸದಾ ಸಂಗೀತದ ಗುನುಗನ್ನು ಆಸ್ವಾದಿಸುವ ಅವಕಾಶವಿದೆ. ಅದು ಹೇಗೆಂದು ಅಚ್ಚರಿಯಾಗುತ್ತಿದೆಯೇ? ಈ ಸಂಗೀತ ಮಂದಿರದ ಅಂಗಳದಲ್ಲಿ ನಿಶ್ಶಬ್ದರಾಗಿ ನಿಂತು ಗಮನವಿಟ್ಟು ಆಲಿಸಿ. ಎಲ್ಲೋ ಯಾರೋ ತಂತಿ ಮೀಟಿದಂತೆ, ಎಲ್ಲೋ ಝೇಂಕರಿಸಿದಂತೆ ಕೇಳಿಬರುತ್ತಿದೆಯಲ್ಲವೇ? ಈ ಸಪ್ತಸ್ವರ ಮಂದಿರದ ಗೋಪುರವನ್ನು ಒಮ್ಮೆ ನೋಡಿ. ಗೋಪುರದ ಹಂತಹಂತದಲ್ಲೂ ಜೇನುಗೂಡು. ಒಂದಲ್ಲ, ಎರಡಲ್ಲ ಗೋಪುರದ ಸುತ್ತಿ ಬಂದರೆ ಕನಿಷ್ಠ ಮೂವತ್ತು ಗೂಡುಗಳನ್ನು ಕಾಣಬಹುದು. ಈ ಸಪ್ತಸ್ವರ ಮಂದಿರದ ಜಗಲಿಯ ಆಧಾರ ಸ್ತಂಭಗಳಿಂದ ಆರಂಭವಾಗಿ ಗೋಪುರದ ಪ್ರತಿ ಹಂತದಲ್ಲೂ ಜೇನ್ನೊಣಗಳ ಝೇಂಕಾರ ಕೇಳಿ ಬರುತ್ತದೆ. ಈ ಸಪ್ತಸ್ವರ ಮಂದಿರದ ಗೋಪುರದ ಪ್ರತಿ ಹಂತದಲ್ಲೂ ವೀಣೆ, ಮೃದಂಗ, ತಬಲ, ಪಿಟೀಲು, ತಂಬೂರಿ ಹೀಗೆ ವಿವಿಧ ಸಂಗೀತ ವಾದ್ಯಗಳನ್ನು ನುಡಿಸುತ್ತಿರುವ ಶಿಲ್ಪಗಳಿವೆ; ಕಿಟಕಿಗಳಿವೆ. ಇಲ್ಲಿ ಕೆಲವೆಡೆ ಜೇನುಗೂಡುಗಳು ಶಿಲ್ಪಗಳನ್ನು ಮರೆಮಾಚಿವೆ. ಜೇನುನೊಣಗಳ ಧಾಟಿ ಶಹನಾಯಿಯ ಸ್ವರದಂತೆ, ವೀಣೆ ನುಡಿದಂತೆ, ತಂಬೂರಿ ಮೀಟಿದಂತೆ ಭಾಸವಾಗುತ್ತದೆ. ಈ ಸಂಗೀತ ಶಿಲ್ಪಗಳಿಗೆ ಜೀವ ಬಂದು ವಾದ್ಯ ಗೋಷ್ಠಿ ಆರಂಭಿಸಿವೆಯೇನೂ ಎಂದೆನ್ನಿಸದಿರದು! ಇಲ್ಲಿ ನಿತ್ಯವೂ ಜೇನ್ನೊಣಗಳ ಸಂಗೀತ ಮೇಳ!

ಪ್ರಶಾಂತ ವಾತಾವರಣ, ಬಗೆಬಗೆ ಹೂಗಳ ಉದ್ಯಾನವನ ಜೇನ್ನೊಣಗಳು ಗೂಡು ಕಟ್ಟಲು ಸಹಕಾರಿಯಾಗಿದೆ. ಇಲ್ಲಿ ಇಷ್ಟೊಂದು ಜೇನುಗೂಡುಗಳು ನಿರ್ಮಾಣ ಆಗಿರುವುದು ಸಾಮಾನ್ಯ ಸಂಗತಿಯೇನಲ್ಲ. ಸಾಮಾನ್ಯವಾಗಿ ಹೆಜ್ಜೇನುಗಳು ಕನಿಷ್ಠ ಮೂವತ್ತು ಅಡಿ ಎತ್ತರದ ಮರ ಅಥವಾ ಕಟ್ಟಡಗಳ ಮೇಲೆ ಗೂಡು ಕಟ್ಟುತ್ತವೆ. ಇಂದು ನಗರಗಳಲ್ಲಿ ನೀರಿನ ಟ್ಯಾಂಕುಗಳ ಮೇಲೆ ಅಥವಾ ಎತ್ತರದ ಕಟ್ಟಡಗಳಲ್ಲಿ ಜೇನುಗೂಡು ಕಾಣುವುದು ಅಪರೂಪವಾಗುತ್ತಿದೆ. ಇದಕ್ಕೆ ಕಾರಣ ಮೊಬೈಲ್ ಫೋನಿನ ತರಂಗಗಳು ಎನ್ನಲಾಗುತ್ತಿದೆ.

‘ಇಲ್ಲಿ ಮೊಬೈಲ್ ತರಂಗಗಳ ಪ್ರತಿಕೂಲ ಪರಿಣಾಮ ಅಷ್ಟಿರದಿದ್ದರೂ ಜೇನುಗೂಡು ನಿರ್ಮಿಸಲು ಅಗತ್ಯ ವಾದ ಮರಗಳು ಇತ್ತೀಚೆಗೆ ಕಾಣೆಯಾಗುತ್ತಿವೆ. ಎಲ್ಲೆಡೆಯೂ ರಸ್ತೆ ಅಗಲೀಕರಣದಿಂದ ಎತ್ತರದ ಹಳೆಯ ಮರಗಳು, ಗಣಿಗಾರಿಕೆ ಯಿಂದ ದೊಡ್ಡಬಂಡೆಗಳು ಕಣ್ಮರೆ ಆಗುತ್ತಿರುವು ದರಿಂದ ಜೇನುಗಳಿಗೆ ಇಂತಹ ಸ್ಥಳಗಳೇ ಅಪ್ಯಾಯಮಾನವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT