ಬೆಳ್ಳಿ ಪರದೆಯಲ್ಲಿ ಹಿತೇಶ್ ಕಮಾಲ್‌

7

ಬೆಳ್ಳಿ ಪರದೆಯಲ್ಲಿ ಹಿತೇಶ್ ಕಮಾಲ್‌

Published:
Updated:
ಬೆಳ್ಳಿ ಪರದೆಯಲ್ಲಿ ಹಿತೇಶ್ ಕಮಾಲ್‌

ಕಿರುತೆರೆಯಲ್ಲಿ ವಿಭಿನ್ನ ಅಭಿನಯದ ಮೂಲಕ ಕನ್ನಡ ಜನತೆಯ ಮನೆ ಮಾತಾಗಿದ್ದ ಬೆಳ್ತಂಗಡಿ ಹಿತೇಶ್ ಕುಮಾರ್ ಕಾಪಿನಡ್ಕ ಇದೀಗ ಬೆಳ್ಳಿ ಪರದೆಯ ಮೇಲೆ ಮಿಂಚಲು ರೆಡಿಯಾಗಿದ್ದಾರೆ.

ಕನ್ನಡದ ಮನೆ ಮನಗಳನ್ನು ಗೆದ್ದ ’ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋ ಕಲಾವಿದರು ಸೇರಿಕೊಂಡು ನಿರ್ಮಿಸಿರುವ ‘ಜಂತರ್ ಮಂತರ್’ ಹಾಸ್ಯ ಚಿತ್ರದಲ್ಲಿ ಹಿತೇಶ್ ಸಹ ನಾಯಕ ನಟನಾಗಿ ಸ್ಯಾಂಡಲ್‌ವುಡ್‌ಗೆ  ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಸದ್ದಿಲ್ಲದೆಯೇ ಪೂರ್ಣಗೊಂಡಿದ್ದು, ಫೆಬ್ರುವರಿ 2ರಂದು ಚಿತ್ರ ತೆರೆಗೆ ಬರಲಿದೆ. ಇನ್ನೂ ಚಿತ್ರಕ್ಕೆ ನಿರ್ದೇಶಕ ಗೋವಿಂದೇಗೌಡ ಆ್ಯಕ್ಷನ್ ಕಟ್ ಹೇಳಿದ್ದು, ಶಿವಸುಂದರ್ ಎಲ್. ಮತ್ತು ಬಿ.ನಾಗರಾಜ್ ಡಿ.ಸಾಲುಂಡಿ ಬಂಡವಾಳ ಹೂಡಿದ್ದಾರೆ.

ಕಾಮಿಡಿ ಕಿಲಾಡಿಗಳು ಮತ್ತು ಕಿಲಾಡಿ ಕುಟುಂಬ ರಿಯಾಲಿಟಿ ಶೋ ಮೂಲಕ ಎಲ್ಲರ ಮನ ಗೆದ್ದಿದ್ದ ಹಿತೇಶ್ ಕುಮಾರ್‌ ಕಾಪಿನಡ್ಕ ‘ಪ್ಯಾಕು ಪ್ಯಾಕು’ ಡೈಲಾಗ್ ಮೂಲಕ ಗಮನ ಸೆಳೆದಿದ್ದರು. ಇದೀಗ ಇವರು ಏಕಕಾಲದಲ್ಲಿ ಸ್ಯಾಂಡಲ್‌ವುಡ್ ಮತ್ತು ಕೋಸ್ಟಲ್‌ವುಡ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಜಂತರ್ ಮಂತರ್’ ಚಿತ್ರದಲ್ಲಿ ಹಿತೇಶ್‌ಗೆ ಜೋಡಿಯಾಗಿ ಸಂಭ್ರಮ ಅವರು ಅಭಿನಯಿಸಿದ್ದು ಇವರಿಬ್ಬರು ರೊಮ್ಯಾಂಟಿಕ್ ಹಾಡಿಗೆ ಹಾಕಿದ ಹೆಜ್ಜೆಗಳು ಎಲ್ಲರ ಮನಸ್ಸನ್ನು ಬೆಚ್ಚಗಾಗಿಸಿವೆ.

ಚಿತ್ರ ಪೂರ್ಣವಾದ ಕಾಮಿಡಿ ಪ್ಯಾಕೇಜ್ ಆಗಿದ್ದು ಇದರಲ್ಲಿ ಶಿವರಾಜ್ ಕೆ.ಆರ್.ಪೇಟೆ, ದಿವ್ಯಾಶ್ರೀ, ಮಂಜು ಬಸಯ್ಯ, ನಯನಾ, ಆನಂದ್, ಶೋಭರಾಜ್ ಹಾಗೂ ವಿ.ಮನೋಹರ್ ಅವರು ಬಣ್ಣ ಹಚ್ಚಿದ್ದಾರೆ. ಇನ್ನೂ ಒಂದು ಹಾಡಿಗೆ ನಟ ಜಗ್ಗೇಶ್ ರೆಟ್ರೋ ಮಾದರಿಯಲ್ಲಿ ಧ್ವನಿಯಾಗಿದ್ದು ಇದಕ್ಕೆ ಮಾಸ್ಟರ್ ಆನಂದ್- ನಯನಾ ಹೆಜ್ಜೆ ಹಾಕಿರುವುದು ವಿಶೇಷವಾಗಿದೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ರಾಕಿ ಸೋನು ಸಂಗೀತ ನೀಡಿ ಮೂರು ಗೀತೆಗೆ ದನಿಯಾಗಿದ್ದಾರೆ. ಸಹ ನಿರ್ಮಾಪಕರಾಗಿ ಮಹೇಶ್, ರಾಜು, ಅನಂತ್ ಅವರು ಕೈಜೋಡಿಸಿದ್ದಾರೆ. ಮುರುಳಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ.

‘ಜಂತರ್ ಮಂತರ್ ಚಿತ್ರ ಕಾಮಿಡಿ ಜತೆಗೆ ಉತ್ತಮ ಸಂದೇಶವನ್ನು ನೀಡುತ್ತದೆ. ಚಿತ್ರದ ಚಿತ್ರೀಕರಣ ಮೈಸೂರು, ಮಂಡ್ಯ, ಪಾಂಡವಪುರದಲ್ಲಿ ನಡೆದಿದ್ದು ಉತ್ತಮವಾಗಿ ಮೂಡಿಬಂದಿದೆ. ರಿಯಾಲಿಟಿ ಶೋನ ಸ್ನೇಹಿತರ ಬಳಗ ಸೇರಿಕೊಂಡು ಚಿತ್ರವನ್ನು ನಿರ್ಮಿಸಿದ್ದರಿಂದ ಎಲ್ಲ ರೀತಿಯಲ್ಲೂ ಅನುಕೂಲವಾಯಿತು.  ಚಿತ್ರೀಕರಣದ ವೇಳೆ ಹಲವಾರು ವಿಚಾರಗಳನ್ನು ಕಲಿತುಕೊಳ್ಳುವ ಅವಕಾಶ ಸಿಕ್ಕಿತು. ಇದೀಗ ಜಂತರ್ ಮಂತರ್ ಬಿಡುಗಡೆಗೆ ಸಿದ್ಧವಾಗಿದ್ದು, ಕೋಸ್ಟಲ್‌ವುಡ್‌ನಲ್ಲಿ ಎರಡು ಚಿತ್ರಗಳ ಚಿತ್ರೀಕರಣ ನಡೆಯುತ್ತಿದೆ’ ಎನ್ನುತ್ತಾರೆ ಹಿತೇಶ್.

‘ತುಳುವಿನಲ್ಲಿ ‘ಅಪ್ಪೆ ಟೀಚರ್’ ಚಿತ್ರದ ಕಾಮಿಡಿ ಪಾತ್ರಕ್ಕೆ ಬಣ್ಣ ಹಚ್ಚಿದ್ದು ತುಂಬ ಖುಷಿ ನೀಡಿದೆ. ಮೂಡಬಿದ್ರೆ ಕಿಶೋರ್ ಅವರು ಅಪ್ಪೆ ಟೀಚರ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಕೋಸ್ಟಲ್‌ವುಡ್‌ನ ದಿಗ್ಗಜರ ಜತೆ ತೆರೆಯನ್ನು ಹಂಚಿಕೊಂಡಿದ್ದೇನೆ. ಇದೊಂದು ಕಾಮಿಡಿ ಜತೆಗೆ ಸೆಂಟಿಮೆಂಟ್ ಇರುವ ಚಿತ್ರವಾಗಿದೆ. ಹಾಗೆಯೇ ‘ಮೈ ನೇಮ್‌ ಈಸ್‌ ಅಣ್ಣಪ್ಪ’ಎನ್ನುವ ತುಳು ಚಿತ್ರದಲ್ಲಿಯು ಅಭಿನಯಿಸುತ್ತಿದ್ದು ಚಿತ್ರೀಕರಣದ ಹಂತದಲ್ಲಿದೆ’ ಎನ್ನುತ್ತಾರೆ ಹಿತೇಶ್.

ಈಗಾಗಲೇ ಕಿರುತೆರೆಯಲ್ಲಿ ಕನ್ನಡಿಗರ ಮನಸ್ಸನ್ನು ಗೆದ್ದ ಕರಾವಳಿಯ ಪ್ರತಿಭೆ ಹಿತೇಶ್ ಇದೀಗ ಸ್ಯಾಂಡಲ್ ವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry