ಮಾಸಾಂತ್ಯಕ್ಕೆ ಸಿದ್ಧತಾ ಕಾರ್ಯ ಪೂರ್ಣ

7

ಮಾಸಾಂತ್ಯಕ್ಕೆ ಸಿದ್ಧತಾ ಕಾರ್ಯ ಪೂರ್ಣ

Published:
Updated:
ಮಾಸಾಂತ್ಯಕ್ಕೆ ಸಿದ್ಧತಾ ಕಾರ್ಯ ಪೂರ್ಣ

ಶ್ರವಣಬೆಳಗೊಳ: ಮುಂದಿನ ತಿಂಗಳು 7ರಿಂದ ಆರಂಭಗೊಳ್ಳುವ ಬಾಹುಬಲಿ ಮಹಾಮಸ್ತಕಾಭಿಷೇಕದ ಸಿದ್ದತಾ ಕಾರ್ಯಗಳು ಮಾಸಾಂತ್ಯಕ್ಕೆ ಪೂರ್ಣಗೊಳ್ಳಲಿವೆ.

ಅಟ್ಟಣಿಗೆ, ಉಪ ನಗರಗಳ ನಿರ್ಮಾಣ, ರಸ್ತೆ ಅಭಿವೃದ್ಧಿ ಕಾರ್ಯಗಳು ಬಹುತೇಕ ಮುಗಿಯುವ ಹಂತಕ್ಕೆ ಬಂದಿವೆ. ಫೆ. 7ರಿಂದ ಬೆಟ್ಟದ ಕೆಳಗೆ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವಗಳು ನಡೆಯಲಿದ್ದು, ಫೆ. 17ರಿಂದ ಬೆಟ್ಟದ ಮೇಲೆ ಅಭಿಷೇಕ ಆರಂಭಗೊಳ್ಳಲಿದೆ.

ಅಂದಾಜು 30ರಿಂದ 35 ಲಕ್ಷ ಜನರು ಭೇಟಿ ನೀಡುವ ಸಾಧ್ಯತೆ ಇದೆ ಎಂದು ಜೈನ ಮಠದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಸೋಮವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯ ಸರ್ಕಾರದ ₹ 175 ಕೋಟಿ ಅನುದಾನದಲ್ಲಿ ಭಕ್ತರಿಗೆ ಮೂಲ ಸೌಕರ್ಯ ಹಾಗೂ ₹ 89 ಕೋಟಿ ವೆಚ್ಚದಲ್ಲಿ ಶ್ರವಣಬೆಳಗೊಳ ಸಂಪರ್ಕಿಸುವ ರಸ್ತೆಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಭಕ್ತರ ಅನುಕೂಲಕ್ಕಾಗಿ 200 ಬಸ್‌ ಹಾಗೂ 23 ವಿಶೇಷ ರೈಲುಗಳ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ.

ಜರ್ಮನ್‌ ತಂತ್ರಜ್ಞಾನದ ಅಟ್ಟಣಿಗೆ ನಿರ್ಮಿಸಲಾಗಿದ್ದು, ಶೀಘ್ರದಲ್ಲಿಯೇ ಮೂರು ಲಿಫ್ಟ್‌ ಅಳವಡಿಸಲಾಗುವುದು. 8 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಕೆ ಮತ್ತು 400 ವೈದ್ಯರನ್ನು ನಿಯೋಜಿಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.

35 ಎಕರೆ ಪ್ರದೇಶದಲ್ಲಿ ಪ್ರಾಕೃತ ವಿಶ್ವವಿದ್ಯಾಲಯ ನಿರ್ಮಿಸಲು ರಾಜ್ಯ ಸರ್ಕಾರ ₹ 20 ಕೋಟಿ ಅನುದಾನ ನಿಗದಿ ಮಾಡಿದ್ದು, ಟೆಂಡರ್‌ ಪ್ರಕ್ರಿಯೆ ಆರಂಭಗೊಂಡಿದೆ. ಯುಜಿಸಿ ನಿಯಮ ಪ್ರಕಾರ ಹಾಸ್ಟೆಲ್‌, ಗ್ರಂಥಾಲಯ ಹಾಗೂ ಇತರೆ ಮೂಲ ಸೌಲಭ್ಯ ಕಲ್ಪಿಸಲಾಗುವುದು ಎಂದು ವಿವರಿಸಿದರು.

2006ರಲ್ಲಿ ಕೇಂದ್ರ ಸರ್ಕಾರ ₹ 90 ಕೋಟಿ, ರಾಜ್ಯ ಸರ್ಕಾರ ₹ 30 ಕೋಟಿ ಅನುದಾನ ನೀಡಿತ್ತು. ಈ ಬಾರಿ ಕೇಂದ್ರಕ್ಕೆ ಮೂರು ಪತ್ರ ಬರೆದರೂ ಅನುದಾನ ಬಿಡುಗಡೆ ಮಾಡಿಲ್ಲ. ₹ 18 ಕೋಟಿ ಸರಕು ಮತ್ತು ಸೇವಾ ತೆರಿಗೆಗೆ ಹೋಗಿದೆ ಎಂದರು.

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಕ್ಷೇತ್ರದಲ್ಲಿ ಕೈಗೊಂಡಿರುವ ಕಾಮಗಾರಿಗಳು ತೃಪ್ತಿ ತಂದಿದೆ. ಈಗಾಗಲೇ 175 ಮುನಿಗಳು, ಮಾತಾಜಿಗಳು ಪಾದಯಾತ್ರೆಯಲ್ಲಿ ಬಂದಿದ್ದು, ಇನ್ನು 100 ಮುನಿಗಳು ಬರುವ ನಿರೀಕ್ಷೆ ಇದೆ. ಕಳೆದ ಬಾರಿ 50 ಲಕ್ಷ ಭಕ್ತರು ಭೇಟಿ ನೀಡಿದ್ದರು. ದಸರಾ ಮಹೋತ್ಸವ 10 ದಿನವಾದರೆ, ಮಹಾಮಸ್ತಕಾಭಿಷೇಕ 20 ದಿನ ನಡೆಯಲಿದೆ.

ಫೆ. 17ರಂದು 108 ಕಳಶಗಳ ಅಭಿಷೇಕ, 18ರಿಂದ 25ರ ವರೆಗೆ 1008 ಕಳಶಗಳಿಂದ ಅಭಿಷೇಕ ನಡೆಯಲಿದೆ. ಕಳೆದ ಬಾರಿ ಕಳಶ ಹರಾಜಿನಿಂದ ಬಂದ ಹಣದಿಂದ ಬಾಹುಬಲಿ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ಈ ಬಾರಿ ಶಿಕ್ಷಣ, ಆರೋಗ್ಯ ಸೇವೆಗೆ ಬಳಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಮಹೋತ್ಸವದ ವಿಶೇಷಾಧಿಕಾರಿ ಬಿ.ಎನ್‌.ವರಪ್ರಸಾದ್‌ ರೆಡ್ಡಿ ಮಾತನಾಡಿ, ಬೆಟ್ಟದ ಮೇಲೆ ನಡೆಯುವ ಕಾರ್ಯಕ್ರಮದ ನೇರ ಪ್ರಸಾರಕ್ಕೆ ಎಲ್ಲಾ ಸಿದ್ಧತೆ ಆಗಿದೆ. ಜನರನ್ನು ಕರೆತರಲು 60 ಮಿನಿ ಬಸ್‌ ಸಂಚರಿಸಲಿವೆ ಎಂದರು.

*

ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರಪತಿ ಪಾಲ್ಗೊಳ್ಳುತ್ತಿರುವ ಬಗ್ಗೆ ಜಿಲ್ಲಾಡಳಿತಕ್ಕೆ ಈವರೆಗೂ ಅಧಿಕೃತ ಮಾಹಿತಿ ಬಂದಿಲ್ಲ.

- ಎ.ಮಂಜು, ಜಿಲ್ಲಾ ಉಸ್ತುವಾರಿ ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry