ಮುಖ್ಯಮಂತ್ರಿ ವಿರುದ್ಧ ಅಸಮಾಧಾನ: ಹೈಕಮಾಂಡ್‌ಗೆ ದೂರು

7

ಮುಖ್ಯಮಂತ್ರಿ ವಿರುದ್ಧ ಅಸಮಾಧಾನ: ಹೈಕಮಾಂಡ್‌ಗೆ ದೂರು

Published:
Updated:
ಮುಖ್ಯಮಂತ್ರಿ ವಿರುದ್ಧ ಅಸಮಾಧಾನ: ಹೈಕಮಾಂಡ್‌ಗೆ ದೂರು

ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಮ್ಮನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿರುವುದು ರಾಜ್ಯದ ಹಿರಿಯ ಕಾಂಗ್ರೆಸ್‌ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.

ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ, ಲೋಕಸಭೆ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಂಸದ ಕೆ.ಎಚ್‌. ಮುನಿಯಪ್ಪ ಸೇರಿದಂತೆ ಕೆಲವು ನಾಯಕರು ಮುಖ್ಯಮಂತ್ರಿ ನಡೆಗೆ ಅತೃಪ್ತಿ ವ್ಯಕ್ತಪಡಿಸಿದ್ದು, ಕೆಲವರು ಪಕ್ಷದ ಹೈಕಮಾಂಡ್‌ಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

ರಾಜ್ಯದಾದ್ಯಂತ ಸಿದ್ದರಾಮಯ್ಯ ಸಮೀಕ್ಷೆಯೊಂದನ್ನು ನಡೆಸುತ್ತಿದ್ದಾರೆ. ಈ ಸಮೀಕ್ಷೆಯಲ್ಲಿ, ‘ಮುಖ್ಯಮಂತ್ರಿ ಹುದ್ದೆಗೆ ನಿಮ್ಮ ಇಷ್ಟದ ಆಯ್ಕೆ ಯಾರು?’ ಎಂಬ ಪ್ರಶ್ನೆ ಕೇಳಲಾಗಿದೆ. ಅದರಲ್ಲಿ ಸಿದ್ದರಾಮಯ್ಯ (ಕಾಂಗ್ರೆಸ್‌), ಬಿ.ಎಸ್‌. ಯಡಿಯೂರಪ್ಪ (ಬಿಜೆಪಿ) ಮತ್ತು ಎಚ್‌.ಡಿ. ಕುಮಾರಸ್ವಾಮಿ (ಜೆಡಿಎಸ್‌) ಈ ಮೂವರು ಹೆಸರು ಮಾತ್ರ ಇದೆ.

ಸರ್ಕಾರದ ನಾಲ್ಕು ವರ್ಷಗಳ ಸಾಧನೆಗಳನ್ನು ಪರಿಚಯಿಸಲು ಮಾಧ್ಯಮಗಳಿಗೆ ನೀಡಿರುವ ಜಾಹೀರಾತುಗಳಲ್ಲಿ ‘ನವಕರ್ನಾಟಕ ನಿರ್ಮಾಣಕ್ಕೆ ಸದಾ ಸಿದ್ಧ ಸರ್ಕಾರ’ ಎಂಬ ಘೋಷಣೆ ಬಳಸಿರುವುದಕ್ಕೂ ಪಕ್ಷದ ವಲಯದಲ್ಲಿ ವಿರೋಧ ವ್ಯಕ್ತವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ‘ಸಿದ್ದ’ ಪದ ಬಳಕೆ ಮಾಡಲಾಗಿದೆ ಎಂದೂ ಕೆಲವು ನಾಯಕರು ಅಪಸ್ವರ ಎತ್ತಿದ್ದಾರೆ.

‘ಮುಖ್ಯಮಂತ್ರಿ ಅಭ್ಯರ್ಥಿ ಎಂದು ಸಿದ್ದರಾಮಯ್ಯ ತಮ್ಮನ್ನು ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ, ಪಕ್ಷದ ಹೈಕಮಾಂಡ್‌ ಇದನ್ನು ನಿರಾಕರಿಸಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಪಕ್ಷ ಮುಂದಿನ ಚುನಾವಣೆ ಎದುರಿಸಲಿದೆ. ಮತ್ತೆ ಅಧಿಕಾರಕ್ಕೆ ಬಂದರೆ, ಮುಖ್ಯಮಂತ್ರಿಯನ್ನು ಶಾಸಕಾಂಗ ಪಕ್ಷ ಆಯ್ಕೆ ಮಾಡಲಿದೆ ಎಂದು ಈಗಾಗಲೇ ಹೈಕಮಾಂಡ್‌ ಸ್ಪಷ್ಟಪಡಿಸಿದೆ’ ಎಂದೂ ಪಕ್ಷದ ಮೂಲಗಳು ತಿಳಿಸಿವೆ.

ಅಲ್ಲದೆ, ‘ಚುನಾವಣೆ ಬಳಿಕವೂ ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದೇನೆ’ ಎಂದು ಸಿದ್ದರಾಮಯ್ಯ ಕೆಲವು ತಿಂಗಳುಗಳ ಹಿಂದೆ ನೀಡಿದ್ದ ಹೇಳಿಕೆಗೂ ಪಕ್ಷದ ಕೆಲವು ಹಿರಿಯ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು.

‘ದೆಹಲಿಯಲ್ಲಿ ರಾಹುಲ್‌ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಪಕ್ಷದ ನಾಯಕರ ಸಭೆಯಲ್ಲಿ ಈ ವಿಷಯ ಪ್ರಸ್ತಾವಗೊಂಡಿದೆ. ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಬಗ್ಗೆ ಮಾತನಾಡುವುದಾಗಿ ರಾಹುಲ್‌ ಭರವಸೆ ನೀಡಿದ್ದಾರೆ’ ಎಂದೂ ಮೂಲಗಳು ಹೇಳಿವೆ.

ಮುಖ್ಯಮಂತ್ರಿ ವಿರುದ್ಧ ರಮೇಶ್‌ ಆಕ್ರೋಶ: ತಮ್ಮ ಆಪ್ತ, ಲೋಕೋಪಯೋಗಿ ಸಚಿವ ಎಚ್‌.ಸಿ. ಮಹದೇವಪ್ಪ ಅವರನ್ನು ಸಿ.ವಿ. ರಾಮನ್‌ ನಗರದ (ಎಸ್‌.ಸಿ ಮೀಸಲು) ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿಂಬಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪಕ್ಷದಿಂದ ಸ್ಥಳೀಯ ಟಿಕೆಟ್‌ ಆಕಾಂಕ್ಷಿಯಾಗಿರುವ ಪಿ. ರಮೇಶ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಸ್ಥಳೀಯ ಸಮಸ್ಯೆಗಳ ಅರಿವು ಇರುವವರು ಅಭ್ಯರ್ಥಿಯಾಗಬೇಕು ಎಂದು ಕ್ಷೇತ್ರದ ಜನ ಬಯಸುತ್ತಾರೆ. ಹೀಗಾಗಿ, ಹೊರಗಿನ ಅಭ್ಯರ್ಥಿಯನ್ನು ಇಲ್ಲಿನವರು ಬೆಂಬಲಿಸಲ್ಲ’ ಎಂದರು. 2013 ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ವಿರುದ್ಧ 8,000 ಮತಗಳ ಅಂತರದಿಂದ ಈ ಕ್ಷೇತ್ರದಲ್ಲಿ ಪರಾಭವಗೊಂಡಿದ್ದ ರಮೇಶ್‌, ಭಾನುವಾರ ನಡೆದ ಸಾಧನಾ ಸಮಾವೇಶದಿಂದ ದೂರ ಉಳಿದಿದ್ದರು.

‘ಮುಖ್ಯಮಂತ್ರಿಗಳು ಬರುತ್ತಾರೆ, ಹೋಗುತ್ತಾರೆ. ಆದರೆ ಪಕ್ಷ ಮುಖ್ಯ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷ ನನ್ನನ್ನು ಕಡೆಗಣಿಸಲ್ಲ ಎಂಬ ವಿಶ್ವಾಸವಿದೆ’ ಎಂದರು.

‘ನವಕರ್ನಾಟಕ ಯಾತ್ರೆ ಮೂಲಕ ತೆರಿಗೆದಾರರ ಹಣವನ್ನು ಮುಖ್ಯಮಂತ್ರಿ ದುರ್ಬಳಕೆ ಮಾಡುತ್ತಿದ್ದಾರೆ. ಹೀಗಾಗಿ ನಾನು ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ’ ಎಂದೂ ರಮೇಶ್‌ ಆಕ್ರೋಶ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry