ರೈತ, ಕೂಲಿ, ಮೆಕ್ಯಾನಿಕ್ ಮಕ್ಕಳಿಗೆ ಬಂಗಾರದ ಗರಿ

7
ಅಕ್ಕಮಹಾದೇವಿ ಮಹಿಳಾ ವಿ.ವಿ. 9ನೇ ಘಟಿಕೋತ್ಸವ

ರೈತ, ಕೂಲಿ, ಮೆಕ್ಯಾನಿಕ್ ಮಕ್ಕಳಿಗೆ ಬಂಗಾರದ ಗರಿ

Published:
Updated:
ರೈತ, ಕೂಲಿ, ಮೆಕ್ಯಾನಿಕ್ ಮಕ್ಕಳಿಗೆ ಬಂಗಾರದ ಗರಿ

ವಿಜಯಪುರ: ‘ಅವ್ವ ಕೂಲಿ ಮಾಡಿ ಕಲಿಸಿದ್ದು ಸಾರ್ಥಕವಾಯ್ತು....’ ಹೀಗೆ ಹೇಳಿ ಗದ್ಗದಿತರಾದರು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕುಂಚನೂರಿನ ದಲಿತ ಯುವತಿ ತಾಯವ್ವ ಮಾಂಗ. ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 9ನೇ ಘಟಿಕೋತ್ಸವದಲ್ಲಿ ಕನ್ನಡ ಅಧ್ಯಯನ ವಿಭಾಗದಲ್ಲಿ ಮೂರು ಚಿನ್ನದ ಪದಕ ಪಡೆದ ತಾಯವ್ವ ಅವರ ಮನದಾಳದ ಮಾತಿದು.

‘ನನಗೆ ಅವ್ವನ ಆಸರೆಯೇ ಎಲ್ಲ. ಚಿಕ್ಕಪ್ಪ ಓದಿಗೆ ನೆರವಾದರು. ನಮ್ಮ ಕುಟುಂಬದಲ್ಲಿ ಹೆಚ್ಚು ಕಲಿತವರಿಲ್ಲ. ಅಣ್ಣ– ತಂಗಿ ಓದಲೇ ಇಲ್ಲ. ಸಾಧನೆ ಹೆಮ್ಮೆ ಎನಿಸಿದೆ. ಮುಂದೆ ಪಿಎಚ್‌.ಡಿ ಮಾಡಿ, ಅಧ್ಯಾಪಕಿಯಾಗಬೇಕೆಂಬ ಆಸೆ ಇದೆ’ ಎಂದು ‘ಪ್ರಜಾವಾಣಿ’ ಜತೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

‘ಪಿಯುಸಿ ಮುಗಿದ ಬಳಿಕ ಪದವಿಗೆ ಹೋಗುವಾಸೆ. ಆದರೆ ಮನೆಯಲ್ಲಿ ಹೆಣ್ಮಕ್ಕಳು ಓದೋದ್ಯಾಕೆ ಎಂಬ ಅಪಸ್ವರ. ಅಪ್ಪ–ಅವ್ವಂಗೂ ಇಷ್ಟವಿರಲಿಲ್ಲ. ಕಾಲೇಜಿಗೆ ಕಳಿಸೋದು ಬ್ಯಾಡ ಎಂದೇ ನಿರ್ಧರಿಸಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಹಠ ಹಿಡಿದೆ. ನನ್ನ ಬಿಗಿಪಟ್ಟಿಗೆ ಸೋತ ಅಪ್ಪ ಊರಿನಲ್ಲಿನ ಪದವಿ ಕಾಲೇಜಿಗೆ ಸೇರಿಸಿದರು. ಉತ್ತಮ ಅಂಕ ಗಳಿಸಿದೆ. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಜತೆಗೆ ಮೂರು ಚಿನ್ನದ ಪದಕ ಪಡೆದೆ’ ಎಂದು ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಕೊಕಟನೂರಿನ ಕನ್ಯಾಕುಮಾರಿ ಪೂಜಾರಿ ಹೇಳುತ್ತಾರೆ.

‘ನನ್ನ ಈ ಸಾಧನೆ ಕುಟುಂಬದ ಸಂತಸವನ್ನು ಇಮ್ಮಡಿಗೊಳಿಸಿದೆ. ಏಳು ಬೀಳುಗಳ ರೈತಾಪಿ ಜೀವನದಲ್ಲೇ ನನ್ನ ವ್ಯಾಸಂಗಕ್ಕೆ ಅಡ್ಡಿಯಾಗದಂತೆ ಪೋಷಕರು ನೋಡಿಕೊಂಡಿದ್ದಾರೆ. ಇನ್ನೂ ಉನ್ನತ ಅಧ್ಯಯನ ನಡೆಸು ಎಂದು ಪ್ರೋತ್ಸಾಹಿಸುತ್ತಿದ್ದಾರೆ. ಪಿಎಚ್‌.ಡಿ ಪದವಿಯತ್ತ ನನ್ನ ಗಮನ ಕೇಂದ್ರೀಕರಿಸುವೆ’ ಎಂದರು ಕನ್ಯಾಕುಮಾರಿ.

‘ನಮ್ಮಪ್ಪ– ಅಮ್ಮಂಗೆ ನಾವಿಬ್ಬರೇ ಹೆಣ್ಣು ಮಕ್ಕಳು. ನಿತ್ಯ ಬಟ್ಟೆ ಇಸ್ತ್ರಿ ಮಾಡಿ ಬದುಕು ಸಾಗಿಸುವ ಜತೆ ನನಗೆ ಉನ್ನತ ಶಿಕ್ಷಣ ಕೊಡಿಸಿದ್ದಾರೆ. ನನ್ನ ತಂಗಿಯೂ ಓದು ಬಿಟ್ಟು, ಕೆಲಸ ಮಾಡುತ್ತಿದ್ದಾಳೆ. ಇದೀಗ ನಾನು ಎಂ.ಕಾಂ.ನಲ್ಲಿ ಮೂರು ಚಿನ್ನದ ಪದಕ ಪಡೆದಿರುವೆ. ನನಗೆ ಹೆಚ್ಚಿನ ಆಸೆಯಿಲ್ಲ. ನಮಗಾಗಿ ಕಷ್ಟಪಟ್ಟಿರುವ ತಂದೆ– ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬುದೊಂದೇ ಬದುಕಿನ ಗುರಿ. ಇದಕ್ಕಾಗಿ ಈಗಾಗಲೇ ಬ್ಯಾಂಕಿಂಗ್‌ ಪರೀಕ್ಷೆ ತೆಗೆದುಕೊಂಡಿರುವೆ. ಕೆಲಸ ಗಿಟ್ಟಿಸಿಕೊಂಡು ಅಪ್ಪನ ಹೊರೆ ಇಳಿಸುವ ಕನಸು ನನ್ನದು’ ಎನ್ನುತ್ತಾರೆ ಮಂಡ್ಯದ ಎಸ್.ಬಿಂದು.

‘ಅಪ್ಪ– ಅಮ್ಮ ಪ್ರಾಥಮಿಕ ಶಾಲಾ ಶಿಕ್ಷಕರು. ನನ್ನದು ಡಿ.ಇಡಿ, ಟಿಇಟಿ ಆಗಿದೆ. ಆದರೆ ಸಿಇಟಿ ಕರೆಯದಿದ್ದರಿಂದ ಪದವಿಗೆ ಸೇರಿದೆ. ನಂತರ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದೆ. ಅದರಲ್ಲೂ ಮೂರು ಚಿನ್ನದ ಪದಕದೊಂದಿಗೆ. ಶಿಕ್ಷಕಳಾಗುವ ಕನಸು ಇದೀಗ ಬದಲಾಗಿದೆ. ಸಮಾಜ ಸೇವೆಗಾಗಿ ಐಎಎಸ್‌ ಅಧಿಕಾರಿಯಾಗಬೇಕು ಎಂಬ ಆಸೆ ಚಿಗುರಿದೆ. ಅದಕ್ಕಾಗಿ ಈಗಾಗಲೇ ತರಬೇತಿಯನ್ನೂ ಪಡೆಯುತ್ತಿರುವೆ’ ಎಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಪ್ರಿಯಾ ಬೋಳಣ್ಣವರ ತಮ್ಮ ಕನಸು ಬಿಚ್ಚಿಟ್ಟರು.

ಅದೃಷ್ಟವಂತೆ...!

‘ನಾ ಅದೃಷ್ಟವಂತೆ. ಮುಸ್ಲಿಮರಲ್ಲಿ ಉನ್ನತ ಶಿಕ್ಷಣ ಪಡೆದ ಬೆರಳೆಣಿಕೆ ಮಂದಿಯಲ್ಲಿ ನಾನೂ ಒಬ್ಬಳು ಎಂಬುದೇ ಹೆಮ್ಮೆ. ನಮ್ಮಪ್ಪ ಹೆಚ್ಚು ಓದಿದವರೂ ಅಲ್ಲ, ಸ್ಥಿತಿವಂತರೂ ಅಲ್ಲ. ಅವರೊಬ್ಬ ಮೆಕ್ಯಾನಿಕ್‌. ನಿತ್ಯದ ದುಡಿಮೆಯಲ್ಲಿ ಬದುಕು ಸಾಗಿಸುವವರು...’

ಎಂಪಿ.ಇಡಿಯಲ್ಲಿ ಮೂರು ಚಿನ್ನದ ಪದಕ ಪಡೆದಿರುವ ಬೆಳಗಾವಿಯ ಫರೀನಾ ಶೇಖ್‌ ಅವರ ಮನದಾಳದ ಮಾತು.

‘ಹಲವು ಸಂಕಷ್ಟಗಳ ನಡುವೆ ನನ್ನನ್ನು ಓದಿಸಿದ್ದಾರೆ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರಕಿದೆ. ನನ್ನಂತೆ ಎಲ್ಲ ಹೆಣ್ಮಕ್ಕಳು ಉನ್ನತ ವ್ಯಾಸಂಗದ ಅಧ್ಯಯನಕ್ಕೆ ಬರಬೇಕು. ನಮ್ಮಲ್ಲಿ ಶಿಕ್ಷಣ ಎಂಬುದೇ ಗಗನಕುಸುಮವಾಗಿದೆ’ ಎಂದು ಹೇಳಿದರು.

*

ನಮ್ಮ ಕುಟುಂಬದಲ್ಲಿ ಹೆಚ್ಚು ಓದಿ, ಕೀರ್ತಿ ತಂದವಳು ತಾಯವ್ವ. ಕೂಲಿ ಮಾಡಿ ಓದಿಸಿದ್ದಕ್ಕೂ ಸಾರ್ಥಕವಾಯ್ತು. ಎಲ್ಲವೂ ಅವಳೇ

–ಹನುಮವ್ವ, ತಾಯವ್ವ ಮಾಂಗ ತಾಯಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry