‘ಐಟಿ ದಾಳಿ ವೇಳೆ ಸಿಕ್ಕ ₹8.85 ಕೋಟಿ ಅಭಯ ಪಾಟೀಲಗೆ ಸೇರಿದ್ದು’

7

‘ಐಟಿ ದಾಳಿ ವೇಳೆ ಸಿಕ್ಕ ₹8.85 ಕೋಟಿ ಅಭಯ ಪಾಟೀಲಗೆ ಸೇರಿದ್ದು’

Published:
Updated:

ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಬೋರಗಾಂವನ ಅರಿಹಂತ ಕ್ರೆಡಿಟ್‌ ಸೌಹಾರ್ದ ಸಹಕಾರಿ ಬ್ಯಾಂಕಿನಲ್ಲಿ ಪತ್ತೆಯಾದ ₹8.85 ಕೋಟಿ ನಗದು ಬಿಜೆಪಿಯ ಮಾಜಿ ಶಾಸಕ ಅಭಯ ಪಾಟೀಲ ಅವರಿಗೆ ಸೇರಿದ್ದು ಎಂದು ಆದಾಯ ತೆರಿಗೆ (ಮೇಲ್ಮನವಿ) ಆಯುಕ್ತ ಬಿ.ವೆಂಕಟೇಶ್ವರ ರಾವ್‌ ತಿಳಿಸಿದ್ದಾರೆ.

ಅಕ್ರಮ ವಹಿವಾಟಿನ ಸುಳಿವಿನ ಮೇಲೆ ಆದಾಯ ತೆರಿಗೆ ಅಧಿಕಾರಿಗಳು 2012ರಲ್ಲಿ ಈ ಬ್ಯಾಂಕ್‌ ಮೇಲೆ ದಾಳಿ ನಡೆಸಿದ್ದರು. ಆ ಸಂದರ್ಭದಲ್ಲಿ ಬೇನಾಮಿ ಹೆಸರುಗಳಲ್ಲಿ ಠೇವಣಿ ಇಟ್ಟಿರುವುದು ಪತ್ತೆಯಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ಆಯುಕ್ತರು, ನವೆಂಬರ್‌ 1ರಂದು ಆದೇಶ ಹೊರಡಿಸಿದ್ದಾರೆ. ಆದೇಶದ ಪ್ರತಿ ಸೋಮವಾರ ‘ಪ್ರಜಾವಾಣಿ’ಗೆ ಸಿಕ್ಕಿದೆ.

ಈ ಹಣ ತಮ್ಮದಲ್ಲ ಎಂದು ಅಭಯ ಪಾಟೀಲ ನೀಡಿದ್ದ ಹೇಳಿಕೆಯನ್ನು ಆಯುಕ್ತರು ತಳ್ಳಿಹಾಕಿದ್ದಾರೆ. ಬ್ಯಾಂಕಿನ ಸಹಾಯಕ ಪ್ರಧಾನ ವ್ಯವಸ್ಥಾಪಕ ಎಸ್‌.ಕೆ. ತೆರದಾಳೆ ಅವರ ಹೇಳಿಕೆ ಹಾಗೂ ಸಾಂದರ್ಭಿಕ ಸಾಕ್ಷ್ಯಾಧಾರಗಳ ಮೇಲೆ ಈ ಹಣ ಪಾಟೀಲ ಅವರಿಗೆ ಸೇರಿದ್ದು ಎಂದು ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.

ದಾಳಿ ವೇಳೆ ಸಿಕ್ಕ ಡೈರಿಯಲ್ಲಿ ಕೂಡ ಪಾಟೀಲ ಹೆಸರು ಇತ್ತು. ಅದರಲ್ಲಿ ಠೇವಣಿ ವಿವರಗಳು ಇದ್ದವು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

₹3.95 ಕೋಟಿ ದಂಡ:‘ಅಭಯ ಪಾಟೀಲರಿಗೇ ಈ ಹಣ ಸೇರಿದ್ದು‘ ಎಂದು 2014ರಲ್ಲಿ ಬೆಳಗಾವಿಯ ಆದಾಯ ತೆರಿಗೆ ಇಲಾಖೆ ವೃತ್ತ– 1ರ ಸಹಾಯಕ ಆಯುಕ್ತ ಬಿ.ಕೆ ಪ್ರಸನ್ನ ಕುಮಾರ ಆದೇಶ ಹೊರಡಿಸಿದ್ದರು. ಅಲ್ಲದೆ, ₹3.95 ಕೋಟಿ ದಂಡ ವಿಧಿಸಿದ್ದರು. ಇದರ ವಿರುದ್ಧ ಪಾಟೀಲ ಮೇಲ್ಮನವಿ ಸಲ್ಲಿಸಿದ್ದರು.

ನನ್ನದಲ್ಲ: ‘ದಾಳಿ ವೇಳೆ ಸಿಕ್ಕ ಹಣ ನನ್ನದಲ್ಲ. ವಿಚಾರಣೆ ವೇಳೆ ಇದನ್ನೇ ಹೇಳಿದ್ದೇನೆ. ಈಗಲೂ ಇದೇ ನನ್ನ ವಾದ. ಆಯುಕ್ತರ ಆದೇಶವನ್ನು ಗೋವಾದಲ್ಲಿರುವ ಆದಾಯ ತೆರಿಗೆ ಇಲಾಖೆಯ ನ್ಯಾಯಮಂಡಳಿಯಲ್ಲಿ ಪ್ರಶ್ನಿಸುತ್ತೇನೆ’ ಎಂದು ಅಭಯ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ಕ್ರಮಕ್ಕೆ ಒತ್ತಾಯ

‘ಬ್ಯಾಂಕಿನಲ್ಲಿ ಸಿಕ್ಕ ಹಣ ಅಭಯ ಪಾಟೀಲಗೆ ಸೇರಿದ್ದು ಎನ್ನುವುದು ಖಚಿತವಾದಂತಾಗಿದೆ. ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ, ಲೋಕಾಯುಕ್ತಕ್ಕೆ ಆಸ್ತಿ ವಿವರ ನೀಡುವ ಸಂದರ್ಭದಲ್ಲಿ ಈ ಮಾಹಿತಿಯನ್ನು ಅವರು ಕೊಟ್ಟಿಲ್ಲ. ಇದು ಕೂಡ ಅಪರಾಧವೇ. ಇದರ ವಿರುದ್ಧ ಚುನಾವಣಾ ಆಯೋಗ ಕ್ರಮಕೈಗೊಳ್ಳಬೇಕು’ ಎಂದು ಸಾಮಾಜಿಕ ಹೋರಾಟಗಾರ ಸುಜಿತ್‌ ಮುಳಗುಂದ ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry