ಮಹದಾಯಿ ವಿವಾದ: ‘ನಿಲುವು ಸ್ಪಷ್ಟಪಡಿಸದಿದ್ದರೆ ರಾಹುಲ್‌ಗೆ ಬಂದ್‌ ಬಿಸಿ’

7
ಫೆ.4ರ ಬೆಂಗಳೂರು ಬಂದ್‌ ಹಿಂದೆ ಮುಖ್ಯಮಂತ್ರಿ ಕೈವಾಡ– ಬಿಜೆಪಿ ಆರೋಪ

ಮಹದಾಯಿ ವಿವಾದ: ‘ನಿಲುವು ಸ್ಪಷ್ಟಪಡಿಸದಿದ್ದರೆ ರಾಹುಲ್‌ಗೆ ಬಂದ್‌ ಬಿಸಿ’

Published:
Updated:
ಮಹದಾಯಿ ವಿವಾದ: ‘ನಿಲುವು ಸ್ಪಷ್ಟಪಡಿಸದಿದ್ದರೆ ರಾಹುಲ್‌ಗೆ ಬಂದ್‌ ಬಿಸಿ’

ಹುಬ್ಬಳ್ಳಿ: ‘ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಏಕೆ ಮೌನವಾಗಿದ್ದಾರೆ? ಅವರ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಿ ರಾಜ್ಯಕ್ಕೆ ಬರಬೇಕು. ಇಲ್ಲದಿದ್ದರೆ, ಪ್ರತಿಭಟನೆ, ಬಂದ್‌ ಬಿಸಿ ಎದುರಿಸಬೇಕಾಗುತ್ತದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಸೋಮವಾರ ಇಲ್ಲಿ ಎಚ್ಚರಿಸಿದರು.

‘ಮಹದಾಯಿ ವಿಷಯದಲ್ಲಿ ಮೊದಲಿನಿಂದಲೂ ಕಾಂಗ್ರೆಸ್‌ ಕುತಂತ್ರ ರಾಜಕಾರಣ ಮಾಡಿಕೊಂಡೇ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬರುತ್ತಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ನಡುಕ ಉಂಟಾಗಿದೆ. ಹೀಗಾಗಿಯೇ ಫೆ.4ರಂದು ಬೆಂಗಳೂರು ಬಂದ್ ಮಾಡಿಸುವ ಕೆಲಸಕ್ಕೆ ಕೈಹಾಕಿದ್ದಾರೆ. ಇದರ ಹಿಂದೆ ಮುಖ್ಯಮಂತ್ರಿಯ ನೇರ ಕೈವಾಡ ಇದೆ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ಗೋವಾ ಮುಖ್ಯಮಂತ್ರಿ ಮನೋಹರ ಪರ‍್ರೀಕರ್‌ ಅವರನ್ನು ಮಾತುಕತೆಗೆ ಒಪ್ಪಿಸುವ ಕೆಲಸ ಮಾಡಿದ್ದೆವು. ಆದರೆ, ಗೋವಾ ಕಾಂಗ್ರೆಸ್‌ ಮುಖಂಡರೊಂದಿಗೆ ಒಮ್ಮೆಯಾದರೂ ಮುಖ್ಯಮಂತ್ರಿ ಮಾತನಾಡಿದ್ದಾರೆಯೇ? ಮಾತನಾಡಿದ್ದರೆ ದಾಖಲೆ ಬಹಿರಂಗಪಡಿಸಲಿ’ ಎಂದು ಅವರು ಸವಾಲು ಹಾಕಿದರು.

‘ಯಾವ ಪುರುಷಾರ್ಥಕ್ಕೆ ಜ.27ಕ್ಕೆ ಸರ್ವಪಕ್ಷ ಸಭೆ ಕರೆಯಲಾಗಿದೆ. ಹಿಂದಿನ ಸಭೆಯಲ್ಲಿ ಗೋವಾ ಕಾಂಗ್ರೆಸ್‌ ಮುಖಂಡರೊಂದಿಗೆ ಮಾತನಾಡುವುದಾಗಿ ಹೇಳಿದ್ದರು. ಆದರೆ, ಆ ಪ್ರಕಾರ ಅವರು ನಡೆದುಕೊಂಡಿಲ್ಲ’ ಎಂದು ಅವರು ಟೀಕಿಸಿದರು.

‘ಮಹದಾಯಿ ವಿವಾದವನ್ನು ಮಾತುಕತೆ ಮೂಲಕ ಪರಿಹರಿಸಲು ಸಾಧ್ಯವಿಲ್ಲ ಎಂದು ಹಿಂದಿನ ಯುಪಿಎ ಸರ್ಕಾರವೇ ಸುಪ್ರೀಂಕೋರ್ಟ್‌ ಮುಂದೆ ಪ್ರಮಾಣ ಪತ್ರ ಸಲ್ಲಿಸಿದೆ. ಹಾಗಾದರೆ, ಅವರು ಆಗ ಮಾಡಿದ್ದು ಸುಳ್ಳೇ’ ಎಂದು ಅವರು ಪ್ರಶ್ನಿಸಿದರು.

‘ನ್ಯಾಯಮಂಡಳಿ ಮುಂದೆ ವಿವಾದ ಇರುವುದರಿಂದ ಪ್ರಧಾನಿ ಮುಂದೆ ಹೋಗುವ ಅವಶ್ಯಕತೆ ಇಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದರು. ಆದರೆ, ಈಗ ಪ್ರಧಾನಿ ಮಧ್ಯ ಪ್ರವೇಶಿಸಬೇಕು ಎನ್ನುತ್ತಿದ್ದಾರೆ. ಇದು ಅವರ ದ್ವಂದ್ವ ನೀತಿಯನ್ನು ತೋರಿಸುತ್ತದೆ’ ಎಂದರು.

ಬಂದ್‌ಗೆ ಸಿದ್ದರಾಮಯ್ಯ ಕುಮ್ಮಕ್ಕು: ಯಡಿಯೂರಪ್ಪ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಮ್ಮಕ್ಕಿನಿಂದ ರಾಜ್ಯದಲ್ಲಿ ಸಾಲು ಸಾಲು ಬಂದ್‌ಗಳು ನಡೆಯುತ್ತಿವೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸೋಮವಾರ ಇಲ್ಲಿ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯ ಪರಿವರ್ತನಾ ರ‍್ಯಾಲಿಯನ್ನು ವಿಫಲಗೊಳಿಸಲು ಜನವರಿ 25ರಂದು ರಾಜ್ಯ ಬಂದ್ ಮತ್ತು ಫೆಬ್ರುವರಿ 4ರಂದು ಬೆಂಗಳೂರು ಬಂದ್‌ ನಡೆಸಲಾಗುತ್ತಿದೆ. ಕಾಂಗ್ರೆಸ್‌ ನಡೆಸುವ ಕುತಂತ್ರಗಳಿಗೆ ಬಗ್ಗುವುದಿಲ್ಲ ಎಂದರು.

ಜ. 25ರಂದು ಮೈಸೂರಿನಲ್ಲಿ ನಡೆಯಲಿರುವ ಪರಿವರ್ತನಾ ರ‍್ಯಾಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಪಾಲ್ಗೊಳ್ಳಲಿದ್ದಾರೆ. ಫೆ.4ರಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ.

ಮಹದಾಯಿ ಹೋರಾಟಕ್ಕೆ ನಮ್ಮ ಸಂಪೂರ್ಣ ಸಹಕಾರ ಇದೆ. ಆದರೆ ಬಂದ್‌ ಅಗತ್ಯವಲ್ಲ. ತೊಂದರೆಗೆ ಒಳಗಾದ ಭಾಗದಲ್ಲಿ ಬಂದ್‌ ನಡೆಯಲಿ. ಮಹದಾಯಿ ವಿವಾದಕ್ಕೂ ಮೈಸೂರು ಭಾಗಕ್ಕೂ ಏನು ಸಂಬಂಧ? ಜ.25ರ ರ‍್ಯಾಲಿ ನಿಗದಿಯಂತೆ ನಡೆಯಲಿದೆ ಎಂದರು.

ಕಾಂಗ್ರೆಸ್‌ ಕಚೇರಿಯಾದ ಪೊಲೀಸ್‌ ಠಾಣೆ: ಮೈಸೂರಿನ ಪೊಲೀಸ್ ಠಾಣೆಗಳು ಕಾಂಗ್ರೆಸ್‌ ಕಚೇರಿಯಾಗಿ ಪರಿವರ್ತನೆಯಾಗಿವೆ ಎಂದು ಅವರು ಆರೋಪಿಸಿದರು.

* ರಾಜ್ಯದ ಬೊಕ್ಕಸ ಬರಿದು ಮಾಡಿರುವುದನ್ನು ಸಿದ್ದರಾಮಯ್ಯ ಒಪ್ಪಿಕೊಳ್ಳಲಿ. ಕೇಂದ್ರ ಸರ್ಕಾರ ನೀಡಿದ ಹಣದಲ್ಲಿ ಶೇ 40ರಷ್ಟು ಮಾತ್ರ ಬಳಕೆಯಾಗಿದೆ.

–ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

* ಬಿಜೆಪಿಯವರಿಗೆ ಮಾಡಲು ಕೆಲಸ ಇಲ್ಲ. ಆಧಾರರಹಿತ ಹೇಳಿಕೆಗಳನ್ನು ನೀಡುತ್ತಾರೆ. ಎಲ್ಲವನ್ನೂ ರಾಜಕೀಯ ಕನ್ನಡಕ ಹಾಕಿ ನೋಡಬಾರದು. ಕರ್ನಾಟಕ ಬಂದ್‌ ಮಾಡಿ ಎಂದು ನಾವು ಹೇಳಿಲ್ಲ. ಇದರಿಂದ ಸರ್ಕಾರಕ್ಕೇ ನಷ್ಟವಾಗುತ್ತದೆ. ನಾವು ಹೇಳಿದರೆ ವಾಟಾಳ್‌ ನಾಗರಾಜ್‌ ಕೇಳುತ್ತಾರಾ. ಬಿಜೆಪಿ ಸರ್ಕಾರ ಇದ್ದಾಗ ಅವರ ಮಾತು ಕೇಳುತ್ತಿದ್ರಾ

–ಮುಖ್ಯಮಂತ್ರಿ ಸಿದ್ದರಾಮಯ್ಯ.

ರಾಜಕೀಯ ಉದ್ದೇಶಕ್ಕಾಗಿ ಸಂಘಟನೆಗಳ ಬಳಕೆ

ಬೆಂಗಳೂರು: ‘ಕರ್ನಾಟಕ ಬಂದ್‌’ ಮತ್ತು ‘ಬೆಂಗಳೂರು ಬಂದ್‌’ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ  ಕೈವಾಡ ಇದೆ ಎಂದು ಬಿಜೆಪಿ ಶಾಸಕ ಆರ್‌.ಅಶೋಕ್‌ ಆರೋಪಿಸಿದರು.

ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಕನ್ನಡ ಸಂಘಟನೆಗಳನ್ನು ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಇದೊಂದು ಕೀಳು ಮಟ್ಟದ ಹೇಸಿಗೆ ರಾಜಕಾರಣ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

‘ಮುಖ್ಯಮಂತ್ರಿ ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆ ಎಂದುಕೊಂಡಿರಲಿಲ್ಲ. ನರೇಂದ್ರಮೋದಿ ಮತ್ತು ಅಮಿತ್ ಷಾ ಅವರು ಬರುವಾಗ ಅವರ ವಿರುದ್ಧ ಕನ್ನಡ ಸಂಘಟನೆಗಳನ್ನು ಎತ್ತಿಕಟ್ಟಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ. ಮುಂದೆ ರಾಹುಲ್‌ ಗಾಂಧಿ ಬಂದಾಗಲೂ ಈ ರೀತಿಯೇ ಆಗಬಹುದು’ ಎಂದರು.

‘ಸಿದ್ದರಾಮಯ್ಯ ವಿರೋಧ ಪಕ್ಷದಲ್ಲಿದ್ದಾಗ ಬಳ್ಳಾರಿಗೆ ಪಾದಯಾತ್ರೆ ಹೋದರು. ಅದಕ್ಕೆ ನಾವು ಅವಕಾಶ ಕೊಟ್ಟೆವು. ಅಡ್ಡಿ ಮಾಡಲಿಲ್ಲ. ಆದರೆ, ನಾವು ಪ್ರತಿಭಟನೆ, ಸಮಾವೇಶಗಳನ್ನು ಮಾಡುವಾಗ ಅಡ್ಡಿ ಮಾಡುತ್ತಿದ್ದಾರೆ’ ಎಂದರು.

‘ನಮ್ಮ ಪಕ್ಷ 19 ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದೆ. ಕಾಂಗ್ರೆಸ್‌ ಕರ್ನಾಟಕ ಬಿಟ್ಟರೆ ಎರಡು– ಮೂರು ಸಣ್ಣ ರಾಜ್ಯಗಳಲ್ಲಿ ಆಡಳಿತ ಮಾಡುತ್ತಿದೆ. ಆ ಸತ್ಯವನ್ನು ಅರಿತುಕೊಂಡು, ಹೇಡಿತನದ ರಾಜಕಾರಣ ಮಾಡುವುದನ್ನು ಬಿಡಲಿ’ ಎಂದು ಅಶೋಕ್‌ ಹೇಳಿದರು.

‘ನಾವು ಗೋವುಗಳನ್ನು ಪೂಜಿಸುವವರು, ಬಹುಸಂಖ್ಯಾತರ ಭಾವನೆಗಳಿಗೆ ಬೆಲೆ ಕೊಡುವವರು. ಸಿದ್ದರಾಮಯ್ಯ ಗೋವುಗಳನ್ನು ಕಡಿದು ತಿನ್ನುತ್ತೇವೆ. ಇವರ ಮನಸ್ಥಿತಿ ಎಂತಹದ್ದು ಎಂಬುದು ಇದರಿಂದಲೇ ಗೊತ್ತಾಗುತ್ತದೆ’ ಎಂದರು.

ಮರಳು ಹಗರಣ: ಶೀಘ್ರ ಬಹಿರಂಗ

‘ಮಲೇಷ್ಯಾದಿಂದ ತರಿಸುತ್ತಿರುವ ಮರಳಿನ ವ್ಯವಹಾರದಲ್ಲಿ ದೊಡ್ಡ ಗೋಲ್‌ಮಾಲ್‌ ನಡೆದಿದೆ. ಒಂದೆರಡು ದಿನದಲ್ಲಿ ಪತ್ರಿಕಾಗೋಷ್ಠಿ ಕರೆದು ಎಲ್ಲವನ್ನೂ ಬಹಿರಂಗ‍ಪಡಿಸುತ್ತೇನೆ’ ಎಂದು ಜಗದೀಶ ಶೆಟ್ಟರ್ ಹೇಳಿದರು.

‘ದಾಖಲೆ ಸಂಗ್ರಹಿಸುವ ಕೆಲಸ ನಡೆದಿದೆ. ಅದು ಪೂರ್ಣವಾದ ನಂತರ ಸಾರ್ವಜನಿಕರಿಗೆ ಅಕ್ರಮದ ಮಾಹಿತಿ ನೀಡಲಾಗುವುದು’ ಎಂದು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry