ಸ್ನೇಹ, ಪ್ರೀತಿಗಳ ಜೀವನಪಾಠ

7

ಸ್ನೇಹ, ಪ್ರೀತಿಗಳ ಜೀವನಪಾಠ

Published:
Updated:
ಸ್ನೇಹ, ಪ್ರೀತಿಗಳ ಜೀವನಪಾಠ

ಕಿಶೋರ- ಕಿಶೋರರಿಗೆ ಏನಿದು ಪ್ರೀತಿಯ ಪಾಠವೇ ಎಂದು ಅಚ್ಚರಿಪಡುತ್ತೀರಾ? ಹೌದು! ಹದಿಹರೆಯಕ್ಕೆ ಕಾಲಿಡುವ ಬಹುತೇಕ ಕಿಶೋರ ಕಿಶೋರರಿಗೆ ಕಾಡುವ ಪ್ರೀತಿ, ಪ್ರೇಮಗಳ ಕುರಿತ ತುಮುಲ, ತೊಳಲಾಟಗಳಿಗೆ ಸರಿಯಾದ ಮಾರ್ಗದರ್ಶನವಿಲ್ಲದೆ ಅನೇಕರು ಸಮಸ್ಯೆಗಳ ಸುಳಿಯಲ್ಲಿ ಸಿಲುಕುತ್ತಾರೆ. ಹದಿಹರೆಯದ ವಯಸ್ಸಿಗೆ ಕಾಲಿಡುತ್ತಿದ್ದಂತೆ ಅವರಲ್ಲಿ ದೈಹಿಕ, ಮಾನಸಿಕ, ಭಾವನಾತ್ಮಕ ಹಾಗೂ ವ್ಯಕ್ತಿತ್ವದ ಬದಲಾವಣೆಗಳು ಸ್ವಾಭಾವಿಕವಾಗಿ ಜರುಗುತ್ತವೆ. ಈ ಬದಲಾವಣೆಗಳನ್ನು ಸಂಭಾಳಿಸುವುದು ಹೇಗೆ ಎಂದು ತಿಳಿಯದೆ ಗೊಂದಲ, ಗಲಿಬಿಲಿಗಳಿಗೆ ಒಳಗಾಗುತ್ತಾರೆ. ಮನೋವಿಜ್ಞಾನಿ ಜಿ. ಸ್ಟಾನ್ಲಿ ಹಾಲ್‍ ಅವರು ಕಿಶೋರಾವಸ್ಥೆಯು ತೀವ್ರ ರೀತಿಯ ಒತ್ತಡ ಮತ್ತು ಬಿರುಗಾಳಿಯ ಹಂತವಾಗಿದೆ ಎಂದು 20ನೇ ಶತಮಾನದ ಆರಂಭದಲ್ಲೇ ತಿಳಿಸಿದ್ದಾರೆ.

ಹದಿಹರೆಯದ ವಯಸ್ಸಿನಲ್ಲಿ ಹಾರ್ಮೋನುಗಳ ಸ್ರವಿಸುವಿಕೆಯ ಕಾರಣ ಅವರಲ್ಲಿ ಪ್ರೀತಿ, ಪ್ರೇಮ, ಕಾಮದ ಭಾವನೆಗಳು ಸಹಜವಾಗಿ ಜಾಗೃತವಾಗುತ್ತವೆ. ವಿರುದ್ಧ ಲಿಂಗದವರಲ್ಲಿ ಸೆಳೆತ ಹಾಗೂ ದೈಹಿಕ ಆಕರ್ಷಣೆಗಳು ತೀವ್ರವಾಗುತ್ತವೆ. ಬಾಹ್ಯ ದೈಹಿಕ ಆಕರ್ಷಣೆ ಅಥವಾ ಸೆಳೆತಗಳೇ ನಿಜವಾದ ಪ್ರೇಮವೆಂದು ಭಾವಿಸಿ, ಮುಂದುವರೆಯಲು ಹಾತೊರೆಯುತ್ತಾರೆ. ಆದರೆ ವಯಸ್ಸು ಕಳೆದಂತೆ ಈ ಪ್ರವೃತ್ತಿ ಬದಲಾಗುತ್ತದೆ. ಗಂಡುಮಕ್ಕಳು ಸರಿಸುಮಾರು 20 ವರ್ಷ ತಲುಪುವ ವೇಳೆಗೆ ದೈಹಿಕ ಸೆಳೆತಗಳಾಚೆಗಿನ ಆಂತರಿಕ ಗುಣಗಳು ಮುಖ್ಯ ಎಂದು ಭಾವಿಸುತ್ತಾರೆ ಎನ್ನಲಾಗಿದೆ.

ಬಾಲ್ಯಾವಸ್ಥೆಯಲ್ಲಿ ತಮ್ಮದೇ ಲಿಂಗದ ತಮ್ಮ ಓರಗೆಯವರಲ್ಲಿ ಮಾತ್ರ ಹೆಚ್ಚಾಗಿ ಬೆರೆಯುತ್ತಿದ್ದವರು ಕಿಶೋರಾವಸ್ಥೆ ತಲುಪುತ್ತಿದ್ದ ಹಾಗೆಯೇ ವಿರುದ್ಧ ಲಿಂಗದವರ ಸ್ನೇಹಕ್ಕಾಗಿ ಹಾತೊರೆಯುವುದು ಸಹಜ ಮತ್ತು ಸಾಮಾನ್ಯವಾಗುತ್ತದೆ. ಇಂತಹ ಸನ್ನಿವೇಶದಲ್ಲಿ ಕೆಲವರು ದೈಹಿಕ ಆಕರ್ಷಣೆ ಹಾಗೂ ಸೆಳೆತಗಳನ್ನೇ ಪ್ರೀತಿ ಎಂದು ಭಾವಿಸಿ, ಪ್ರೇಮಪತ್ರ ನೀಡುವುದು ಅಥವಾ ಮೌಖಿಕವಾಗಿ ಪ್ರೇಮ ನಿವೇದನೆ ಮಾಡಿಕೊಳ್ಳುವುದು ಮುಂತಾದವನ್ನು ಮಾಡುತ್ತಾರೆ. ಈ ಹಂತದಲ್ಲಿ ಚಲನಚಿತ್ರಗಳು ಹಾಗೂ ಇನ್ನಿತರೆ ಮಾಧ್ಯಮಗಳ ಪ್ರಭಾವ ಮತ್ತು ಓರಗೆಯವರ ಒತ್ತಡಗಳಿಂದಲೂ ಪ್ರೇಮಿಗಳನ್ನು ಹೊಂದಲೇಬೇಕೆಂಬ ಒತ್ತಡದ ಭಾವನೆಗಳನ್ನು ಹೊಂದುತ್ತಾರೆ. ಸಾಮಾನ್ಯವಾಗಿ ಇಂತಹ ಘಟನೆಗಳು ಪ್ರೌಢಶಾಲಾ ಹಂತದಲ್ಲಿ ಜರುಗುತ್ತವೆ. ಕೆಲವೊಮ್ಮೆ ಹಿರಿಯ ಪ್ರಾಥಮಿಕ ಶಾಲಾ ಹಂತದಲ್ಲಿಯೂ ನಡೆಯುತ್ತವೆ.

ಪ್ರೇಮಪತ್ರ ನೀಡುವ ಅಥವಾ ಪ್ರೇಮ ನಿವೇದನೆಯ ಪ್ರಕರಣಗಳು ಕೆಲವೊಮ್ಮೆ ಶಿಕ್ಷಕರು ಅಥವಾ ತಂದೆ-ತಾಯಿಗಳ ಗಮನಕ್ಕೆ ಬರುತ್ತವೆ. ಹೆಚ್ಚಿನ ಶಿಕ್ಷಕರು ಅಥವಾ ಪೋಷಕರಿಗೆ ಇಂತಹ ಸನ್ನಿವೇಶಗಳಲ್ಲಿ ಯಾವ ರೀತಿ ಪ್ರತಿಕ್ರಿಯಿಸಬೇಕು ಎಂಬುದರ ಕುರಿತು ಜಾಗೃತಿ ಇರುವುದಿಲ್ಲ. ಈ ಕಾರಣದಿಂದ ಪೋಷಕರು ಅಥವಾ ಶಿಕ್ಷಕರು ಭಯ, ಗಾಬರಿ ಮತ್ತು ಆತಂಕಗಳಿಗೆ ಒಳಗಾಗುತ್ತಾರೆ. ಸಂದಿಗ್ಧತೆ ಮತ್ತು ತೊಳಲಾಟದಲ್ಲಿರುವ ಹದಿಹರೆಯದವರಿಗೆ ಸೂಕ್ತ ತಿಳಿವಳಿಕೆ ಮತ್ತು ಬೆಂಬಲ ನೀಡಿ, ವಿಷಯವನ್ನು ಸೂಕ್ಷ್ಮವಾಗಿ ನಿಭಾಯಿಸಲು ತಿಳಿಯದೇ ಅವರನ್ನು ಪ್ರತಿಬಂಧಿಸುವ ಮತ್ತು ಶಿಕ್ಷಿಸುವ ಭರದಲ್ಲಿ ವಿಷಯವನ್ನು ಜಗಜ್ಜಾಹೀರು ಮಾಡುತ್ತಾರೆ. ಇಂತಹ ಪ್ರಸಂಗಗಳಿಂದ ಸೂಕ್ಷ್ಮ ಸಂವೇದನೆಯ ಕಿಶೋರ-ಕಿಶೋರರು ತೀವ್ರ ಸಂಕಟ ಹಾಗೂ ಅವಮಾನಗಳಿಗೆ ಈಡಾಗುತ್ತಾರೆ. ಕೆಲವೊಮ್ಮೆ ಆತ್ಮಹತ್ಯೆಗಳಂತಹ ಕೃತ್ಯಗಳಿಗೂ ಕೈಹಾಕುತ್ತಾರೆ. ಗೌರಿಬಿದನೂರಿನಲ್ಲಿ ಇತ್ತೀಚೆಗೆ ಹದಿಹರೆಯದ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಸ್ಮರಿಸಿಕೊಳ್ಳಬಹುದು.

ಹದಿಹರೆಯದಲ್ಲಿ ಆಗುವ ದೈಹಿಕ ಮತ್ತು ಮಾನಸಿಕ ಬದಲಾವಣೆಗಳು ಹಾಗೂ ಈ ಬದಲಾವಣೆಗಳ ಕಾರಣದಿಂದ ಉಂಟಾಗುವ ಮಾನಸಿಕ ತುಮುಲಗಳ ಬಗ್ಗೆ ಕಿಶೋರ ಕಿಶೋರಿಯರಿಗೆ ಸರಿಯಾದ ತಿಳಿವಳಿಕೆ ಅಥವಾ ಜಾಗೃತಿ ನೀಡುವ ಕಾರ್ಯವನ್ನು ಮೊದಲು ಕುಟುಂಬದಲ್ಲಿ ಪೋಷಕರು ಹಾಗೂ ನಂತರ ಶಾಲಾ ಹಂತದಲ್ಲಿ ಶಿಕ್ಷಕರು ನಿರ್ವಹಿಸಬೇಕು. ಇಂತಹ ವಿಷಯಗಳನ್ನು ಮಕ್ಕಳೊಂದಿಗೆ ಚರ್ಚಿಸಲು ಬಹುಪಾಲು ಮಂದಿ ಮಡಿವಂತಿಕೆ ತೋರುತ್ತಾರೆ. ತಿಳಿವಳಿಕೆಯ ಕೊರತೆಯ ಹಿನ್ನೆಲೆಯಲ್ಲಿ ಕೆಲವು ಕಿಶೋರ ಕಿಶೋರಿಯರು ಅಪಾಯಗಳಿಗೆ ಸಿಲುಕುತ್ತಾರೆ. ಅಪ್ರಾಪ್ತ ವಯಸ್ಸಿನಲ್ಲಿ ತಿಳಿವಳಿಕೆಯ ಕೊರತೆಯಿಂದ ಲೈಂಗಿಕ ಸಂಪರ್ಕ ಹೊಂದಿ ಕೆಲವು ಕಿಶೋರಿಯರು ತಾಯಿಯಾದ ಉದಾಹರಣೆಗಳೂ ಇವೆ.

ಸುರಕ್ಷಿತ ಸ್ಪರ್ಶ ಅಥವಾ ಅಸುರಕ್ಷಿತ ಸ್ಪರ್ಶಗಳ ಅರಿವಿಲ್ಲದ ಕಾರಣ ಕಿಡಿಗೇಡಿಗಳಿಂದ ತಮ್ಮನ್ನು ತಾವು ಹೇಗೆ ರಕ್ಷಿಸಕೊಳ್ಳಬೇಕೆಂಬ ಮಾಹಿತಿಗಳಿಲ್ಲದೆ ಲೈಂಗಿಕ ಸಂಪರ್ಕ, ಮಕ್ಕಳ ಸಾಗಾಣಿಕೆ ಅಥವಾ ವೇಶ್ಯಾವೃತ್ತಿಯ ಜಾಲದೊಳಗೆ ಬೀಳುವ ಪ್ರಸಂಗಗಳೂ ವರದಿಯಾಗಿವೆ. ಕೆಲವು ಪ್ರಸಂಗಗಳಲ್ಲಿ ಸಂಬಂಧಿಗಳಿಂದಲೇ ಕಿಶೋರ ಕಿಶೋರಿಯರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಈ ಕಾರಣಗಳಿಂದ ಪೋಷಕರು ಹಾಗೂ ಶಿಕ್ಷಕರು ಮಡಿವಂತಿಕೆಯನ್ನು ದೂರ ಮಾಡಿ, ಸೂಕ್ತ ತಿಳಿವಳಿಕೆ ನೀಡುವುದು ಉತ್ತಮ. ಈ ನಿಟ್ಟಿನಲ್ಲಿ ಹದಿಹರೆಯದ ಹೆಣ್ಣುಮಕ್ಕಳಿಗೆ ಜೀವನ ಕೌಶಲಗಳನ್ನು ಕಲಿಸುವ ‘ಕಿಶೋರಿ’ ಎಂಬ ಜಾಗೃತಿ ಕಾರ್ಯಕ್ರಮ ಕೆಲವು ವರ್ಷಗಳ ಹಿಂದೆ ಶಿಕ್ಷಣ ಇಲಾಖೆಯಲ್ಲಿ ಜಾರಿಯಲ್ಲಿತ್ತು. ಈ ಕಾರ್ಯಕ್ರಮ ಪರಿಣಾಮಕಾರಿ ಎಂಬ ಬಗ್ಗೆ ಹಿಮ್ಮಾಹಿತಿಗಳಿದ್ದವು. ಇಂತಹ ಜಾಗೃತಿ ನೀಡುವ ಕಾರ್ಯಕ್ರಮವನ್ನು ಕಿಶೋರರಿಗೂ ವಿಸ್ತರಿಸಬೇಕೆಂಬ ಬೇಡಿಕೆ ಇದ್ದಾಗಲೇ ಕಿಶೋರಿ ಕಾರ್ಯಕ್ರಮವು ಅನುದಾನ ಮಂಜೂರಾತಿ ಇಲ್ಲದೇ ನಿಂತು ಹೋಗಿದ್ದು ವಿಪರ್ಯಾಸ. ಆದಾಗ್ಯೂ ಶಿಕ್ಷಕರು ಮನಸ್ಸು ಮಾಡಿದಲ್ಲಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿ ಕಿಶೋರ ಕಿಶೋರಿಯರಿಗೆ ಅರಿವು ನೀಡುವ ಕೆಲಸ ಮಾಡಬಹುದು.

ದೈಹಿಕ ಆಕರ್ಷಣೆ, ಸೆಳೆತ, ಸ್ನೇಹ, ಪ್ರೀತಿ, ಪ್ರೇಮದ ಭಾವನೆಗಳ ನಡುವಿನ ವ್ಯತ್ಯಾಸಗಳನ್ನು ಗುರುತಿಸುವ ಕುರಿತಂತೆ ಹದಿಹರೆಯದವರಿಗೆ ಜಾಗೃತಿ ನೀಡುವ ಅವಶ್ಯಕತೆಯಿದೆ. ದೈಹಿಕ ಆಕರ್ಷಣೆ ಹಾಗೂ ಸೆಳೆತಗಳನ್ನು ನಿಭಾಯಿಸುವ ಜೊತೆ ಎಲ್ಲರೊಂದಿಗೆ ಅರ್ಥಪೂರ್ಣ ಸಂಬಂಧಗಳನ್ನು ಹೊಂದುವ ಜೀವನ ಕೌಶಲಗಳ ಪಾಠ ಕಲಿಸುವ ಅಗತ್ಯತೆ ಇದೆ. ಕಿಶೋರ ಕಿಶೋರಿಯರು ಪರಸ್ಪರ ಮಾತುಕತೆಯಲ್ಲಿ ತೊಡಗುವುದನ್ನೇ ಅಪರಾಧವೆಂಬಂತೆ ಪರಿಗಣಿಸಬಾರದು. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅರ್ಥಪೂರ್ಣ ಸಂವಾದಗಳನ್ನು ನಡೆಸಬೇಕು. ಆ ಮೂಲಕ ಸ್ನೇಹದ ಆಯ್ಕೆಯಲ್ಲಿ ಎಚ್ಚರ ಹೊಂದುವುದರ ಜೊತೆ ಆರೋಗ್ಯಕರ ಸ್ನೇಹ ಸಂಬಂಧಗಳನ್ನು ಹೊಂದುವ ಕೌಶಲಗಳನ್ನು ಬೆಳೆಸುವುದರೆಡೆ ಶಿಕ್ಷಕರು ಮತ್ತು ಪೋಷಕರು ಮುಂದಾಗಬೇಕು. ಕೆಲವು ಪ್ರಕರಣಗಳಲ್ಲಿ ಶಿಕ್ಷಕರು ಸಂಬಂಧಿತರೊಡನೆ ಆಪ್ತ ಸಮಾಲೋಚನೆ ಮಾಡಿ, ತಿಳಿವಳಿಕೆ ನೀಡಬೇಕು. ತಮ್ಮ ಜೀವನದ ಗುರಿಯನ್ನು ಕಂಡುಕೊಳ್ಳುವಂತೆ ಪ್ರೇರೇಪಿಸುವುದರ ಜೊತೆ ಅರ್ಥಪೂರ್ಣ ಆರೋಗ್ಯಕರ ಸಂಬಂಧಗಳನ್ನು ಹೊಂದುವ ಪ್ರೌಢಿಮೆ ಬೆಳೆಸಿಕೊಳ್ಳಲು ನೆರವಾಗಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry