ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಟ್ರೋಲ್‌, ಡೀಸೆಲ್ ಮೇಲಿನ ದುಬಾರಿ ತೆರಿಗೆ ಹೊರೆ ತಗ್ಗಲಿ

Last Updated 22 ಜನವರಿ 2018, 19:30 IST
ಅಕ್ಷರ ಗಾತ್ರ

ಪೆಟ್ರೋಲ್‌, ಡೀಸೆಲ್‌ ಬೆಲೆಗಳು ದಿನೇ ದಿನೇ ನಾಗಾಲೋಟದಲ್ಲಿ ಗಗನಾಭಿಮುಖವಾಗಿ ಏರುತ್ತಿವೆ. ಮೂರು ವರ್ಷಗಳ ಹಿಂದಿನ ಗರಿಷ್ಠ ಮಟ್ಟಕ್ಕೆ ತಲುಪಿರುವುದು ಕಳವಳಕ್ಕೆ ಎಡೆಮಾಡಿಕೊಟ್ಟಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ ₹ 73.19 ಮತ್ತು ಡೀಸೆಲ್‌ ಬೆಲೆ ₹ 63.89ಕ್ಕೆ ತಲುಪಿದೆ. ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್‌ ಬೆಲೆ ₹ 80ರ ಹತ್ತಿರ ತಲುಪಿದ್ದರೆ, ಡೀಸೆಲ್‌ ಬೆಲೆ ₹ 65ಕ್ಕೆ ಏರಿದೆ. ಪ್ರತಿದಿನ ಪೈಸೆಗಳ ಲೆಕ್ಕದಲ್ಲಿ ಹೆಚ್ಚಳಗೊಳ್ಳುತ್ತಿರುವ ಇವೆರಡೂ ಇಂಧನ ಬೆಲೆಗಳು ಈ ಮಟ್ಟ ತಲುಪಿರುವುದು ಬಳಕೆದಾರರ ಪಾಲಿಗೆ ಆಘಾತಕಾರಿಯಾಗಿದೆ. ಇದೊಂದು ನಿಧಾನ ವಿಷ ಇದ್ದಂತೆ. ಇದು ಬರೀ ಬಳಕೆದಾರರ ಜೇಬಿಗೆ ಭಾರವಾಗುವ ಸಂಗತಿಯಲ್ಲ. ಆರ್ಥಿಕತೆ ಮೇಲೂ ಇದು ಗಂಭೀರ ಸ್ವರೂಪದ ಪ್ರತಿಕೂಲ ಪರಿಣಾಮ ಬೀರಲಿದೆ. ಡೀಸೆಲ್‌ ಬೆಲೆ ಹೆಚ್ಚಳವು ಸರಕು ಸಾಗಾಣಿಕೆ ವೆಚ್ಚ ಹೆಚ್ಚಳಕ್ಕೂ ಕಾರಣವಾಗಲಿದೆ. ಇದರಿಂದ ಅವಶ್ಯಕ ಸರಕು ಬೆಲೆ ಏರಿಕೆಯಾಗಿ ಹಣದುಬ್ಬರವು ಹಿತಕಾರಿ ಮಟ್ಟದಾಚೆ ಹೆಚ್ಚಳಗೊಂಡು ಆತಂಕಕ್ಕೆ ಎಡೆ ಮಾಡಿಕೊಡಲಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳು 2017ರ ಜೂನ್‌ ತಿಂಗಳಿನಿಂದ ಇಂಧನ ಬೆಲೆಗಳನ್ನು ಪ್ರತಿದಿನ ಪರಿಷ್ಕರಿಸಲು ಆರಂಭಿಸಿದ ದಿನದಿಂದ ಬೆಲೆಗಳು ಏರುಗತಿಯಲ್ಲಿಯೇ ಇರುವುದು ಗಮನಾರ್ಹ. ಈ ಏರಿಕೆ ನಿಧಾನವಾಗಿ ಇದ್ದ ಕಾರಣಕ್ಕೆ ಬಳಕೆದಾರರಿಗೆ ಅದರ ಬಿಸಿ ನೇರವಾಗಿ ತಟ್ಟಿಲ್ಲ. ಹಿಂದೆ ಪ್ರತಿ ಲೀಟರ್‌ಗೆ ₹ 2 ರಿಂದ ₹ 3 ಹೆಚ್ಚಳಗೊಳ್ಳುತ್ತಿದ್ದಂತೆ ಜನಾಕ್ರೋಶ ವ್ಯಕ್ತವಾಗುತ್ತಿತ್ತು. ರಾಜಕೀಯ ಪಕ್ಷಗಳೂ ಹುಯಿಲೆಬ್ಬಿಸುತ್ತಿದ್ದವು. ಈಗ 1 ಪೈಸೆಯಿಂದ 15 ‍ಪೈಸೆವರೆಗೆ ಏರಿಕೆ ಆಗುತ್ತಿರುವುದರಿಂದ ತಕ್ಷಣಕ್ಕೆ ನೇರವಾಗಿ ಇದರ ಬಿಸಿ ತಟ್ಟುತ್ತಿಲ್ಲ. ಅರ್ಥ ವ್ಯವಸ್ಥೆ ಮೇಲೆ ದೀರ್ಘಾವಧಿಯಲ್ಲಿ ಅದರ ಪ್ರತ್ಯಕ್ಷ ಮತ್ತು ಪರೋಕ್ಷ ಪರಿಣಾಮಗಳನ್ನು ನಿರ್ಲಕ್ಷಿಸುವಂತಿಲ್ಲ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ  ಕಚ್ಚಾ ತೈಲದ ಬೆಲೆ ಏರಿಕೆ ಆಗುತ್ತಿರುವುದರಿಂದ ಈ ವಿದ್ಯಮಾನ ಘಟಿಸುತ್ತಿದೆ ಎಂದು ತೈಲ ಮಾರಾಟ ಸಂಸ್ಥೆಗಳು ಸಬೂಬು ಹೇಳುತ್ತಿವೆ. ಈ ಪ್ರತಿಪಾದನೆ ಸಂಪೂರ್ಣ ಸತ್ಯವಲ್ಲ. ಈ ಹಿಂದೆ ಕಚ್ಚಾ ತೈಲದ ಬೆಲೆ ದಿಢೀರನೆ ಕುಸಿದಾಗಲೂ ಅದರ ಲಾಭವನ್ನು ಸಂಪೂರ್ಣವಾಗಿ ಬಳಕೆದಾರರಿಗೆ ವರ್ಗಾಯಿಸಿರಲಿಲ್ಲ. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದುರಾಸೆಯ ತೆರಿಗೆ ನೀತಿಗಳೇ ಮುಖ್ಯ ಕಾರಣ. ಪರೋಕ್ಷ ತೆರಿಗೆಗೆ ಸಂಬಂಧಿಸಿದಂತೆ ಕ್ರಾಂತಿಕಾರಿ ಸ್ವರೂಪದ ಜಿಎಸ್‌ಟಿ ಜಾರಿಗೆ ತಂದರೂ ಪೆಟ್ರೋಲಿಯಂ ಉತ್ಪನ್ನಗಳನ್ನು ಹೊಸ ವ್ಯವಸ್ಥೆಯಿಂದ ಕೈಬಿಡಲಾಗಿದೆ.

ಇವೆರಡೂ ಇಂಧನಗಳನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ತರಬೇಕೆಂಬ ಕೂಗು ಈಗ ಬಲವಾಗಿ ಕೇಳಿಬರುತ್ತಿದೆ. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾತ್ರ ಜಾಣ ಕಿವುಡತನ ತೋರಿಸುತ್ತಿವೆ.  ಪರಸ್ಪರರ ಮೇಲೆ ಗೂಬೆ ಕೂರಿಸುತ್ತ ವೃಥಾ ಕಾಲಹರಣ ಮಾಡುತ್ತಿವೆ. ರಾಜ್ಯಗಳು ಮೊದಲು ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ತಗ್ಗಿಸಲಿ ಎಂದು ಕೇಂದ್ರ ಒತ್ತಾಯಿಸುತ್ತಿದೆ. ಕೇಂದ್ರವು ಎಕ್ಸೈಸ್‌ ಡ್ಯೂಟಿ ಕಡಿತ ಮಾಡಲಿ ಎನ್ನುವುದು ರಾಜ್ಯಗಳ ಹಕ್ಕೊತ್ತಾಯವಾಗಿದೆ. ಕೇಂದ್ರ– ರಾಜ್ಯಗಳ ಕಲಹದ ಮಧ್ಯೆ ಬಳಕೆದಾರರು ನಲುಗುತ್ತಿದ್ದಾರೆ.

ಬಳಕೆದಾರರ ಮೇಲಿನ ಹೊರೆ ತಗ್ಗಿಸಲು ಕೇಂದ್ರ ಸರ್ಕಾರ ಎಕ್ಸೈಸ್‌ ಡ್ಯೂಟಿ ತಗ್ಗಿಸಬೇಕು ಎನ್ನುವ ವ್ಯಾಪಕ ಬೇಡಿಕೆಗೆ ಸರ್ಕಾರ ತಕ್ಷಣ ಸ್ಪಂಧಿಸಬೇಕಾಗಿದೆ. 2014ರಿಂದ ಒಂಬತ್ತು ಬಾರಿ ಎಕ್ಸೈಸ್‌ ಡ್ಯೂಟಿ ಹೆಚ್ಚಿಸಿರುವ ಕೇಂದ್ರ ಒಂದು ಬಾರಿ ಮಾತ್ರ ಕಡಿತ ಮಾಡಿತ್ತು. ರಾಜ್ಯಗಳೂ ಗರಿಷ್ಠ ಮಟ್ಟದಲ್ಲಿ ವ್ಯಾಟ್‌ ವಿಧಿಸುತ್ತಿವೆ. ಇದರಿಂದ ತೆರಿಗೆ ಹೊರೆ ಕಡಿಮೆ ಮಾಡುವ ಯಾವುದೇ ಆಲೋಚನೆ ಸರ್ಕಾರಗಳಿಗೆ ಇಲ್ಲದಿರುವುದು ವೇದ್ಯವಾಗುತ್ತಿದೆ. ಬೆಲೆ ಇಳಿಸಲು ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದೊಂದೇ ಈಗ ಉಳಿದಿರುವ ಏಕೈಕ ಮಾರ್ಗವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಬಗ್ಗೆ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT