ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಣ್ಣದ ಮಾತಿಲ್ಲ, ನೋವಾದರೆ ನಾನು ಹೊಣೆಯಲ್ಲ’

Last Updated 8 ಫೆಬ್ರುವರಿ 2018, 9:04 IST
ಅಕ್ಷರ ಗಾತ್ರ

ಮಂಗಳೂರು: ‘ಬಾಲ್ಯದ ಕಷ್ಟದ ದಿನಗಳು, ಓದುವಾಗ ಎದುರಿಸಿದ ಸವಾಲುಗಳು, ವಕೀಲ ವೃತ್ತಿಯಿಂದ ಕಲಿತ ಜೀವನದ ಪಾಠ, ಆಕಸ್ಮಿಕವಾಗಿ ನಡೆದ ರಾಜಕೀಯ ಪ್ರವೇಶ, ಆ ನಂತರ ರಾಜಕೀಯ ಚದುರಂಗದ ಆಟದಲ್ಲಿ ಬೆಳೆದುನಿಂತ ಪರಿ ಹಾಗೂ ಏರಿಳಿತಗಳನ್ನು ಆತ್ಮ ಚರಿತ್ರೆಯಲ್ಲಿ ಪ್ರಾಮಾಣಿಕವಾಗಿ ದಾಖಲಿಸಿದ್ದೇನೆ’ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ಇಲ್ಲಿ ತಿಳಿಸಿದರು.

ನಗರದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಸಭಾಂಗಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಇದೇ 26ರಂದು ನನ್ನ ಆತ್ಮಕಥೆ ‘ಸಾಲ ಮೇಳದ ಸಂಗ್ರಾಮ’ ಲೋಕಾರ್ಪಣೆ ಆಗಲಿದೆ.

ಆ ದಿನವೇ ಹಿಂದಿ ಮತ್ತು ಇಂಗ್ಲಿಷ್‌ಗೆ ಅನುವಾದಗೊಂಡಿರುವ ಪುಸ್ತಕಗಳನ್ನೂ ಹೊರತರುವ ಪ್ರಯತ್ನ ಮಾಡಲಾಗುವುದು. ನನ್ನ ಆತ್ಮಕಥೆಯಲ್ಲಿ ನೆನಪಿಗೆ ಬಂದ ಎಲ್ಲ ವಿಚಾರಗಳನ್ನು ದಾಖಲಿಸಿದ್ದೇನೆ. ಮರೆವಿನ ಕಾರಣದಿಂದ ಸಾಕಷ್ಟು ಸಂಗತಿಗಳನ್ನು ಸೇರಿಸುವುದಕ್ಕೆ ಆಗಿಲ್ಲ. ಮುಂದೆ ನೆನಪಾಗುವ ಎಲ್ಲ ಪ್ರಮುಖ ವಿಚಾರಗಳನ್ನು ದಾಖಲಿಸಿ ಅದನ್ನು ಆತ್ಮಕಥೆಗೆ ಸೇರಿಸುವೆ. ವಿವಾದ ಸೃಷ್ಟಿಸಬೇಕು ಅಥವಾ ಯಾರಿಗೋ ನೋವು ಉಂಟು ಮಾಡಬೇಕು ಎಂದು ಯಾವುದೇ ವಿಚಾರವನ್ನು ವೈಭವೀಕರಿಸಿಲ್ಲ. ಸತ್ಯದೊಂದಿಗೆ ರಾಜಿ ಮಾಡಿಕೊಳ್ಳದೇ ಎಲ್ಲವನ್ನೂ ನೇರವಾಗಿ ಬರೆದಿದ್ದೇನೆ. ನನ್ನ ಆತ್ಮಕಥೆ ಓದಿ ಯಾರಿಗಾದರೂ ನೋವಾದರೆ ಅದಕ್ಕೆ ನಾನೇನು ಮಾಡುವುದಕ್ಕೆ ಸಾಧ್ಯವಿಲ್ಲ’ ಎಂದರು.

‘ಮಾಜಿ ಪ್ರಧಾನಿಗಳಾದ ದಿ. ಇಂದಿರಾಗಾಂಧಿ, ರಾಜೀವ್‌ ಗಾಂಧಿ ಅವರ ಜತೆಯಲ್ಲಿ ಕೆಲಸ ಮಾಡಿದಾಗಿನ ನನ್ನ ರಾಜಕೀಯ ಜೀವನದ ಏರು–ಪೇರುಗಳನ್ನು ಯಥಾವತ್ತಾಗಿ ಬರೆದಿದ್ದೇನೆ. ಕೇಂದ್ರದಲ್ಲಿ ಸಹಾಯಕ ವಿತ್ತ ಸಚಿವನಾಗಿದ್ದಾಗ ನಾನು ಕೈಗೊಂಡ ಸಾಲ ಮೇಳ ಎಂಬ ಕ್ರಾಂತಿಕಾರಿ ಆರ್ಥಿಕ ಹೆಜ್ಜೆಯ ಕಾಲಘಟ್ಟದಲ್ಲಿ ಆದ ಅನುಭವ, ಎದುರಿಸಿದ ಸವಾಲು, ಪ್ರಾಣಾಪಾಯದ ಸಂದರ್ಭಗಳನ್ನು ಪುಸ್ತಕದಲ್ಲಿ ದಾಖಲಿಸಿದ್ದೇನೆ. ಇಂದಿರಾ ಗಾಂಧಿ ಅವರು ಚಿಕ್ಕಮಗಳೂರಿನಿಂದ ಚುನಾವಣೆಗೆ ಸ್ಪರ್ಧಿಸಿದಾಗ ಅವರು ಮಾಡಿದ ಭಾಷಣದ ವಿವರವೂ ಪುಸ್ತಕದಲ್ಲಿದೆ’ ಎಂದು ಅವರು ತಿಳಿಸಿದರು.

‘ಹಿರಿಯ ಪತ್ರಕರ್ತ ಲಕ್ಷ್ಮಣ ಕೊಡಸೆ ಅವರು ನಾನು ಹೇಳಿದ ವಿಚಾರಗಳನ್ನು ಆತ್ಮಕಥೆಯಲ್ಲಿ ಅಚ್ಚುಕಟ್ಟಾಗಿ ಬರೆದಿದ್ದಾರೆ. ಪುಸ್ತಕದಲ್ಲಿ ಒಂಒತ್ತು ಅಧ್ಯಾಯಗಳಿದ್ದು, ಒಟ್ಟು 210 ಪುಟಗಳನ್ನು ಒಳಗೊಂಡಿದೆ. ಸಾಕಷ್ಟು ಛಾಯಾಚಿತ್ರಗಳನ್ನೂ ಬಳಸಿಕೊಂಡಿದ್ದೇವೆ. ಆತ್ಮಕಥೆ ಬಿಡುಗಡೆ ಆದ ನಂತರ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರಿಗೆ ನಾನೇ ಖುದ್ದು ಒಂದೊಂದು ಪ್ರತಿಯನ್ನು ಕೊಟ್ಟು ಬರುತ್ತೇನೆ’ ಎಂದು ಅವರು ತಿಳಿಸಿದರು.

ತಲೆ ಮೇಲೆ ಪುಸ್ತಕ ಇಟ್ಟುಕೊಂಡು ಪ್ರದಕ್ಷಿಣೆ: ‘ಆತ್ಮಕಥೆಯನ್ನು ಲೋಕಾರ್ಪಣೆ ಮಾಡುವಂತೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರಲ್ಲಿ ಕೇಳಿಕೊಂಡೆ. ಆದರೆ, 26ಕ್ಕೆ ಅವರಿಗೆ ಬೇರೊಂದು ಕಾರ್ಯಕ್ರಮ ಇದ್ದಿದ್ದರಿಂದ ಬರುವುದಕ್ಕೆ ಸಾಧ್ಯವಿಲ್ಲ ಎಂದರು. ಅದಕ್ಕಾಗಿ ನನ್ನ ಆತ್ಮಕಥೆಯನ್ನು ನಾನೇ ಬಿಡುಗಡೆ ಮಾಡುವ ನಿರ್ಧಾರಕ್ಕೆ ಬಂದೆ.

ಪುಸ್ತಕ ಬಿಡುಗಡೆಗೂ ಮುನ್ನ ಅದನ್ನು ಗೋಕರ್ಣನಾಥೇಶ್ವರನ ಮುಂದಿಟ್ಟು, ತೀರ್ಥ ಸಂಪ್ರೋಕ್ಷಿಸಿ ಆನಂತರ ಪುಸ್ತಕವನ್ನು ನಾನು ತಲೆಯ ಮೇಲೆ ಹೊತ್ತು ಕೊಂಡು ದೇವಸ್ಥಾನಕ್ಕೆ ಒಂದು ಸುತ್ತು ಪ್ರದಕ್ಷಿಣೆ ಬರುತ್ತೇನೆ. ಆಮೇಲೆ ಸಭಾ ಕಾರ್ಯಕ್ರಮದಲ್ಲಿ ಪುಸ್ತಕವನ್ನು ಲೋಕಾರ್ಪಣೆ ಮಾಡುತ್ತೇನೆ ಎಂದು ತಿಳಿಸಿದರು.

ವರ್ಗಾವಣೆಗೆ ಖಂಡನೆ

‘ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯನ್ನು ಪದೇ ಪದೇ ವರ್ಗಾವಣೆ ಮಾಡಲಾಗುತ್ತಿದೆ. ಅವರಿಗೂ ಹೆಂಡತಿ ಮಕ್ಕಳು ಇದ್ದಾರೆ ಎನ್ನುವುದನ್ನು ಮರೆಯಬಾರದು. ವರ್ಗಾವಣೆಯ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರು ಅಥವಾ ಮುಖ್ಯಮಂತ್ರಿ ಅವರ ಕೈವಾಡ ಇದ್ದರೆ, ಅದನ್ನು ನೇರವಾಗಿ ಖಂಡಿಸುತ್ತೇನೆ. ಅಧಿಕಾರಿಗಳಿಗೆ ಸುಮ್ಮನೆ ಹೀಗೆ ತೊಂದರೆ ಕೊಡುತ್ತಾ ಹೋದರೆ ಅದರ ಪರಿಣಾಮವನ್ನು ಮುಂದೆ ಅವರೇ ಅನುಭವಿಸಬೇಕಾಗುತ್ತದೆ’ ಎಂದು ಜನಾರ್ದನ ಪೂಜಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT