‘ಕಾನೂನು ಚೌಕಟ್ಟಿನಲ್ಲಿ ರಾಜೀನಾಮೆ ಅಂಗೀಕರಿಸಿ’

7
ಬಿಜೆಪಿ ಸೇರಿದ ಜೆಡಿಎಸ್‌ ಶಾಸಕರಿಂದ ವಿಧಾನಸಭಾ ಕಾರ್ಯದರ್ಶಿಗೆ ಮನವಿ

‘ಕಾನೂನು ಚೌಕಟ್ಟಿನಲ್ಲಿ ರಾಜೀನಾಮೆ ಅಂಗೀಕರಿಸಿ’

Published:
Updated:

ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿರುವ ಜೆಡಿಎಸ್‌ ಶಾಸಕರಾದ ಮಾನಪ್ಪ ವಜ್ಜಲ್‌ (ಲಿಂಗಸುಗೂರು) ಮತ್ತು ಡಾ. ಶಿವರಾಜ ಪಾಟೀಲ (ರಾಯಚೂರು ನಗರ) ವಿಧಾನಸಭಾ ಕಾರ್ಯದರ್ಶಿ ಎಸ್‌. ಮೂರ್ತಿ ಅವರನ್ನು ಸೋಮವಾರ ಭೇಟಿ ಮಾಡಿ, ‘ಇದೇ 18ರಂದು ನಾವಿಬ್ಬರೂ ಸ್ವ ಇಚ್ಛೆಯಿಂದ ನೀಡಿರುವ ರಾಜೀನಾಮೆಯನ್ನು ಅದೇ ದಿನದಿಂದ ಅನ್ವಯವಾಗುವಂತೆ ಕಾನೂನು ಚೌಕಟ್ಟಿನಲ್ಲಿ ಅಂಗೀಕರಿಸಬೇಕು’ ಎಂದು ಮನವಿ ಮಾಡಿದರು.

‘ರಾಜೀನಾಮೆ ಅಂಗೀಕಾರಗೊಳ್ಳುವ ಮೊದಲೇ ಬಿಜೆಪಿ ಸೇರಿದ ಈ ಇಬ್ಬರನ್ನೂ ಪಕ್ಷಾಂತರ ನಿಷೇಧ ಕಾಯ್ದೆಯಡಿ ಶಾಸಕತ್ವದಿಂದ ಅನರ್ಹಗೊಳಿಸಬೇಕು’ ಎಂದು ಆಗ್ರಹಿಸಿ ಜೆಡಿಎಸ್‌ ಶಾಸಕರಾದ ಸಿ.ಎನ್. ಬಾಲಕೃಷ್ಣ ಮತ್ತು ವಿಧಾನಪರಿಷತ್‌ ಸದಸ್ಯ ಟಿ.ಎ. ಶರವಣ ಅವರು ವಿಧಾನಸಭಾ ಅಧ್ಯಕ್ಷರಿಗೆ ಪತ್ರ ನೀಡಿದ್ದರು. ಈ ಕಾರಣಕ್ಕೆ ಸೋಮವಾರ ಹಾಜರಾಗುವಂತೆ ಇಬ್ಬರಿಗೂ ನೋಟಿಸ್‌ ನೀಡಲಾಗಿತ್ತು. ಆದರೆ, ಶಾಸಕರು ಬಂದಾಗ ಸಭಾಧ್ಯಕ್ಷರು ಕಚೇರಿಯಲ್ಲಿ ಇರಲಿಲ್ಲ.

‘ಶಾಸಕತ್ವದಿಂದ ಅನರ್ಹಗೊಳಿಸುವಂತೆ ಆಗ್ರಹಿಸಿ ಸಲ್ಲಿಸಿರುವ ಪತ್ರ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಮುಂದಿದೆ. ಅವರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಶಾಸಕರ ಮನವಿಯನ್ನು ಸಭಾಧ್ಯಕ್ಷರ ಗಮನಕ್ಕೆ ತರುತ್ತೇನೆ’ ಎಂದು ಮೂರ್ತಿ ತಿಳಿಸಿದರು.

‘ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿರುವ ನಾವು, ಸಭಾಧ್ಯಕ್ಷರ ಸೂಚನೆಯಂತೆ ನಡೆದುಕೊಂಡಿದ್ದೇವೆ. ಜೆಡಿಎಸ್ ಶಾಸಕರು ಸಭಾಧ್ಯಕ್ಷರಿಗೆ ದೂರು ಯಾಕೆ ನೀಡಿದರು ಎನ್ನುವುದು ಗೊತ್ತಿಲ್ಲ. ಅದಕ್ಕೂ ನಮಗೂ ಸಂಬಂಧವಿಲ್ಲ. ನಾವು ಬಿಜೆಪಿ ಸೇರುವ ಕಾರಣಕ್ಕೆ ಕೆಲವು ಬಿಜೆಪಿ ಮುಖಂಡರು ಆ ಪಕ್ಷ ಬಿಡುತ್ತಿದ್ದಾರೆ ಎಂಬುವುದು ಸುಳ್ಳು’ ಎಂದು ಮಾನಪ್ಪ ವಜ್ಜಲ್‌ ಪ್ರತಿಕ್ರಿಯಿಸಿದರು.

‘ನಾವು ಇನ್ನೂ ಬಿಜೆಪಿ ಸೇರಿಲ್ಲ. ಕಾರ್ಯಕ್ರಮಕ್ಕೆ ಬರುವಂತೆ ಕರೆದಿದ್ದರು. ಅದಕ್ಕೆ ಹೋಗಿದ್ದೆವು. ರಾಜೀನಾಮೆ ಅಂಗೀಕಾರ ಆಗುವವರೆಗೂ ಬಿಜೆಪಿ ಸೇರುವುದಿಲ್ಲ’ ಎಂದು ಶಿವರಾಜ ಪಾಟೀಲ ತಿಳಿಸಿದರು.

ಬಿಎಸ್‌ವೈ ವಿರುದ್ಧ ಪ್ರತಿಭಟನೆ

ಲಿಂಗಸುಗೂರು (ರಾಯಚೂರು ಜಿಲ್ಲೆ):  ಸ್ಥಳೀಯ ಜೆಡಿಎಸ್‌ ಶಾಸಕ ಮಾನಪ್ಪ ವಜ್ಜಲ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿರುವುದನ್ನು ವಿರೋಧಿಸಿ ಲಿಂಗಸುಗೂರು ಮಂಡಲದ ಬಿಜೆಪಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಭಾವಚಿತ್ರದ ಫ್ಲೆಕ್ಸ್‌ ಹಿಡಿದು ಪ್ರತಿಭಟನಾ ರ‍್ಯಾಲಿ ನಡೆಸಿದ ಟಿಕೆಟ್‌ ಆಕಾಂಕ್ಷಿ ಸಿದ್ದು ಬಂಡಿ ಅವರ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಟೈರ್‌ಗಳಿಗೆ ಬೆಂಕಿ ಹಚ್ಚಿ, ಯಡಿಯೂರಪ್ಪ ಅವರ ಪ್ರತಿಕೃತಿ ದಹಿಸಿದರು.ಬಿಜೆಪಿ ಎಸ್‌ಟಿ ಮೋರ್ಚಾ ತಾಲ್ಲೂಕು ಅಧ್ಯಕ್ಚ ಬಸವರಾಜ ‘ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯವಾಗಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry