ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೊಕೊವಿಚ್‌ಗೆ ಆಘಾತ ನೀಡಿದ ಚುಂಗ್‌

ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿ: ರೋಜರ್‌ ಫೆಡರರ್‌ ಸಿಮೋನಾ ಹಲೆಪ್‌ಗೆ ಗೆಲುವು
Last Updated 22 ಜನವರಿ 2018, 19:30 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಉತ್ತಮ ಆಟವಾಡಿದ ದಕ್ಷಿಣ ಕೊರಿಯಾದ ಚುಂಗ್ ಹಿಯಾನ್‌ ಸರ್ಬಿಯಾದ ನೊವಾಕ್ ಜೊಕೊವಿಚ್‌ಗೆ ಆಘಾತ ನೀಡಿ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಿಂದ ಹೊರಗಟ್ಟಿದರು.

ಇಲ್ಲಿ ಸೋಮವಾರ ನಡೆದ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಚುಂಗ್‌ ಆರು ಬಾರಿಯ ಚಾಂಪಿಯನ್‌ ಜೊಕೊವಿಚ್‌ ಅವರನ್ನು 7–6 (7/4), 7–5 ಹಾಗೂ 7–6 (7/3)ರಿಂದ ಮಣಿಸಿದರು.

ರೋಡ್‌ ಲಾವೆರಾ ಅರೆನಾದಲ್ಲಿ ನಡೆದ 3 ತಾಸು 21 ನಿಮಿಷಗಳ ಅವಧಿಯ ಹೋರಾಟದಲ್ಲಿ ಪ್ರಯಾಸದ ಗೆಲುವು ಸಾಧಿಸಿದ 21 ವರ್ಷ ವಯಸ್ಸಿನ ಚುಂಗ್‌ ಆಸ್ಟ್ರೇಲಿಯಾ ಓಪನ್‌ನ ಕ್ವಾರ್ಟರ್ ಫೈನಲ್ ತಲುಪಿದ ಕೊರಿಯಾದ ಮೊದಲ ಆಟಗಾರ ಎಂಬ ಶ್ರೇಯಸ್ಸಿಗೆ ‍ಪಾತ್ರರಾದರು.

ಬುಧವಾರ ನಡೆಯಲಿರುವ ಎಂಟರ ಘಟ್ಟದ ಪಂದ್ಯದಲ್ಲಿ ಅವರು ಅಮೆರಿಕದ ಟೆನಿಸ್ ಸಾಂಡ್‌ಗ್ರನ್‌ ಅವರನ್ನು ಎದುರಿಸುವರು.

ಎರಡು ವರ್ಷಗಳ ಹಿಂದೆ ಆಸ್ಟ್ರೇಲಿಯಾ ಓಪನ್ ಟೂರ್ನಿಯ ಮೊದಲ ಸುತ್ತಿನಲ್ಲಿ ಜಕೊವಿಚ್‌ ನೇರ ಸೆಟ್‌ಗಳಿಂದ ಚುಂಗ್ ಅವರನ್ನು ಮಣಿಸಿದ್ದರು.

ಈ ಬಾರಿ ಗಾಯಗೊಂಡು ಕಣಕ್ಕೆ ಇಳಿದಿದ್ದ ಜೊಕೊವಿಚ್‌ ಸುಲಭವಾಗಿ ಮಣಿಯಲಿಲ್ಲ. ಆರಂಭದಲ್ಲಿ ಎರಡು ಬಾರಿ ಡಬಲ್ ಫಾಲ್ಟ್‌ ಮಾಡಿ ನಿರಾಸೆಗೊಂಡ ಅವರು ನಂತರ ಚೇತರಿಸಿಕೊಂಡು 5–5ರ ಸಮಬಲ ಸಾಧಿಸಿದರು.

ಎರಡನೇ ಸೆಟ್‌ನಲ್ಲಿ ಮೊಣಕೈ ನೋವಿನಿಂದ ಬಳಲಿದ ಅವರು ಚಿಕಿತ್ಸೆ ಪಡೆದುಕೊಂಡರು. ನಂತರ ಆಟದ ತಂತ್ರಗಳನ್ನು ಬದಲಿಸಿದರು. ಸುದೀರ್ಘ ರ‍್ಯಾಲಿಗಳಲ್ಲಿ ಭಾಗಿಯಾಗದೆ ಸುಲಭವಾಗಿ ಪಾಯಿಂಟ್ ಗಳಿಸಲು ಶ್ರಮಿಸಿದರು. ಈ ಅವಕಾಶವನ್ನು ಸದುಪಯೋಗ ಮಾಡಿಕೊಂಡ ಚುಂಗ್‌ ಪಾಯಿಂಟ್‌ಗಳನ್ನು ಗಳಿಸುತ್ತ ಸಾಗಿದರು.

ಫೆಡರರ್‌ಗೆ ಸುಲಭ ಜಯ
ನಾಲ್ಕನೇ ಸುತ್ತಿನ ಮತ್ತೊಂದು ಪಂದ್ಯದಲ್ಲಿ ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್‌ ಸುಲಭ ಜಯಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ಹಂಗರಿಯ ಮಾರ್ಟನ್‌ ಫುಕ್ಸೊವಿಕ್ಸ್ ಎದುರು 6–4, 7–6 (7/3), 6–2ರಿಂದ ಗೆದ್ದರು. ಜೆಕ್‌ ಗಣರಾಜ್ಯದ ಥಾಮಸ್ ಬೆರ್ಡಿಚ್‌ ಇಟಲಿಯ ಫ್ಯಾಬಿಯೊ ಫೊಗ್ನಿನಿ ಅವರನ್ನು 6–1, 6–4, 6–4ರಿಂದ ಮಣಿಸಿದರು. ಅಮೆರಿಕದ ಟೆನಿಸ್‌ ಸ್ಯಾಂಗ್ರೆನ್‌ ಆಸ್ಟ್ರಿಯಾದ ಡೊಮಿನಿಕ್‌ ಥೀಮ್‌ ಅವರನ್ನು 6–2, 4–6, 7–6 (7/4), 6–7 (7/9) ಹಾಗೂ‌ 6–3ರಿಂದ ಸೋಲಿಸಿದರು.

ಕೆರ್ಬರ್‌, ಹಲೆಪ್‌ಗೆ ಕ್ವಾರ್ಟರ್‌ಗೆ
ಮಹಿಳಾ ವಿಭಾಗದ ನಾಲ್ಕನೇ ಸುತ್ತಿನ ಪಂದ್ಯಗಳಲ್ಲಿ ಗೆದ್ದ ಜೆರ್ಮನಿಯ ಏಂಜಲಿಕ್ ಕೆರ್ಬರ್‌ ಮತ್ತು ರೊಮೇನಿಯಾದ ಸಿಮೋನಾ ಹಲೆಪ್‌ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇರಿಸಿದರು. ಕೆರ್ಬರ್‌ 4–6, 7–5, 6–2ರಿಂದ ಚೀನಾ ಥೈಪೆಯ ಹೀ ಸು ವೀ ಅವರನ್ನು ಮಣಿಸಿದರೆ ಹಲೆಪ್‌ ಜಪಾನ್‌ನ ನವೊಮಿ ಒಸಾಕ ಅವರನ್ನು 6–3, 6–2ರಿಂದ ಸೋಲಿಸಿದರು.

ಬೋಪಣ್ಣ, ದಿವಿಜ್ ಶರಣ್‌ಗೆ ಸೋಲು
ಭಾರತದ ರೋಹನ್ ಬೋಪಣ್ಣ ಮತ್ತು ದಿವಿಜ್ ಶರಣ್ ಪುರಷರ ಡಬಲ್ಸ್ ವಿಭಾಗದ ಪಂದ್ಯಗಳಲ್ಲಿ ಸೋತು ಹೊರಬಿದ್ದರು. ಬೋಪಣ್ಣ ಮತ್ತು ಫ್ರಾನ್ಸ್‌ನ ಎಡ್ವರ್ಡ್‌ ರೋಜರ್ ವಾಸೆಲಿನ್‌ ಜೋಡಿಯನ್ನು ಆಸ್ಟ್ರಿಯಾದ ಒಲಿವರ್‌ ಮರಾಖ್‌ ಮತ್ತು ಕ್ರೊವೇಷಿಯಾದ ಮೇಟ್ ಪಾವಿಕ್‌ 4–6, 7–6 (5) ಮತ್ತು 3–6ರಿಂದ ಸೋತರು.

ದಿವಿಜ್ ಮತ್ತು ಅಮೆರಿಕದ ರಾಜೀವ್ ರಾಮ್‌ ಜೋಡಿಯನ್ನು ಪಾಲೆಂಡ್‌ನ ಲೂಕಾಸ್‌ ಕುಬೋಟ್‌ ಮತ್ತು ಬ್ರೆಜಿಲ್‌ನ ಮಾರ್ಸೆಲೊ ಮೆಲೊ 3–6, 7–6 (4) ಮತ್ತು 6–4ರಿಂದ ಮಣಿಸಿದರು.

*

ರಫೆಲ್‌ ನಡಾಲ್‌–ಮರಿನ್‌ ಸಿಲಿಕ್‌ ಕದನ ಕುತೂಹಲ
ಮೆಲ್ಬರ್ನ್‌:
ಆಸ್ಟ್ರೇಲಿಯಾ ಓಪನ್‌ ಟೆನಿಸ್ ಟೂರ್ನಿಯ ಮಹತ್ವದ ಪಂದ್ಯದಲ್ಲಿ ಮಂಗಳವಾರ ಸ್ಪೇನ್‌ನ ರಫೆಲ್ ನಡಾಲ್‌ ಮತ್ತು ಕ್ರೊವೇಷಿಯಾದ ಮರಿನ್ ಸಿಲಿಕ್‌ ಸೆಣಸುವರು. ಈ ಕ್ವಾರ್ಟರ್‌ ಫೈನಲ್ ಹಣಾಹಣಿ ಕುತೂಹಲ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT