ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದಂಕಿಗೆ ಇಳಿದ ಚಳಿ: 134 ವರ್ಷದ ನಂತರ ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ

Last Updated 22 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಎರಡು ದಿನಗಳಿಂದ ಚಳಿಯ ಅಬ್ಬರ ತೀವ್ರವಾಗಿದೆ. ಸುಮಾರು 134 ವರ್ಷಗಳ ನಂತರ ರಾಜಧಾನಿಯಲ್ಲಿ ಅತ್ಯಂತ ಕನಿಷ್ಠ ತಾಪಮಾನ ದಾಖಲಾಗಿದೆ. ಇನ್ನೂ ಮೂರ್ನಾಲ್ಕು ದಿನಗಳು ಇದೇ ವಾತಾವರಣ ಮುಂದುವರಿಯುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಶನಿವಾರ ಮುಂಜಾನೆಯಿಂದ ಭಾನುವಾರ ಬೆಳಿಗ್ಗೆವರೆಗೆ ಸಿಲಿಕಾನ್‌ ಸಿಟಿಯಲ್ಲಿ ಕನಿಷ್ಠ 7.7 ಹಾಗೂ ಗ್ರಾಮಾಂತರದಲ್ಲಿ 8.5 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲಾಗಿದೆ. 1884ರ ಜನವರಿ 13ರಂದು ಬೆಂಗಳೂರಿನಲ್ಲಿ 7.8 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ಇತ್ತು.

ಈ ಬಾರಿ ಹಾವೇರಿ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತ್ಯಂತ ಕನಿಷ್ಠ ತಾಪಮಾನ 7.1 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಭಾನುವಾರ 17 ಜಿಲ್ಲೆಗಳಲ್ಲಿ ಕನಿಷ್ಠ ತಾಪ
ಮಾನ ಒಂದಂಕಿಗೆ ಇಳಿದಿತ್ತು. ರಾತ್ರಿಯಿಂದ ಬೆಳಿಗ್ಗೆವರೆಗೂ ಮೈಕೊರೆವ ಚಳಿಯಿತ್ತು.

‘ಇಷ್ಟು ಪ್ರಮಾಣದ ಚಳಿಗೆ ಆತಂಕಪಡುವ ಅಗತ್ಯವಿಲ್ಲ. ಈ ಹಿಂದೆಯೂ ಇಂತಹ ತೀವ್ರ ಚಳಿಯ ವಾತಾವರಣ ಕಾಣಿಸಿದೆ. ಆಗುಂಬೆಯಲ್ಲಿ 1975ರ ಜನವರಿ 10ರಂದು 3.2 ಮತ್ತು 2015ರ ಜ.13ರಂದು 5.8 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲಾಗಿರುವ ನಿದರ್ಶನವಿದೆ’ ಎಂದು  ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿ ಎಸ್‌.ಎಸ್‌.ಎಂ.ಗವಾಸ್ಕರ್‌ ತಿಳಿಸಿದರು.

‘ಸಾವುನೋವು ಸಂಭವಿಸುವ ಪ್ರಮಾಣದಲ್ಲಿ ಚಳಿಯ ತೀವ್ರತೆ ಇಲ್ಲ. ಆದರೂ ವೃದ್ಧರು, ಉಸಿರಾಟ ಮತ್ತು ಹೃದಯ ಸಂಬಂಧಿ ಕಾಯಿಲೆ ಇರುವವರು, ಪಾರ್ಶ್ವವಾಯು ಪೀಡಿತರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಆಸ್ತಮಾ ರೋಗಿಗಳು ಬೆಳಗ್ಗಿನ ಬಿಸಿಲು ಕಾಣಿಸಿಕೊಳ್ಳುವವರೆಗೂ ಮನೆಯಿಂದ ಹೊರ ಬರದಿರುವುದು ಒಳಿತು. ಆದಷ್ಟು ಬೆಚ್ಚಗಿನ ಉಡುಪು ಧರಿಸಬೇಕು. ಬಿಸಿ ನೀರು ಕುಡಿಯಬೇಕು. ವಾಯುವಿಹಾರ ತಾತ್ಕಾಲಿಕ ಕೈಬಿಡುವುದು ಸೂಕ್ತ’ ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್‌. ಶ್ರೀನಿವಾಸ ರೆಡ್ಡಿ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT