ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಆರ್‌ಪಿ ಅಕ್ರಮ ಬಯಲು: ಸಿಸಿಬಿಯಿಂದ ಐವರ ಬಂಧನ

Last Updated 22 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಾಹಿನಿಗಳ ಜಾಹೀರಾತು ನಿಗದಿಗೆ ಮಾನದಂಡವಾದ ‘ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್ (ಟಿಆರ್‌ಪಿ)’ ತಿರುಚುತ್ತಿದ್ದ ಜಾಲವು ನಿಗದಿತ ವಾಹಿನಿ ಹಾಗೂ ಕಾರ್ಯಕ್ರಮಗಳ ವೀಕ್ಷಣೆಗಾಗಿ ಆಯ್ದ ಮನೆಯವರಿಗೆ ನಗದು ಹಾಗೂ ಉಡುಗೊರೆಯ ಆಮಿಷವೊಡುತ್ತಿತ್ತು ಎಂಬ ಸಂಗತಿಯನ್ನು ಸಿಸಿಬಿ ಪೊಲೀಸರ ತನಿಖೆ ಬಯಲು ಮಾಡಿದೆ.

ಬಾರ್ಕ್‌ (ಬ್ರಾಡ್‌ಕಾಸ್ಟಿಂಗ್‌ ಆಡಿಯನ್ಸ್‌ ರಿಸರ್ಚ್‌ ಕೌನ್ಸಿಲ್‌) ಸಂಸ್ಥೆ ಪಾಲುದಾರ ಆರ್‌.ಎಸ್‌.ಮಹೇಶ್‌ ನೀಡಿದ್ದ ದೂರಿನನ್ವಯ ಧಾರಾವಾಹಿ ನಿರ್ಮಾಪಕ, ಬೆಂಗಳೂರಿನ ರಾಜು ಸೇರಿದಂತೆ ಐವರನ್ನು ಬಂಧಿಸಿರುವ ಪೊಲೀಸರು, ಕೃತ್ಯದ ಬಗ್ಗೆ ಸಮಗ್ರ ಮಾಹಿತಿ ಕಲೆಹಾಕುತ್ತಿದ್ದಾರೆ.

‘ಟಿಆರ್‌ಪಿ ಪ್ಯಾನಲ್ ಮೀಟರ್‌ ಇರುವ ಮನೆಗಳಿಗೆ ಹೋಗುತ್ತಿದ್ದ ಆರೋಪಿಗಳು ನಿಗದಿತ ವಾಹಿನಿ, ಧಾರಾವಾಹಿ, ರಿಯಾಲಿಟಿ ಶೋ ಹಾಗೂ ಕಾರ್ಯಕ್ರಮಗಳನ್ನು ವೀಕ್ಷಿಸಲು ಹೇಳುತ್ತಿದ್ದರು. ನಗದು ಹಾಗೂ ಉಡುಗೊರೆಗಳನ್ನೂ ಕೊಡುತ್ತಿದ್ದರು. ಅಂಥ ಮನೆಯವರ ವಿಳಾಸವನ್ನು ತಿಳಿದುಕೊಳ್ಳುತ್ತಿದ್ದೇವೆ. ಪ್ರಕರಣದಲ್ಲಿ ಅವರನ್ನು ಸಾಕ್ಷ್ಯವನ್ನಾಗಿ ಪರಿಗಣಿಸಲಿದ್ದೇವೆ’ ಎಂದು ತನಿಖಾಧಿಕಾರಿಗಳು ಹೇಳಿದರು.

ವಿಶೇಷ ದಿನಗಳಿಗೆ ಹೆಚ್ಚಿನ ನೀಡುತ್ತಿದ್ದ ಆರೋಪಿಗಳು, ಬೇರೆ ದಿನಕ್ಕಿಂತ ಎರಡು ಪಟ್ಟು ಹೆಚ್ಚಿನ ಹಣವನ್ನು ಆ ದಿನದಂದು ಮನೆಯವರಿಗೆ ಕೊಡುತ್ತಿದ್ದರು. ಪ್ರಾಥಮಿಕ ಮಾಹಿತಿ ಪ್ರಕಾರ, ತಿಂಗಳಿಗೆ ₹10,000ರಿಂದ ₹25,000 ನಿಗದಿ ಮಾಡಿದ್ದರು. ಜತೆಗೆ ಕುಕ್ಕರ್‌, ಟಿ.ವಿ, ಪ್ರಿಡ್ಜ್‌ಗಳನ್ನು ಉಡುಗೊರೆಯಾಗಿ ನೀಡುತ್ತಿದ್ದರು. ಮನೆಯವರು ಆರೋಪಿಗಳು ಸೂಚಿಸುತ್ತಿದ್ದ ಕಾರ್ಯಕ್ರಮಗಳನ್ನೇ ಹೆಚ್ಚು ನೋಡುತ್ತಿದ್ದರು. ಅದನ್ನು ಆಧರಿಸಿ ಬಾರ್ಕ್‌ ಪ್ರೇಕ್ಷಕರ ಸಂಖ್ಯೆಯನ್ನು ಬಿಡುಗಡೆ ಮಾಡುತ್ತಿತ್ತು ಎಂದರು.‌

‘ಟಿ.ವಿ ವಾಹಿನಿಗಳ ಹಾಗೂ ಕಾರ್ಯಕ್ರಮಗಳ ಪ್ರಸಾರ ‘ಟಿಆರ್‌ಪಿ’ ಮೇಲೆ ಅವಲಂಬಿತವಾಗಿದೆ. ಹೀಗಾಗಿ ಆರೋಪಿಗಳು, ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ‘ಟಿಆರ್‌ಪಿ’ ತಿರುಚುವ ಕೆಲಸಕ್ಕೆ ಕೈ ಹಾಕಿದ್ದರು. ರಾಜು ಸಹಚರರಾದ ಸುರೇಶ್, ಜೆಮ್ಸಿ, ಸುಭಾಷ್ ಹಾಗೂ ಮೈಸೂರಿನ ಮಧು ಎಂಬುವವರನ್ನು ಬಂಧಿಸಿದ್ದೇವೆ’ ಎಂದು ಹೆಸರು ಹೇಳಲಿಚ್ಚಿಸದ ಸಿಸಿಬಿಯ ಹಿರಿಯಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಇನ್ನಷ್ಟು ಮಂದಿ ಈ ಕಾರ್ಯದಲ್ಲಿ ಕೈಜೋಡಿಸಿರುವ ಶಂಕೆ ಇದೆ. ಮೈಸೂರು, ಹುಬ್ಬಳ್ಳಿ–ಧಾರವಾಡ, ಕಲಬುರ್ಗಿ, ವಿಜಯಪುರ, ಬೆಳಗಾವಿ ಜಿಲ್ಲೆಗಳಲ್ಲಿ ಅಳವಡಿಸಿರುವ ಟಿಆರ್‌ಪಿ ನಿರ್ಧರಿಸುವ ಉಪಕರಣಗಳನ್ನು (ಪ್ಯಾನಲ್‌ ಮೀಟರ್‌) ಆರೋಪಿಗಳು ನಿರ್ವಹಿಸುತ್ತಿದ್ದರು. ಅಂಥ ಮೀಟರ್‌ಗಳು ಎಲ್ಲೆಲ್ಲಿವೆ ಎಂಬ ಮಾಹಿತಿ ಕಲೆ ಹಾಕುತ್ತಿದ್ದೇವೆ. ಅವುಗಳನ್ನು ಜಪ್ತಿ ಮಾಡಲು ಕ್ರಮ ಕೈಗೊಳ್ಳಲಿದ್ದೇವೆ’ ಎಂದರು.

ನೌಕರರಿಂದಲೇ ಮಾಹಿತಿ ಸೋರಿಕೆ: ವಾಹಿನಿಗಳ ಪ್ರೇಕ್ಷಕರ ಸಂಖ್ಯೆಯನ್ನು ಪ್ರಮಾಣೀಕರಿಸಲು ಮಾನ್ಯತೆ ಪಡೆದಿರುವ ಬಾರ್ಕ್‌ ಸಂಸ್ಥೆಯು ದೇಶದೆಲ್ಲೆಡೆ ಪ್ರತಿನಿಧಿಗಳನ್ನು ಹೊಂದಿದೆ. ಅವರ ಮೂಲಕ ಆಯ್ದ ಮನೆಗಳಲ್ಲಿ ಟಿಆರ್‌ಪಿ ಪ್ಯಾನಲ್‌ ಮೀಟರ್‌ ಅಳವಡಿಸಿ, ಪ್ರೇಕ್ಷಕರ ಸಂಖ್ಯೆ ಅಧ್ಯಯನ ನಡೆಸುತ್ತಿದೆ.

‘ರಾಜ್ಯದಲ್ಲಿ ಮೀಟರ್‌ ಅಳವಡಿಕೆ ಹಾಗೂ ನಿರ್ವಹಣೆ ಜವಾಬ್ದಾರಿಯನ್ನು ಶಾಂತಿನಗರದಲ್ಲಿರುವ ‘ಹನ್ಸ್‌ ರಿಸರ್ಚ್‌ ಗ್ರೂಪ್‌‘ ಕಂಪನಿಗೆ ನೀಡಿದೆ. ಅದರ ನೌಕರರು, ಆಯ್ದ ಮನೆಗಳಿಗೆ ಟಿಆರ್‌ಪಿ ಪ್ಯಾನಲ್‌ ಮೀಟರ್‌ ಅಳವಡಿಸಿದ್ದಾರೆ. ಯಾವ ಮನೆಯಲ್ಲಿ ಮೀಟರ್‌ ಅಳಡಿಸಲಾಗಿದೆ ಎಂಬ ಮಾಹಿತಿ ಗೋಪ್ಯವಾಗಿರಬೇಕು. ಆದರೆ, ಕಂಪನಿಯ ಕೆಲ ನೌಕರರೇ ಈ ಮಾಹಿತಿ ಸೋರಿಕೆ ಮಾಡಿದ್ದಾರೆ. ಅದರ ಸಹಾಯದಿಂದಲೇ ಆರೋಪಿಗಳು ಟಿಆರ್‌ಪಿ ತಿರುಚಿದ್ದಾರೆ’ ಎಂದು ತನಿಖಾಧಿಕಾರಿಗಳು ವಿವರಿಸಿದರು.

ಕೃತ್ಯ ಬಯಲಾದದ್ದು ಹೀಗೆ: ಟಿ.ವಿ ವೀಕ್ಷಣೆಯ ಮಾಹಿತಿಯು ಟಿಆರ್‌ಪಿ ಪ್ಯಾನಲ್‌ ಮೀಟರ್‌ನಲ್ಲಿ ಅಳವಡಿಸುವ ಸಿಮ್‌ ಕಾರ್ಡ್‌ ಮೂಲಕ ಬಾರ್ಕ್‌ ಸಂಸ್ಥೆಯ ಸರ್ವರ್‌ನಲ್ಲಿ ದಾಖಲಾಗುತ್ತದೆ. ಕಳೆದ ವರ್ಷದ ಡಿಸೆಂಬರ್‌ ಮೊದಲ ವಾರದಲ್ಲಿ ಕೆಲವು ಮನೆಗಳಲ್ಲಿ ಒಂದೇ ವಾಹಿನಿ ಹಾಗೂ ಕಾರ್ಯಕ್ರಮದ ವೀಕ್ಷಣೆ ಹೆಚ್ಚಿದ್ದ ಬಗ್ಗೆ ಸಂಸ್ಥೆಯ ಪ್ರತಿನಿಧಿಗಳಿಗೆ ಅನುಮಾನ ಬಂದಿತ್ತು.

ಆಗ ಉನ್ನತ ಅಧಿಕಾರಿಗಳು, ಅಕ್ರಮ ಪತ್ತೆ ಹಚ್ಚಲು ಪ್ರತಿನಿಧಿಗಳ ತಂಡವೊಂದನ್ನು ರಚಿಸಿದ್ದರು. ರಾಜ್ಯಕ್ಕೆ ಭೇಟಿ ನೀಡಿದ್ದ ತಂಡವು ಪ್ರತಿಯೊಂದು ಮನೆಗೂ ಮಾರುವೇಷದಲ್ಲಿ ಹೋಗಿ ಮಾಹಿತಿ ಕಲೆಹಾಕಿದಾಗ, ಕೃತ್ಯ ಬಯಲಾಗಿದೆ.

ಆಡಿಯೊ, ವಿಡಿಯೊ ದಾಖಲೆ: ‘ಕೃತ್ಯಕ್ಕೆ ಸಂಬಂಧಪಟ್ಟ ಆಡಿಯೊ ಹಾಗೂ ವಿಡಿಯೊ ದಾಖಲೆಗಳನ್ನು ದೂರುದಾರರು ನೀಡಿದ್ದಾರೆ. ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ‘ ಎಂದು ಅಧಿಕಾರಿ ಹೇಳಿದರು.

ದೂರುದಾರರ ಮೊಬೈಲ್‌ ಸ್ವಿಚ್ಡ್‌ ಆಫ್‌: ‘ಕೃತ್ಯದ ಬಗ್ಗೆ ಡಿ. 30ರಂದು ಮಹೇಶ್‌ ದೂರು ನೀಡಿದ್ದರು. ಅವರಿಂದ ಪ್ರಕರಣದ ಬಗ್ಗೆ ಮತ್ತಷ್ಟು ಮಾಹಿತಿ ಪಡೆಯ ಬೇಕಿದೆ. ಅವರು ಹೊರರಾಜ್ಯದಲ್ಲಿದ್ದು, ಮೊಬೈಲ್‌ ಸ್ವಿಚ್ಡ್‌ ಆಫ್‌ ಬರುತ್ತಿದೆ. ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದು ಅಧಿಕಾರಿ ಹೇಳಿದರು.

ಮಾಲೀಕರು, ನಿರ್ದೇಶಕರು, ನಿರ್ಮಾಪಕರು ಶಾಮೀಲು?

‘ಕೃತ್ಯದಲ್ಲಿ ರಾಜ್ಯದ ಕೆಲ ವಾಹಿನಿಯ ಮಾಲೀಕರು, ಧಾರಾವಾಹಿ ಮತ್ತು ರಿಯಾಲಿಟಿ ಶೋಗಳ ನಿರ್ದೇಶಕರು ಮತ್ತು ನಿರ್ಮಾಪಕರು ಶಾಮೀಲಾಗಿದ್ದಾರೆ. ಆರೋಪಿಗಳು ಕೆಲವರ ಹೆಸರನ್ನು ಬಾಯ್ಬಿಟ್ಟಿದ್ದಾರೆ. ಅವರೆಲ್ಲರಿಗೂ ನೋಟಿಸ್‌ ನೀಡಿ ವಿಚಾರಣೆಗೆ ಕರೆಯಲಿದ್ದೇವೆ. ಕೃತ್ಯದಲ್ಲಿ ಅವರ ಪಾತ್ರ ಸಾಬೀತಾದರೆ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ತನಿಖಾಧಿಕಾರಿಗಳು ಹೇಳಿದರು.

ಹನ್ಸ್‌ ರಿಸರ್ಚ್‌ ಗ್ರೂಪ್‌ ಕಂಪನಿಗೆ ನೋಟಿಸ್‌: ಪ್ರಕರಣದ ಬಗ್ಗೆ ಠಾಣೆಗೆ ಹಾಜರಾಗಿ ಹೇಳಿಕೆ ನೀಡುವಂತೆ ಹನ್ಸ್‌ ರಿಸರ್ಚ್‌ ಗ್ರೂಪ್‌ ಕಂಪನಿಯ ಆಡಳಿತ ಮಂಡಳಿಗೆ ಸಿಸಿಬಿಯು ನೋಟಿಸ್‌ ನೀಡಿದೆ. ಹನ್ಸ್‌ ಕಂಪನಿಯ ಆಡಳಿತ ಮಂಡಳಿಯವರ ಹೇಳಿಕೆ ಮುಖ್ಯವಾಗಿದೆ. ಅವರು ಕಚೇರಿಗೆ ಬಂದು ಹೇಳಿಕೆ ನೀಡಿದ ಬಳಿಕ ಪ್ರಕರಣದಲ್ಲಿ ಅವರ ಪಾತ್ರವೇನು ಎಂಬುದು ತಿಳಿಯಲಿದೆ’ ಎಂದು ಹೆಚ್ಚುವರಿ ಪೊಲೀಸ್‌ ಕಮಿಷನರ್‌ (ಅಪರಾಧ) ಸತೀಶ್ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ನೋಟಿಸ್‌ ಬಗ್ಗೆ ಪ್ರತಿಕ್ರಿಯೆ ಪಡೆಯಲು ಹನ್ಸ್‌ ರಿಸರ್ಚ್‌ ಗ್ರೂಪ್‌ ಕಂಪನಿಯ ಆಡಳಿತ ಮಂಡಳಿಯವರು ಸಂಪರ್ಕಕ್ಕೆ ಸಿಗಲಿಲ್ಲ.

ಪ್ರೈಮ್ ಟೈಂಗೆ ಒತ್ತು

‘ರಾತ್ರಿ 7.30 ಗಂಟೆಯಿಂದ 10 ಗಂಟೆವರೆಗಿನ ಅವಧಿಯನ್ನು ಹೆಚ್ಚು ಮಂದಿ ಟಿ.ವಿ ವೀಕ್ಷಿಸುವ ವೇಳೆ ( ಪ್ರೈಮ್ ಟೈಂ) ಎಂದು ಪರಿಗಣಿಸಲಾಗುತ್ತದೆ. ಹಬ್ಬದಂಥ ವಿಶೇಷ ದಿನಗಳಲ್ಲಿ ಈ ವೇಳೆಗೆ ಹೆಚ್ಚಿನ ಜಾಹೀರಾತುಗಳು ಸಿಗುತ್ತವೆ.  ಪ್ರೈಮ್ ಟೈಂನಲ್ಲಿ ನಿರ್ದಿಷ್ಟ ವಾಹಿನಿಗಳ ಕಾರ್ಯಕ್ರಮ ವೀಕ್ಷಿಸುವಂತೆ ಆರೋಪಿಗಳು ಮನೆಯವರಿಗೆ ಸೂಚನೆ ನೀಡುತ್ತಿದ್ದರು’ ಎಂದು ತನಿಖಾಧಿಕಾರಿಗಳು ತಿಳಿಸಿದರು.

ಬೆಂಗಳೂರಿನಲ್ಲಿ ರಾತ್ರಿ 8ರಿಂದ ರಾತ್ರಿ 10 ಗಂಟೆ, ಮೈಸೂರಿನಲ್ಲಿ ರಾತ್ರಿ 7ರಿಂದ ರಾತ್ರಿ 9 ಗಂಟೆ ಹಾಗೂ ಹುಬ್ಬಳ್ಳಿ–ಧಾರವಾಡದಲ್ಲಿ ರಾತ್ರಿ 8ರಿಂದ ರಾತ್ರಿ 10 ಗಂಟೆವರೆಗೆ ನಿಗದಿತ ವಾಹಿನಿ ಹಾಗೂ ಕಾರ್ಯಕ್ರಮವನ್ನು ವೀಕ್ಷಿಸುವಂತೆ ಮನೆಯವರನ್ನು ಆರೋಪಿಗಳು ಒತ್ತಾಯಿಸಿರುವುದು ಗೊತ್ತಾಗಿದೆ. ಆರೋಪಿಗಳು, ಸಂಬಂಧಿಕರ ಮನೆಯಲ್ಲೇ ಮೀಟರ್‌ ಅಳವಡಿಕೆಯಾಗುವಂತೆ ನೋಡಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.

* ಆರೋಪಿಗಳನ್ನು ವಶಕ್ಕೆ ನೀಡುವಂತೆ ನ್ಯಾಯಾಲಯವನ್ನು ಕೋರಲಿದ್ದೇವೆ. ಅದು ಸಾಧ್ಯವಾದರೆ, ಆರೋಪಿಗಳಿಂದ ಮತ್ತಷ್ಟು ಮಾಹಿತಿ ಸಿಗಲಿದೆ

– ಸತೀಶ್ ಕುಮಾರ್‌ , ಹೆಚ್ಚುವರಿ ಪೊಲೀಸ್‌ ಕಮಿಷನರ್‌ (ಅಪರಾಧ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT