ಅಹಂಕಾರವೆಂಬ ಅಗ್ನಿ

7

ಅಹಂಕಾರವೆಂಬ ಅಗ್ನಿ

Published:
Updated:
ಅಹಂಕಾರವೆಂಬ ಅಗ್ನಿ

ಇಪ್ಪತ್ತನೇ ಶತಮಾನದ ಭಾರತದ ಅಧ್ಯಾತ್ಮಿಕ ಗುರುಗಳಲ್ಲಿ ಒಬ್ಬರಾದ ಯೇಸುಸಭೆಯ ಟೋನಿ ಡಿ’ಮೆಲ್ಲೊರವರು ಹೇಳಿದ ಕತೆಯಿದು: ಒಂದು ದಿನ ದೇವರು ಸ್ವರ್ಗವು ಜನರಿಂದ ತುಂಬಿ ತುಳುಕುತ್ತಿರುವುದನ್ನು ಕಂಡು, ಅರ್ಹರೊಡನೆ ಅನರ್ಹರೂ ಸ್ವರ್ಗದೊಳಕ್ಕೆ ನುಸುಳಿರುವ ಸಂದೇಹದಿಂದ, ಸ್ವರ್ಗದಲ್ಲಿ ಸ್ಥಾಪಿಸಲು ನಿರ್ಧರಿಸಿದ. ಎಲ್ಲರನ್ನು ತನ್ನ ನ್ಯಾಯಪೀಠದ ಮುಂದೆ ಬರಲು ಆಜ್ಞಾಪಿಸಿದ. ಜನರ ಸಜ್ಜನತೆಯನ್ನು ಪರೀಕ್ಷಿಸುವ ಸಲುವಾಗಿ, ತನ್ನ ದಶಾಜ್ಞೆಗಳನ್ನು ಓದಲು ದೇವದೂತನಿಗೆ ಆಜ್ಞೆಯನ್ನು ನೀಡಿದ.

ದೇವದೂತ ದೇವರ ದಶಾಜ್ಞೆಗಳಲ್ಲಿ ಪ್ರಥಮ ಆಜ್ಞೆಯನ್ನು ಓದಿ ಮುಗಿಸಿದಾಕ್ಷಣ, ಜನರ ದೊಡ್ಡ ಗುಂಪು ನರಕದ ಕಡೆಗೆ ಮುಖಮಾಡಿ ಹೊರಟು ಹೋಯಿತು. ಅವರೆಲ್ಲರೂ ಏಕದೇವರಲ್ಲಿ ವಿಶ್ವಾಸವಿರಿಸದೆ ಪಾಪವನ್ನು ಮಾಡಿದ್ದ ಜನರಾಗಿದ್ದರು. ಅಂತೆಯೇ, ಎರಡನೇ, ಮೂರನೇ...ಆರನೇ ಆಜ್ಞೆಯನ್ನು ದೇವದೂತನು ಓದಿದಾಗ, ಪ್ರತಿಸಲ ಜನರ ಗುಂಪುಗಳು ನರಕಕ್ಕೆ ಹೋದವು.

ದೇವದೂತನು ಏಳನೇ ಆಜ್ಞೆಯನ್ನು ಓದಲು ಆರಂಭಿಸಿದಾಗ, ತಾನು ದೇವರ ಆರು ಆಜ್ಞೆಗಳನ್ನು ಮುರಿಯದ ಸಜ್ಜನ ಎಂದು ಬೀಗುತ್ತಾ, ಒಬ್ಬನೇ ಒಬ್ಬ ಸ್ವರ್ಗದಲ್ಲಿ ದೇವಸನ್ನಿಧಿಯಲ್ಲಿ ಉಳಿದಿದ್ದ. ಸ್ವರ್ಗದ ಈ ಪರಿಸ್ಥಿತಿಯನ್ನು ಕಂಡು, ಛೆ, ಸ್ವರ್ಗದಲ್ಲಿ ಒಬ್ಬನೇ ಇರುವುದೇ, ಇದು ಸರಿಯಲ್ಲ, ಎಂದು ನರಕಕ್ಕೆ ತೆರಳಿದ ಎಲ್ಲರನ್ನೂ, ‘ಎಲ್ಲರೂ ಸ್ವರ್ಗಕ್ಕೆ ವಾಪಸ್ ಬನ್ನಿ’ ಎಂದು ಕರೆದ.

ನರಕಕ್ಕೆ ಕಳುಹಿಸಲ್ಪಟ್ಟವರನ್ನೆಲ್ಲಾ ದೇವರು ಕ್ಷಮಿಸಿ ಸ್ವರ್ಗಕ್ಕೆ ಹಿಂದಿರುಗಲು ಹೇಳಿದ್ದು ಕೇಳಿ, ಸ್ವರ್ಗದಲ್ಲಿ ಉಳಿದಿದ್ದ ಒಬ್ಬ ಸಜ್ಜನ ಕೆಂಡಾಮಂಡಲವಾಗಿ, ‘ಇದು, ಮೋಸ, ಇದು ಅನ್ಯಾಯ, ಇದು ಸರಿಯಲ್ಲ. ನನಗ್ಯಾಕೆ ಇದನ್ನು ಮೊದಲು ಹೇಳಿಲ್ಲ’ ಎಂದು ಚೀರಿದ.

ಮಾನವನು ತನ್ನ ದುರ್ಬಲತೆಗೆ ಬಲಿಯಾಗಿ ಅಜ್ಞಾನದಿಂದ ತಪ್ಪು ಮಾಡುವುದು ಸಾಮಾನ್ಯ. ಆದರೆ ಅಹಂಕಾರದಿಂದ ತನ್ನನ್ನು ತಾನೇ ಶ್ರೇಷ್ಠನೆಂದು ಭಾವಿಸಿ, ತನ್ನ ತಪ್ಪನ್ನು ಒಪ್ಪಿಕೊಳ್ಳದೇ ಉಳಿದವರನ್ನು ತೆಗಳಿ, ಜರೆಯುವವನು ಎಲ್ಲರಿಗಿಂತಲೂ ದೊಡ್ಡ ಪಾಪಿ ಎನ್ನಬಹುದು.

ಯೆಹೂದ್ಯ ಸಮಾಜದಲ್ಲಿ ಫರಿಸಾಯರು ಸಕಲ ವಿದ್ಯಾಪಾರಂಗತರಾಗಿದ್ದರೂ ಕೂಡಾ, ಇತರರನ್ನು ಹೀಗಳೆದು ತಾವೇ ಶ್ರೇಷ್ಠರು ಎಂಬ ಅಹಂಭಾವವನ್ನು ಹೊಂದಿದ್ದರು. ಕರುಣಾಮಯಿ ಯೇಸು, ಫರಿಸಾಯರ ಆಷಾಡಭೂತಿತನವನ್ನು ಖಂಡಿಸಿ, ಅವರನ್ನು ಸುಣ್ಣ ಬಳಿದ ಸಮಾಧಿಗಳು ಎಂದು ಖಂಡಿಸಿದರು.

ಇದನ್ನೇ ಮುಂದುವರಿಸಿ ಫರಿಸಾಯ ಹಾಗೂ ಸುಂಕ ವಸೂಲಿಗಾರನ ಸಾಮತಿಯಲ್ಲಿ, ತನ್ನನ್ನು ತಾನೇ ಹೊಗಳಿ ಗಗನಕ್ಕೇರಿಸಿ, ಸುಂಕ ವಸೂಲಿಗಾರನನ್ನು ಠೀಕಿಸಿದ ಫರಿಸಾಯನ ಪ್ರಾರ್ಥನೆಯನ್ನು ದೇವರು ಮೆಚ್ಚಲಿಲ್ಲ ಎನ್ನುತ್ತಾರೆ ಯೇಸುಸ್ವಾಮಿ. ಅಹಂಕಾರವು ಎಲ್ಲ ಸದ್ಗುಣಗಳನ್ನು ಬೆಂಕಿಯಂತೆ ಸುಟ್ಟು ಬೂದಿಯಾಗಿಸುವ ಕೆಟ್ಟಗುಣ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry