ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕೋರ್ಟ್‌ನಿಂದ ಎಎಪಿ ಅರ್ಜಿ ವಾಪಸ್‌

ರಾಷ್ಟ್ರಪತಿ ಆದೇಶದ ವಿರುದ್ಧ ಹೊಸ ಅರ್ಜಿ ಸಲ್ಲಿಸಲು ಅನರ್ಹ ಶಾಸಕರ ತೀರ್ಮಾನ
Last Updated 22 ಜನವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಲಾಭದಾಯಕ ಹುದ್ದೆಯ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ಚುನಾವಣಾ ಆಯೋಗ ರಾಷ್ಟ್ರಪತಿ ಅವರಿಗೆ ಮಾಡಿದ್ದ ಶಿಫಾರಸನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಆಮ್‌ ಆದ್ಮಿ ಪಕ್ಷದ (ಎಎಪಿ) 20 ಅನರ್ಹ ಶಾಸಕರು ಸೋಮವಾರ ವಾಪಸ್‌ ಪಡೆದಿದ್ದಾರೆ. 

ಚುನಾವಣಾ ಆಯೋಗ ಮಾಡಿದ್ದ ಶಿಫಾರಸನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅಂಗೀಕರಿಸಿರುವುದರಿಂದ ಮತ್ತು ಈ ಸಂಬಂಧ ಸರ್ಕಾರ ಅಧಿಸೂಚನೆಯನ್ನೂ ಹೊರಡಿಸಿರುವುದರಿಂದ ಅರ್ಜಿಯಿಂದ ಏನೂ ಪ್ರಯೋಜನವಿಲ್ಲ ಎಂದು ಅನರ್ಹ ಶಾಸಕರ ಪರ ವಕೀಲರು ಹೈಕೋರ್ಟ್‌ಗೆ ತಿಳಿಸಿದರು.

ಅನರ್ಹಗೊಳಿಸಿರುವುದರ ವಿರುದ್ಧ ಹೊಸದಾಗಿ ಅರ್ಜಿ ಸಲ್ಲಿಸುವುದಾಗಿ ವಕೀಲರು ಹೈಕೋರ್ಟ್‌ಗೆ ತಿಳಿಸಿದರು. ವಕೀಲರ ಮನವಿಯನ್ನು ನ್ಯಾಯಮೂರ್ತಿ ಮಾನ್ಯ ಮಾಡಿದರು.

ರಾಷ್ಟ್ರಪತಿ ಶಿಫಾರಸಿಗೆ ಅಂಕಿತ ಹಾಕಿದ ನಂತರ ಜ.20ರಂದೇ ಸರ್ಕಾರ ಅಧಿಸೂಚನೆ ಹೊರಡಿಸಿತ್ತು ಎಂದು ಅರ್ಜಿದಾರರ ಪರ ವಕೀಲ ನ್ಯಾಯಪೀಠಕ್ಕೆ ತಿಳಿಸಿದರು.

ಸಂಸದೀಯ ಕಾರ್ಯದರ್ಶಿಗಳಾಗಿ ನೇಮಕಗೊಂಡಿದ್ದ ಶಾಸಕರು ಲಾಭದಾಯಕ ಹುದ್ದೆ ಹೊಂದಿದ್ದರು. ಹಾಗಾಗಿ ಶಾಸಕ ಸ್ಥಾನದಿಂದ ಅವರನ್ನು ಅನರ್ಹಗೊಳಿಸಬಹುದು ಎಂದು ಚುನಾವಣಾ ಆಯೋಗ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಗೆ ಶಿಫಾರಸು ಮಾಡಿತ್ತು.

ದೆಹಲಿಯ ಜನತೆಗೆ ಎಎಪಿ ಬಹಿರಂಗ ಪತ್ರ

20 ಶಾಸಕರ ಅನರ್ಹಗೊಳಿಸಿರುವ ವಿಷಯವನ್ನು ಮುಂದಿಟ್ಟುಕೊಂಡು ಎಎಪಿ ದೆಹಲಿ ಜನತೆಗೆ ಬಹಿರಂಗ ಪತ್ರ ಬರೆದಿದೆ.

ದೆಹಲಿಯನ್ನು ಉಪಚುನಾವಣೆಗೆ ತಳ್ಳುವ ಮೂಲಕ ಸರ್ಕಾರ ಮಾಡುತ್ತಿರುವ ಉತ್ತಮ ಕೆಲಸಕ್ಕೆ ತಡೆಯೊಡ್ಡುವ ಯತ್ನದ ಭಾಗವಿದು. ಅರವಿಂದ ಕೇಜ್ರಿವಾಲ್‌ ಜನಪ್ರಿಯತೆ ಹೆಚ್ಚುತ್ತಿರುವುದಕ್ಕೆ ಅವರೆಲ್ಲ ಹೆದರಿದ್ದಾರೆ. ಸರ್ಕಾರ ಕಾರ್ಯನಿರ್ವಹಿಸುವುದು ಅವರಿಗೆ ಬೇಕಾಗಿಲ್ಲ’ ಎಂದು ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಹೇಳಿದ್ದಾರೆ.

ಬಹಿರಂಗ ಪತ್ರವನ್ನು ಟ್ವೀಟ್‌ ಮಾಡಿರುವ ಅವರು, ತಮ್ಮ ವಾದವನ್ನು ಮಂಡಿಸಲು ಅವಕಾಶ ನೀಡದೆಯೇ ಶಾಸಕರನ್ನು ಅನರ್ಹಗೊಳಿಸಲಾಗಿದೆ. ಅವರು ಒಂದು ರೂಪಾಯಿಯನ್ನೂ ವೇತನವಾಗಿ ಪಡೆದಿಲ್ಲ ಎಂದು ಅವರು ಹೇಳಿದ್ದಾರೆ.

ಪತ್ರಕ್ಕೆ ಪ್ರತಿಕ್ರಿಯಿಸಿ ಟ್ವೀಟ್‌ ಮಾಡಿರುವ ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್‌ ತಿವಾರಿ, ‘ಜನರ ಉತ್ತರ: ಪತ್ರಗಳನ್ನು ಬರೆಯಬೇಡಿ. 20 ಕ್ಷೇತ್ರಗಳ ಬದಲು ಎಲ್ಲ 70 ಕ್ಷೇತ್ರಗಳಲ್ಲಿ ಸ್ಪರ್ಧಿಸಿ’ ಎಂದು ಹೇಳಿದ್ದಾರೆ.

ಎಎಪಿ ಬೆಂಬಲಕ್ಕೆ ಸಿನ್ಹಾ ಜೋಡಿ

20 ಶಾಸಕರ ಅನರ್ಹಗೊಳಿಸಿರುವ ವಿಚಾರದಲ್ಲಿ ಬಿಜೆಪಿಯ ಇಬ್ಬರು ಬಂಡಾಯ ನಾಯಕರಾದ ಯಶವಂತ ಸಿನ್ಹಾ ಮತ್ತು ಶತ್ರುಘ್ನ ಸಿನ್ಹಾ ಅವರು ಎಎಪಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

‘ಶಾಸಕರನ್ನು ಅನರ್ಹಗೊಳಿಸುವ ರಾಷ್ಟ್ರಪತಿ ಅವರ ಆದೇಶ ಸಹಜ ನ್ಯಾಯಕ್ಕೆ ಸಂಪೂರ್ಣ ವಿರುದ್ಧವಾದುದು. ವಿಚಾರಣೆ ಇಲ್ಲ; ಹೈಕೋರ್ಟ್‌ ಆದೇಶಕ್ಕೆ ಕಾಯಲೂ ಇಲ್ಲ. ಇದು ತುಘಲಕ್‌ಶಾಹಿಯ ಅತ್ಯಂತ ಕೆಟ್ಟ ಆದೇಶ’ ಎಂದು ಯಶವಂತ ಸಿನ್ಹಾ ಟ್ವೀಟ್‌ ಮಾಡಿದ್ದಾರೆ. ‘ದ್ವೇಷದ ಅಥವಾ ಪಟ್ಟಭದ್ರ ಹಿತಾಸಕ್ತಿಗಳ ರಾಜಕಾರಣ ತುಂಬಾ ದಿನ ನಡೆಯುವುದಿಲ್ಲ. ಹೆದರಬೇಡಿ, ಸಂತಸದಿಂದಿರಿ’ ಎಂದು ಎಎಪಿಗೆ ಸಲಹೆ ಮಾಡುವ ರೀತಿಯಲ್ಲಿ ಶತ್ರುಘ್ನ ಸಿನ್ಹಾ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT