‘ದೇಹದ ಗಾಯ ವಾಸಿಯಾದರೂ, ಮನಸಿನ ಗಾಯ ವಾಸಿಯಾಗದು’

7

‘ದೇಹದ ಗಾಯ ವಾಸಿಯಾದರೂ, ಮನಸಿನ ಗಾಯ ವಾಸಿಯಾಗದು’

Published:
Updated:
‘ದೇಹದ ಗಾಯ ವಾಸಿಯಾದರೂ, ಮನಸಿನ ಗಾಯ ವಾಸಿಯಾಗದು’

ಜಮ್ಮು: ‘ಶೆಲ್ ದಾಳಿಯಿಂದ ನನ್ನ ದೇಹದ ಮೇಲೆ ಆಗಿರುವ ಗಾಯಗಳು ವಾಸಿಯಾಗುತ್ತವೆ. ಆದರೆ, ನನ್ನ ಹೆಂಡತಿಯ ಸಾವಿನಿಂದ ನನ್ನ ಮನಸಿಗೆ ಆಗಿರುವ ಗಾಯ ಎಂದಿಗೂ ವಾಸಿಯಾಗಲಾರದು’. ಇದು ಅಂತರರಾಷ್ಟ್ರೀಯ ಗಡಿಯ ಸಿಯಾ ಖುರ್ದ್ ಗ್ರಾಮದ ಜೀತ್ ರಾಜ್ ಅವರ ನೋವಿನ ಮಾತು. ಜನವರಿ 19ರಂದು ಪಾಕಿಸ್ತಾನ ನಡೆಸಿದ ಶೆಲ್ ದಾಳಿಯಲ್ಲಿ ಇವರ ಹೆಂಡತಿ ಮೃತಪಟ್ಟಿದ್ದರು.

‘ಶೆಲ್ ದಾಳಿ ಆರಂಭವಾದಾಗ ನಾನು ಮತ್ತು ನನ್ನ ಮಗ ಹೊಲದ ಕಡೆ ಹೋಗುತ್ತಿದ್ದೆವು. ಅಲ್ಲಿಂದ ವಾಪಾಸ್ ಮನೆಗೆ ಬರುವಷ್ಟರಲ್ಲಿ ನಮ್ಮ ಮನೆಯ ಕಾಂಪೌಂಡ್ ಛಿದ್ರವಾಗಿತ್ತು. ನನ್ನ ಕಣ್ಣೆದುರೇ ನನ್ನ ಹೆಂಡತಿ ಮೃತಪಟ್ಟಳು. ನಾನು ಮತ್ತು ಮಗ ಗಾಯಗೊಂಡೆವು’ ಎಂದು ಅವರು ವಿವರಿಸಿದರು. ಗಡಿ ಗ್ರಾಮಗಳ ಜನರು ಎಲ್ಲಿಯವರೆಗೆ ಪಾಕಿಸ್ತಾನದ ದಾಳಿಯನ್ನು ಸಹಿಸಿಕೊಂಡು ಸುಮ್ಮನಿರಬೇಕು ಎಂದು ಅವರು ಪ್ರಶ್ನಿಸಿದ್ದಾರೆ.

ಭಾರತ – ಪಾಕಿಸ್ತಾನ ಗಡಿಯಲ್ಲಿ ಪಾಕಿಸ್ತಾನ ನಡೆಸುತ್ತಿರುವ ಶೆಲ್ ದಾಳಿಯಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರ ನೋವು ಹೇಳತೀರದಾಗಿದೆ. ತಮ್ಮ ರಕ್ಷಣೆ ಜತೆಗೆ ಕುಟುಂಬದ ರಕ್ಷಣೆಯನ್ನೂ ಮಾಡಬೇಕಾಗಿದ್ದು, ಜೀವ ಉಳಿಸಿಕೊಳ್ಳುವ ಭರವಸೆಯನ್ನೇ ನಂಬಿ ದಿನದೂಡುತ್ತಿದ್ದಾರೆ.

ಪಾಕಿಸ್ತಾನದ ಶೆಲ್ ದಾಳಿಯಲ್ಲಿ ಕೊರೊಟೊನಾ ಗ್ರಾಮದ ಕಿಶನ್ ಲಾಲ್, ತಮ್ಮ 25 ವರ್ಷದ ಮಗನನ್ನು ಕಳೆದುಕೊಂಡಿದ್ದಾರೆ. ‘ಚಿಕ್ಕ ವಯಸ್ಸಿಗೇ ಮಗ ಸಾಯುವುದನ್ನು ತಂದೆಯಾಗಿ ನೋಡುವುದು ತುಂಬಾ ಕಷ್ಟವಾದುದು. ನನ್ನ ಮಗ ಸಾಹಿಲ್ ಶೆಲ್ ದಾಳಿಯಲ್ಲಿ ಮೃತಪಟ್ಟ. ಕೃಷಿ ಚಟುವಟಿಕೆಗಳಲ್ಲಿ ನನಗೆ ಸಹಕರಿಸುತ್ತಿದ್ದ’ ಎಂದು ತಮ್ಮ ನೋವು ಹಂಚಿಕೊಂಡಿದ್ದಾರೆ. ಕದನ ವಿರಾಮ ಉಲ್ಲಂಘನೆಯನ್ನು ನಾವು ಸಹಿಸಿಕೊಳ್ಳಬೇಕು. ಎಲ್ಲಿಯವರೆಗೂ ನಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಳ್ಳಬೇಕು? ಸರ್ಕಾರ ಇದಕ್ಕೆ ಸೂಕ್ತ ಪರಿಹಾರ ಕಂಡುಹಿಡಿಯಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ಗಡಿ ಭಾಗದ ಮತ್ತೊಂದು ಗ್ರಾಮ ಕಪೂರ್‌ಪುರದ 17 ವರ್ಷದ ಘರಾ ಸಿಂಗ್ ಮೃತಪಟ್ಟಿದ್ದಾರೆ. ಈ ಯುವಕ ತನ್ನ ಅಕ್ಕನ ಮದುವೆ ತಯಾರಿಗೆ ಓಡಾಡುತ್ತಿದ್ದರು. ಇವರ ತಂದೆಯೂ ತಮ್ಮ ನೋವು, ಆಕ್ರೋಶ ಹೊರಹಾಕಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಪಾಕಿಸ್ತಾನ ಸೇನೆ ಶೆಲ್ ದಾಳಿ ನಡೆಸುತ್ತಿದ್ದು, 40 ಸಾವಿರಕ್ಕೂ ಹೆಚ್ಚು ಜನ, 5 ಸಾವಿರಕ್ಕೂ ಹೆಚ್ಚು ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಪಾಕ್ ದಾಳಿ: ಮತ್ತೊಂದು ಸಾವು

ಶ್ರೀನಗರ: ಪಾಕಿಸ್ತಾನದ ಸೈನಿಕರು ಅಂತರರಾಷ್ಟ್ರೀಯ ಗಡಿಯಲ್ಲಿ ಬರುವ ವಿವಿಧ ಪ್ರದೇಶಗಳಲ್ಲಿ ಭಾನುವಾರ ರಾತ್ರಿ ನಡೆಸಿದ ಶೆಲ್ (ಬಾಂಬ್) ಹಾಗೂ ಗುಂಡಿನ ದಾಳಿಯಲ್ಲಿ ಒಬ್ಬರು ಸತ್ತಿದ್ದು, ಇಬ್ಬರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ.

ಇದರೊಂದಿಗೆ ನಾಲ್ಕು ದಿನಗಳಲ್ಲಿ ಪಾಕಿಸ್ತಾನದ ದಾಳಿಯಲ್ಲಿ ಸತ್ತವರ ಸಂಖ್ಯೆ 12ಕ್ಕೆ ಏರಿದೆ.

ಪ್ರಗ್ವಾಲ್, ಮಾಡ್, ಆರ್.ಎಸ್.ಪುರ, ಅರ್ನಿಯಾ, ರಾಂಗಢ ಮಂತಾದ ವಲಯಗಳ ಮೇಲೆ ದಾಳಿ ನಡೆಸಿದ್ದಾರೆ. ಕನಚಕ್ ಎಂಬಲ್ಲಿ ಮನೆಯ ಮೇಲೆ ಬಾಂಬ್ ಬಿದ್ದು ರಾಮದಾಸ್ ಬಾವಾ, ಗೋಪಾಲ್‌ದಾಸ್ ಬವಾ ಎಂಬ ಸಹೋದರರು ಗಾಯಗೊಂಡರು.

ಇವರಲ್ಲಿ ಗೋಪಾಲ್ ದಾಸ್ ಬಾವಾ ನಂತರ ಮೃತಪಟ್ಟರು. ಇದೇ ಪ್ರದೇಶದಲ್ಲಿ ಬಿಮ್ಲಾ ದೇವಿ ಎಂಬುವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಜಮ್ಮುವಿನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ನಮ್ಮ ಯೋಧರೂ ಗುಂಡಿನಿಂದಲೇ ಪ್ರತ್ಯುತ್ತರ ನೀಡಿದ್ದಾರೆ. ಗುಂಡಿನ ಚಕಮಕಿ ಸೋಮವಾರ ಬೆಳಿಗ್ಗೆ 5.45ರ ವೇಳೆಗೆ ನಿಂತಿದೆ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry