ಅಂಕಿತ ಬೇಡ: ‘ಅಹಿಂಸಾ’ ಮನವಿ

7
ಸ್ಪಷ್ಟನೆ ಕೇಳಿದ ಕೇಂದ್ರ ಗೃಹ ಸಚಿವಾಲಯ

ಅಂಕಿತ ಬೇಡ: ‘ಅಹಿಂಸಾ’ ಮನವಿ

Published:
Updated:
ಅಂಕಿತ ಬೇಡ: ‘ಅಹಿಂಸಾ’ ಮನವಿ

ಬೆಂಗಳೂರು: ರಾಷ್ಟ್ರಪತಿ ಅಂಕಿತಕ್ಕಾಗಿ ಕಳುಹಿಸಿರುವ ಬಡ್ತಿ ಮೀಸಲು ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ರಾಜ್ಯ ಸರ್ಕಾರದಿಂದ ಕೆಲವು ಸ್ಪಷ್ಟನೆಗಳನ್ನು ಕೇಳಿರುವ ಬೆನ್ನಲ್ಲೆ, ಯಾವುದೇ ಕಾರಣಕ್ಕೂ ಈ ಮಸೂದೆಗೆ ಅನುಮೋದನೆ ನೀಡಬಾರದು ಎಂದು ಅಹಿಂಸಾ (ಅಲ್ಪಸಂಖ್ಯಾತ, ಹಿಂದುಳಿದ, ಸಾಮಾನ್ಯ ವರ್ಗಗಳ ನೌಕರರ) ಒಕ್ಕೂಟ ರಾಷ್ಟ್ರಪತಿಗೆ ದಾಖಲೆಗಳ ಸಮೇತ ಮನವಿ ಸಲ್ಲಿಸಿದೆ.

ಮಸೂದೆ ಉದ್ದೇಶ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪ್ರಾತಿನಿಧ್ಯದ ಮಾಹಿತಿ ಸಂಬಂಧದ ವಿವರಣೆಗಳನ್ನು ನೀಡುವಂತೆ ಕೇಂದ್ರ ಗೃಹಸಚಿವಾಲಯ ರಾಜ್ಯ ಸರ್ಕಾರವನ್ನು ಕೇಳಿದೆ.

ಸಂಸದೀಯ ಇಲಾಖೆ ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ (ಡಿಪಿಎಆರ್‌) ಈಗಾಗಲೇ ಕೆಲವು ಮಾಹಿತಿ ಪಡೆದುಕೊಂಡಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಈ ಮಧ್ಯೆ, ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಅಹಿಂಸಾ ಒಕ್ಕೂಟ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರಿಗೆ ಸಂವಿಧಾನದ ವಿಧಿ 16 (4ಎ)ಯಲ್ಲಿ ಪ್ರಸ್ತಾಪಿಸಿದಂತೆ ಸೂಕ್ತ ಪ್ರಾತಿನಿಧ್ಯ (ಶೇ 18ರಷ್ಟು) ನೀಡಬೇಕು. ಅದೇ ಸಂದರ್ಭದಲ್ಲಿ, ಶೇ 82ರಷ್ಟಿರುವ ಇತರ ಸಮುದಾಯದ ನೌಕರರಿಗೆ ಸಂವಿಧಾನದ ವಿಧಿ 16 (1)ಯಲ್ಲಿ ಪ್ರಸ್ತಾಪಿಸಿದಂತೆ ಶೇ 82ರಷ್ಟು ಬಡ್ತಿ ಸೌಲಭ್ಯ ಸಿಗಬೇಕು’ ಎಂದು ರಾಷ್ಟ್ರಪತಿಗೆ ಬರೆದ ಪತ್ರದಲ್ಲಿ ಪ್ರತಿಪಾದಿಸಿದೆ.

‘15 ಲಕ್ಷ ನೌಕರರ ಪರವಾಗಿ ಈ ಮನವಿ ಸಲ್ಲಿಸುತ್ತಿದ್ದೇವೆ. ಅಷ್ಟೇ ಅಲ್ಲ, ಸೂಕ್ಷ್ಮವಾದ ಈ ವಿಷಯವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು’ ಎಂದೂ ಆಗ್ರಹಿಸಿದೆ.

ರಾಜ್ಯದಲ್ಲಿರುವ ಒಟ್ಟು ಸರ್ಕಾರಿ ನೌಕರರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪ್ರಾತಿನಿಧ್ಯದ ಅಂಕಿಅಂಶವನ್ನು ನೀಡಲಾಗಿದೆ. ಆ ಅಂಶ ಆಧಾರವಾಗಿಟ್ಟು ಪ್ರಾತಿನಿಧ್ಯದ ಕೊರತೆ ಬಗ್ಗೆ ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಸುಪ್ರೀಂ ಕೋರ್ಟ್‌ ತನ್ನ ಆದೇಶದಲ್ಲಿ ಬಡ್ತಿ ಹುದ್ದೆಗಳಲ್ಲಿನ ಪ್ರಾತಿನಿಧ್ಯದ ವಿಚಾರ ಪ್ರಸ್ತಾಪಿಸಿದೆ ಎಂದೂ ಮನವಿಯಲ್ಲಿದೆ.

ಸುಪ್ರೀಂ ಕೋರ್ಟ್‌ ರದ್ದುಪಡಿಸಿದ ‘ಬಡ್ತಿ ಮೀಸಲು ಕಾಯ್ದೆ 2002’ರಲ್ಲಿರುವ ಅಂಶಗಳನ್ನೇ ಹೊಸ ಮಸೂದೆಯಲ್ಲಿ ರಾಜ್ಯ ಸರ್ಕಾರ ಸೇರಿಸಿದೆ. ಈ ಕಾಯ್ದೆ ವಿರುದ್ಧ ವಿವಿಧ ನ್ಯಾಯಾಲಯಗಳಲ್ಲಿ 25 ವರ್ಷಗಳಿಂದ ಕಾನೂನು ಹೋರಾಟ ನಡೆಯುತ್ತಿದೆ. ಕಾಯ್ದೆಯಿಂದಾಗಿ 35 ವರ್ಷಗಳ ಸರ್ಕಾರಿ ಸೇವೆಯಲ್ಲಿ ಒಂದೂ ಬಡ್ತಿ ಪಡೆಯದೆ ಸಾವಿರಾರು ನೌಕರರು ನಿವೃತ್ತರಾಗಿದ್ದಾರೆ. ಮಸೂದೆಗೆ ಅಂಕಿತ ಹಾಕಿದರೆ ಮತ್ತೆ ಅದೇ ಪರಿಸ್ಥಿತಿ ಮುಂದುವರಿಯಲಿದೆ’ ಎಂದೂ ಅಹಿಂಸಾ ಕೋರಿದೆ.

‘ಬಡ್ತಿಯಲ್ಲಿ ಮೀಸಲಾತಿ ನೀಡುವ ವಿಷಯದಲ್ಲಿ ನಮ್ಮ ವಿರೋಧ ಇಲ್ಲ. ಆದರೆ, ತತ್ಪರಿಣಾಮ ಜ್ಯೇಷ್ಠತೆ ನೀಡುವುದಕ್ಕೆ ವಿರೋಧವಿದೆ. ತತ್ಪರಿಣಾಮ ಜ್ಯೇಷ್ಠತೆಯಿಂದಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರಿಗೆ ನೀಡಬೇಕಾದ ಪ್ರಮಾಣಕ್ಕಿಂತ ಹೆಚ್ಚಿನ ಬಡ್ತಿ ಸೌಲಭ್ಯ ಸಿಗುತ್ತಿದೆ. ಇದರಿಂದ ಇತರ ವರ್ಗಗಳ ನೌಕರರಿಗೆ ಅನ್ಯಾಯವಾಗುತ್ತಿದೆ’ ಎಂದೂ ಅಹಿಂಸಾ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry