‘ಬೆಳವಣಿಗೆಗೆ ಜಾತಿ ಲಕ್ಷ್ಮಣ ರೇಖೆಯಾಗದಿರಲಿ’

7

‘ಬೆಳವಣಿಗೆಗೆ ಜಾತಿ ಲಕ್ಷ್ಮಣ ರೇಖೆಯಾಗದಿರಲಿ’

Published:
Updated:
‘ಬೆಳವಣಿಗೆಗೆ ಜಾತಿ ಲಕ್ಷ್ಮಣ ರೇಖೆಯಾಗದಿರಲಿ’

ಬೆಂಗಳೂರು: ‘ಮನುಷ್ಯನ ಬೆಳವಣಿಗೆ ಹಾಗೂ ಜ್ಞಾನಾರ್ಜನೆಗೆ ಜಾತಿ ಲಕ್ಷ್ಮಣರೇಖೆಯಾಗಬಾರದು’ ಎಂದು ನಿವೃತ್ತ ಜಿಲ್ಲಾ ನ್ಯಾಯಾಧೀಶ ಕೆ.ವಿ.ವಾಸುದೇವ ಮೂರ್ತಿ ಹೇಳಿದರು.

ಕರ್ನಾಟಕ ಆರ್ಯವೈಶ್ಯ ಸಾಹಿತ್ಯ ಪರಿಷತ್ ವತಿಯಿಂದ ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಏಳನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಹಿಳೆಯರು ಹಾಗೂ ಯುವಜನರಲ್ಲಿ ಸಾಹಿತ್ಯದ ಒಲವು ಕಡಿಮೆಯಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಸಾಹಿತ್ಯ ಎಂದರೇನು, ಅದರ ಅಗತ್ಯ ಇದೆಯೇ ಹಾಗೂ ಸಮಾಜದ ಬೆಳವಣಿಗೆಗೆ ಅದು ಸಹಕಾರಿಯೇ ಎಂಬ ಪ್ರಶ್ನೆ ಇಂದಿನ ಪೀಳಿಗೆಯವರನ್ನು ಕಾಡುತ್ತಿದೆ. ಸಾಹಿತ್ಯದ ಮಹತ್ವವನ್ನು ಬಹುತೇಕರು ಅರಿತಿಲ್ಲ. ಜೀವನದ ಜಂಜಾಟಗಳಿಗೆ ಸಾಂತ್ವನ ನೀಡುವುದೇ ಸಾಹಿತ್ಯ. ಜನರನ್ನು ಚಿಂತನಾಶೀಲರನ್ನಾಗಿ ಮಾಡುವ ಶಕ್ತಿ ಸಾಹಿತ್ಯಕ್ಕೆ ಇದೆ ಎಂದರು.

ತೆಲುಗಿನಲ್ಲಿ ಮಾತನಾಡಲು ಸಂಕೋಚ ಬೇಡ: ಆರ್ಯವೈಶ್ಯರ ಮಾತೃಭಾಷೆ ತೆಲುಗು. ಆ ಭಾಷೆಯಲ್ಲಿ ಮಾತನಾಡಲು ಸಂಕೋಚ ಬೇಡ ಎಂದು ಸಾಹಿತಿ ಹಂ.ಪ.ನಾಗರಾಜಯ್ಯ ಹೇಳಿದರು.

ಪರಿಷತ್‌ನ ‘ದಶಮಾನೋತ್ಸವ’ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಮಾತೃಭಾಷೆಯನ್ನು ಯಾವುದೇ ಕಾರಣಕ್ಕೆ ಬಿಟ್ಟುಕೊಡಬಾರದು. ಪ್ರತಿಯೊಂದು ಭಾಷೆಯ ಬಗ್ಗೆ ಆಯಾ ಭಾಷಿಕರಿಗೆ ಹೆಚ್ಚುಗಾರಿಕೆ ಇರಬೇಕು. ನಾವು ನೆಲೆಸಿರುವ ಪ್ರದೇಶದ ಜನರೊಟ್ಟಿಗೆ ಸಾಮರಸ್ಯದಿಂದ ಬಾಳುವ ಬಗ್ಗೆಯೂ ಅಷ್ಟೇ ಹೆಚ್ಚುಗಾರಿಕೆ ಇರಬೇಕು. ಅದನ್ನು ಆರ್ಯವೈಶ್ಯರು ಪ್ರಾಮಾಣಿಕವಾಗಿ ಪಾಲಿಸುತ್ತಿದ್ದಾರೆ’ ಎಂದು ಹೇಳಿದರು.

ಕರ್ನಾಟಕದಲ್ಲಿ ತೆಲುಗು ಮಾತನಾಡುವ ಶೇ 75ರಷ್ಟು ಜನರು ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿದ್ದಾರೆ. ಅನೇಕ ವರ್ಷಗಳಿಂದ ಅಲ್ಲಿಯೇ ವಾಸವಾಗಿರುವ ಅವರು ಪ್ರತ್ಯೇಕ ತೆಲುಗು ಶಾಲೆಗಾಗಿ ಎಂದೂ ಬೇಡಿಕೆ ಇಟ್ಟವರಲ್ಲ. ಆಂಧ್ರಪ್ರದೇಶಕ್ಕೆ ಹೋಗುತ್ತೇವೆ ಎಂದವರಲ್ಲ. ಅಲ್ಲಿ ಭಾಷಾ ಆಧಾರದ ಮೇಲೆ ದ್ವೇಷಕ್ಕೆ ಆಸ್ಪದವಿಲ್ಲ ಎಂದು ಹೇಳಿದರು.

ಆರ್ಯವೈಶ್ಯರು ತೆಲುಗು ಮಾತೃಭಾಷಿಕರಾಗಿದ್ದರೂ ಕನ್ನಡಕ್ಕೆ ಕೊಟ್ಟಿರುವ ಕೊಡುಗೆ ಅಪಾರ. ಆ ಬಗ್ಗೆ ಸಿಂಹಾವಲೋಕನ ಮಾಡಬೇಕು. ರನ್ನ, ಕಾಶಿ ವಿಶ್ವನಾಥ ಶೆಟ್ಟಿ, ವಿಜಯ ಸುಬ್ಬರಾಜು ಹಾಗೂ ನಾಗರಾಜು ಶೆಟ್ಟಿ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.

ಸಮ್ಮೇಳನದಲ್ಲಿ ಮಂಡನೆಯಾದ ನಿರ್ಣಯಗಳು

* ಆರ್ಯ ವೈಶ್ಯ ಸಮಾಜಕ್ಕೆ ಮೀಸಲಾತಿ ನೀಡಬೇಕು

* ಪ್ರತ್ಯೇಕ ಮಠ ಸ್ಥಾಪಿಸಬೇಕು

* ಪ್ರತಿ ಮನೆಯಲ್ಲಿ ಸಣ್ಣ ಪುಸ್ತಕ ಭಂಡಾರ ರೂಪಿಸುವ ಬಗ್ಗೆ ಜಾಗೃತಿ ಮೂಡಿಸಬೇಕು

* ಆರ್ಯ ವೈಶ್ಯರಲ್ಲಿರುವ ಬಡವರಿಗೆ ಸರ್ಕಾರದ ಮೂಲಸೌಲಭ್ಯಗಳನ್ನು ಒದಗಿಸಿಕೊಡಬೇಕು

* ಆಧುನಿಕ ತಂತ್ರಜ್ಞಾನದ ಮೂಲಕ ಕನ್ನಡ ಸಾಹಿತ್ಯ ಬೆಳೆಸಬೇಕು

*  ಏಕತೆಗೆ ಧಕ್ಕೆ ತಂದು ಪ್ರತ್ಯೇಕ ದೀಪವಾಗಿ ಬೆಳಗುವುದಕ್ಕಿಂತ ಸ್ಥಳೀಯರೊಂದಿಗೆ ಬೆರೆತು ಎಲ್ಲರಿಗೂ ಬೆಳಕು ಕೊಡುವುದು ಲೇಸು. ಆರ್ಯವೈಶ್ಯರು ಈ ಕೆಲಸ ಮಾಡುತ್ತಿದ್ದಾರೆ 

 –ಹಂ.ಪ.ನಾಗರಾಜಯ್ಯ, ಸಾಹಿತಿ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry