ಫಲ್ಗುಣಿ ನದಿ ಸೇರುತ್ತಿದೆ ಕಪ್ಪು ನೀರು, ಎಣ್ಣೆ ಅಂಶ

7

ಫಲ್ಗುಣಿ ನದಿ ಸೇರುತ್ತಿದೆ ಕಪ್ಪು ನೀರು, ಎಣ್ಣೆ ಅಂಶ

Published:
Updated:
ಫಲ್ಗುಣಿ ನದಿ ಸೇರುತ್ತಿದೆ ಕಪ್ಪು ನೀರು, ಎಣ್ಣೆ ಅಂಶ

ಮಂಗಳೂರು: ಬೈಕಂಪಾಡಿ ಕೈಗಾ ರಿಕಾ ಪ್ರದೇಶದ ಬಳಿ ಫಲ್ಗುಣಿ ನದಿ ಸೇರುವ ತೋಕೂರು ಹಳ್ಳದಲ್ಲಿ ಕೊಳಕು ನೀರು ಹರಿಯುತ್ತಿದ್ದು ಈ ಹಳ್ಳದ ದಂಡೆಯುದ್ದಕ್ಕೂ ವಾಸಿಸುವ ಗ್ರಾಮಸ್ಥರು ಮಲಿನ ನೀರಿನ ಸಮಸ್ಯೆ, ದುರ್ವಾಸನೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಈ ಹಳ್ಳದ ಮೂಲಕ ಹಾದು ಬರುವ ಮಲಿನ ನೀರು ಫಲ್ಗುಣಿ ನದಿ ಯನ್ನೂ ಸೇರುವುದರಿಂದ ನದಿ ನೀರಿನಲ್ಲಿಯೂ ಮಲಿನ ಅಂಶಗಳು ಸೇರಿಕೊಂಡಿವೆ. ನೀರಿನ ಮೇಲ್ಮೈಯಲ್ಲಿ ಎಣ್ಣೆಯಂತಹ ಪದರವೊಂದು ಸೃಷ್ಟಿಯಾಗಿದ್ದು ನೀರಿಗಿಳಿದ ಜನರ ಕಾಲುಗಳಲ್ಲಿ ತುರಿಕೆ, ಬೊಬ್ಬೆಗಳು ಕಾಣಿಸಿಕೊಳ್ಳುತ್ತಿವೆ.

ಜೋಕಟ್ಟೆಯ 62ನೇ ತೋಕೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಪ್ರಸಿಲ್ಲಾ ಮೊಂತೆರೊ ಅವರು ಸ್ಥಳೀಯ ಸಮಸ್ಯೆಯ ಬಗ್ಗೆ ವಿವರಿಸುತ್ತ, ‘ಪ್ರತಿ ಗ್ರಾಮ ಸಭೆಯಲ್ಲಿಯೂ ಈ ಭಾಗದ ಜನರು ಮಾಲಿನ್ಯ ಸಮಸ್ಯೆಯನ್ನು ಹೇಳಿಕೊಳ್ಳುತ್ತಾರೆ.

ಆದರೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾ ರಿಗಳೇ ಗ್ರಾಮಸಭೆಗೆ ತಡವಾಗಿ ಬರು ತ್ತಾರೆ. ಅಥವಾ ಗೈರು ಹಾಜರಾಗುತ್ತಾರೆ. ಗ್ರಾಮ ಪಂಚಾಯಿತಿ ವತಿಯಿಂದ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಮಸ್ಯೆಯನ್ನು ವಿವರಿಸಿ ಪತ್ರ ಬರೆ ಯಲಾಗಿದೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ’ ಎನ್ನುತ್ತಾರೆ.

2016ನೇ ಸಾಲಿನ ಬೇಸಿಗೆ ಯಲ್ಲಿಯೇ ತೋಕೂರು ಹಳ್ಳದಲ್ಲಿ ನೀರು ಮಲಿನಗೊಂಡಾಗ ಸ್ಥಳೀಯರು ‘ಫಲ್ಗುಣಿ ಉಳಿಸಿ’ ಅಭಿಯಾನ ನಡೆಸಿದ್ದೆವು. ಅದರ ಪರಿಣಾಮವೆಂಬಂತೆ ನದಿ ಮಾಲಿನ್ಯ ಕುರಿತು ಅಧ್ಯಯನ ನಡೆಸಲು ಜಿಲ್ಲಾಡಳಿತವು ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರತಿನಿಧಿ, ಬೈಕಂಪಾಡಿ ಕೈಗಾರಿಕಾ ಪ್ರದೇಶದ ವಿವಿಧ ಕೈಗಾರಿಕಾ ಕಂಪೆನಿಗಳ ಪ್ರತಿನಿಧಿಗಳನ್ನೊಳಗೊಂಡ ಸಮಿತಿಯೊಂದನ್ನು ಜಿಲ್ಲಾಡಳಿತ ನೇಮಕ ಮಾಡಿತ್ತು.

‘ಕಳೆದ ವರ್ಷ ಸಮಿತಿ ನೇಮಕ ಆಗುವಷ್ಟರಲ್ಲಿ ಮಳೆಗಾಲ ಶುರುವಾಗಿದ್ದರಿಂದ ಆ ಸಮಸ್ಯೆಯು ಮರೆಯಾಯಿತು. ಸಮಿತಿಯ ವರದಿಯ ಬಗ್ಗೆಯೂ ಮಾಹಿತಿ ಬರಲಿಲ್ಲ. ಇದೀಗ ಮತ್ತೆ ಸಮಸ್ಯೆ ಶುರುವಾಗಿದೆ. ಜಿಲ್ಲಾಡಳಿತ ಈ ಕುರಿತು ಗಮನ ಹರಿಸಬೇಕಾಗಿದೆ’ ಎನ್ನುತ್ತಾರೆ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ.

ಸ್ಥಳೀಯ ಉದ್ಯಮಿ ರವಿ ಪಾವ್ಲ್‌ ಫೆರಾವೊ ಕೂಡ ಈ ಸಮಸ್ಯೆಯ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾರೆ. ‘ಇಲ್ಲಿನ ಮೀನುಗಾರಿಕೆ ಉದ್ಯಮವೇ ನೆಲಕಚ್ಚಿದೆ. ಮನೆಬಳಕೆಗೂ ತೋಕೂರು ಹಳ್ಳದಲ್ಲಿ ಅಥವಾ ಫಲ್ಗುಣಿ ನದಿಯಲ್ಲಿ ಮೀನುಗಾರಿಕೆ ಮಾಡುವಂತಿಲ್ಲ. ನದಿಯ ಮೀನು ತಿಂದರೆ ಆರೋಗ್ಯ ಹಾಳಾಗುವ ಆತಂಕವಿದೆ. ಈ ಮಾಲಿನ್ಯದಿಂದಾಗಿ ಕೆಂಜಾರು, ಪಡುಕೋಡಿ, ಬಂಗ್ರಕೂಳೂರು, ಮೇಲುಕೊಪ್ಪಲು, ಕುಂಜತ್‌ಬೈಲ್‌ ಗ್ರಾಮ, ಮರಕಡ ವ್ಯಾಪ್ತಿಯ ಜನರಿಗೆ ನೀರಿನ ಸಮಸ್ಯೆ ಉದ್ಭವಿಸಿದೆ’ ಎಂದು ಹೇಳುತ್ತಾರೆ.

‘ಫಲ್ಗುಣಿ ನದಿಗೆ ಮಲಿನ ನೀರು ಮತ್ತು ತ್ಯಾಜ್ಯ ಸೇರುತ್ತಿರುವ ಬಗ್ಗೆ ಇತ್ತೀಚೆಗೆ ಅನೇಕ ದೂರುಗಳು ಬಂದಿವೆ. ಇನ್ನೆರೆಡು ದಿನದಲ್ಲಿ ಈ ಕುರಿತು ಪರಿಶೀಲನೆ ನಡೆಸಲಾಗುವುದು. ಮಾಲಿನ್ಯ ನಿಯಂತ್ರಣ ಮಂಡಳಿಯ ಗಮನಕ್ಕೂ ಈ ವಿಷಯ ತರಲಾಗಿದೆ’ ಎಂದು ಪಾಲಿಕೆ ಜಂಟಿ ಆಯುಕ್ತ ಗೋಕುಲ್‌ದಾಸ್‌ ನಾಯಕ್‌ ತಿಳಿಸಿದ್ದಾರೆ.

‘ಕೇಂದ್ರೀಕೃತ ತ್ಯಾಜ್ಯ ಸಂಸ್ಕರಣ ಘಟಕ ಬೇಕು’

ರುಚಿಗೋಲ್ಡ್‌, ಅದಾನಿ ವಿಲ್ಮಾರ್‌, ಅನುಗ್ರಹ ಸೇರಿದಂತೆ ಹತ್ತಾರು ಕಂಪನಿಗಳು ಬೈಕಂಪಾಡಿ ಪ್ರದೇಶದಲ್ಲಿವೆ. ಮಧ್ಯಮ ಗಾತ್ರದ ಕೈಗಾರಿಕೆಗಳು ತ್ಯಾಜ್ಯ ಸಂಸ್ಕರಿಸುವ ಘಟಕ ಹೊಂದಿವೆ ಎಂದು ಆರ್‌ಟಿಐ ಮಾಹಿತಿಯಲ್ಲಿ ಲಭ್ಯವಾಗಿದೆ. ಆದರೆ ಸಣ್ಣ ಗಾತ್ರದ 200ಕ್ಕೂ ಹೆಚ್ಚು ಕೈಗಾರಿಕೆಗಳಿಗೆ ಕೇಂದ್ರೀಕೃತ ತ್ಯಾಜ್ಯ ಸಂಸ್ಕರಣ ಘಟಕವನ್ನು ನಿರ್ಮಿಸಿದಲ್ಲಿ ಈ ಹಳ್ಳಕ್ಕೆ ಕಲುಷಿತ ನೀರು ಸೇರುವುದನ್ನು ತಪ್ಪಿಸಬಹುದು ಎನ್ನುತ್ತಾರೆ ಮುನೀರ್‌.

ನಮ್ಮ ಊರು ನದಿ ದಂಡೆಯ ಮೇಲಿದೆ. ಮಾಲಿನ್ಯ ನಿಯಂತ್ರಿಸಿ ಈ ಹಳ್ಳದ ನೀರನ್ನು ಸ್ವಚ್ಛ ಮಾಡದೇ ಇದ್ದರೆ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಬಹುದು.

ನಿತಿನ್‌ ಫೆರಾವೊ ಸ್ಥಳೀಯ ಮೀನುಗಾರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry