ಮಹಾರಾಣಿ ವಾಣಿಜ್ಯ ಕಾಲೇಜು ಉದ್ಘಾಟನೆ ಸಜ್ಜು

7

ಮಹಾರಾಣಿ ವಾಣಿಜ್ಯ ಕಾಲೇಜು ಉದ್ಘಾಟನೆ ಸಜ್ಜು

Published:
Updated:
ಮಹಾರಾಣಿ ವಾಣಿಜ್ಯ ಕಾಲೇಜು ಉದ್ಘಾಟನೆ ಸಜ್ಜು

ಮೈಸೂರು: ನಗರದ ಪಡುವಾರಹಳ್ಳಿಯಲ್ಲಿ ನಿರ್ಮಾಣಗೊಂಡಿರುವ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಹಾಗೂ ಹಾಸ್ಟೆಲ್‌ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಜ.24ರಂದು ಉದ್ಘಾಟಿಸಲಿದ್ದಾರೆ.

4.32 ಎಕರೆ ಪ್ರದೇಶದಲ್ಲಿ ₹ 174.6 ಕೋಟಿ ವೆಚ್ಚದಲ್ಲಿ ನಿರ್ಮಾಣ ಗೊಂಡಿರುವ ಕಟ್ಟಡದಲ್ಲಿ 32 ತರಗತಿಗಳು ಒಳಗೊಂಡಂತೆ ಒಟ್ಟು 85 ಕೊಠಡಿಗಳು ಇವೆ. ನಾಲ್ಕು ಗ್ರಂಥಾಲಯಗಳು, ತಲಾ ಒಂದು ಕಂಪ್ಯೂಟರ್‌ ಸೆಂಟರ್‌, ಸೆಮಿನಾರ್ ಹಾಲ್‌. ಕೌನ್ಸೆಲಿಂಗ್‌ ಕೊಠಡಿ, ಆರು ಅಧ್ಯಯನ ಕೊಠಡಿಗಳು ಇವೆ. ಮುಂದಿನ ಶೈಕ್ಷಣಿಕ ವರ್ಷದಿಂದ ಸುಮಾರು 3,600 ವಿದ್ಯಾರ್ಥಿನಿಯರು ಇಲ್ಲಿ ವ್ಯಾಸಂಗ ಮಾಡಲಿದ್ದಾರೆ.

ಕಾಲೇಜಿನ ಎರಡನೇ ಹಂತದ ಯೋಜನೆಗೆ ಮುಖ್ಯಮಂತ್ರಿ ಇದೇ ಸಂದರ್ಭ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮೊದಲ ಹಂತದಲ್ಲಿ ಮೂರು ಮಹಡಿಗಳ ಕಟ್ಟಡ ನಿರ್ಮಾಣಗೊಂಡಿದೆ. ಎರಡನೇ ಹಂತದಲ್ಲಿ ಇನ್ನೆರಡು ಮಹಡಿಗಳು ನಿರ್ಮಾಣಗೊಳ್ಳಲಿವೆ. ಎರಡನೇ ಹಂತದ ಕಾಮಗಾರಿಗೆ ಅಂದಾಜು ₹ 50 ಕೋಟಿ ಮೀಸಲಿಡಲಾಗಿದೆ.

ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಎಲ್ಲ ಅತ್ಯಾಧುನಿಕ ಸೌಲಭ್ಯಗಳು ದೊರೆಯಲಿವೆ ಎಂದು ಶಾಸಕ ಮತ್ತು ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿರುವ ವಾಸು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಹಾರಾಣಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಒಟ್ಟು 9 ಸಾವಿರಕ್ಕೂ ಅಧಿಕ ವಿದ್ಯಾರ್ಥಿನಿಯರು ಕಲಿಯುತ್ತಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದರಿಂದ ಕಟ್ಟಡ ಹಾಗೂ ಕೊಠಡಿಗಳ ಕೊರತೆ ಉಂಟಾಗಿತ್ತು. ಇದೀಗ ವಾಣಿಜ್ಯ ಕಾಲೇಜಿಗೆ ಪ್ರತ್ಯೇಕ ಕಟ್ಟಡ ದೊರೆತಿರುವ ಕಾರಣ ಸಮಸ್ಯೆ ಬಗೆಹರಿಯಲಿದೆ ಎಂದರು.

ಒಂದು ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಹಾಸ್ಟೆಲ್‌ನಲ್ಲಿ 117 ಕೊಠಡಿಗಳಿದ್ದು, ಸುಮಾರು 1000 ವಿದ್ಯಾರ್ಥಿನಿಯರಿಗೆ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.

ಬುಧವಾರ ಬೆಳಿಗ್ಗೆ 11 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಲೋಕೋಪಯೋಗಿ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಪಾಲ್ಗೊಳ್ಳಲಿದ್ದಾರೆ.

ಇತಿಹಾಸ: ಮಹಿಳೆಯರಿಗೆ ಶಿಕ್ಷಣ ಒದಗಿಸುವ ಉದ್ದೇಶದಿಂದ ರಾಣಿ ಕೆಂಪನಂಜಮ್ಮ ಅವರು 1881ರಲ್ಲಿ ಮಹಾರಾಣಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆ ಆರಂಭಿಸಿದ್ದರು. ಆರಂಭದಲ್ಲಿ 28 ಮಕ್ಕಳು ಇದ್ದರು. 1902ರಲ್ಲಿ ಮಹಾರಾಣಿ ಕಾಲೇಜು ಆರಂಭವಾಯಿತು. ಮದ್ರಾಸ್‌ ವಿ.ವಿ. ಅಧೀನದಲ್ಲಿದ್ದ ಕಾಲೇಜು, 1917ರಲ್ಲಿ ಪೂರ್ಣ ಪ್ರಮಾಣದಲ್ಲಿ ಉನ್ನತ ಶಿಕ್ಷಣದ ಕೇಂದ್ರವಾಗಿ ಬದಲಾಯಿತಲ್ಲದೆ ಮೈಸೂರು ವಿ.ವಿ ಅಧೀನಕ್ಕೆ ಒಳಪಟ್ಟಿತು.

1979ರಲ್ಲಿ ಮಹಾರಾಣಿ ಕಾಲೇಜು ವಿಭಜನೆಯಾಗಿ ಮಹಾರಾಣಿ ಕಲಾ ಕಾಲೇಜು ಮತ್ತು ಮಹಾರಾಣಿ ವಿಜ್ಞಾನ ಕಾಲೇಜು ಅಸ್ವಿತ್ವಕ್ಕೆ ಬಂದವು. 1983ರಲ್ಲಿ ಮಹಾರಾಣಿ ವಾಣಿಜ್ಯ ಕಾಲೇಜು ಆರಂಭವಾಯಿತು.

ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ರಮೇಶ್‌, ಪ್ರಶಾಂತ್‌ ಗೌಡ, ಕಾರ್ಯಪಾಲಕ ಎಂಜಿನಿಯರುಗಳಾದ ಸತ್ಯರಾಜ್‌, ರಾಮಚಂದ್ರ, ಮಂಜುನಾಥ್‌ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಇದ್ದರು.

ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ

ಮುಖ್ಯಮಂತ್ರಿ ಅವರು ಬುಧವಾರ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನಂಜರಾಜ ಬಹದ್ದೂರ್‌ ಛತ್ರದ ಆವರಣದಲ್ಲಿ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ವಿದ್ಯಾರ್ಥಿನಿಲಯ (₹ 46 ಕೋಟಿ ವೆಚ್ಚ), ಜಲದರ್ಶಿನಿ ಅತಿಥಿಗೃಹ ಆವರಣದಲ್ಲಿ ಸಿಬ್ಬಂದಿ ವಸತಿಗೃಹ ಮತ್ತು ಅಡುಗೆಮನೆ ನಿರ್ಮಾಣ (₹ 5 ಕೋಟಿ) ಹಾಗೂ ಕೃಷ್ಣರಾಜ ಬುಲೆವಾರ್ಡ್‌ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖಾ ಕಚೇರಿ (₹ 5 ಕೋಟಿ) ನಿರ್ಮಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry