ಉದ್ಯಮಗಳಿಗೆ ಸಹಕರಿಸದ ಬ್ಯಾಂಕುಗಳು

7

ಉದ್ಯಮಗಳಿಗೆ ಸಹಕರಿಸದ ಬ್ಯಾಂಕುಗಳು

Published:
Updated:
ಉದ್ಯಮಗಳಿಗೆ ಸಹಕರಿಸದ ಬ್ಯಾಂಕುಗಳು

ರಾಯಚೂರು: ಸರ್ಕಾರವು ಜಾರಿಗೊಳಿಸಿದ ವಿವಿಧ ಯೋಜನೆಗಳಡಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಸ್ಥಾಪಿಸುವುದಕ್ಕೆ ಬ್ಯಾಂಕುಗಳು ಮೊದಲಿನಂತೆ ಸಹಕಾರ ನೀಡುತ್ತಿಲ್ಲ ಎಂದು ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಮೊಹ್ಮದ್‌ ಇರ್ಫಾನ್‌ ವಿಷಾದ ವ್ಯಕ್ತಪಡಿಸಿದರು.

ನಗರದ ಗಂಜ್‌ ವ್ಯಾಪಾರಿಗಳ ಒಕ್ಕೂಟದ ಕಲ್ಯಾಣ ಮಂಟಪದಲ್ಲಿ ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ (ಎಂಎಸ್‌ಎಂಇ) ಕಲಬುರ್ಗಿ ವಿಭಾಗ ಕಚೇರಿ, ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ರಾಯಚೂರು ವಾಣಿಜ್ಯೋದ್ಯಮಗಳ ಸಂಘದಿಂದ ಏರ್ಪಡಿಸಿದ ಎರಡು ದಿನಗಳ ‘ಮಾರಾಟಗಾರರ ಅಭಿವೃದ್ಧಿ ಹಾಗೂ ಕೈಗಾರಿಕಾ ಪ್ರದರ್ಶನ’ದ ಉದ್ಘಾಟನಾ ಸಮಾರಂಭದಲ್ಲಿ ಸೋಮವಾರ ಮಾತನಾಡಿದರು.

ಪರಿಶಿಷ್ಟ ಜಾತಿ/ಪಂಗಡ ಹಾಗೂ ಮಹಿಳೆಯರು ಕೈಗಾರಿಕೆ ಆರಂಭಿಸಲು ಕೇಂದ್ರ ಸರ್ಕಾರವು ವಿಶೇಷ ಯೋಜನೆ ರೂಪಿಸಿದೆ. ಇವರಿಗೆ ಕನಿಷ್ಠ ₹2 ಕೋಟಿ ಸಾಲ ಕೊಟ್ಟು ಉದ್ಯಮ ಆರಂಭಿಸಲು ಪ್ರೋತ್ಸಾಹಿಸುವುದಕ್ಕೆ ಬ್ಯಾಂಕುಗಳು ಹಿಂದೇಟು ಹಾಕುತ್ತಿವೆ. ಸದ್ಯಕ್ಕೆ ಇಡೀ ದೇಶದಲ್ಲಿ ಮಾದರಿಯಾದ ಕೈಗಾರಿಕಾ ನೀತಿ ಕರ್ನಾಟಕದಲ್ಲಿ ಜಾರಿಯಲ್ಲಿದೆ ಎಂದು ತಿಳಿಸಿದರು.

ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ 250 ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಆರಂಭವಾಗಿದ್ದು, ₹116 ಕೋಟಿ ಬಂಡವಾಳ ತೊಡಗಿಸಿವೆ. ಇವುಗಳಿಂದಾಗಿ 1,600 ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ. ಹೈದರಾಬಾದ್‌ ಕರ್ನಾಟಕದಲ್ಲಿ ಸ್ಥಾಪನೆಯಾದ ಕೈಗಾರಿಕೆಗಳಿಗೆ ಶೇ 35 ಸಹಾಯಧನವನ್ನು ಸರ್ಕಾರ ನೀಡುತ್ತಿದೆ ಎಂದರು.

ಕೈಗಾರಿಕೆಗಳನ್ನು ಆರಂಭಿಸುವುದಕ್ಕೆ ಜಾಗದ ಅನುಮತಿಗಾಗಿ ಅಲೆದಾಡುವ ಪರಿಸ್ಥಿತಿ ಇಲ್ಲ. ಕೃಷಿ ಅಥವಾ ಇತರೆ ಜಮೀನಿಗೆ ಸೆಕ್ಷೆನ್‌ 104 ರ ಪ್ರಕಾರ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದು, ನೇರವಾಗಿ ಕೈಗಾರಿಕೆ ಆರಂಭಿಸಬಹುದು. ರಾಯಚೂರಿನಲ್ಲಿ ಹೊಸ ಕೈಗಾರಿಕಾ ವಲಯ ಆರಂಭಿಸುವುದಕ್ಕೆ 500 ಎಕರೆ ಭೂ ಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ. ಎರಡು ವರ್ಷಗಳಿಂದ ರಾಯಚೂರಿನಲ್ಲಿ ಕೈಗಾರಿಕೆಗಳ ಪರಿಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆ ಕಂಡು ಬಂದಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಮಾತನಾಡಿ, ದೇಶದ ಆರ್ಥಿಕ ಪ್ರಗತಿ ಎರಡಂಕಿ ದಾಟಲಿದೆ ಎಂದು ಹೇಳಿದರು. ಉತ್ಪಾದಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದ ಚೀನಾದ ಆರ್ಥಿಕತೆ ಕುಸಿಯುತ್ತಿದೆ. ಈ ಅವಕಾಶವನ್ನು ಭಾರತ ಬಳಸಿಕೊಳ್ಳಲಿದೆ. ಸೇವಾ ಮತ್ತು ಉತ್ಪಾದಕ ಕ್ಷೇತ್ರದಲ್ಲಿ ಭಾರತದಲ್ಲಿ ವಿಫುಲ ಅವಕಾಶಗಳಿವೆ ಎಂದು ಹೇಳಿದರು.

ರಾಯಚೂರು ವಾಣಿಜ್ಯೋದ್ಯಮಗಳ ಸಂಘದ ಅಧ್ಯಕ್ಷ ತ್ರಿವಿಕ್ರಮ ಜೋಷಿ ಮಾತನಾಡಿ, ಉದ್ಯಮಗಳನ್ನು ಸ್ಥಾಪಿಸಲು, ಪ್ರೋತ್ಸಾಹಿಸಲು ಮತ್ತು ಉದ್ಯಮಿಗಳಿಗೆ ನೆರವಾಗಲು ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿವೆ. ಈ ಭಾಗದ ಪದವೀಧರರು ಬೆಂಗಳೂರು, ಹೈದರಾಬಾದ್‌ ಕಡೆಗೆ ಉದ್ಯೋಗ ಅರಸಿಕೊಂಡು ಹೋಗುವುದು ಸಾಮಾನ್ಯ. ಇಲ್ಲಿಯೆ ಇದ್ದು ಉದ್ಯಮಗಳನ್ನು ಆರಂಭಿಸಬಹುದಾಗಿದೆ ಎಂದು ಸಲಹೆ ನೀಡಿದರು.

ಸರ್ಕಾರದ ವಿವಿಧ ಇಲಾಖೆಗಳು ಕಡ್ಡಾಯವಾಗಿ ಶೇ 20 ರಷ್ಟು ವಸ್ತುಗಳನ್ನು ಸಣ್ಣ, ಮಧ್ಯಮ ಕೈಗಾರಿಕೆಗಳಿಂದಲೇ ಖರೀದಿಸಬೇಕೆನ್ನುವ ನಿಯಮವನ್ನು ಸರ್ಕಾರಗಳು ಮಾಡಿವೆ. ಎಲ್ಲ ನಿಟ್ಟಿನಲ್ಲೂ ಕೈಗಾರಿಕೆಗಳನ್ನು ಉತ್ತೇಜಿಸಲು ಸರ್ಕಾರವು ಯೋಜನೆಗಳನ್ನು ರೂಪಿಸಿದೆ ಎಂದು ಹೇಳಿದರು.

ಎಂಎಸ್‌ಎಂಇ ಇಲಾಖೆಯು ಸಿದ್ಧಪಡಿಸಿದ ಸ್ಮರಣೆ ಸಂಚಿಕೆಯನ್ನು ಅತಿಥಿಗಳು ಬಿಡುಗಡೆ ಮಾಡಿದರು. ಹುಬ್ಬಳ್ಳಿಯ ಎಂಎಸ್‌ಎಂಇ ಉಪ ನಿರ್ದೇಶಕ ಮಿಲಿಂದ್‌ ಬಾರಪತ್ರೆ, ಬಳ್ಳಾರಿಯ ಎನ್‌ಎಂಡಿಸಿ ಸುರೇಶ ಬಾಬು, ಸಿಐಟಿಡಿ ಮುಖ್ಯ ನಿರ್ದೇಶಕ ಸುಜಯತ್‌ ಖಾನ್‌, ಅಧಿಕಾರಿಗಳಾದ ಎಂ.ಕೆ. ಆಂಜನಯ್ಯ ಇದ್ದರು. ರಾಯಚೂರು ವಾಣಿಜ್ಯೋದ್ಯಮಗಳ ಸಂಘದ ಕಾರ್ಯದರ್ಶಿ ಜಂಬಣ್ಣ ವಂದಿಸಿದರು. ಪರಿಮಳಾ ಎಸ್‌.ದೀಕ್ಷಿತ್‌ ನಿರೂ

ಗಮನ ಸೆಳೆದ ಬೀಸುವ ಯಂತ್ರ

ರಾಯಚೂರಿನ ಗಂಜ್‌ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ಕೈಗಾರಿಕಾ ಪ್ರದರ್ಶನದಲ್ಲಿ ‘ಕಿಸಾನ್‌ ಮೆಣಸಿನಕಾಯಿ ಬೀಸುವ ಯಂತ್ರ’ವು ಗಮನ ಸೆಳೆಯುತ್ತಿದೆ. 1.5 ಅಡಿ ಉದ್ದ ಮತ್ತು 2.5 ಅಗಲವಿರುವ ಈ ಯಂತ್ರದಲ್ಲಿ ಒಂದು ಗಂಟೆಯಲ್ಲಿ 30 ಕಿಲೋ ಮೆಣಸಿನಕಾಯಿ ಪುಡಿ ಮಾಡಬಹುದು.

ಶೇಂಗಾ, ಪುಟಾಕಿ, ಬೆಳ್ಳುಳ್ಳಿ– ಶುಂಠಿ ಚಟ್ನಿಗಳನ್ನು ಸಹ ಸಿದ್ಧಪಡಿಸಿಕೊಳ್ಳಲು ಅನುಕೂಲವಾಗುವಂತೆ ಇದನ್ನು ಮೊಹ್ಮದ್‌ ಆರೀಫ್‌ ಅವರು ಸಿದ್ಧಪಡಿಸಿದ್ದಾರೆ. ಕಲಬುರ್ಗಿ ಜಿಲ್ಲೆ ಚಿತ್ತಾಪುರದ ಆರೀಫ್‌ ಅವರು ಯಂತ್ರವನ್ನು ಪ್ರದರ್ಶನದಲ್ಲಿ ಇಟ್ಟಿದ್ದು, ಆಸಕ್ತರು ವೀಕ್ಷಣೆ ಮಾಡ ಬಹುದು

ಮತ್ತು ಖರೀದಿಸುವುದಕ್ಕೂ ಲಭ್ಯವಿದೆ. ಮನೆಗಳಲ್ಲಿ ಅಥವಾ ವಾಣಿಜ್ಯ ಉದ್ದೇಶಕ್ಕಾಗಿಯೂ ಇದನ್ನು ಖರೀದಿಸಬಹುದು. ಹೋಟೆಲ್‌ ಉದ್ಯಮಿಗಳಿಗೆ ತುಂಬಾ ನೆರವಾಗುವ ಯಂತ್ರ ಇದಾಗಿದೆ. ಹೆಚ್ಚಿನ ಮಾಹಿತಿಗೆ 90369 74390.

* * 

ರಾಯಚೂರು ಉದ್ಯಮಗಳಿಗೆ ತುಂಬಾ ಪ್ರಶಸ್ತವಾಗಿದೆ. ಸಮೀಪದಲ್ಲೆ ದೊಡ್ಡ ನಗರಗಳಿದ್ದು, ಉದ್ಯಮಿದಾರರು ಭೌಗೋಳಿಕ ಅನುಕೂಲಗಳನ್ನು ಬಳಸಿಕೊಳ್ಳುತ್ತಿಲ್ಲ.

ಡಾ.ಬಗಾದಿ ಗೌತಮ್‌ ಜಿಲ್ಲಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry