ಸರಳ ವಿವಾಹ: ಸುಂದರ ಜೀವನಕ್ಕೆ ರಹದಾರಿ

7

ಸರಳ ವಿವಾಹ: ಸುಂದರ ಜೀವನಕ್ಕೆ ರಹದಾರಿ

Published:
Updated:
ಸರಳ ವಿವಾಹ: ಸುಂದರ ಜೀವನಕ್ಕೆ ರಹದಾರಿ

ತುಮಕೂರು: ‘ರೈತರು ಮತ್ತು ಬಡಜನರು ಮದುವೆಗೆಂದು ಹತ್ತಾರು ಲಕ್ಷ ಖರ್ಚು ಮಾಡಿ ಸಾಲದ ಚಕ್ರದಲ್ಲಿ ಸಿಲುಕುತ್ತಾರೆ. ಇಂತಹ ಆಡಂಬರಗಳಿಗೆ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಇದನ್ನೆಲ್ಲ ಬಿಟ್ಟು ಪ್ರತಿಯೊಬ್ಬರೂ ಸರಳವಾಗಿ ವಿವಾಹ ಮಾಡಿಕೊಂಡು ಸುಂದರ ಜೀವನ ನಡೆಸಬೇಕು’ ಎಂದು ಶಾಸಕ ಬಿ. ಸುರೇಶ ಗೌಡ ಹೇಳಿದರು.

ತಾಲ್ಲೂಕಿನ ಕೈದಾಳ ಗ್ರಾಮದಲ್ಲಿ ನಡೆದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಅವರು ಮಾತನಾಡಿದರು. ‘ನನ್ನ ಪತ್ನಿ ಯಾವಾಗಲೂ ಮಗಳ ಮದುವೆ ಬಗ್ಗೆ ಚಿಂತಿಸುತ್ತಿರುತ್ತಾಳೆ. ಹೀಗಾಗಿಯೇ ಸರಳ ಮದುವೆಯ ಮಹತ್ವ ನಮ್ಮ ಮನೆಯವರಿಗೂ ಅರ್ಥ ಆಗಲಿ ಎಂದೇ ಕುಟುಂಬದ ಎಲ್ಲರನ್ನೂ ಕರೆದುಕೊಂಡು ಬಂದಿದ್ದೇನೆ. ನನ್ನ ಪತ್ನಿ ಮತ್ತು ಮಕ್ಕಳಿಗೆ ಈ ಸಾಮೂಹಿಕ ವಿವಾಹ ಸಮಾರಂಭವನ್ನು ನೋಡಿ ಬಹಳ ಸಂತಸವಾಗಿದೆ’ ಎಂದರು.

ನಮ್ಮ ಹಿರಿಯರೆಲ್ಲ ಬಹಳ ಸರಳವಾಗಿ ಮನೆಯ ಮುಂದೆಯೇ ಮದುವೆಯಾಗುತ್ತಿದ್ದರು. ಬಹಳ ಅನ್ಯೋನ್ಯ ದಾಂಪತ್ಯ ಜೀವನ ಸಾಗಿಸುತ್ತಿದ್ದರು ಎಂದು ತಿಳಿಸಿದರು. ‘ಗ್ರಾಮದಲ್ಲಿ ₹ 5.5 ಕೋಟಿ ವೆಚ್ಚದಲ್ಲಿ ಅಮರಶಿಲ್ಪಿ ಜಕಣಾಚಾರಿ ಸಮುದಾಯಭವನ ನಿರ್ಮಿಸಲಾಗಿದೆ. ಗ್ರಾಮಸ್ಥರ ಒತ್ತಾಯದ ಮೇರೆಗೆ ಈ ಸಭಾಭವನದಲ್ಲಿ ಸಾಮೂಹಿಕ ವಿವಾಹ ಸಮಾರಂಭ ಮಾಡಿಸಿದ್ದೇನೆ. ನವ ದಂಪತಿ, ಮತ್ತವರ ಕುಟುಂಬದ ಮುಖದಲ್ಲಿದ್ದ ಸಂತಸವು ನನ್ನ ಕೆಲಸಕ್ಕೆ ಸಾರ್ಥಕತೆ ನೀಡಿದೆ’ ಎಂದರು.

‘ನನಗೆ ಉತ್ತಮ ಕಾರ್ಯಕರ್ತರ ಬೆಂಬಲ ದೊರೆತಿದೆ.  ಇಡೀ ದೇಶದ ಯಾವ ರಾಜಕಾರಣಿಗೂ ನನಗೆ ಸಿಕ್ಕಂತಹ ಕಾರ್ಯಕರ್ತರು ಸಿಕ್ಕಿಲ್ಲ. ಹೀಗಾಗಿ ಯಾವುದೇ ರಾಜಕೀಯ ಪಕ್ಷದವರು ಬಂದರೂ ನನ್ನನ್ನು ಸೋಲಿಸಲು ಸಾಧ್ಯವಿಲ್ಲ’ ಎಂದರು.

ಆದಿಚುಂಚನಗಿರಿ ಶಾಖಾ ಮಠದ ಮಂಗಳನಾಥ ಸ್ವಾಮೀಜಿ ಮಾತನಾಡಿ, ‘ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಜನಪ್ರತಿನಿಧಿಗಳನ್ನು ಹುಡುಕಿಕೊಂಡು ಹೋಗುವುದನ್ನು ನೋಡಿದ್ದೇವೆ. ಆದರೆ ಇಲ್ಲಿನ ಜನರಿಗೆ ಮಾತ್ರ ಆ ಸಮಸ್ಯೆ ಇಲ್ಲ. ಶಾಸಕರೇ ಜನರ ಮಧ್ಯ ಹೋಗಿ ಕೆಲಸ ಮಾಡಿಕೊಡುತ್ತಿದ್ದಾರೆ. ಇದು ಈ ಭಾಗದ ಜನರ ಅದೃಷ್ಟ’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ವೈ.ಎಚ್‌.ಹುಚ್ಚಯ್ಯ ಮಾತನಾಡಿ, ‘ಜಕಣಾಚಾರಿಯು ಕಲ್ಲನ್ನು ಕೆತ್ತಿ ಶಿಲ್ಪಿ ಎನಿಸಿಕೊಂಡಂತೆ ಸುರೇಶ ಗೌಡರು ಗ್ರಾಮಾಂತರ ಕ್ಷೇತ್ರದ ಅಭಿವೃದ್ಧಿಯ ಶಿಲ್ಪಿ ಆಗಿದ್ದಾರೆ.  ಬಡ ಕುಟುಂಬದ ಕೆಂಪೇಗೌಡರು ಬೆಂಗಳೂರಿನ ನಿರ್ಮಾಣ ಮಾಡಿದಂತೆ ಇವರು ಗ್ರಾಮಾಂತರ ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ’ ಎಂದರು.

16 ನವಜೋಡಿ ಸರಳ ವಿವಾಹ ಮಾಡಿಕೊಳ್ಳುವುದರ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಜಿ.ಪಂ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಜಿ.ಪಂ ಸದಸ್ಯ ಗೂಳೂರು ಶಿವಕುಮಾರ್‌, ನರಸಿಂಹಮೂರ್ತಿ, ರಾಜೇಗೌಡ, ಶಿವಮ್ಮ ನಾಗರಾಜು, ತಾ.ಪಂ ಅಧ್ಯಕ್ಷ ಗಂಗಾಂಜನೇಯ, ಉಪಾಧ್ಯಕ್ಷ ಶಾಂತಕುಮಾರ್‌ ಇದ್ದರು.

ಮನ್ನಣೆ ನೀಡದ ಸಿಎಂ

’ಜಕಣಾಚಾರಿ ಹುಟ್ಟಿದ ಊರು ಆಗಿರುವುದರಿಂದ ಕೈದಾಳ ಗ್ರಾಮಕ್ಕೆ ಐತಿಹಾಸಿಕ ಮಹತ್ವ ಇದೆ. ಹೀಗಾಗಿಯೇ ಇಲ್ಲಿ ಸಮುದಾಯ ಭವನ ಕಟ್ಟಿಸಬೇಕು ಎನ್ನುವ ಉದ್ದೇಶದಿಂದ ಅನುದಾನಕ್ಕಾಗಿ ಸುಮಾರು 50 ಬಾರಿ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದೇನೆ. ಆದರೆ ಅವರು ಇದಕ್ಕೆ ಮನ್ನಣೆ ನೀಡಿಲ್ಲ’ ಎಂದು ಸುರೇಶ್‌ ಗೌಡ ಹೇಳಿದರು. ’ಸರ್ಕಾರದಿಂದ ಅನುದಾನ ಸಿಗದಿದ್ದರೂ ಇಲ್ಲಿ ಸಮುದಾಯ ಭವನ ತಲೆ ಎತ್ತಿ ನಿಲ್ಲುವಂತೆ ಮಾಡಿದ್ದೇನೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry