ಕನಸು ನನಸಾದ ಸಾರ್ಥಕ ಕ್ಷಣ...!

7

ಕನಸು ನನಸಾದ ಸಾರ್ಥಕ ಕ್ಷಣ...!

Published:
Updated:
ಕನಸು ನನಸಾದ ಸಾರ್ಥಕ ಕ್ಷಣ...!

ವಿಜಯಪುರ: ಕನಸು ನನಸಾದ ಸಾರ್ಥಕತೆ ಚಿನ್ನದ ಹಕ್ಕಿಗಳದ್ದು... ನಿರಂತರ ಅಧ್ಯಯನಕ್ಕೆ ಸಂದ ಪದವಿ ಪಡೆದ ಖುಷಿಯಲ್ಲಿ ಸಂಶೋಧಕರು... ಇವರಿಬ್ಬರ ಸಾಧನೆಯನ್ನು ಕಣ್ತುಂಬಿ ಕೊಳ್ಳುವ ತವಕದಲ್ಲಿ ಕುಟುಂಬ ವರ್ಗ... ಇದಕ್ಕೆ ಸಾಕ್ಷಿಯಾಗಿದ್ದು ನಗರ ಹೊರ ವಲಯದ ತೊರವಿ ಬಳಿಯಿರುವ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಜ್ಞಾನಶಕ್ತಿ ಕ್ಯಾಂಪಸ್‌.

ವಿ.ವಿ.ಆವರಣದಲ್ಲಿ ಸೋಮವಾರ ನಡೆದ ಒಂಭತ್ತನೇ ಘಟಿಕೋತ್ಸವ ಹಬ್ಬದ ವಾತಾವರಣ ಸೃಷ್ಟಿಸಿತ್ತು. ಎತ್ತ ನೋಡಿದರೂ ಮಂದಹಾಸದ ಮೊಗಗಳೇ ಗೋಚರಿಸಿದವು. ಕುಟುಂಬ ವರ್ಗಕ್ಕೆ ತಾವು ಓದಿದ ಕ್ಯಾಂಪಸ್‌ನ ಆವರಣ ಪರಿಚಯಿಸಿ, ಗೆಳತಿಯರೊಡನೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಚಿತ್ರಣವೇ ರಾರಾಜಿಸಿತು.

ಮಕ್ಕಳು, ಪತ್ನಿಯರ ಜೀವಮಾನದ ಸಾಧನೆ ಕಣ್ತುಂಬಿಕೊಳ್ಳಲು, ಇಡೀ ಕುಟುಂಬ ವರ್ಗವೇ ಘಟಿಕೋತ್ಸವ ಸಮಾರಂಭದ ಸಭಾಂಗಣದಲ್ಲಿ ಹಾಜರಿತ್ತು. ತಮ್ಮವರು ವೇದಿಕೆ ಏರಿದ ಸಮಯ ಮೊಬೈಲ್‌ಗಳಲ್ಲಿ ಮುಗಿಬಿದ್ದು ಛಾಯಾಚಿತ್ರ ಕ್ಲಿಕ್ಕಿಸಿದರು. ವಿಡಿಯೋ ಚಿತ್ರೀಕರಿಸಿದ ದೃಶ್ಯ ಸಾಮಾನ್ಯವಾಗಿತ್ತು.

ಕುಲಪತಿಯಿಂದ ಚಿನ್ನದ ಪದಕ ಪಡೆದು ವೇದಿಕೆ ಇಳಿಯುತ್ತಿದ್ದಂತೆ, ಸಹಪಾಠಿಗಳು ಸಹ ಆತ್ಮೀಯವಾಗಿ ಅಭಿನಂದಿಸಿದರು. ಪದಕ ಸ್ವೀಕರಿಸುವ ಸಂದರ್ಭ ಚಪ್ಪಾಳೆ ತಟ್ಟಿ ಹುರಿದುಂಬಿಸಿದರು.

ಪಾಲಕರು ಸಹ ಪದಕ ಪಡೆದ ತಮ್ಮ ಮಕ್ಕಳೊಂದಿಗೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಇದರ ನಡುವೆಯೇ ಸಾಧಕರು ‘ಸೆಲ್ಫಿ’ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದು ವಿಶೇಷವಾಗಿತ್ತು.

ಪತ್ನಿಯರು ಚಿನ್ನದ ಪದಕ, ಸಂಶೋ ಧನಾ ಪ್ರಬಂಧ ಮಂಡಿಸಿದ್ದಕ್ಕಾಗಿ ದೊರೆತ ಪಿಎಚ್‌.ಡಿ ಪದವಿ ಸ್ವೀಕಾರ ಮಾಡುವುದನ್ನು ಕಣ್ತುಂಬಿಕೊಳ್ಳಲು ಪತಿರಾಯರು ಕುಟುಂಬ ಸಮೇತ ರಾಗಿ ಬಂದು, ಸಂತಸ ಇಮ್ಮಡಿಗೊಳಿಸಿದರು.

ವೇದಿಕೆಯಲ್ಲಿ ಮಗಳು ಚಿನ್ನದ ಪದಕ ಕೊರಳಿಗೇರಿಸಿ ಕೊಳ್ಳುತ್ತಿದ್ದಂತೆ, ಸಭಾಂಗಣದಲ್ಲಿದ್ದ ಪೋಷಕರು ಆನಂದಭಾಷ್ಪ ಸುರಿಸಿ, ತಮ್ಮ ಶ್ರಮ ಸಾರ್ಥಕವಾಯಿತು ಎಂಬ ಧನ್ಯತಾಭಾವ ಹೊಂದಿದರು.

ಘಟಿಕೋತ್ಸವಕ್ಕೆ ರಾಜ್ಯಪಾಲ, ಕುಲಾಧಿಪತಿ ವಜುಭಾಯಿ ವಾಲಾ, ಸಮ ಕುಲಾಧಿಪತಿ, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಗೈರು ಹಾಜರಾಗಿದ್ದರು. ಒಂಭತ್ತನೇ ಘಟಿಕೋತ್ಸವ ಇದಾದರೂ, ಕುಲಾಧಿಪತಿ ರಾಜ್ಯಪಾಲರು ಹಾಜರಾಗಿರುವುದು ಒಂದು ಬಾರಿ ಮಾತ್ರ ಎಂಬುದು ಇಲ್ಲಿ ಉಲ್ಲೇಖಾರ್ಹ.

ರಾಜ್ಯಪಾಲರು ಗೈರಾಗಿದ್ದರಿಂದ ಘಟಿಕೋತ್ಸವದ ಯಾವೊಂದು ಸೂಚನೆಯೂ ಪಾಲನೆಯಾಗಲಿಲ್ಲ. ಸಮಾರಂಭ ತನ್ನ ಗಾಂಭೀರ್ಯ ಕಳೆದುಕೊಂಡಿದ್ದು ಗೋಚರಿಸಿತು.

ಡಾ.ಶಶಿಕಲಾ ಗುರುಪುರ ಘಟಿಕೋತ್ಸವದ ಪ್ರಧಾನ ಭಾಷಣ ಮಾಡುವ ಸಂದರ್ಭ ವೇದಿಕೆಯಲ್ಲಿ ಆಸೀನರಾಗಿದ್ದ ಕೆಲ ನಿಕಾಯಗಳ ಡೀನರು ಪರಸ್ಪರ ಮಾತುಕತೆಯಲ್ಲಿ ನಿರತರಾಗಿದ್ದ ದೃಶ್ಯ ಕಂಡುಬಂದವು. ಇನ್ನೂ ಕೆಲ ಡೀನರು ನಿದ್ರೆಗೆ ಜಾರಿದರು. ಹಲವರು ತಮ್ಮ ಮೊಬೈಲ್‌ಗಳಲ್ಲಿ ತಲ್ಲೀನರಾಗಿದ್ದರು.

ಈ ಹಿಂದಿನ ಘಟಿಕೋತ್ಸವದಲ್ಲಿ ಪತ್ರಿಕೋದ್ಯಮ ವಿಭಾಗ ‘ಮಹಿಳಾ ಧ್ವನಿ’ ಪತ್ರಿಕೆ ಹೊರ ತರುತ್ತಿತ್ತು. ಸಮಾರಂಭದ ಅಂತ್ಯದೊಳಗೆ ವೇದಿಕೆಯಲ್ಲೇ ಇದು ಬಿಡುಗಡೆಗೊಳ್ಳುತ್ತಿತ್ತು. ಆದರೆ ಈ ಬಾರಿ ಇದರ ಸದ್ದಿರಲಿಲ್ಲ.

ಘಟಿಕೋತ್ಸವ ಸಮಾರಂಭದ ಸಭಾಂಗಣದೊಳಗೆ 12 ವರ್ಷದೊಳಗಿನ ಮಕ್ಕಳಿಗೆ ಪ್ರವೇಶವಿಲ್ಲ ಎಂಬ ಸೂಚನೆ ಆಹ್ವಾನ ಪತ್ರಿಕೆಗಷ್ಟೇ ಮೀಸಲಾಗಿತ್ತು. ಸಭಾಂಗಣದೊಳಗೆ ಮುದ್ದು ಮಕ್ಕಳ ರಗಳೆ ಆಗಾಗ್ಗೆ ಮಾರ್ದನಿಸಿತು.

* * 

ನನ್ನ ಯಶಸ್ಸಿನಲ್ಲಿ ತಾಯಿಯ ಕೊಡುಗೆ ಅಪಾರವಾದುದು. ಹಲವು ಸಂಕಟಗಳ ನಡುವೆಯೂ ಉನ್ನತ ವ್ಯಾಸಂಗ ಕೊಡಿಸಿದ್ದಾರೆ. ಈ ಸಾಧನೆ ಅವರಿಗರ್ಪಣೆ

ಮಧು, ಎರಡು ಚಿನ್ನದ ಪದಕ ವಿಜೇತೆ, ಕಲಬುರ್ಗಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry