ಸೌಕರ್ಯವಿಲ್ಲದೆ ನರಳುತ್ತಿರುವ ಕೋನ್ಹಾಳ

7

ಸೌಕರ್ಯವಿಲ್ಲದೆ ನರಳುತ್ತಿರುವ ಕೋನ್ಹಾಳ

Published:
Updated:
ಸೌಕರ್ಯವಿಲ್ಲದೆ ನರಳುತ್ತಿರುವ ಕೋನ್ಹಾಳ

ಸುರಪುರ: ತಾಲ್ಲೂಕು ಕೇಂದ್ರದಿಂದ 22 ಕಿ.ಮೀ ಅಂತರದಲ್ಲಿರುವ ಕೋನ್ಹಾಳ ಗ್ರಾಮ ಮೂಲಸೌಲಭ್ಯ ಕಾಣದೇ ನರಳುತ್ತಿದೆ. ದೇವತಕಲ್‌ ಗ್ರಾಮ ಪಂಚಾಯಿತಿಗೆ ಒಳಪಡುವ ಈ ಗ್ರಾಮದಲ್ಲಿ 4 ಜನ ಗ್ರಾ.ಪಂ ಸದಸ್ಯರಿದ್ದಾರೆ. ಗ್ರಾಮದ ಜನಸಂಖ್ಯೆ 2 ಸಾವಿರಕ್ಕೂ ಅಧಿಕ ಇದ್ದು, ಬಹುತೇಕರು ಬಡವರಾಗಿದ್ದಾರೆ. ಕೂಲಿ ಇವರ ಜೀವನೋಪಾಯ. ಬಹಳಷ್ಟು ಜನ ಕೂಲಿ ಅರಸಿ ಗುಳೆ ಹೋಗುವುದು ಇಲ್ಲಿ ಸಾಮಾನ್ಯ.

‘ಗ್ರಾಮದ ಅಲ್ಲಲ್ಲಿ ಸಿ.ಸಿ ರಸ್ತೆ ಮಾಡಲಾಗಿದೆ. ಚರಂಡಿ ವ್ಯವಸ್ಥೆ ಇಲ್ಲವಾದ್ದರಿಂದ ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತದೆ. ಎಲ್ಲೆಡೆ ಕೆಸರು ಸಾಮಾನ್ಯವಾಗಿದ್ದು, ಗ್ರಾಮದ ರಸ್ತೆಗಳೆಲ್ಲ ಮುಳ್ಳುಕಂಟಿಗಳಿಂದ ತುಂಬಿ ಹೋಗಿವೆ. ಗ್ರಾಮ ಪ್ರವೇಶಿಸುವ ರಸ್ತೆಯ ಎರಡೂ ಬದಿಯೇ ಗ್ರಾಮಸ್ಥರಿಗೆ ಶೌಚಾಲಯವಾಗಿದೆ. ಊರು ಪ್ರವೇಶಿಸುತ್ತಲೇ ಗಬ್ಬು ವಾಸನೆ ಮೂಗಿಗೆ ರಾಚುತ್ತದೆ. ಮಹಿಳಾ ಶೌಚಾಲಯ ಇಲ್ಲದಿರುವುದರಿಂದ ಮಹಿಳೆಯರು ತೊಂದರೆ ಎದುರಿಸು ವಂತಾಗಿದೆ. ರಾತ್ರಿ ಇಲ್ಲವೇ ನಸುಕಿನ ಜಾವ ಶೌಚಕ್ಕೆ ಹೋಗುವ ಪರಿಸ್ಥಿತಿ ಇದೆ’ ಎಂದು ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಾರೆ.

‘ಕಾಲುವೆ ಕೊನೆ ಭಾಗಕ್ಕೆ ಬರುವುದರಿಂದ ಜಮೀನುಗಳಿಗೆ ನೀರು ಸಮರ್ಪಕವಾಗಿ ದೊರಕುತ್ತಿಲ್ಲ. ಕಿರು ನೀರು ಸರಬ ರಾಜು ಯೋಜನೆ ಸಮರ್ಪಕ ವಾಗಿದೆ. ಗ್ರಾಮದಲ್ಲಿರುವ ಕೊಳವೆಬಾವಿಗಳಲ್ಲಿ ಆರ್ಸೇನಿಕ್ ಅಂಶ ಇದೆ. ಸರ್ಕಾರದ ಯೋಜನೆಗಳು ಸಮರ್ಪಕವಾಗಿ ತಲುಪುತ್ತಿಲ್ಲ. ವಸತಿ ಯೋಜನೆ ಪರವಾಗಿಲ್ಲ. ಅಲ್ಲಲ್ಲಿ ಗುಡಿಸಲುಗಳು ಕಾಣುತ್ತವೆ. ಭತ್ತದ ಗದ್ದೆಯ ನೀರೆಲ್ಲ ಗ್ರಾಮದಲ್ಲೆ ಹರಿದಾ ಡುತ್ತದೆ’ ಎಂದು ರೈತರು ತಿಳಿಸಿದರು.

‘ತಗ್ಗು ಪ್ರದೇಶದಲ್ಲಿ ನೀರು ನಿಂತು ಸಾಂಕ್ರಾಮಿಕ ರೋಗ ಹರಡುತ್ತಿದೆ. ಸೊಳ್ಳೆಗಳ ಹಾವಳಿ ಅತಿಯಾಗಿದೆ. ಜಾನುವಾರುಗಳು ಸೊಳ್ಳೆಕಾಟದಿಂದ ನರಳುವಂತಾಗಿದೆ. ಆಗಾಗ ಕಂಡುಬರುವ ವಾಂತಿಭೇದಿ ಜನರ ಜೀವ ಹಿಂಡುತ್ತದೆ’ ಎನ್ನುತ್ತಾರೆ ಅವರು.

‘ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದ್ದು, 205 ಮಕ್ಕಳ ಹಾಜರಾತಿ ಇದೆ. ಸಮರ್ಪಕ ಶಿಕ್ಷಕರು ಇದ್ದಾರೆ. ಆದರೆ, ಶಾಲೆಗೆ ಹೋಗಲು ರಸ್ತೆ ಇಲ್ಲ. ಶಾಲೆಯ ಮುಂದೆ ಚರಂಡಿ ನೀರು ತುಂಬಿರುತ್ತದೆ. ಶಾಲೆಯ ಆವರಣ ಮುಳ್ಳು ಕಂಟಿಗಳಿಂದ ಕೂಡಿದೆ. ಹಾವು ಚೇಳುಗಳ ಕಾಟವೂ ಇದೆ. ಇದರಿಂದ ಮಕ್ಕಳನ್ನು ಶಾಲೆಗೆ ಕಳಿಸಲು ಹಿಂದೇಟು ಹಾಕುವಂತಾಗಿದೆ’ ಎಂದು ಪಾಲಕರು ಅಸಮಾಧಾನ ವ್ಯಕ್ತಪಡಿಸಿದರು.

‘ಮುಖ್ಯರಸ್ತೆಯಿಂದ ಗ್ರಾಮ 2 ಕಿ.ಮೀ ಅಂತರದಲ್ಲಿರುವುದರಿಂದ ಗ್ರಾಮಸ್ಥರು ತಿರುಗಾಡಲು ತೊಂದರೆ ಯಾಗಿದೆ. ಪ್ರೌಢ ಮತ್ತು ಕಾಲೇಜು ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಗ್ರಾಮಕ್ಕೆ ಮೂಲ ಸೌಕರ್ಯ ಕಲ್ಪಿಸುವಂತೆ ಮನವಿ ಮಾಡುತ್ತಲೇ ಬಂದಿದ್ದೇವೆ. ಎಷ್ಟೇ ಪ್ರಯತ್ನ ಪಟ್ಟರೂ ಅಭಿವೃದ್ಧಿ ಕಾಣುತ್ತಿಲ್ಲ. ಕನಿಷ್ಠಪಕ್ಷ ಮಹಿಳಾ ಶೌಚಾಲಯ ನಿರ್ಮಿಸಬೇಕು’ ಎಂಬುದು ಗ್ರಾಮಸ್ಥರ ಒತ್ತಾಯ.

* * 

ಗ್ರಾಮದಲ್ಲಿ ಚರಂಡಿ ಇಲ್ಲದಿರುವುದರಿಂದ ಗಲೀಜು ನೀರು ರಸ್ತೆಯ ಮೇಲೆಯೇ ಹರಿದು ತಿರುಗಾಡಲು ಕಷ್ಟಸಾಧ್ಯವಾಗಿದೆ.

ಶೇಖಪ್ಪ ಭಂಡಾರಿ ದಲಿತ ಮುಖಂಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry